Sunday, 24th November 2024

Heavy Rain: ಆಂಧ್ರದಲ್ಲಿ ಭಾರೀ ಮಳೆ; ಭೀಕರ ಭೂಕುಸಿತ-ಬರೋಬ್ಬರಿ 8 ಜನ ಬಲಿ

Heavy Rain

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಕಳೆದೆರೆಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ(Heavy Rain)ಗೆ ಎಂಟು ಮಂದಿ ಸಾವನ್ನಪ್ಪಿದ್ದಾರೆ. ವಿಜಯವಾಡ ನಗರದಲ್ಲಿ ಉಂಟಾದ ಭೂಕುಸಿತ(Landslide) ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದು, ಮತ್ತೊಂದೆಡೆ ಗುಂಟೂರು ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ಕಾರೊಂದು  ಕೊಚ್ಚಿ ಹೋಗಿದೆ. ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ವಿಜಯವಾಡದ ಹೃದಯಭಾಗದಲ್ಲಿರುವ ಗುಡ್ಡಕ್ಕೆ ತಾಗಿಕೊಂಡು ಇರುವ ಮೊಘಲ್‌ರಾಜಪುರಂ ಕಾಲೋನಿಯ ಸುನ್ನಪುಬಟ್ಟಿ ಕೇಂದ್ರದಲ್ಲಿ  ಭೂಕುಸಿತ ಸಂಭವಿಸಿದೆ. ಗುಡ್ಡದ ಮೇಲಿಂದ ಭಾರೀ ಗಾತ್ರದ ಕಲ್ಲುಗಳು ಮನೆಗಳ ಮೇಲೆ ಬಿದ್ದಿವೆ. “ಒಂದು ಮನೆ ಸಂಪೂರ್ಣ ನಾಶವಾಗಿದ್ದು, ಒಳಗಿದ್ದ ಐವರು ಸಾವನ್ನಪ್ಪಿದ್ದರೆ, ಕನಿಷ್ಠ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ” ಎಂದು ವಿಜಯವಾಡ ಮುನ್ಸಿಪಲ್ ಕಮಿಷನರ್ ಎಚ್‌ಎಂ ಧ್ಯಾನಚಂದ್ರ ತಿಳಿಸಿದ್ದಾರೆ.

ಕೂಡಲೇ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆದಾಗ್ಯೂ, ಭಾರೀ ಮಳೆಯು ತ್ವರಿತ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ಅನೇಕ ಮನೆಗಳು ಬೆಟ್ಟಗಳ ಸಮೀಪದಲ್ಲಿವೆ; ಹೀಗಾಗಿ ಮತ್ತಷ್ಟು ಭೂಕುಸಿತವಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಎಂ ಮೇಘನಾ (25), ಬೋಲೆಂ ಲಕ್ಷ್ಮಿ (49), ಲಾಲು (20)ಮತ್ತು ಅನ್ನಪೂರ್ಣ (55) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಬಿಹಾರ ಮೂಲದ ಕಾರ್ಮಿಕ ಎನ್ನಲಾಗಿದೆ.

ಘಟನೆಯ ಬಗ್ಗೆ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಇದೇ ವೇಳೆ ಗುಡ್ಡಗಾಡು ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಾಯ್ಡು ಅವರು ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಬೆಂಬಲದ ಭರವಸೆ ನೀಡಿದರು ಮತ್ತು ಈ ಕಾರ್ಯಾಚರಣೆಗಳ ಸಮಯದಲ್ಲಿ ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಒತ್ತಾಯಿಸಿದರು. ವಿಜಯವಾಡ ಪೂರ್ವ ವಲಯದ ಶಾಸಕ ಗದ್ದೆ ರಾಮ ಮೋಹನ್ ಅವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಸ್ಥಳಕ್ಕೆ ಭೇಟಿ ನೀಡಿದರು.

ವಿಜಯವಾಡದಲ್ಲಿ ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಇಡೀ ನಗರವೇ ಸ್ಥಬ್ಧಗೊಂಡಿದೆ. ಜವಾಹರಲಾಲ್ ನೆಹರು ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ಹಲವು ಸ್ಥಳಗಳು ಮೊಣಕಾಲು ಆಳದ ನೀರಿನಲ್ಲಿ ಮುಳುಗಿವೆ. ಬೆಂಜ್ ಸರ್ಕಲ್ ಫ್ಲೈಓವರ್ ಸೇರಿದಂತೆ ಪ್ರಮುಖ ಹೆದ್ದಾರಿಗಳು ಹಾಗೂ ರಾಜ್ಯ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ದುಸ್ತರವಾಗಿದೆ. ಸಂಚಾರ ದಟ್ಟಣೆಯಿಂದಾಗಿ ರಾಮವರಪಾಡು ರಿಂಗ್ ರಸ್ತೆಯಲ್ಲಿ ಹೈದರಾಬಾದ್ ಮತ್ತು ಚೆನ್ನೈ ಕಡೆಯಿಂದ ಬರುವ ವಾಹನಗಳು ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಕೊಂಡಪಲ್ಲಿ-ಛತ್ತೀಸ್‌ಗಢ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಜಲಾವೃತವಾಯಿತು.