Friday, 22nd November 2024

Heavy Rain: ಆಂಧ್ರಪ್ರದೇಶ, ತೆಲಂಗಾಣದಲ್ಲಿ ಭಾರಿ ಮಳೆ: ರೈಲು ಸಂಚಾರ ಸ್ಥಗಿತ, ಶಾಲೆಗಳಿಗೆ ರಜೆ

Heavy Rain

ಹೈದರಾಬಾದ್: ಆಂಧ್ರಪ್ರದೇಶ (Andhra Pradesh) ಮತ್ತು ತೆಲಂಗಾಣದ (Telangana) ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು (Heavy rain), ತೀವ್ರ ಪ್ರವಾಹ (severe flood) ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ಹಲವು ಭಾಗಗಳಿಗೆ ಸಂಪರ್ಕ ಕಡಿತಗೊಂಡಿದೆ. ರೈಲು ಸಂಚಾರ (train services) ಸ್ಥಗಿತಗೊಂಡಿದ್ದು, ಹೈದರಾಬಾದ್‌ನಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.

ಪ್ರವಾಹ ಮತ್ತು ಭೂಕುಸಿತದಿಂದ ಆಂಧ್ರಪ್ರದೇಶದಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 80 ಜನರನ್ನು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆ, ಪೊಲೀಸರು ಕಾರ್ಯಾಚರಣೆ ನಡೆಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

ಪ್ರತಿಕೂಲ ಹವಾಮಾನದಿಂದಾಗಿ ಶನಿವಾರ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಪ್ರತಿ ಜಿಲ್ಲೆಗೆ ತಕ್ಷಣವೇ 3 ಕೋಟಿ ರೂ. ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ವಿಜಯವಾಡದ ಮೊಗಲ್ರಾಜಪುರಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಗುಂಟೂರು ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿದ್ದ ಹೊಳೆ ದಾಟುವಾಗ ಕಾರು ಕೊಚ್ಚಿಹೋಗಿ ಮನೆಗೆ ಹಿಂದಿರುಗುತ್ತಿದ್ದ ಶಿಕ್ಷಕ ಮತ್ತು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ರೈಲು ಸಂಚಾರ ಸ್ಥಗಿತ

ಮಹಬೂಬಾಬಾದ್‌ನಲ್ಲಿ ರೈಲು ಹಳಿ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ತಾಂಡಲಪುಸಲಪಲ್ಲಿಯಲ್ಲಿ ಹೊಳೆ ನೀರು ಉಕ್ಕಿ ಹರಿಯುತ್ತಿರುವುದರಿಂದ ವಾರಂಗಲ್- ಖಮ್ಮಂ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪ್ರವಾಹ ಮತ್ತು ಮಳೆಯಿಂದಾಗಿ ವಿಜಯವಾಡ- ವಾರಂಗಲ್, ವಿಜಯವಾಡ- ಖಮ್ಮಂ ಮಾರ್ಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕೇಸಮುದ್ರಂ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ನೀರು ಹರಿಯುತ್ತಿದ್ದು ಹತ್ತಿರದ ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸಲಾಗಿದೆ.

ಪ್ರವಾಹ ಎಚ್ಚರಿಕೆ

ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹೆಚ್ಚಿನ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಎಚ್ಚರಿಸಿದೆ.

ರಕ್ಷಣಾ ವ್ಯವಸ್ಥೆಗೆ ಕ್ರಮ

ತುರ್ತು ರಕ್ಷಣಾ ಕಾರ್ಯಗಳಿಗಾಗಿ ಆಂಧ್ರ ಪ್ರದೇಶ ಸರ್ಕಾರವು ಸಾರ್ವಜನಿಕರಿಗಾಗಿ ರಾಜ್ಯ ಮಟ್ಟದ ನಿಯಂತ್ರಣ ಕೊಠಡಿಯನ್ನು ತೆರೆದಿದ್ದು, ಇದು ವಿಪತ್ತು ನಿರ್ವಹಣಾ ಏಜೆನ್ಸಿಗಳು ಮತ್ತು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಾಯುಭಾರ ಕುಸಿತ ಪರಿಣಾಮ

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಭಾರೀ ಮಳೆಯಾಗುತ್ತಿದ್ದು, ಉತ್ತರ ಆಂಧ್ರಪ್ರದೇಶ, ದಕ್ಷಿಣ ಒಡಿಶಾ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ಯು ನೀಡಿದೆ.

ಶಾಲೆಗಳಿಗೆ ರಜೆ

ಭಾರೀ ಮಳೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಎಲ್ಲಾ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಮುಚ್ಚಲು ಹೈದರಾಬಾದ್‌ನ ಜಿಲ್ಲಾ ಅಧಿಕಾರಿಗಳು ಆದೇಶಿಸಿದ್ದಾರೆ.