Friday, 22nd November 2024

Paralympics 2024 : ಪ್ಯಾರಾಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಕಂಚಿನ ಪದಕ ರುಬಿನಾ, ಭಾರತಕ್ಕೆ ಐದನೇ ಪದಕ

Paralympics 2024

ಹೊಸದಿಲ್ಲಿ: ಭಾರತದ ರುಬಿನಾ ಫ್ರಾನ್ಸಿಸ್ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paralympics 2024) ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್ 1 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಿಸ್‌ನ  ಚಟೌರೌಕ್ಸ್ – ಫೈನಲ್ ರೇಂಜ್‌ನಲ್ಲಿ ರುಬಿನಾ 211.1 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಕಂಚಿನ ಪದಕ ಗೆದ್ದರು. 25 ವರ್ಷದ ಶೂಟರ್ ಈವೆಂಟ್‌ನ ಬಹುಪಾಲು ಸಮಯ ಅಗ್ರ 4 ರಲ್ಲಿ ಉಳಿದು ಪದಕ ಗೆದ್ದರು. ಭಾರತದ ಶೂಟರ್ ತನ್ನ 19 ಮತ್ತು 20ನೇ ಶಾಟ್‌ಗಳಲ್ಲಿ  ಅಗ್ರ 2 ಸ್ಥಾನಗಳನ್ನು ತಲುಪಿದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇರಾನ್‌ನ ಸಾರೆಹ್ ಜವಾನ್ಮರ್ಡಿ  ಮತ್ತು ಟರ್ಕಿಯ ಐಸೆಲ್ ಓಜ್‌ಗಾನ್‌ ಕ್ರಮವಾಗಿ 236.8 ಮತ್ತು 231.1 ಅಂಕಗಳೊಂದಿಗೆ ಮೊದಲೆರಡು ಸ್ಥಾನ ಪಡೆದುಕೊಂಡರು. ಇದು ಭಾರತಕ್ಕೆ ಪ್ಯಾರಾಲಿಂಪಿಕ್ಸ್‌ನಲ್ಲಿ ದೊರಕಿದ ಐದನೇ ಪದಕ.

ರುಬಿನಾ 19-22ನೇ ಶಾಟ್ ಗಳಲ್ಲಿ ಸಾರೆಹ್ ಅವರೊಂದಿಗೆ ತೀವ್ರ ಪೈಪೋಟಿ ನಡೆಸಿದರು. ಆದಾಗ್ಯೂ ಅವರನ್ನು ಮೀರಿಸಲು ಸಾಧ್ಯವಾಗಲಿಲ್ಲ. ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಎರಡರಲ್ಲೂ ಭಾರತ ಈಗಾಗಲೇ ಶೂಟಿಂಗ್‌ನಲ್ಲಿ ಮಾಡಿದ ಸಾಧನೆಯನ್ನು ಮುಂದುವರಿಸಿದರು.  ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ 2 ನೇ ದಿನದಂದು ಕೂಡ ಭಾರತೀಯ ಶೂಟರ್‌ಗಳು ದೇಶಕ್ಕೆ ಪದಕ ತರುವ ಜವಾಬ್ದಾರಿ ಹೊತ್ತುಕೊಂಡಿದ್ದರು.  ಅವನಿ ಲೆಖಾರಾ ಅವರು  ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ಸ್ಪರ್ಧೆಯಲ್ಲಿ ಚಿನ್ನದ ಪದಕ ಉಳಿಸಿಕೊಂಡರು. ಈ ಗೆಲುವಿನೊಂದಿಗೆ, ಅವನಿ ಟೋಕಿಯೊ 2020ರ ಚಿನ್ನ ಉಳಿಸಿಕೊಂಡರು.

ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮೋನಾ ಅಗರ್ವಾಲ್  ಅವರ ಜತೆ ಅವನಿ ಅವರೊಂದಿಗೆ ಪ್ರಶಸ್ತಿ ವೇದಿಕೆ ಹಂಚಿಕೊಂಡರು. 36 ವರ್ಷದ ಮೋನಾ ಶೂಟರ್ ಗಮನಾರ್ಹ ಕೌಶಲ ಪ್ರದರ್ಶಿಸಿದರು. ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸುತ್ತಿದ್ದ ಮೋನಾ ಅಂತಿಮವಾಗಿ 228.7 ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರು. ಅವರ ಕಂಚಿನ ಪದಕದ ಗೆಲುವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್‌ಗಳ ಸಾಧನೆಗಳ ಪುನರಾವರ್ತನೆಯಾಗಿದೆ.  ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್ 1 ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕ ಗೆದ್ದಿದ್ದಾರೆ. ಮನೀಶ್ 234.9 ಅಂಕಗಳನ್ನು ಗಳಿಸುವ ಮೂಲಕ ಕೊರಿಯಾದ ಜಿಯೊಂಗ್ಡು ಜೋ ಅವರನ್ನು ಮಣಿಸಿದರು.  ಟೋಕಿಯೊ ಕ್ರೀಡಾಕೂಟದಲ್ಲಿ ಮಿಶ್ರ ಎಸ್ಎಚ್ 1 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ನಂತರ ಮನೀಶ್ ಮತ್ತೊಂದು ಸಾಧನೆ ಮಾಡಿದರು.

ರುಬಿನಾ ಫ್ರಾನ್ಸಿಸ್ ಯಾರು?

ಮಧ್ಯಪ್ರದೇಶದ ಜಬಲ್ಪುರದ  ಪ್ಯಾರಾ ಶೂಟರ್ ರುಬಿನಾ ಫ್ರಾನ್ಸಿಸ್ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ತಮ್ಮ ಜಾಗತಿಕ ಕ್ರೀಡೆಯ ಉತ್ತುಂಗ ತಲುಪಿದ್ದಾರೆ. ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ರುಬಿನಾ ಕಾಲಿನ ಊನವನ್ನು ಹೊಂದಿದ್ದಾರೆ. ಮೆಕ್ಯಾನಿಕ್ ಆಗಿದ್ದ ಆಕೆಯ ತಂದೆ ಸೈಮನ್ ಫ್ರಾನ್ಸಿಸ್, ಆರ್ಥಿಕ ಸಮಸ್ಯೆ ನಡುವೆ ಪುತ್ರಿಯ ಶೂಟಿಂಗ್‌ಗೆ ಬೆಂಬಲಿಸಿದರು.  ಗಗನ್ ನಾರಂಗ್ ಅವರ ಒಲಿಂಪಿಕ್ ಸಾಧನೆಗಳಿಂದ ಸ್ಫೂರ್ತಿ ಪಡೆದ ರುಬಿನಾ ಅವರ ಶೂಟಿಂಗ್ ಪ್ರಯಾಣವು 2015 ರಲ್ಲಿ ಪ್ರಾರಂಭವಾಯಿತು.  2017ರಲ್ಲಿ ಪುಣೆಯ ಗನ್ ಫಾರ್ ಗ್ಲೋರಿ ಅಕಾಡೆಮಿ ಸೇರಿದ್ದರು.

ಶ್ರೀ ಜೈ ಪ್ರಕಾಶ್ ನೌಟಿಯಾಲ್ ಅವರ ಮಾರ್ಗದರ್ಶನದಲ್ಲಿ, ರುಬಿನಾ ಅವರ ಪ್ರತಿಭೆ ಅನಾವಣಗೊಂಡಿತು.  ತರಬೇತುದಾರ ಜಸ್ಪಾಲ್ ರಾಣಾ ಅವರ ಮಾರ್ಗದರ್ಶನದಲ್ಲಿ ಅವರ ಕೌಶಲಗಳು ಪ್ರವರ್ಧಮಾನಕ್ಕೆ ಬಂದವು. 2018 ರ ಫ್ರಾನ್ಸ್ ವಿಶ್ವಕಪ್ ಸಮಯದಲ್ಲಿ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ಬಂದಿತು, ಅಲ್ಲಿ ರುಬಿನಾ ಪ್ಯಾರಾಲಿಂಪಿಕ್ ಕೋಟಾ ಗಿಟ್ಟಿಸಿಕೊಂಡರು.  2021 ರ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.