ಕರಾಚಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ(Champions Trophy) ಕ್ರಿಕೆಟ್ ಟೂರ್ನಿಯ ಪಂದ್ಯವನ್ನಾಡಲು ಭಾರತ ತಂಡ ಪಾಕ್‌ಗೆ ಪ್ರವಾಸ ಕೈಗೊಳ್ಳಲಿದೆಯಾ? ಎಂಬ ವಿಚಾರವಾಗಿ ಸದಾ ಚರ್ಚೆಗಳು ನಡೆಯುತ್ತಲೇ ಇದೆ. ಈಗಾಗಲೇ ಬಿಸಿಸಿಐ ಭದ್ರತಾ ಕಾರಣಗಳಿಂದಾಗಿ ಭಾರತ ಪಾಕ್‌ಗೆ ತೆರಳುವುದಿಲ್ಲ ಎಂದು ಹೇಳಿದೆ. ಆದರೆ, ಪಾಕ್ ಕ್ರಿಕೆಟ್ ಮಂಡಳಿ ಮಾತ್ರ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿಯೊಂದನ್ನು ಪ್ರಕಟಿಸಿದ್ದು ಭಾರತ-ಪಾಕಿಸ್ತಾನ(IND vs PAK) ನಡುವಿನ ಪಂದ್ಯ ಮಾರ್ಚ್ 1ರಂದು ಲಾಹೋರ್‌ನಲ್ಲಿ ನಿಗದಿಗೊಳಿಸಿದೆ. ಇದೀಗ ಪಾಕ್‌ನ ಮಾಜಿ ಬ್ಯಾಟರ್ ಬಾಸಿತ್ ಅಲಿ (Basit Ali) ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಈ ಹಿಂದೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದರೆ ಭಾರತ ತಂಡ ಪಾಕ್ ನೆಲದಲ್ಲಿ ಆಡಲಿದೆ ಎಂದು ಹೇಳಿದ್ದರು. ಇದೀಗ ಬಾಸಿತ್ ಅಲಿ ಟೂರ್ನಿಯ ಸಂಪೂರ್ಣ ನಿರ್ಧಾರ ಪ್ರಧಾನಿ ಮೋದಿಯವರ ಹೆಗಲ ಮೇಲಿದೆ. ಅವರು ಒಪ್ಪಿದರೆ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಬಹುದು. ಇಲ್ಲದಿದ್ದರೆ, ಏಷ್ಯಾ ಕಪ್‌ನಂತೆ ಹೈಬ್ರಿಡ್ ಮಾದರಿಯ ಮೊರೆ ಹೋಗಬೇಕಿದೆ ಎಂದು ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19ರಿಂದ ಮಾರ್ಚ್ 9ರ ತನಕ ನಡೆಯಲಿದೆ.
ಕೆಲ ದಿನಗಳ ಹಿಂದೆ ಬಿಸಿಸಿಐ ಮಾಜಿ ಕಾರ್ಯದರ್ಶಿ, ಈಗ ಐಸಿಸಿ ಅಧ್ಯಕ್ಷರಾಗಿರುಬ ಜಯ್ ಶಾ(jay shah) ಕೂಡ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಮೌನ ಮುರಿದಿದ್ದರು. ಭಾರತ ತಂಡ ಪಾಕಿಸ್ತಾನಕ್ಕೆ(ind vs pak) ತೆರಳುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಟೂರ್ನಿ ಆರಂಭಕ್ಕೆ ಕೆಲವು ದಿನ ಮೊದಲು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದರು. ಒಂದೊಮ್ಮೆ ಪಾಕ್‌ನಲ್ಲಿಯೇ ಪಂದ್ಯಾವಳಿ ನಡೆದು, ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ, ಆಗ 9ನೇ ಸ್ಥಾನಿಯಾಗಿರುವ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಯಾವುದೇ ತಂಡ ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಅಂಕಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿರುವ ತಂಡಕ್ಕೆ ಅರ್ಹತೆ ನೀಡಲಾಗುತ್ತದೆ. ಪ್ರಸ್ತುತ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.
ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತ ತಂಡವು ಪ್ರಯಾಣಿಸಲು ನಿರಾಕರಿಸಿದ ನಂತರ, ಕಳೆದ ವರ್ಷದ ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.