Monday, 25th November 2024

ಕೋಚಿಮುಲ್ ಅಧ್ಯಕ್ಷ ನಂಜೇಗೌಡರಿಗೆ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಬಹಿರಂಗ ಸವಾಲ್..

chickballapur

ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಯು.ಹೆಚ್.ಟಿ ಹಾಲಿನ ಘಟಕವನ್ನು ಪ್ರಾರಂಭಿಸಿ ಒಕ್ಕೂಟ ಆರ್ಥಿಕವಾಗಿ ಪ್ರಗತಿಹೊಂದಿ ಲಾಭಾಂಶ ತರುವ ಸತ್ಕಾರ್ಯವನ್ನು ಮಾಡಿರುತ್ತೇನೆ.ಇದರಿಂದಾಗಿ ಇಂದಿಗೂ ಒಕ್ಕೂಟಕ್ಕೆ ಹೆಚ್ಚಿನ ಲಾಭಾಂಶ ಬರುತ್ತಲೇ ಇದೆ ಇದು ಸುಳ್ಳೇ ನೀವೇ ಹೇಳಿ ಎಂದು ಪ್ರಶ್ನಿಸಿರುವ ಕೆ.ವಿ.ನಾಗ ರಾಜ್ ತಮ್ಮ ಕಾಲದ ಅಭಿವೃದ್ಧಿ, ನಂಜೇಗೌಡರ ಕಾಲದ ಭ್ರಷ್ಟಾಚಾರವನ್ನು ಬಯಲಿಗೆಳೆದು ಚರ್ಚೆಗೆ ವೇದಿಕೆ ಕಲ್ಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ತಮ್ಮ ಅವಧಿಯ ಸಾಧನೆಗಳನ್ನು ಬಿಚ್ಚಿಟ್ಟಿದ್ದಾರೆ.

ನನ್ನ ಅವಧಿಯಲ್ಲಿ ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಬಳಿ ಅತ್ಯಾಧುನಿಕವಾಗಿ ನಿರ್ಮಾಣ ಮಾಡಿರುವ ಮೆಗಾಡೇರಿಗೆ ಕೇಂದ್ರ ಸರಕಾರದಿಂದ ೧೨ ಕೋಟಿ, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುದಾನ ದಲ್ಲಿ ೪ ಕೋಟಿ ಒಟ್ಟು ೧೬ ಕೋಟಿ ಅನುದಾನ ತಂದಿದ್ದೇನೆ.ತೋಟಗಾರಿಕಾ ಇಲಾಖೆಯಿಂದ ಕೋಟ್ಯಾಂತರ ರೂ ಬೆಲೆಬಾಳುವ ೧೫ ಎಕರೆ ಜಮೀನನ್ನು ಪಡೆಯುವಲ್ಲಿ ನನ್ನದೇ ಪ್ರಮುಖ ಪಾತ್ರವಿದೆ ಎಂಬುದನ್ನು ಈಗಿನ ಅಧ್ಯಕ್ಷ ನಂಜೇಗೌಡರು ಅಪ್ಪಿತಪ್ಪಿ ಮರೆಯಬಾರದು.

ರಾಜ್ಯದ ೧೪ ಹಾಲು ಒಕ್ಕೂಟಗಳಲ್ಲಿಯೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಗುಣಮಟ್ಟ ಹಾಗೂ ಹೆಚ್ಚು ಹಾಲು ಶೇಖರಣೆಗೆ ಹೆಸರಾಗಿ ಉತ್ತಮ ಲಾಬಾಂಶವನ್ನು ಸಾಧಿಸಿರುವುದಕ್ಕೆ ದಾಖಲೆಯಿದೆ. ಆಗಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಉಪ ಮುಖ್ಯ ಮಂತ್ರಿ ಯಡಯೂರಪ್ಪ ಅವರೇ ಗೌರವಿಸಿರುವ ಭಾವ ಚಿತ್ರ ತಮ್ಮ ಅಧ್ಯಕ್ಷರ ಕೊಠಡಿ ಗೋಡೆಯ ಮೇಲೆಯೇ ಇದೆ.ಅದನ್ನು ಕೂಡ ಒಮ್ಮೆ ನೋಡಿದರೆ ಸಾಕು.

ನನ್ನ ಅವಧಿಯಲ್ಲಿ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಮುಳಬಾಗಿಲು ತಾಲೂಕಿನಲ್ಲಿ  ೫ ಬಿಎಂಸಿ ಘಟಕ ಪ್ರಾರಂಭಮಾಡಿದೆ. ಈಗ ನೂರಾರಿದ್ದು ಬಿಎಂಸಿಗಳು ಈ ಎರಡು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುತ್ತವೆ ಇದು ಸುಳ್ಳಲ್ಲ ತಾನೆ? ಎಂದು ಪ್ರಶ್ನಿಸಿದ್ದಾರೆ.

೨೦೧೯ ರಲ್ಲಿ ಚುನಾವಣೆ ನಡೆದು ತಾವು ಅಧ್ಯಕ್ಷರಾದ ಸಮಯದಲ್ಲಿ ಒಕ್ಕೂಟದಲ್ಲಿ ೨೦೦ ಕೋಟಿ ಮೂಲಭೂತ ಸೌಕರ್ಯ ನಿಧಿಯಿತ್ತು. ಆದರೆ ತಮ್ಮ ಅವಧಿ ಮುಕ್ತಾಯದ ದಿನಕ್ಕೆ ಒಕ್ಕೂಟವು ಹಾಲು ಉತ್ಪಾದಕರಿಗೆ ಸರಿಯಾಗಿ ೭ ದಿನಗಳಿಗೆ ಬಟವಾಡೆ ಮಾಡಲಾಗದೆ ಬ್ಯಾಂಕಿನಲ್ಲಿ ರೂ. ೧೦೦ ಕೋಟಿಗಳ ಒ.ಡಿಯನ್ನು ಪಡೆದು ಒಕ್ಕೂಟವನ್ನು ಅದಃಪತನಕ್ಕೆ ತಳ್ಳುವ ಕಾರ್ಯವನ್ನು ಮಾಡಿ, ಪ್ರತಿ ತಿಂಗಳು ಕ್ಯೋಟ್ಯಾಂತರ ರೂ. ಬ್ಯಾಂಕ್‌ಗೆ ಬಡ್ಡಿಯನ್ನು ಪಾವತಿಸುತ್ತಿರುವುದೇ ತಮ್ಮ ಪ್ರಗತಿಯ ದೊಡ್ಡ ಸಾಧನೆ.

ನಮ್ಮ ಅವಧಿಯಲ್ಲಿ ೭ ದಿನಗಳಿಗೆ ಬಟವಾಡೆಯನ್ನು ಮಾಡುವ ವ್ಯವಸ್ಥೆಯಿತ್ತು.ನಂಜೇಗೌಡರೇ ತಮ್ಮ ಅವಧಿಯಲ್ಲಿ ೧೦ ದಿನಕ್ಕೆ ಪಾವತಿಸಲು ಕ್ರಮಕೈಗೊಳ್ಳಲಾಗಿದೆ. ಇದೇನಾ ನಿಮ್ಮ ಅಭಿವೃದ್ಧಿ? ಇತ್ತೀಚೆಗೆ ಒಕ್ಕೂಟದಲ್ಲಿ ೭೫ ಅಧಿಕಾರಿಗಳ ನೇರ ನೇಮಕಾತಿಯಲ್ಲಿ ಅವ್ಯವಹಾರ ಆಗಿಲ್ಲ ಎಂದು ಹೇಳಿಕೆಯನ್ನು ನೀಡುತ್ತೀರಿ. ಆದರೆ ಈ ನೇಮಕಾತಿಯ ಬಗ್ಗೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸಿ ಅಕ್ರಮವಾಗಿರುವ ಬಗ್ಗೆ ಸ್ಪಷ್ಟ ದಾಖಲಾತಿಗಳನ್ನು ನೀಡಿ ರಾಜ್ಯ ಸರ್ಕಾರದ ಲೋಕಾಯುಕ್ತಕ್ಕೆ ಹೆಚ್ಚಿನ ತನಿಖೆಗೆ ಶಿಫಾರಸ್ಸು ಮಾಡಿದ್ದರೂ ಕ್ರಮವಹಿಸಿಲ್ಲ ಯಾಕೆ?

ಏಕೆಂದರೆ ಪ್ರತಿ ಹುದ್ದೆಗೆ ರೂ. ೨೫ ರಿಂದ ೩೦ ಲಕ್ಷಗಳನ್ನು ಸಂಘ್ರಹಿಸಿರುವುದು ಅಲ್ಲದೆ ಅರ್ಹರಿಗೆ ಬದಲಾಗಿ ಅನರ್ಹರಿಗೂ ಹಣವನ್ನು ಪಡೆದು ಹುದ್ದೆಗಳನ್ನು ಮಾರಾಟ ಮಾಡಿರುವುದು ಜಗಜ್ಜಾಹಿರಾಗಿರುತ್ತದೆ. ಈ ಬಗ್ಗೆ ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಮೊದಲ ಪುಟದಲ್ಲಿ ಪ್ರಕಟವಾಗಿರುತ್ತದೆ. ಇದಾದ ಬಳಿಕೆ ಸ್ಪಷ್ಟನೆ ಕೊಡಲು ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮ ಮಿತ್ರರ ಮೇಲೆ ಹರಿಹಾಯ್ದಿರುವ ಮಾಹಿತಿ ತಮಗೆ ಮೆರೆತುಹೋಗಿರಬಹುದು. ಇದೆಲ್ಲಾ ಇರಲಿ ತಾವು ಅಧ್ಯಕ್ಷರಾಗಿ ಅರ್ಹರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುವ ಮೊದಲೇ ಜಾಲತಾಣಗಳಲ್ಲಿ ಹೇಗೆ ಅರ್ಹರ ಪಟ್ಟಿ ಬಿಡುಗಡೆಯಾಗುತ್ತದೆ ತಾವೇ ಹೇಳಿ ಎಂದು ಕಾಲೆಳೆದಿದ್ದಾರೆ.

ಹಣನುಂಗುವುದು ಅಭಿವೃದ್ಧಿಯಲ್ಲ  

ಅಭಿವೃದ್ದಿ ಎಂದರೇ ಹಾಲು ಉತ್ಪಾದಕರ ಕಷ್ಟದ ಫಲವಾಗಿ ಸಂಗ್ರಹವಾಗಿರುವ ನೂರಾರು ಕೋಟಿ ಹಣವನ್ನು ಖರ್ಚುಮಾಡಿ ನಾನು ಅಭಿವೃದ್ಧಿ ಮಾಡಿದ್ದೇನೆಂದು ಬಡಾಯಿ ಕೊಚ್ಚಿಕೊಳ್ಳುವುದಲ್ಲ. ಎರಡು ಬಾರಿ ಶಾಸಕರಾಗಿ ಸರಕಾರದಲ್ಲಿ ಪಾಲುದಾರರಾಗಿ ಒಕ್ಕೂಟಕ್ಕೆ ಒಂದು ಗುಂಟೆ ಜಮಿನನ್ನು ಉಚಿತವಾಗಿ ಕೂಡಿಸಿರುವ ಉದಾಹರಣೆ ಇದ್ದರೆ ಅದನ್ನು  ಸಾಬೀತುಪಡಿಸಿ.ಇದನ್ನು ಬಿಟ್ಟು ತಮ್ಮ ಕಾಲದ ಅಕ್ರಮಗಳನ್ನು ಮುಚಿಹಾಕುವ ಕಾರಣಕ್ಕಾಗಿಯೇ ಅಧಿಕಾರದಲ್ಲಿ ಮುಂದುವರೆದಿದ್ದೀರಿ.ನಿಮಗೆ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯಿದ್ದಲ್ಲಿ ಕೂಡಲೇ ವಿಭಜನೆ ಮಾಡಿಸಿ ನ್ಯಾಯ ಸಮ್ಮತ ರೀತಿಯಲ್ಲಿ ಚುನಾವಣೆ ಎದುರಿಸಿ ಗೆದ್ದು ಬನ್ನಿ ಎಂದು ಸವಾಲು ಹಾಕಿದರು.

ಅಂದು ಬೇಡ-ಈಗ ಬೇಕಾ?

ಕೋಲಾರ –ಚಿಕ್ಕಬಳ್ಳಾಪುರ ಹಾಲು ಒಕ್ಕುಟವನ್ನು ವಿಭಜನೆ ಮಾಡಿ ಚುನಾವಣೆ ನಡೆಸುತ್ತೆವೆಂದು ಹೇಳಿಕೆ ನೀಡಿದ್ದೀರಿ. ಪ್ಯಾಕೀಂಗ್ ಘಟಕ್ಕಕೆ ೧೩೬ ಕೋಟಿ ಡಿಪಿಅರ್ ಮಾಡಿದ್ದೇವೆ, ಮೇಗಾ ಡೇರಿಯ ಬಳಿಯೇ ೧೦ ಎಕರೆ ಜಾಗವನ್ನು ಕೊಡಿಸುತ್ತೇವೆಂದು ಹೇಳಿದ್ದೀರಿ. ಇವೆಲ್ಲ ಸೌಲಭ್ಯಗಳು ಅದ ಮೇಲೆಯೇ ವಿಭಜನೆ ಮಾಡಿದರೆ ನಿಮ್ಮ ಮಾತಿಗೆ ಬೆಲೆ ಇರುತ್ತದೆ.  ೨೦೨೧-೨೦೨೨ ರ ಅವದಿಯಲ್ಲಿ ಡಾ. ಕೆ.ಸುಧಾಕರ್ ಸಚಿವರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮೇಗಾಡೇರಿ ಬಳಿ ೫ ಏಕರೆ ಜಾಗ ಮತ್ತು ೫೦ ಕೋಟಿ ಹಣ ಬೀಡುಗಡೆ ಮಾಡುತ್ತಿದ್ದರು. ಅದರೆ ಆಗ ಇದಕ್ಕೆ ತಡೆ ಒಡ್ಡಿದಂತಹ ನೀವುಗಳು ಇವತ್ತು ಬರೀ ಬಾಯಿಮಾತಿನಲ್ಲಿ ವಿಭಜನೆ ಮಾಡಲು ಹೊರಟಿರುವುದು ಹಾಲು ಉತ್ಪಾದಕರನ್ನು ದಿಕ್ಕುತಪ್ಪಿಸುವ ನಡೆಯಾಗಿದೆ ಎಂದು ಕಿಡಿಕಾರಿದರು.

ಒಟ್ಟಾರೆ ಕೋಚಿಮುಲ್ ವಿಭಜನೆ ಎಂಬ ವಿಚಾರವು ಹಾಲಿ ಮಾಜಿ ಅಧ್ಯಕ್ಷರ ಜಟಾಪಟಿಗೆ ಸಿಕ್ಕಿ  ಕಗ್ಗಂಟಾಗಿರುವ ಜತೆಗೆ ಅಭಿವೃದ್ಧಿಗಿಂತ ಏಟು ಎದಿರೇಟಿಗೆ ಸಾಕ್ಷಿಯಾಗಿರುವುದು ಹೈನೋಧ್ಯಮ ನಂಬಿರುವ ರೈತಾಪಿ ಗಳಿಗೆ ರೇಜಿಗೆಯನ್ನು ತರಿಸಿದೆ.ಇದು ಯಾವಾಗ ಮುಗಿಯುವುದೋ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.