ಬೆಂಗಳೂರು: ಇಂದು(ಶನಿವಾರ) ನಡೆಯುವ ಮಹಾರಾಜ ಟ್ರೋಫಿ(Maharaja Trophy)ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ಮತ್ತು ರನ್ನರ್ಸ್ ಅಪ್ ಮೈಸೂರು ವಾರಿಯರ್ಸ್ ಕಾದಾಟ ನಡೆಸಲಿದೆ. ಗೆದ್ದ ತಂಡ ನಾಳೆ(ಭಾನುವಾರ) ನಡೆಯುವ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಬೆಂಗಳೂರು ತಂಡ ಶುಕ್ರವಾರ ನಡೆದಿದ್ದ ಮೊದಲ ಸೆಮಿ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿತ್ತು.
ಲೀಗ್ ಹಂತದಲ್ಲಿ ಮೈಸೂರು ಮತ್ತು ಹುಬ್ಬಳ್ಳಿ ತಂಡಗಳು ಆಡಿದ 10 ಪಂದ್ಯಗಳಲ್ಲಿ ತಲಾ 6 ಗೆಲುವು ಸಾಧಿಸಿತ್ತು. ಆದರೆ ರನ್ ರೇಟ್ ಆಧಾರದಲ್ಲಿ ಮುಂದಿದ್ದ ಕಾರಣ ಮೈಸೂರು ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಿತು. ಹುಬ್ಬಳ್ಳಿ 3ನೇ ಸ್ಥಾನ ಪಡೆಯಿತು. ಉಭಯ ತಂಡಗಳು ಕೂಡ ಬಲಿಷ್ಠ ಆಟಗಾರರನ್ನು ಹೊಂದಿರುವ ಕಾರಣ ಪಂದ್ಯ ಅತ್ಯಂತ ರೋಚಕವಾಗಿ ಸಾಗುವ ನಿರೀಕ್ಷೆ ಇದೆ. ಕಳೆದ ಬಾರಿಯ ಫೈನಲ್ನಲ್ಲಿಯೂ ಉಭಯ ತಂಡಗಳು ಮುಖಾಮುಖಿಯಾದ ಕಾರಣ ಮತ್ತೊಮ್ಮೆ ಫೈನಲ್ ಜೋಶ್ ಕಂಡು ಬರಲಿದೆ. ಪಂದ್ಯ ರಾತ್ರಿ 7 ಗಂಟೆಗೆ ಆರಂಭವಾಗಲಿದೆ.
ಹುಬ್ಬಳ್ಳಿ ತಂಡದ ಆಟಗಾರ ಕೆ.ಎಲ್ ಶ್ರೀಜೇತ್ ಆಡಿದ 10 ಪಂದ್ಯಗಳಲ್ಲಿ 47 ಸರಸಾರಿಯಲ್ಲಿ 329 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳು ಸೇರಿವೆ. ಇನ್ನು ತಂಡದ ಬ್ಯಾಟಿಂಗ್ ವಿಭಾಗಕ್ಕೆ ನಾಯಕ ಮನೀಶ್ ಪಾಂಡೆ ಹಾಗೂ ಅನೇಶ್ವರ್ ಗೌತಮ್ ಆಸರೆ ಆಗಬಲ್ಲರು. ಬೌಲಿಂಗ್ ವಿಭಾಗದಲ್ಲಿಯೂ ತಂಡ ಬಲಿಷ್ಠವಾಗಿ ಗೋಚರಿಸಿದೆ. ವಿದ್ವತ್ ಕಾವೇರಪ್ಪ (11 ವಿಕೆಟ್), ಎಲ್ ಆರ್ ಕುಮಾರ್ (14 ವಿಕೆಟ್), ಮನವಂತ್ ಕುಮಾರ್ (15 ವಿಕೆಟ್) ಈ ವರೆಗೆ ಘಾತಕ ಬೌಲಿಂಗ್ ದಾಳಿ ನಡೆಸಿ ಗಮನಸೆಳೆದಿದ್ದಾರೆ. ಹೀಗಾಗಿ ಸೆಮಿ ಪಂದ್ಯದಲ್ಲಿಯೂ ಇವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಅತ್ತ ಮೈಸೂರು ತಂಡ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ವೈವಿಧ್ಯಮಯವಾಗಿದೆ. ನಾಯಕ ಕರುಣ್ ನಾಯರ್ (490), ಮನೋಜ್ (222 ರನ್), ಎಸ್ಯು ಕಾರ್ತಿಕ್ (248 ರನ್), ಜೆ.ಸುಚಿತ್ (154 ರನ್) ನಂಬಿಕಸ್ಥ ಬ್ಯಾಟರ್ ಆಗಿದ್ದಾರೆ. ಬೌಲಿಂಗ್ನಲ್ಲಿ ಸಿಎ ಕಾರ್ತಿಕ್ (14 ವಿಕೆಟ್), ವಿದ್ಯಾಧರ್ ಪಾಟೀಲ್ (13 ವಿಕೆಟ್), ಜೆ.ಸುಚಿತ್ (10 ವಿಕೆಟ್), ಕೆ.ಗೌತಮ್ ಎದುರಾಳಿ ತಂಡವನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.
ಪಂದ್ಯಕ್ಕೆ ಮಳೆ ಭೀತಿ
ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ನಿನ್ನೆ(ಶುಕ್ರವಾರ) ನಡೆದಿದ್ದ ಮೊದಲ ಸೆಮಿ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಪಂದ್ಯ 20 ನಿಮಿಷ ತಡವಾಗಿ ಆರಂಭಗೊಂಡಿತ್ತು. ಇಂದಿನ ಪಂದ್ಯಕ್ಕೂ ಮಳೆ ಇರುವ ಸಾಧ್ಯತೆ ಇದೆ. ಮಳೆ ನೀರು ಇಂಗಿಸುವ ಸುಸಜ್ಜಿತ ಸಬ್ಏರ್ ಸಿಸ್ಟಮ್ ಹೊಂದಿರುವ ಕಾರಣ ಮಳೆ ನಿಂತ ಕೆಲವೇ ನಿಮಿಷದಲ್ಲಿ ಪಂದ್ಯ ನಡೆಸುವ ವ್ಯವಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಬಂದರೂ ಪಂದ್ಯ ರದ್ದಾಗುವ ಭೀತಿ ಇಲ್ಲ.