Saturday, 14th December 2024

ಇಷ್ಟೇನಾ ಇದೇನ್ ಮಹಾ ಎನ್ನುವ ಮುನ್ನ ಇದನ್ನೋದಿ

ತಿಳಿರು ತೋರಣ

ಶ್ರೀವತ್ಸ ಜೋಶಿ

ಅಯ್ಯೋ ಅದೇನ್ ಮಹಾ… ಎಂಬ ಧಾಟಿಯ ತಾತ್ಸಾರದ ಉದ್ಗಾರ ನಮ್ಮೆಲ್ಲರ ಬಾಯಿಯಿಂದಲೂ ಆಗೊಮ್ಮೆ ಈಗೊಮ್ಮೆ ಬರುವುದಿದೆ. ಉದಾಹರಣೆಗೆ- ‘ರೀ ಸಾವಿತ್ರಮ್ಮ, ಎಕ್ಸಾಮ್ ಟೈಮ್‌ನಲ್ಲಿ ನನ್ ಮೊಮ್ಮಗ್ಳು ಟಿವಿ, ಫೋನು, ಮೊಬೈಲು, ಕಂಪ್ಯೂ ಟರು ಯಾವುದನ್ನೂ ಮುಟ್ಟಲ್ಲಾರೀ…’ ಅಂತ ವೆಂಕಮ್ಮ ಹೇಳಿದರೆ, ಕೇಳಿಸಿಕೊಂಡ ಸಾವಿತ್ರಮ್ಮ ಮ್ಯಾಟರ್-ಆಫ್‌-ಫ್ಯಾಕ್ಟ್ ರೀತಿ ಯಲ್ಲಿ ‘ಅಯ್ಯೋ ಅದೇನ್ ಮಹಾ ಬಿಡಿ ವೆಂಕಮ್ನೊರೇ, ನನ್ ಮೊಮ್ಮಗ ಪುಸ್ತಕಾನೇ ಮುಟ್ಟಲ್ಲ…’ ಎಂದರಂತೆ!

ಹಾಗೆಯೇ ಗೋವಿಂದ ಭಟ್ಟರೆಂಬ ಕಾಲ್ಪನಿಕ ಪುರೋಹಿತರೊಬ್ಬರು ‘ಕೇಶವಾಯ ನಮಃ ನಾರಾಯಣಾಯ ನಮಃ ಮಾಧವಾಯ ನಮಃ ಗೋವಿಂದಾಯ ನಮಃ…’ ಎನ್ನಲಿಕ್ಕೆ ‘ಕೇಶವ ಎನ್ ಮಹಾ ನಾರಾಯಣ ಏನ್ ಮಹಾ ಮಾಧವ ಏನ್ ಮಹಾ ಗೋವಿಂದ ನೇ ಮಹಾನ್ ಮಹಾ…’ ಎಂದು ಕೇಳಿಸುವಂತೆ ಮಂತ್ರೋಚ್ಚಾರ ಮಾಡುತ್ತಿದ್ದದ್ದೂ ತಾತ್ಸಾರ ಭಾವದಿಂದಲೇ.  ವೃತ್ತಿಯಲ್ಲಿ ಸ್ಪರ್ಧಿ ಗಳಾಗಿದ್ದ ಅದೇ ಊರಿನ ಕೇಶವಭಟ್ಟ, ನಾರಾಯಣಭಟ್ಟ ಮತ್ತು ಮಾಧವಭಟ್ಟರೆಂಬ ಪುರೋಹಿತರು ತನ್ನ ಮುಂದೆ ಏನೂ ಅಲ್ಲ ಎಂಬ ಅಹಂಕಾರ ಮಿಶ್ರಿತ ದರ್ಪ ಗೋವಿಂದಭಟ್ಟರದು.

ಬಹುಶಃ ‘ಅದೇನ್ ಮಹಾ, ಇದೇನ್ ಮಹಾ, ಅವ್ರೇನ್ ಮಹಾ ಇವ್ರೇನ್ ಮಹಾ…’ ಎಂದುಕೊಳ್ಳುವ ಸಂದರ್ಭಗಳಲ್ಲೆಲ್ಲ ನಮ್ಮೊಳಗಿನ ‘ಅಹಂ’ ಸ್ವಲ್ಪ ಮಟ್ಟಿಗಾದರೂ ಹೆಡೆ ಯಾಡುತ್ತಿರುತ್ತದೆ. ಹಾಗಾಗಬಾರದೆಂದಿದ್ದರೆ ನಾವು ‘ಎನಗಿಂತ ಕಿರಿಯರಿಲ್ಲ’ ಎಂದ ಬಸವಣ್ಣನಂತೆ ಆಗಬೇಕಷ್ಟೇ. ಈ ‘ಮಹಾ’ ಎಂಬ ವಿಶೇಷಣಪದ ಅಂಥಿಂಥದಲ್ಲ, ಇದರ ಸ್ವಾರಸ್ಯಕರ ಪ್ರಪಂಚ ವನ್ನೊಮ್ಮೆ ಹೊಕ್ಕು ನೋಡಿದರೆ ಅದ್ಭುತ ಅನುಭವ ವಾಗುತ್ತದೆ. ನೀವು ಅಭ್ಯಾಸಬಲದಂತೆ ‘ಅದೇನ್ ಮಹಾ ನೋಡೇ ಬಿಡೋಣ’ ಎನ್ನುತ್ತೀರಾದರೆ ಇಂದು ‘ಮಹಾ’ನವಮಿಯ ಶುಭದಿನ ಈ ‘ಮಹಾ’ ಪುರಾಣದ ಪಠಣ/ಶ್ರವಣಕ್ಕೆ ಅತ್ಯಂತ ಪ್ರಶಸ್ತ ಸಂದರ್ಭ.

ಮಹಾ ಗಣಪತಿಂ ಮನಸಾ ಸ್ಮರಾಮಿ ಎಂದು ಗಣಪತಿಯನ್ನು ಸ್ಮರಿಸುತ್ತ ಈ ಮಹಾಯಾತ್ರೆಯನ್ನು ಆರಂಭಿಸೋಣ. ಈ ಯಾತ್ರೆ ಯುದ್ದಕ್ಕೂ, ಐ ಮೀನ್ ಈ ಲೇಖನದುದ್ದಕ್ಕೂ ಮಹಾ ಎಂಬ ವಿಶೇಷಣಪದ ಮೇಲಿಂದ ಮೇಲೆ ಬರುತ್ತಿರುತ್ತದೆಯಾದ್ದ ರಿಂದ ಅದಕ್ಕೆ ಸಿಂಗಲ್ ಕೋಟು ಡಬ್ಬಲ್ ಕೋಟು (ಕೊಟೇಶನ್ ಮಾರ್ಕ್ಸ್) ತೊಡಿಸಲಿಕ್ಕೆ ಹೋಗುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಅದರ ಮಹಾತನವನ್ನು, ಅಂದರೆ ಮಹತ್ತ್ವವನ್ನು ನೀವೇ ಅರ್ಥಮಾಡಿಕೊಳ್ಳಬೇಕು. ಅಂದ ಹಾಗೆ ಮಹಾಯಾತ್ರೆ ಎಂದೊಡನೆ ನನಗೆ ಥಟ್ಟನೆ ನೆನಪಾಗುವುದು ಪ್ರವೀಣ ಗೋಡ್ಖಿಂಡಿಯವರ ನಿರ್ಮಾಣ/ನಿರ್ದೇಶನದಲ್ಲಿ ಬಂದ ‘ಯಾತ್ರಾ’ ಎಂಬ ಹೆಸರಿನ ಹಳೆಯದೊಂದು ಮ್ಯೂಸಿಕ್ ಆಲ್ಬಂ. ಆಡಿಯೊ ಕ್ಯಾಸೆಟ್ ಜಮಾನಾದಲ್ಲಿ ನನ್ನ ಸಂಗ್ರಹಕ್ಕೆ ಸೇರಿರುವಂಥದ್ದು. ಈ ಯುಟ್ಯೂಬ್ ‌ನಲ್ಲೂ ಇದೆಯೆನ್ನಿ.

ಗೋಡ್ಖಿಂಡಿಯವರ ಕೊಳಲು ಮತ್ತು ಕದ್ರಿ ಗೋಪಾಲನಾಥರ ಸ್ಯಾಕ್ಸೊಫೋನ್ ಫ್ಯೂಷನ್‌ ಮ್ಯುಸಿಕ್. ಅದರಲ್ಲಿ ಸಾರೇ ಜಹಾಂಸೇ ಅಚ್ಛಾ, ಅಲ್ಲಾಹ್ ತೇರೋ ನಾಮ್, ವಂದೇ ಮಾತರಂ, ಜೈ ಭಾರತ ಜನನಿಯ ತನುಜಾತೆ… ಮುಂತಾದ ಟ್ರ್ಯಾಕ್‌ಗಳು ಕ್ಯಾಸೆಟ್‌ನ ಒಂದು ಬದಿಯಲ್ಲಿ, ‘ಮಹಾಯಾತ್ರಾ’ ಎಂಬ 30 ನಿಷಗಳ ಒಂದೇ ಟ್ರ್ಯಾಕ್ ಇನ್ನೊಂದು ಬದಿಯಲ್ಲಿ. ಭಾರತ ದೇಶದ ಎಲ್ಲ ಪ್ರಾಂತ ಗಳ ಪ್ರಾತಿನಿಧಿಕ ಸಂಗೀತವನ್ನು ಜೋಡಿಸಿ ಮಾಡಿದ, ಕೇಳಿದಾಗ ರಿಗೇ ಆದರೂ ಮೈನರೇಳುವ ಪ್ರಸ್ತುತಿ. ತಿಂಗಳಿಗೊಮ್ಮೆ,
ಅಥವಾ ಕಾರಿನಲ್ಲಿ ಲಾಂಗ್‌ಡ್ರೈವ್ ಹೋಗುವುದಿದ್ದರೆ ಅದು ನನ್ನ ಪ್ಲೇಲಿಸ್ಟ್‌ನಲ್ಲಿ ಬರಲೇಬೇಕು.

ಮಹಾ ಎಂಬ ವಿಶೇಷಣವನ್ನು ನಾವು ಬಳಸುವುದು ಇಂಗ್ಲಿಷ್ನ ಗ್ರೇಟ್ ಎಂಬುದಕ್ಕೆ ಸಮಾನಾರ್ಥಕವಾಗಿ ತಾನೆ? ಗಾಡ್ ಈಸ್
ಗ್ರೇಟ್ ಆದ್ದರಿಂದಲೇ – ಮಹಾಗಣಪತಿ, ಮಹಾವಿಷ್ಣು, ಮಹಾಲಕ್ಷ್ಮೀ, ಮಹಾಕಾಳಿ… ಹೀಗೆ ನಮ್ಮ ದೇವಾಧಿದೇವತಗಳೆಲ್ಲ ಮಹಾಮಹಿಮರು (‘ದೀನ ನಾನು ಸಮಸ್ತಲೋಕಕೆ ದಾನಿ ನೀನು ವಿಚಾರಿಸಲು ಮತಿಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು…’ ಕನಕದಾಸರ ಹರಿಭಕ್ತಿಸಾರ). ಶಿವನಂತೂ ಮಹಾದೇವ, ಮಹಾಕಾಲ, ಮಹಾಬಲೇಶ್ವರ. ಅವನ ಹಬ್ಬ ಮಹಾಶಿವರಾತ್ರಿ. ಪೂಜೆಯಲ್ಲಿ ಮೃತ್ಯುಂಜಯ ಮಹಾಮಂತ್ರ. 121 ಋತ್ವಿಜರು ತಲಾ 11 ಸರ್ತಿ ಅಂದರೆ ಒಟ್ಟು 1331 ಆವರ್ತನಗಳಷ್ಟು ರುದ್ರ ಸೂಕ್ತವನ್ನು ಪಠಿಸಿದರೆ ಅದಕ್ಕೆ ಮಹಾರುದ್ರ ಮಹಾಯಾಗ ಎಂದು ಹೆಸರು.

ಕೊನೆಯಲ್ಲಿ ಮಹಾಮಂಗಳಾರತಿ. ತದನಂತರ ಮಹಾಪ್ರಸಾದ. ಇನ್ನೊಂದು ವಿಚಾರ ನಿಮಗೆ ಗೊತ್ತೇ? ಪ್ರಸಾದಕ್ಕೂ ಮಹಾ ಪ್ರಸಾದಕ್ಕೂ ವ್ಯತ್ಯಾಸವಿದೆ. ದೇವರಿಗೆ ಅರ್ಪಿಸಲ್ಪಟ್ಟ ನೈವೇದ್ಯ, ನಿರ್ಮಾಲ್ಯ, ಮತ್ತು ಪಾದತೀರ್ಥ ಈ ಮೂರೂ ವಸ್ತುಗಳು ಸೇರಿದರೇನೇ ಮಹಾಪ್ರಸಾದ ಎನಿಸುವುದು. ನಮ್ಮ ಸನಾತನ ಸಂಸ್ಕೃತಿಯಲ್ಲಿ ದೇವರಿಗೆ ಸಂಬಂಧಿಸಿದ್ದೆಲ್ಲ ಮಹಾ. ದೇವ ರಂತೆಯೇ ಧರ್ಮಪ್ರವರ್ತಕರು ಕೂಡ.

ಜೈನರ 24ನೆಯ ತೀರ್ಥಂಕರ ಮಹಾವೀರ. ಜೈನಧರ್ಮದ ಪ್ರಾಚೀನ ಪವಿತ್ರ ಗ್ರಂಥ ಮಹಾಧವಳ. ಗೋಮಟೇಶ್ವರನ ವಿಗ್ರಹಕ್ಕೆ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವುದು ಮಹಾಮಸ್ತಕಾಭಿಷೇಕ. ಜೈನ – ವೈಷ್ಣವ – ಶೈವ ಸಂಗಮವಾದ ಶ್ರೀ ಕ್ಷೇತ್ರ ಧರ್ಮ ಸ್ಥಳದಲ್ಲಿ ನಡೆಯುವ ಒಂದು ವಿಶಿಷ್ಟ ಧಾರ್ಮಿಕ ಆಚರಣೆಯ ಹೆಸರು ಮಹಾನಡಾವಳಿ ಎಂದು. ಬೌದ್ಧ ಧರ್ಮದಲ್ಲೂ, ಶ್ರೇಷ್ಠ ವಾದುದಕ್ಕೆ ಮಹಾ ಎಂದೇ ವಿಶೇಷಣ. ಪವಿತ್ರ ಕ್ಷೇತ್ರ ಗಯಾದಲ್ಲಿ ಮಹಾಬೋಧಿ ದೇವಾಲಯ. ಹಾಗೆಯೇ ಸಾಂಚಿ, ಸಾರನಾಥ, ಅಮರಾವತಿ ಮುಂತಾದ ಕಡೆಗಳಲ್ಲಿ ಮಹಾಸ್ತೂಪಗಳು.

ದೇವರಂತೆಯೇ ಭೌಗೋಳಿಕ, ಪ್ರಾಕೃತಿಕ ಗ್ರೇಟ್‌ನೆಸ್‌ಗೂ ಮಹಾ ವಿಶೇಷಣ ಬಳಕೆಯಾಗುತ್ತದೆ. ಉತ್ತರ ಅಮೆರಿಕದಲ್ಲಿರುವ ಹ್ಯೂರನ್, ಒಂಟಾರಿಯೊ, ಮಿಶಿಗನ್, ಈರಿ ಮತ್ತು ಸುಪೀರಿಯರ್ – ಇವುಗಳನ್ನು ಇಂಗ್ಲಿಷ್‌ನಲ್ಲಿ ಗ್ರೇಟ್ ಲೇಕ್ಸ್ ಎಂದು ಕರೆದರೆ ಕನ್ನಡ ಮಾಧ್ಯಮದಲ್ಲಿ ಭೂಗೋಳ ಓದಿದ ನಾವು ಪಂಚಮಹಾಸರೋವರಗಳು ಎಂದೇ ಬಾಯಿಪಾಠ ಮಾಡಿದ್ದೆವು. ಗ್ರೇಟ್ ವಾಲ್ ಆಫ್‌ ಚೈನಾ ಅಂದರೆ ಚೀನಾದ ಮಹಾಗೋಡೆ. ನಮ್ಮ ಭಾರತ ದೇಶದ ದಕ್ಷಿಣಕ್ಕಿರುವುದು ಹಿಂದೂಮಹಾಸಾಗರ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನಾ ಗೀತೆಯಲ್ಲಿ ನಮ್ಮ ಭರತಭೂಮಿಗೆ ‘ಮಹಾ ಮಂಗಲೇ ಪುಣ್ಯ ಭೂಮೇ ತ್ವದರ್ಥೇ ಪತತ್ವೇಷ ಕಾಯೋ ನಮಸ್ತೇ ನಮಸ್ತೇ…’ ಎಂಬ ಗೌರವವಿದೆ.

ಭಾರತದಲ್ಲ ಹರಿಯುವ ಒಂದು ಮುಖ್ಯ ನದಿ ಮಹಾನದಿ. ಒಂದು ರಾಜ್ಯದ ಹೆಸರೇ ಮಹಾರಾಷ್ಟ್ರ ಅಂತಿದೆ (ಈಗಿನ ಕನ್ನಡ ದಿನಪತ್ರಿಕೆಗಳ ತಲೆಬರಹಗಳಲ್ಲಿ ವರ್ಣಭೇದ ನೀತಿಯ ಪ್ರಕಾರ ಕೆಂಪಕ್ಷರಗಳಲ್ಲಿ ಮಹಾ ಅಂತಿದ್ದರೆ ಅದು ಮಹಾರಾಷ್ಟ್ರ ಎಂದೇ ಅರ್ಥ). ಇಂಗ್ಲಿಷ್‌ನ ಜನರಲ್ ಎಂಬ ವಿಶೇಷಣವೂ ನಮ್ಮ ಭಾಷೆಗಳಲ್ಲಿ ಮಹಾ ಆಗುತ್ತದೆ. ಜನರಲ್ ಮ್ಯಾನೆಜರ್ ಮಹಾ ಪ್ರಬಂಧಕ ಆಗುತ್ತಾನೆ. ಇನ್ಸ್‌ಪೆಕ್ಟರ್ ಜನರಲ್ ಆಫ್‌ ಪೊಲೀಸ್ ಅಂದರೆ ಆರಕ್ಷಕ ಮಹಾನಿರೀಕ್ಷಕ ಆಗುತ್ತಾನೆ. ಜನರಲ್ ಬಾಡಿ ಮೀಟಿಂಗ್ ಮಹಾಸಭೆಯಾಗುತ್ತದೆ.

ಜನರಲ್ ಎಲೆಕ್ಷನ್ ಮಹಾಚುನಾವಣೆಯಾಗುತ್ತದೆ. ಬೇರೆ ಕೆಲವು ಉನ್ನತ ಹುದ್ದೆಗಳ ಹೆಸರುಗಳಲ್ಲೂ ಮಹಾ ಬರುತ್ತದೆ. ಮೇಯರ್‌ನನ್ನು ಕನ್ನಡ ಪತ್ರಿಕೆಗಳು ಮಹಾಪೌರ ಎನ್ನುತ್ತವೆ. ಬಹುಶಃ ಮಹಾರಾಜ ಎನ್ನುವ ಗೌರವ, ಭಯಭಕ್ತಿಗಳ ಸಂಕೇತ ಈ ಎಲ್ಲ ಮಹಾ ಹುದ್ದೆಗಳ ಮಹಾ ಹೆಸರುಗಳ ಹಿಂದಿದೆ. (ಹುದ್ದೆಯಲ್ಲಿರುವ ಅನೇಕರು ಮಹಾಭ್ರಷ್ಟರೂ, ಮಹಾಖದೀಮರೂ, ಯಾವ ಬಲೆಗೂ ಸಿಕ್ಕಿಬೀಳದ ಮಹಾಬುದ್ಧಿವಂತರೂ ಆಗಿರುತ್ತಾರೆನ್ನುವುದು ಬೇರೆ ಮಾತು). ಹಿಂದಿನ ಕಾಲದಲ್ಲಿ ಪತ್ರ ಬರೆಯುವ ಶಿಷ್ಟಾಚಾರದಲ್ಲಿ ಹಿರಿಯರನ್ನು ಮ|ರಾ|ರಾ|ಶ್ರೀ (ಮಹಾರಾಜ ರಾಜೇಶ್ವರ ಶ್ರೀ) ಎಂದೇ ಸಂಬೋಧಿಸುವ ಕ್ರಮವಿತ್ತು. ಹಾಗೆಯೇ ಕೆಲ ವರ್ಷಗಳ ಹಿಂದಿನವರೆಗೂ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಲಾಂಛನ ‘ಮಹಾರಾಜ’ ಆಗಿತ್ತೆನ್ನುವುದನ್ನು ಇಲ್ಲಿ
ಸ್ಮರಿಸಬಹುದು.

ನ್ಯೂಯಾರ್ಕ್‌ನ ಜೆಎಫ್‌ಕೆ ವಿಮಾನನಿಲ್ದಾಣ, ಸ್ಯಾನ್‌ ಫ್ರಾಸಿಸ್ಕೊ ವಿಮಾನನಿಲ್ದಾಣ, ಲಂಡನ್‌ನ ಹೀತ್ರೊ ವಿಮಾನ ನಿಲ್ದಾಣ ಗಳಲ್ಲಿ ಏರ್ ಇಂಡಿಯಾದ ಲಾಂಜ್ ಹೆಸರು ‘ಮಹಾರಾಜ’ ಎಂದೇ ಇದೆ. ಮಹಾಮಹೋಪಾಧ್ಯಾಯ ಎಂಬ ಗೌರವದ ಉಪಾಧಿ
ಯನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ಈಗ ಸ್ವಾತಂತ್ರ್ಯಾ ನಂತರ ಭಾರತ ಸರಕಾರವು ಈ ಉಪಾಧಿಯನ್ನಿತ್ತು ವಿದ್ವಾಂಸರನ್ನು
ಗೌರವಿಸುತ್ತಿದೆ. ಅದಕ್ಕೆ ಮೊದಲು ಬ್ರಿಟಿಷ್ ಆಡಳಿತ ಕಾಲದಲ್ಲೂ, ಅದಕ್ಕೂ ಮೊದಲು ಮಹಾರಾಜರ ಕಾಲದಲ್ಲೂ ಈ
ಗೌರವಪ್ರದಾನ ಇರುತ್ತಿತ್ತಂತೆ. ವಿದ್ವಾಂಸನಾಗಿದ್ದರಷ್ಟೇ ಸಾಲದು, ಶಿಕ್ಷಕನೂ ಆಗಿದ್ದರೆ ಮಾತ್ರ ಆ ಗೌರವಕ್ಕೆ ಅರ್ಹತೆ ಬರುವುದು.
ಇನ್ನೂ ನಿಖರವಾಗಿ ಹೇಳಬೇಕೆಂದರೆ ಯಾವ ಗುರುವಿನ ಪ್ರಶಿಷ್ಯರೂ(ಅಂದರೆ ಶಿಷ್ಯರ ಶಿಷ್ಯರು) ಆತನ ಅಭಿಮತ ಶಾಸ್ತ್ರವನ್ನು ಸಲ್ಲಕ್ಷಣವಾಗಿ ಪಾಠಮಾಡುತ್ತಿರುವರೋ ಅಂಥ ಗುರುವನ್ನು ಅಕ್ಷರಶಃ ಮಹಾಮಹೋಪಾಧ್ಯಾಯ ಎಂದು ಹೇಳುತ್ತಾರೆ.

ಭಾರತೀಯ ಶಾಸ್ತ್ರೀಯ ಸಂಗೀತ ಶಾಸ್ತ್ರದ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ, ನಮ್ಮ ಕರ್ನಾಟಕದವರೇ ಆದ ಡಾ. ರಾ. ಸತ್ಯನಾರಾ ಯಣ ಅವರಿಗೆ ಮಹಾ ಮಹೋಪಾಧ್ಯಾಯ ಗೌರವ ಸಂದಿತ್ತು. ಹೆಸರಾಂತ ಸಂಸ್ಕೃತ ಹಾಗೂ ಭಾರತ ಶಾಸ್ತ್ರದ (ಇಂಡಾಲಜಿ) ವಿದ್ವಾಂಸ, ಭಾರತರತ್ನ ಪುರಸ್ಕೃತ, ಮಹಾರಾಷ್ಟ್ರದ ರತ್ನಾಗಿರಿಯ ಸಾಂಪ್ರದಾಯಿಕ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬಂದ ಡಾ.ಪಾಂಡುರಂಗ ವಾಮನ ಕಾಣೆ – ಇವರಿಗೂ ಮಹಾಮಹೋಪಾಧ್ಯಾಯ ಗೌರವ ಸಂದಿತ್ತು. ನನಗೆ ಗೊತ್ತಿರುವ ಇನ್ನೊಬ್ಬ ಮಹಾಮಹೋಪಾಧ್ಯಾಯರೆಂದರೆ ಮೂಲತಃ ನಮ್ಮೂರಿನವರೇ ಆದ ಡೋಂಗರೆ ವೀರೇಶ್ವರ ಕೃಷ್ಣ ಶಾಸ್ತ್ರೀ. ವೇದಾಧ್ಯಯನದ ಬಳಿಕ ಶೃಂಗೇರಿಯ ಸ್ವಾಮೀಜಿ ಯಾಗುವ ಅವಕಾಶದಿಂದ ಸ್ವಲ್ಪದರಲ್ಲೇ ತಪ್ಪಿದ ಅವರು ಆಮೇಲೆ ಸಿಕಂದರಾಬಾದ್‌ನಲ್ಲಿ ನೆಲೆಸಿದ್ದರು.

ನಾನು ಸಿಕಂದರಾಬಾದ್‌ನಲ್ಲಿದ್ದ ದಿನಗಳಲ್ಲಿ ಕೆಲವೊಮ್ಮೆ  ಅವರಲ್ಲಿಗೆ ಹೋಗಿ ಅವರ ದ್ವತ್ಪ್ರಭೆಯ ಒಂದು ಕಿರಣವನ್ನು ಸ್ಪರ್ಶಿಸುತ್ತಿದ್ದದ್ದುಂಟು. ಸಾಹಿತ್ಯಪ್ರಕಾರದ ದೃಷ್ಟಿಯಿಂದ ನೋಡಿದರೆ ಸಂಸ್ಕೃತದ ಐದು ಮಹಾಕಾವ್ಯಗಳು: ಕಾಳಿದಾಸನ ಕುಮಾರಸಂಭವ ಹಾಗೂ ರಘುವಂಶ, ಭಾರಯ ಕಿರಾತಾರ್ಜುನೀಯ, ಮಾಘನ ಶಿಶುಪಾಲವಧ, ಹಾಗೂ ಶ್ರೀಹರ್ಷನ ನೈಷಧೀಯ ಚರಿತ. ವಾಲ್ಮೀಕಿಯ ರಾಮಾಯಣ ಮತ್ತು ವ್ಯಾಸಮಹರ್ಷಿಯ ಮಹಾಭಾರತಗಳನ್ನಂತೂ ಭೂಮಿಯ ಮೇಲಿನ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ಮಹಾಕಾವ್ಯಗಳೆಂದೇ ಗುರುತಿಸಲಾಗಿದೆ. ಕುವೆಂಪು ಅವರ ರಾಮಾಯಣ ದರ್ಶನಂ, ನಾಯಕ
ಕೃಷ್ಣ ಗೋಕಾಕರ ಭಾರತ ಸಿಂಧುರಶ್ಮಿ, ಭೂಸನೂರ ಮಠ ಅವರ ಭವ್ಯಮಾನವ ಇವುಗಳನ್ನು ಆಧುನಿಕ ಕನ್ನಡ ಮಹಾ ಕಾವ್ಯಗಳೆಂದು ಪರಿಗಣಿಸುವುದೂ ಇದೆ.

ದೇವುಡು ನರಸಿಂಹ ಶಾಸ್ತ್ರೀಯವರ ಮೂರು ಮುಖ್ಯ ಕೃತಿಗಳ ಹೆಸರಿನಲ್ಲೇ ಮಹಾ ಇದೆ! ಮಹಾಕ್ಷತ್ರಿಯ, ಮಹಾಬ್ರಾಹ್ಮಣ ಮತ್ತು ಮಹಾದರ್ಶನ. ಮರಾಠಿಯಲ್ಲಿ ಮಹಾನಂದಾ ಹೆಸರಿನ ನಾಟಕ, ಕಾದಂಬರಿ, ಸಿನೆಮಾ ಎಲ್ಲ ಬಂದಿವೆ. ಒಂದೆರಡಲ್ಲ ಅನೇಕ ಆವೃತ್ತಿಗಳಲ್ಲಿ, ಅನೇಕರ ರಚನೆಗಳಲ್ಲಿ. ‘ಮತ್ಸ್ಯಗಂಧಾ ತೇ ಮಹಾನಂದಾ’ ಎಂದು ಜೀತೇಂದ್ರ ಅಭಿಷೇಕಿಯ ರಂಗಗೀತೆಗಳ
ಮಹಾಯಾತ್ರೆಯ ಆಲ್ಬಂ ಸಹ ತುಂಬ ಪ್ರಖ್ಯಾತವಾದುದು. ಮಹಾನಂದವೆಂದಾಗ ಡಿಜಿಯವರ ಅಂತಃಪುರ ಗೀತೆಗಳಲ್ಲಿ ‘ಏನೀ ಮಹಾನಂದವೇ ಓ ಭಾಮಿನಿ ಏನೀ ಸಂಭ್ರಮದಂದವೇ ಬಲು ಚಂದವೇ…’ ಸಹ ನೆನಪಾಗಲೇಬೇಕಲ್ಲವೇ? ಮಹಾ ವಿಶೇಷಣದ ನೈಜ ವ್ಯಾಪ್ತಿಯನ್ನು ಅರಿಯಬೇಕಾದರೆ ನೀವು ಒಳ್ಳೆಯದೊಂದು ನಿಘಂಟುವನ್ನು ತೆರೆದು ಅದರಲ್ಲಿ ಮಹಾ… ಎಂದು ಆರಂಭ ವಾಗುವ ಪದಗಳನ್ನು ಗಮನಿಸಬೇಕು. ಅದರಲ್ಲೂ ಸಂಸ್ಕತ – ಕನ್ನಡ ನಿಘಂಟು ಇದ್ದರೆ ಮತ್ತೂ ಒಳ್ಳೆಯದು. ಕೆಲವೊಂದನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ, ನೋಡಿ: ಮಹಾಕಂದ = ಬೆಳ್ಳುಳ್ಳಿ.

ಮಹಾಕಾಯ = ಆನೆ, ಅಥವಾ ಈಶ್ವರನ ದ್ವಾರಪಾಲಕನಾದ ನಂದಿ. ಮಹಾಗ್ರೀವ = ಒಂಟೆ. ಮಹಾದ್ರುಮ = ಅರಳಿಮರ.
ಮಹಾಧಾತು = ಚಿನ್ನ. ಮಹಾನಕ = ದೊಡ್ಡ ನಗಾರಿ. ಮಹಾನಸ = ಅಡುಗೆಮನೆ. ಮಹಾಪದ್ಮ = ಕುಬೇರನ ಒಂಬತ್ತು
ನಿಧಿಗಳಲ್ಲೊಂದು, ಅಷ್ಟದಿಗ್ಗಜಗಳಲ್ಲೊಂದು. ಮಹಾಪ್ರಾಣ = ಅಕ್ಷರಗಳನ್ನು ಉಚ್ಚರಿಸಲು ನಡೆಯುವ ಬಾಹ್ಯ ಪ್ರಯತ್ನ.
ಮಹಾ-ಲಾ = ದೊಡ್ಡ ಜಾತಿಯ ನೇರಳೆ ಹಣ್ಣು. ಮಹಾಬಿಲ = ಆಕಾಶ, ಅಂತರಿಕ್ಷ. ಮಹಾಮಾಂಸ = ಮನುಷ್ಯನ ಮಾಂಸ. ಮಹಾಮಾಷ = ಅಲಸಂದೆ. ಮಹಾಶಠ = ದತ್ತೂರಿ ಗಿಡ. ಮಹಾಶ್ವೇತಾ = ಬಾಣಭಟ್ಟನ ಕಾದಂಬರಿಯ ಒಂದು ಪ್ರಧಾನ ಸೀಪಾತ್ರ. ಮಹಾಸೇನ = ಕುಮಾರಸ್ವಾಮಿ.

ಮಹಾಖರ್ವ, ಮಹಾಗಣ, ಮಹಾರ್ಬುದ, ಮಹಾಶಂಖ – ಇವೆಲ್ಲ ಕೋಟಿಗಿಂತಲೂ ದೊಡ್ಡ ಸಂಖ್ಯೆಗಳ ಹೆಸರುಗಳು. ಕಾಲ ಮಾಪನದಲ್ಲಿ ನಿತ್ಯನಕ್ಷತ್ರ ಮತ್ತು ಮಹಾನಕ್ಷತ್ರ ಎಂದು ವಿಂಗಡಣೆಯಿದೆ. ಮೊನ್ನೆ ಅಕ್ಟೋಬರ್ 23ರಂದು ಆರಂಭವಾಗಿ ರುವುದು ಸ್ವಾತಿ ಮಹಾನಕ್ಷತ್ರ. ಈಗ ಚಿಪ್ಪುಗಳೊಳಗೆ ಮಳೆಹನಿ ಬಿದ್ದರೆ ಮುತ್ತುಗಳಾಗುತ್ತವೆ ಎಂದು ಪ್ರತೀತಿ, ಕವಿಕಲ್ಪನೆ, ಅಷ್ಟೇ ಅಲ್ಲ ವೈಜ್ಞಾನಿಕ ಸತ್ಯ ಕೂಡ. ಟಿವಿಯಲ್ಲಿ ಮಹಾಭಾರತ ಧಾರಾವಾಹಿ ಪ್ರಸಾರವಾದ ಮೇಲೆ, ಅದಕ್ಕೆ ಅಭೂತಪೂರ್ವ ಜನಪ್ರಿಯತೆ ಸಿಕ್ಕಿದ ಮೇಲೆ, ಭಾರತೀಯ ಜಾಹೀರಾತು ಉದ್ಯಮದಲ್ಲೊಂದು ಮಹಾ ಸಂಚಲನ ಉಂಟಾಗಿತ್ತು. ಅಲ್ಪಸ್ವಲ್ಪ ಗುಣಮಟ್ಟದ ಉತ್ಪನ್ನಗಳ, ಸೇವೆಗಳ ಬಣ್ಣನೆಯಲ್ಲೂ ಮಹಾ ಎಂಬ ವಿಶೇಷಣ ಸೇರಿಕೊಂಡಿತ್ತು.

ಪರಿಣಾಮವಾಗಿ ‘ಝಗಮಗಿಸುವ ಬಿಳುಪಿಗೆ ರಿನ್ ಮಹಾ ಬಾರ್’, ‘ತಲೆನೋವಿನ ನಿವಾರಣೆಗೆ ಅಮೃತಾಂಜನ್ ಮಹಾಸ್ಟ್ರಾಂಗ್’ ಮುಂತಾದ ಜಿಂಗಲ್‌ಗಳು ರೇಡಿಯೊದಲ್ಲೂ ಟಿವಿಯಲ್ಲೂ ಮೊಳಗಿದವು, ಮುದ್ರಣ ಮಾಧ್ಯಮದಲ್ಲೂ ಕಣ್ಣಿಗೆ ರಾಚುವಂತೆ ಕಾಣಿಸಿಕೊಂಡವು. ಕೊಳ್ಳುಬಾಕರಾಗುವಂತೆ ಬಳಕೆದಾರರನ್ನು ಪ್ರಚೋದಿಸುವ ಮಹಾ ಧಮಾಕಾಗಳು, ಮಹಾ ಮುಕಾಬಲಾಗಳು
ಶುರುವಾದವು. ನ್ಯೂಟ್ರಿನ್ ಕಂಪನಿಯು ಮಹಾ ಲಾಕ್ಟೋ ಹೆಸರಿನ ಚಾಕೊಲೆಟ್ ತಂದರೆ ಗೋದ್ರೆಜ್‌ನಿಂದ ಮಹಾ ಚೊಕೊ ಎಂಬ ಹೊಸ ಚಾಕೊಲೆಟ್ ಬಂತು. ಪ್ರಚಾರಕ್ಕೆ ಕ್ರಿಕೆಟ್ ಮಹಾತಾರೆ ಮಹೇಂದ್ರ ಸಿಂಗ್ ಧೋನಿ ರೂಪದರ್ಶಿಯಾಗಿ ಮಹಾ ದೀವಾನಾ ಎಂಬ ಜಾಹೀರಾತು. ಚೆನ್ನೈಯಲ್ಲಿ ‘ಮಹಾ ಕಾರ್ ವಾಷ್’ ಅಂತೊಂದು ಇದೆಯಂತೆ, ಅಲ್ಲಿ ಕಾರು ಎಷ್ಟು ಥಳ ಥಳಾಂತ ಕ್ಲೀನಾಗುತ್ತದೋ ಗೊತ್ತಿಲ್ಲ ಆದರೆ ತಮಿಳರ ಉಚ್ಚಾರದಲ್ಲಿ ಅದು ‘ಮಗಾ ಕಾರ್ ವಾಷ್’ ಆಗುವುದನ್ನು ಎಣಿಸಿದಾಗ ನಗು ಬರುತ್ತದೆ. ಅಲ್ಲಿ ವಾಷ್ ಆದ ಕಾರು ಬಹುಶಃ ‘ಸಕ್ಕತ್ ಹಾಟ್ ಮಗಾ’ ಅನಿಸಬಹುದು.

ಒಳ್ಳೆಯತನಕ್ಕೆ, ಗ್ರೇಟ್ ಆಗಿರೋದಕ್ಕೆ ಮಾತ್ರ ಮಹಾ ವಿಶೇಷಣ ಬಳಸುವುದೆಂದೇನಿಲ್ಲ. ಪುಟ್ಟ ಮಕ್ಕಳನ್ನು ಮಹಾಪೋಕರಿ, ಮಹಾತುಂಟ ಎಂದು ಗುರುತಿಸುತ್ತೇವೆ. ಬಿಸಿಲು ಬಿದ್ದಮೇಲೂ ಹಾಸಿಗೆಯಿಂದೇಳದವರನ್ನು ಮಹಾ ಸೋಮಾರಿ ಎನ್ನುತ್ತೇವೆ. ದುಡ್ಡು ಮಾಡಲೆಂದೇ ಬದುಕುವವನು ಮಹಾಲೋಭಿ. ಕಾಸು ಬಿಚ್ಚದವನು ಮಹಾಜಿಪುಣ. ಮಹಾ ಕೊಳಕ, ಮಹಾ ಒರಟ ಮುಂತಾದುವೂ ಕೆಟ್ಟ ಬೈಗಳೇ. ಆಶ್ಚರ್ಯವೆಂದರೆ, ತುಂಬ ಕೆಟ್ಟದ್ದನ್ನೂ ಮಹಾ ಎಂದೇ ಬಣ್ಣಿಸುತ್ತೇವೆ. ಪ್ಲೇಗ್, ಕಾಲರಾ, ಹಂದಿಜ್ವರ ಮುಂತಾದವನ್ನು ಮಹಾಮಾರಿ ಎಂದಿದ್ದ ನಾವು ಈಗ ಆ ಪಟ್ಟವನ್ನು ಕೋವಿಡ್ -19ಗೆ ಕೊಟ್ಟಿದ್ದೇವೆ. ಇದು ಪ್ರಪಂಚವನ್ನೇ ಮಹಾರೌರವ ನರಕವನ್ನಾಗಿಸಿದೆ ಎನ್ನುತ್ತೇವೆ.

ಮಹಾಪ್ರಳಯದಿಂದ ಯುಗಾಂತ್ಯ, ಮತ್ತೆ ಮಹಾಸೋಟದಿಂದ ಹೊಸ ಯುಗಾರಂಭ ಎಂದು ನಂಬುತ್ತೇವೆ. ಮಹಾವಿಘ್ನಗಳಿಂದ, ಮಹಾದೋಷಗಳಿಂದ, ಮಹಾಪ್ರತ್ಯವಾಯಗಳಿಂದ ಮುಕ್ತರಾಗಬೇಕೆಂದು ಅಥರ್ವಶೀರ್ಷ ಪಠಿಸುತ್ತ ಮಹಾಗಣಪತಿಯನ್ನು
ನುಸುತ್ತೇವೆ! ಇಷ್ಟು ಓದಿದ ಮೇಲೆ, ಇಷ್ಟೇನಾ ಇದೇನು ಮಹಾ ಅಂತೀರಾ? ಹಾಗಿದ್ದರೆ ಈಗ ನಿಮಗೆ ಒಂದು ರಸಪ್ರಶ್ನೆ.

ಆರು ಅಕ್ಷರಗಳ ಹೆಸರಿನ ಮಧ್ಯದಲ್ಲಿ ಮಹಾ ಇದೆ ಎಂದು ಹೇಳಿದರೆ ನಿಮಗೆ ನೆನಪಾಗುವ ಶ್ರೇಷ್ಠ ಕನ್ನಡತಿ ಯಾರು? ಸುಳಿವು: ‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯ…’ ಎಂದವಳು. ಉತ್ತರ ಗೊತ್ತಾದರೆ ಬರೆದು ತಿಳಿಸಿ. ಮಹಾನವಮಿಯು ನಮ್ಮೆಲ್ಲರ ಮನ ಬೆಳಗಲಿ, ವಿಜಯದಶಮಿಯು ನಮ್ಮೊಳಗಿನ ಕೆಟ್ಟತನವೆಂಬ ವೈರಿಯ ಮೇಲೆ ವಿಜಯ ಸಾಧಿಸುವುದಕ್ಕೆ ಮುಹೂರ್ತ ವಾಗಲಿ ಎಂಬ ಶುಭಹಾರೈಕೆಗಳೊಂದಿಗೆ ಈ ಮಹಾ ಹರಟೆಯನ್ನು ಮುಗಿಸುತ್ತಿದ್ದೇನೆ.