ಮುಂಬೈ: ಇತ್ತೀಚಿನ ಕೆಲವು ಬೆಳವಣಿಗೆಗಳಿಂದಾಗಿ ದೇಶದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮೂಡುವಂತಾಗಿದೆ. ಅದರಲ್ಲಿಯೂ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪುಟ್ಟ ಕಂದಮ್ಮಗಳೂ ಕಾಮುಕರ ಕೈಗೆ ಸಿಲುಕಿ ನಲುಗುವಂತಾಗಿದೆ. ಇದೇ ಮಾದರಿಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ನಾಲ್ಕೂವರೆ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 19 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ (Physical Abuse).
ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಜವ್ಹಾರ್ ತಾಲೂಕಿನ ಕಾರ್ಮಿಕ ಎಂದು ಗುರುತಿಸಲಾಗಿದೆ. ಬಾಲಕಿ ಅಜ್ಜ-ಅಜ್ಜಿ ಮತ್ತು ಹೆತ್ತವರೊಂದಿಗೆ ವಾಸಿಸುತ್ತಿದ್ದಾಳೆ. ಆಕೆಯ ಹೆತ್ತವರು ಕೆಲಸಕ್ಕೆ ತೆರಳಿದಾಗ ಮನೆಗೆ ನುಗ್ಗಿದ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೇಬಲ್ ಕಾರ್ಮಿಕನಾಗಿರುವ ಆರೋಪಿ ಸಂತ್ರಸ್ತೆಯ ಮನೆ ಪಕ್ಕ ಕೆಲವು ದಿನಗಳಿಂದ ಕೆಲಸ ಮಾಡುತ್ತಿದ್ದ.
ಕೆಲಸ ಮುಗಿಸಿ ಮನೆಗೆ ಮರಳಿದ ಹೆತ್ತವರ ಬಳಿ ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತಿಳಿಸಿದ್ದಳು. ಕೂಡಲೇ ಹೆತ್ತವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸೆಕ್ಷನ್ 64 (ಅತ್ಯಾಚಾರ) ಮತ್ತು ಭಾರತೀಯ ನ್ಯಾಯ ಸಂಹಿತ ಮತ್ತು ಪೋಸ್ಕೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಲವು ರಾಜಕೀಯ ಪಕ್ಷಗಳು, ಸಂಘಟನೆಗಳುಯ ಪ್ರತಿಭಟನೆ ನಡೆಸಿ ಆರೋಪಿಗೆ ಕಠಿನ ಶಿಕ್ಷೆ ನೀಡುವಂತೆ ಆಗ್ರಹಿಸಿವೆ.
ಮರುಕಳಿಸುತ್ತಿದೆ ಘಟನೆ
ಮಹಾರಾಷ್ಟ್ರದ ಬದ್ಲಾಪುರದ ಶಾಲೆಯೊಂದರಲ್ಲಿ ಇತ್ತೀಚೆಗೆ ಇಬ್ಬರು ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಘಟನೆ ನಡೆದಿತ್ತು. ಈ ಘಟನೆಯು ಆಗಸ್ಟ್ 12-13 ರಂದು ನಡೆದಿದ್ದು, ಬದ್ಲಾಪುರದ ಶಾಲೆಯ ನರ್ಸರಿ ತರಗತಿಗಳಲ್ಲಿ ಓದುತ್ತಿರುವ ಇಬ್ಬರು ನಾಲ್ಕು ವರ್ಷದ ಬಾಲಕಿಯರ ಮೇಲೆ 23 ವರ್ಷದ ಸ್ವಚ್ಛತಾ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಹುಡುಗಿಯರ ಶೌಚಾಲಯದ ಒಳಗೆ ತೆರಳಿದಾಗ ಕಿಡಿಗೇಡಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಬೆಳಗ್ಗೆ ತರಗತಿಯ ವೇಳೆ ಬಾಲಕಿಯರು ವಾಶ್ರೂಮ್ಗೆ ತೆರಳಿದ್ದ ವೇಳೆ ಘಟನೆ ನಡೆದಿತ್ತು. ಆರೋಪಿ ಅಕ್ಷಯ್ ಶಿಂಧೆಯನ್ನು 2024ರ ಆಗಸ್ಟ್ 1ರಂದು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು. ಬಾಲಕಿಯರ ಶೌಚಾಲಯವನ್ನು ಸ್ವಚ್ಛಗೊಳಿಸುವ ಹೊಣೆಗಾರಿಕೆಯನ್ನು ಆತನಿಗೆ ನೀಡಲಾಗಿತ್ತು. ಬಾಲಕಿಯರ ಹೆತ್ತವರು ದಾಖಲಿಸಿದ ದೂರಿನ ಆದಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.