Saturday, 23rd November 2024

Money Talk: ಈ ಹಬ್ಬಕ್ಕೆ ಕಾರು ಕೊಂಡುಕೊಳ್ಳುವ ಯೋಜನೆಯಲ್ಲಿದ್ದೀರಾ? ವಿವಿಧ ಬ್ಯಾಂಕ್‌ಗಳ ಸಾಲದ ಬಡ್ಡಿದರ ಹೀಗಿದೆ

Money Talk

ಬೆಂಗಳೂರು: ಹಬ್ಬಗಳ ಋತು ಆರಂಭವಾಗಿದೆ. ಗಣೇಶ ಚರ್ತುಥಿ, ದೀಪಾವಳಿ, ನವರಾತ್ರಿ ಹೀಗೆ ಸಾಲು ಸಾಲು ಹಬ್ಬಗಳು ಬರಲಿವೆ. ಈ ಹಿನ್ನೆಲೆಯಲ್ಲಿ ವಿವಿಧ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಕೊಡುಗೆ ಘೋಷಿಸಲು ಮುಂದಾಗಿದ್ದು, ಕಾರು ಕೊಂಡುಕೊಳ್ಳುವ ಯೋಜನೆಯಲ್ಲಿರುವವರಿಗೆ  ವಿವಿಧ ಬ್ಯಾಂಕ್‌ಗಳು ಒದಗಿಸುವ ಸಾಲಗಳ ವಿವರ, ಬಡ್ಡಿದರದ ಮಾಹಿತಿ ಇಲ್ಲಿದೆ  (Money Talk).

5 ಲಕ್ಷ ರೂ. ಮೊತ್ತದ, 5 ವರ್ಷಗಳ ಮರುಪಾವತಿ ಅವಧಿ ಹೊಂದಿರುವ ಕಾರು ಸಾಲಗಳಿಗೆ ವಾರ್ಷಿಕ ಬಡ್ಡಿ ಶೇ. 8.45ರಿಂದ 9 ರವರೆಗೆ ಇರಲಿದೆ. ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿದರವಿದೆ ಎನ್ನುವುದನ್ನು ನೋಡೋಣ.

ಯುಕೋ ಬ್ಯಾಂಕ್ (UCO Bank): ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ (UCO Bank) 5 ವರ್ಷಗಳ ಅವಧಿಯ 5 ಲಕ್ಷ ರೂ.ಗಳ ಕಾರು ಸಾಲಕ್ಕೆ ಶೇ. 8.45  ಬಡ್ಡಿ ವಿಧಿಸುತ್ತದೆ. ಅಂದಾಜು ಇಎಂಐ 10,246 ರೂ.

ಯೂನಿಯನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಮಹಾರಾಷ್ಟ್ರ (Union Bank of India, Canara Bank & Bank of Maharashtra): ಈ ಬ್ಯಾಂಕುಗಳ ಬಡ್ಡಿದರವು ಬಹುತೇಕ ಒಂದೇ ಆಗಿದ್ದು, 5 ವರ್ಷಗಳ ಅವಧಿಯ  5 ಲಕ್ಷ ರೂ.ಗಳ ಕಾರು ಸಾಲದ ಮೇಲೆ ಶೇ. 8.7 ದರದಲ್ಲಿ ಬಡ್ಡಿ ಆರಂಭವಾಗುತ್ತದೆ. ಈ  ಲೆಕ್ಕಾಚಾರದ ಪ್ರಕಾರ  ಇಎಂಐ 10,307 ರೂ. ಇರಲಿದೆ. ಇದು ಯುಕೋ ಬ್ಯಾಂಕ್‌ಗಿಂತ ಸ್ವಲ್ಪ ಅಧಿಕ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್ (Punjab National Bank & South Indian Bank): ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್ 5 ಲಕ್ಷ ರೂ.ಗಳ ಕಾರು ಸಾಲಕ್ಕೆ ಶೇ. 8.75 ರಷ್ಟು ಬಡ್ಡಿ ವಿಧಿಸುತ್ತವೆ. ನಿಮ್ಮ ಇಎಂಐ ಮೊತ್ತ 10,319 ರೂ.

ಐಡಿಬಿಐ ಬ್ಯಾಂಕ್ (IDBI Bank): ಐಡಿಬಿಐ ಬ್ಯಾಂಕ್‌ನಲ್ಲಿ ಈ ಅವಧಿಯ ಸಾಲಕ್ಕೆ ಶೇ. 8.8ರಷ್ಟು ಬಡ್ಡಿ ಇದೆ. ಈ  ಬ್ಯಾಂಕ್‌ನಲ್ಲಿ ನೀವು ಸಾಲ ಹೊಂದಿದ್ದರೆ ಮಾಸಿಕ 10,331 ರೂ. ಮರು ಪಾವತಿಬೇಕಾಗುತ್ತದೆ.

ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್ (Bank of India, Indian Overseas Bank & Federal Bank): ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್‌ಗಳು 5 ವರ್ಷಗಳ ಅವಧಿಯ  5 ಲಕ್ಷ ರೂ.ಗಳ ಕಾರು ಸಾಲಕ್ಕೆ ಶೇ. 8.85 ರಷ್ಟು ಬಡ್ಡಿ ವಿಧಿಸುತ್ತದೆ. ಇಎಂಐ: 10,343 ರೂ.

ಬ್ಯಾಂಕ್ ಆಫ್ ಬರೋಡಾ (Bank of Baroda): ಭಾರತದ ಮೂರನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ 5 ಲಕ್ಷ ರೂ.ಗಳ 5 ವರ್ಷ ಅವಧಿಯ ಸಾಲಕ್ಕೆ ಶೇ. 8.90ರಷ್ಟು ಬಡ್ಡಿ ಇದ್ದು, ಇಎಂಐ 10,343 ರೂ. ಇರಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5 ವರ್ಷಗಳ ಅವಧಿಯ 5 ಲಕ್ಷ ರೂ.ಗಳ ಕಾರು ಸಾಲಕ್ಕೆ ಶೇ. 8.95ರಷ್ಟು ಬಡ್ಡಿ ವಿಧಿಸುತ್ತದೆ. ಮಾಸಿಕವಾಗಿ ನೀವು 10,367 ರೂ. ಮರುಪಾವತಿ ಮಾಡಬೇಕಾಗುತ್ತದೆ.

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ (IDFC First Bank): ಖಾಸಗಿ ವಲಯದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ 5 ಲಕ್ಷ ರೂ.ಗಳ ಸಾಲದ ಮೇಲೆ ಶೇ.  9ರಷ್ಟು ಬಡ್ಡಿದರವನ್ನು ವಿಧಿಸುತ್ತದೆ.  ಇಎಂಐ ಮೊತ್ತ 10,379 ರೂ.

ಐಸಿಐಸಿಐ ಬ್ಯಾಂಕ್ (ICICI Bank): ಖಾಸಗಿ ವಲಯದ ಮತ್ತೊಂದು ಬ್ಯಾಂಕ್‌ ಐಸಿಐಸಿಐ ಬ್ಯಾಂಕ್ 5 ವರ್ಷಗಳ ಅವಧಿಯ 5 ಲಕ್ಷ ರೂ.ಗಳಕಾರು ಸಾಲಕ್ಕೆ ಶೇ. 9.10ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಇಎಂಐ 10,403 ರೂ.

ಎಚ್‌ಡಿಎಫ್‌ಸಿ (HDFC Bank): ಮಾರುಕಟ್ಟೆ ಬಂಡವಾಳೀಕರಣದ ಪ್ರಕಾರ ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 5 ಲಕ್ಷ ರೂ.ಗಳ ಕಾರು ಸಾಲಕ್ಕೆ ಅತಿ ಹೆಚ್ಚು ಬಡ್ಡಿ ವಿಧಿಸಲಾಗುತ್ತದೆ.  ಈ ಬ್ಯಾಂಕ್‌ನಿಂದ ಪಡೆವ ಸಾಲಕ್ಕೆ ಶೇ. 9.20ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತದೆ. ಇಎಂಐ 10,428 ರೂ. ಆಗಿದ್ದು, ಇದು ಎಲ್ಲಕ್ಕಿಂತ ಹೆಚ್ಚಿನದ್ದಾಗಿದೆ.