Sunday, 10th November 2024

Joe Root: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಲವು ದಾಖಲೆ ಬರೆದ ಜೋ ರೂಟ್‌

Joe Root

ಲಾರ್ಡ್ಸ್‌:  ಪ್ರವಾಸಿ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಇಂಗ್ಲೆಂಡ್‌ ತಂಡದ ಅನುಭವಿ ಆಟಗಾರ ಜೋ ರೂಟ್‌(Joe Root) ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಟೆಸ್ಟ್‌ನಲ್ಲಿ 34ನೇ ಶತಕ ಪೂರೈಸುವ ಮೂಲಕ ಮಾಜಿ ಆಟಗಾರರಾದ ಸುನಿಲ್‌ ಗಾವಸ್ಕರ್‌, ಬ್ರಿಯನ್‌ ಲಾರಾ, ಮಹೇಲಾ ಜಯವರ್ಧನೆ ಮತ್ತು ಮೊಹ್ಸಿನ್‌ ಖಾನ್‌ ದಾಖಲೆಯನ್ನು ಸರಿದೂಗಿಸಿದರು. ಜತೆಗೆ ಇಂಗ್ಲೆಂಡ್‌ ತಂಡದ ಪರ ಅತ್ಯಧಿಕ ಟೆಸ್ಟ್‌ ಶತಕ ಬಾರಿಸಿದ ಆಟಗಾರ ಎನಿಸಿಕೊಂಡರು.

ಇದುವರೆಗೆ ಇಂಗ್ಲೆಂಡ್‌ ಪರ ಅತಿ ಹೆಚ್ಚು ಟೆಸ್ಟ್‌ ಶತಕ ಬಾರಿಸಿದ್ದ ದಾಖಲೆ  ಮಾಜಿ ನಾಯಕ ಹಾಗೂ ಆಟಗಾರ ಅಲಸ್ಟೇರ್‌ ಕುಕ್‌ ಹೆಸರಿನಲ್ಲಿತ್ತು. ಕುಕ್‌ 131 ಟೆಸ್ಟ್‌ ಪಂದ್ಯಗಳನ್ನಾಡಿ 33 ಶತಕ ಬಾರಿಸಿದ್ದರು. ಇದೀಗ ರೂಟ್‌ 34 ಶತಕದೊಂದಿಗೆ ಈ ದಾಖಲೆಯನ್ನು ಮುರಿದರು. ಇದು ಮಾತ್ರವಲ್ಲದೆ ಲಾರ್ಡ್ಸ್ ಮೈದಾನದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಸಾಧಕ ಎನಿಸಿಕೊಂಡರು. ಜತೆಗೆ ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ 4ನೇ ಸಾಧಕನಾಗಿ ಮೂಡಿಬಂದರು. ಉಳಿದ ಮೂವರೆಂದರೆ ವೆಸ್ಟ್‌ ಇಂಡೀಸ್‌ನ ಜಾರ್ಜ್‌ ಹ್ಯಾಡ್ಲಿ, ಇಂಗ್ಲೆಂಡ್‌ನ‌ ಗ್ರಹಾಂ ಗೂಚ್‌ ಮತ್ತು ಮೈಕಲ್‌ ವಾನ್‌.

ಮೊದಲ ಇನ್ನಿಂಗ್ಸ್‌ನಲ್ಲಿ ರೂಟ್‌ 143 ರನ್‌ ಬಾರಿಸಿದ್ದ ರೂಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ121 ಎಸೆತ ಎದುರಿಸಿ 103 ರನ್‌ ಬಾರಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 10 ಬೌಂಡರಿ ಬಾರಿಸಿದರು. ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಆರಂಭಿಸಿರುವ ಶ್ರೀಲಂಕಾ  53 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿದೆ. ಗೆಲುವಿಗೆ ಇನ್ನೂ 430 ರನ್‌ಗಳ ಅಗತ್ಯವಿದೆ. ೨ ದಿನಗಳ ಆಟ ಬಾಕಿ ಇದೆ.

https://x.com/ESPNcricinfo/status/1829891663315288271

ಕ್ಯಾಚ್‌ ದಾಖಲೆ

ಶತಕ ಮಾತ್ರವಲ್ಲದೆ ಕ್ಯಾಚ್‌ ಮೂಲಕವೂ ರೂಟ್‌ ದಾಖಲೆಯೊಂದನ್ನು ಬರೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಹಿಡಿದ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ರೂಟ್‌ ಭರ್ತಿ 200 ಕ್ಯಾಚ್‌ಗಳನ್ನು ಹಿಡಿದ್ದಾರೆ. 210 ಕ್ಯಾಚ್‌ ಹಿಡಿದಿರುವ ಟೀಮ್‌ ಇಂಡಿಯಾದ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌ ಅಗ್ರಸ್ಥಾನದಲ್ಲಿದ್ದಾರೆ. ಮಹೇಲಾ ಜಯವರ್ಧನೆ(205) ದ್ವಿತೀಯ ಸ್ಥಾನದಲ್ಲಿದ್ದಾರೆ. ರೂಟ್‌ಗೆ ಅಗ್ರಸ್ಥಾನಕ್ಕೇರಲು ಇನ್ನು 11 ಕ್ಯಾಚ್‌ಗಳ ಅಗತ್ಯವಿದೆ. 33 ವರ್ಷದ ರೂಟ್‌ ಇನ್ನೂ ಕನಿಷ್ಠ 5 ವರ್ಷಗಳ ಕ್ರಿಕೆಟ್‌ ಆಡುವ ಸಾಧ್ಯತೆ ಇದೆ. ಹೀಗಾಗಿ ಅವರು ದ್ರಾವಿಡ್‌ ದಾಖಲೆ ಮುರಿಯಬಹುದು ಎನ್ನಲಡ್ಡಿಯಿಲ್ಲ. 200 ಕ್ಯಾಚ್‌ ಹಿಡಿದ ಇಂಗ್ಲೆಂಡ್‌ ತಂಡದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ರೂಟ್‌ ಪಾತ್ರರಾಗಿದ್ದಾರೆ.