Sunday, 15th December 2024

ಗುತ್ತಿಗೆದಾರರು ಅಧಿಕಾರಿಗಳಿಗೆ ಹಣ ನೀಡಬೇಕು

ತುಮಕೂರು: ಪ್ರತಿ ಗುತ್ತಿಗೆ ಹಣದ ಪಾವತಿಗೂ ಅಧಿಕಾರಿಗಳಿಗೆ ಇಂತಿಷ್ಟು ಹಣ ನೀಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಇದು ಗುತ್ತಿಗೆದಾರ ಬೆಂಕಿಯಿ0ದ ಹಾರಿ ಬಾಣಲೆಗೆ ಬಿದ್ದಂತಾಗಿದೆ. ಕಾಂಗ್ರೆಸ್ ಸರ್ಕಾರದಲ್ಲೂ ಲಂಚ ಶೇ.೪೦ ಕ್ಕಿಂತ ಮಿತಿ ಮೀರಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎ.ಡಿ.ಬಲರಾಮಯ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಭರವಸೆ ನೀಡಿದ್ದ ಇಂದಿನ ಸಿ.ಎಂ. ಮತ್ತು ಡಿ.ಸಿ.ಎಂ ಅವರು, ತಮ್ಮದೇ ಸರ್ಕಾರ ಬಂದು ಒಂದೂವರೆ ವರ್ಷ ಕಳೆದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿಲ್ಲ. ಬದಲಿಗೆ ಹೆಚ್ಚಾಗಿದೆ. ಇದರಿಂದ ಗುತ್ತಿಗೆದಾರರು, ಸಾರ್ವಜನಿಕರು ನಲುಗಿ ಹೋಗಿದ್ದಾರೆ. ಹಿಂದೆ ಗುತ್ತಿಗೆದಾರರು ಕೊಟ್ಟಷ್ಟು ತೆಗೆದುಕೊಂಡು ಬಿಲ್ ಮಾಡುತ್ತಿದ್ದರೂ, ಇಂದು ಇಂತಿಷ್ಟೇ ಕೊಡಬೇಕು ಎಂದು ತಾಕೀತು ಮಾಡುತ್ತಾರೆ. ಇದರಿಂದ ಹಲವಾರು ಗುತ್ತಿಗೆದಾರರು ಊರು ಬಿಟ್ಟಿದ್ದಾರೆ. ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಕೆಲಸ ಸ್ಥಗಿತ ಮಾಡಿ ಹೋರಾಟ ನಡಸಲಾಗುವುದು ಎಂದು ಎಚ್ಚರಿಸಿದರು.
ಮೊದಲು ಹಿರಿತನದ ಆಧಾರದಲ್ಲಿ ಎಲ್.ಓ.ಸಿ. ಬಿಡುಗಡೆ ಮಾಡುತ್ತಿದ್ದರು. ಆದರೆ ಈಗ ಯಾರು ಕೈ ಬೆಚ್ಚಗೆ ಮಾಡಿದರೂ ಅವರಿಗೆ ಬಿಲ್ ಪಾವತಿಸುವಂತೆ ಸಚಿವರುಗಳು, ಶಾಸಕರು ಒತ್ತಡ ತರುತ್ತಾರೆ. ಜೆಜೆಎಂ ಕಾಮಗಾರಿಯ ಹಣ ಪಡೆಯಲು ಜಿ.ಪಂ. ಸಿಇಓ ಅವರಿಗೆ ಇಂತಿಷ್ಟು ಲಂಚವನ್ನು ಇಂಜಿನಿಯರ್‌ಗಳ ಮೂಲಕ ತಲುಪಿಸಬೇಕು. ಇದಕ್ಕೆ ಚಿಕ್ಕನಾಯಕಹಳ್ಳಿಯಲ್ಲಿ ನಡೆದ ಲೋಕಾಯುಕ್ತ ದಾಳಿಯೇ ಸಾಕ್ಷಿ ಎಂದರು.
ಜಿ.ಎಸ್.ಟಿ ಗುತ್ತಿಗೆದಾರರ ಜೀವ ಕಸಿಯುತ್ತಿದೆ. ೨೦೧೨-೧೩ ರಿಂದ ನಡೆದ ಕಾಮಗಾರಿಗಳಿಗೂ ಜಿ.ಎಸ್.ಟಿ ವಿಧಿಸುತ್ತಿದ್ದಾರೆ. ೨೦೧೮ರಲ್ಲಿ ಜಿ.ಎಸ್.ಟಿ ಜಾರಿಗೆ ಬಂದಿದೆ. ಆದರೆ ಅದರ ಹಿಂದೆ ಮಾಡಿದ ಕೆಲಸಗಳಿಗೂ ಜಿ.ಎಸ್.ಟಿ ವಿಧಿಸಿ, ಕಟ್ಟದ ಗುತ್ತಿಗೆದಾರರ ಖಾತೆಗಳನ್ನೇ ರದ್ದು ಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ರೀತಿ, ರಾಜ್ಯ ಸರ್ಕಾರವೂ ಬಿಡುಗಡೆ ಮಾಡಿದಷ್ಟು ಅನುದಾನಕ್ಕೆ ಮಾತ್ರ ಟೆಂಡರ್ ಕರೆಯಲಿ, ಅದನ್ನು ಬಿಟ್ಟು
ಒಂದು ಕೋಟಿಗೆ ಟೆಂಡರ್ ಕರೆದು, ೧೦ ಲಕ್ಷ ಹಣ ಬಿಡುಗಡೆ ಮಾಡುತ್ತಾರೆ. ಇದರಿಂದ ಸಾಲ ಮಾಡಿ ಕಾಮಗಾರಿ ಮಾಡಿದ ಗುತ್ತಿಗೆದಾರ ಪರಿತಪಿಸಬೇಕಾಗುತ್ತದೆ ಎಂದರು.
ರಾಜ್ಯ ಸರಕಾರ ಪ್ರತಿ ಎಂ.ಎಲ್.ಎ ಕ್ಷೇತ್ರಗಳಿಗೆ ಇಪ್ಪತೈದು ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಟೆಂಡರ್ ಕರೆದಿದ್ದಾರೆ. ಆದರೆ ಹಣ ಬಿಡುಗಡೆಯಾಗಿರುವುದು ಕಡಿಮೆ ಶಾಸಕರ ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಬಿಲ್‌ಗಾಗಿ ವರ್ಷಗಟ್ಟಲೆ ಕಾಯಬೇಕಿದೆ. ರಾಜ್ಯ ಸರಕಾರ ಪ್ಯಾಕೆಜ್ ಪದ್ದತಿಯನ್ನು ರದ್ದು ಮಾಡಬೇಕು ಎಂದು ಬತ್ತಾಯಿಸುತ್ತಿದೇವೆ, ಅಧಿಕಾರಿಗಳು ಶಾಸಕರ ಕೈಗೊಂಬೆಗಳು ಆಗಿದ್ದಾರೆ. ಈ ಸರಕಾರದಲ್ಲೂ ನಲವತ್ತು ಪರ್ಸೆಂಟ್ ಲಂಚ ಕೊಟ್ಟರೆ ಮಾತ್ರ ಬಿಲ್ಲುಗಳು ಆಗುತ್ತಿವೆ ಎಂದು ಸರಕಾರದ ವಿರುದ್ದ ಆರೋಪ ಮಾಡಿದರು.
ರಾಜ್ಯದಲ್ಲಿ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಸುಮಾರು ೩೧ ಸಾವಿರ ಕೋಟಿ ರೂಗಳ ಬಾಕಿ ಬರಬೇಕು. ಪಿಆರ್‌ಇಡಿ ೨೫೦೦ ಕೋಟಿ, ಕ್ರೇಡಲ್ ೧೦೦೦, ಎಮ್ ಐ ೨೯೦೦, ಎಸ್‌ಎಚ್‌ಡಿಪಿ ೨೦೦೦, ಪಿಡಬ್ಲ್ಯೂಡಿ ೯೦೦೦ ಕೋಟಿ ಸೇರಿ ವಿವಿಧ ಇಲಾಖೆಗಳ ೩೧ ಸಾವಿರ ಕೋಟಿ ರೂ. ಬಿಲ್ಲು ಗಳು ಬಾಕಿ ಇವೆ. ಮುಂದಿನ ಎರಡು ತಿಂಗಳಲ್ಲಿ ಬಾಕಿ ಬಿಡುಗಡೆ ಮಾಡದಿದ್ದರೆ ಗುತ್ತಿಗೆದಾರರ ಸಂಘದಿ0ದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು. ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಬಿ.ಪಿ.ಸುರೇಶ್‌ಕುಮಾರ್, ಖಜಾಂಚಿ ಕೋದಂಡರಾಮಯ್ಯ, ಸಹ ಕಾರ್ಯದರ್ಶಿ ಸಿ.ಆರ್. ಉಮೇಶ್, ಚಿಕ್ಕನಾಯಕನಹಳ್ಳಿ ತಾಲೂಕಿನ ಗುತ್ತಿಗೆದಾರ ಚಿಕ್ಕೆಗೌಡ ಮತ್ತಿತರರಿದ್ದರು.