Friday, 22nd November 2024

Pralhad Joshi: ಕರ್ನಾಟಕದ ಸ್ಥಿತಿ ಏನಾಗಿದೆ ಎಂಬುದನ್ನು ನೋಡಲು ರಾಹುಲ್ ಗಾಂಧಿ ಬರಲಿ: ಪ್ರಲ್ಹಾದ್ ಜೋಶಿ

Pralhad Joshi

ಹುಬ್ಬಳ್ಳಿ: ಸಿಎಂ, ಡಿಸಿಎಂ ಜನಕಲ್ಯಾಣ, ಜನರ ಹಿತ, ಅಭಿವೃದ್ಧಿಗೆ ಬದ್ಧತೆ ತೋರದೆ ತಮ್ಮ ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಜಕೀಯ ಡ್ರಾಮಾ ಮಾಡುತ್ತಿದ್ದಾರೆ. ಮತ್ತೊಂದೆಡೆ ನೋಡಿದರೆ ಎನ್‌ಡಿಎ ಸರ್ಕಾರ ಇರುವೆಡೆ ರಾಹುಲ್ ಗಾಂಧಿ (Rahul Gandhi) ಓಡೋಡಿ ಹೋಗುತ್ತಾರೆ. ಆದರೆ, ಅವರು ತಮ್ಮದೇ ಸರ್ಕಾರ ಇರುವ ಕರ್ನಾಟಕಕ್ಕೆ ಬಂದು ಇಲ್ಲಿನ ಸ್ಥಿತಿ ಏನಾಗಿದೆ ಎಂದು ನೋಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜನರು ತಮ್ಮ ಕಲ್ಯಾಣಕ್ಕಾಗಿ 136 ಸೀಟುಗಳನ್ನು ಕೊಟ್ಟು ಗೆಲ್ಲಿಸಿದರು. ಆದರೆ, ಅಧಿಕಾರದಲ್ಲಿ ತಾವು ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ? ಎಂಬ ಬಗ್ಗೆ ಸಿಎಂ, ಡಿಸಿಎಂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಮಳೆ ಹಾನಿ, ಬೆಳೆ ಹಾನಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯೇ ಇಲ್ಲವೆಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರ ಹೆಸರು, ಸೂರ್ಯಕಾಂತಿ, ಉದ್ದು, ಸೋಯಾಬಿನ್ ಅನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ತ್ವರಿತ ಅನುಮತಿ ನೀಡಿದರೂ ರಾಜ್ಯದಲ್ಲಿ ಸೂಕ್ತ ತಯಾರಿಯನ್ನೇ ಮಾಡಿಕೊಳ್ಳಲಾಗಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರದ ಅಧಿಕಾರಿಗಳು ಫೋನ್ ಕರೆ ಮಾಡಿ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ಕೋರಿದ್ದರು. ಪ್ರಸ್ತಾವನೆ ಸಲ್ಲಿಸಲು ಸಲಹೆ ಮಾಡಿದ್ದೆ. ಆದರಂತೆ ರಾಜ್ಯದಿಂದ ಪ್ರಸ್ತಾವನೆ ಬಂದ ಎರಡೇ ದಿನದಲ್ಲಿ, ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಿದ್ದಾಗಿದೆ. ಆದರೆ, ರಾಜ್ಯ ಸರ್ಕಾರ ಇಲ್ಲಿನ್ನೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು.

ಮಾರುಕಟ್ಟೆಯಲ್ಲಿ ಹೆಸರು, ಸೂರ್ಯಕಾಂತಿ, ಉದ್ದು, ಸೋಯಾಬಿನ್‌ಗೆ ಕಡಿಮೆ ಬೆಲೆಯಿದ್ದು, ರಾಜ್ಯದ ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ತಕ್ಷಣವೇ ಖರೀದಿ ಕೇಂದ್ರ ತೆರೆಯುವಂತೆ ಅನುಮತಿ ಕೊಡಿಸಲಾಗಿದೆ. ಆದರೆ, ಇಲ್ಲಿ ನೋಡಿದರೆ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯಲು ಇನ್ನೂ ಸೂಕ್ತ ತಯಾರಿಯನ್ನೇ ಮಾಡಿಕೊಂಡಿಲ್ಲ ಎಂದು ಹೇಳಿದರು.

ಯಾವುದೇ ರಾಜ್ಯಗಳಲ್ಲಿ ಯಾವುದೇ ಸರ್ಕಾರ ಇರಲಿ ಕೇಂದ್ರ ತಾರತಮ್ಯ ತೋರುವುದಿಲ್ಲ. ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ತ್ವರಿತ ಅನುಮತಿ ನೀಡಿರುವುದೇ ಇದಕ್ಕೆ ನಿದರ್ಶನ ಎಂದು ತಿಳಿಸಿದರು.

ರಸ್ತೆಗೆ ತೇಪೆ ಹಾಕಲೂ ಆಗಿಲ್ಲ ಇವರಿಂದ

ರಾಜ್ಯದಲ್ಲಿ ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ. ಕನಿಷ್ಠ ರಸ್ತೆಗೆ ತೇಪೆ ಹಾಕುವ ಕೆಲಸವೂ ಆಗಿಲ್ಲ! ಎಂದು ಆರೋಪಿಸಿದ ಅವರು, ಎನ್‌ಡಿಎ ಸರ್ಕಾರ ಇರುವೆಡೆ ರಾಹುಲ್ ಗಾಂಧಿ ಓಡೋಡಿ ಹೋಗುತ್ತಾರೆ. ಆದರೆ, ತಮ್ಮದೇ ಸರ್ಕಾರ ಇರುವ ಕರ್ನಾಟಕಕ್ಕೆ ಬಂದು ನೋಡಲಿ ಎಂದು ಟೀಕಿಸಿದರು.