ಮುಂಬೈ: ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪೈಕಿ ಒಂದಾದ ಬಾಲಿವುಡ್‌ನ ‘ಎಮರ್ಜೆನ್ಸಿ’ ಸಿನಿಮಾ (Emergency Movie)ಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಚಿತ್ರದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಂಗನಾ ರಾಣಾವತ್ (Kangana Ranaut) ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಸೆಪ್ಟೆಂಬರ್ 6ಕ್ಕೆ ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಸೆನ್ಸಾರ್ ಮಂಡಳಿ ಇನ್ನೂ ಪ್ರಮಾಣ ಪತ್ರ ನೀಡದಿರುವ ಹಿನ್ನಲೆಯಲ್ಲಿ ಚಿತ್ರದ ಬಿಡುಗಡೆ ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ʼʼನನ್ನ ಚಿತ್ರಕ್ಕೂ ತುರ್ತು ಪರಿಸ್ಥಿತಿ ಹೇರಲಾಗಿದೆ. ಇದು ಅತ್ಯಂತ ನೋವು ತಂದಿತ್ತಿದೆ. ಈ ದೇಶದ ಕೆಲವು ನಿಯಮಗಳ ಬಗ್ಗೆ ನಿರಾಸೆ ಹೊಂದಿದ್ದೇನೆʼʼ ಎಂದು ತಿಳಿಸಿದ್ದಾರೆ.
ಕಂಗನಾ ರಾಣಾವತ್ ಮೊದಲ ಬಾರಿಗೆ ಏಕಾಂಗಿಯಾಗಿ ಆ್ಯಕ್ಷನ್ ಕಟ್ ಹೇಳಿರುವ ʼಎಮರ್ಜೆನ್ಸಿʼ ಸಿನಿಮಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ್ನಾಧರಿಸಿದೆ. ಅದರಲ್ಲಿಯೂ ಅವರು 1975 ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಲಿದೆ. ಇದೇ ಕಾರಣಕ್ಕೆ ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಿದೆ.
ತುರ್ತು ಪರಿಸ್ಥಿತಿಯ ದಿನಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಇದು ವಿವಾದಾತ್ಮಕ ವಿಷಯ ಆದ್ದರಿಂದ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡುವುದು ಕಷ್ಟ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ‘ಎಮರ್ಜೆನ್ಸಿ’ ಚಿತ್ರತಂಡಕ್ಕೆ ಒಂದಷ್ಟು ಸೂಚನೆಗಳನ್ನು ನೀಡಿದೆ. ಕೆಲವು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಹೇಳಿದೆ. ಅಲ್ಲದೇ ಸಿನಿಮಾಗೆ ಯಾವ ಪ್ರಮಾಣ ಪತ್ರ ನೀಡಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಮಾತ್ರವಲ್ಲ ಸಿಖ್ ಸಮುದಾಯದವರೂ ಚಿತ್ರದ ವಿರುದ್ಧ ಧ್ವನಿ ಎತ್ತಿದ್ದಾರೆ.
https://www.instagram.com/reel/C-pGBdEI1xM/?utm_source=ig_web_copy_link&igsh=MzRlODBiNWFlZA==
ಕಂಗನಾ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ʼʼಮಧುರ್ ಭಂಡಾರ್ಕರ್ ಅವರ 2017ರ ಪಾಲಿಟಿಕಲ್ ಥ್ರಿಲ್ಲರ್ ʼಇಂದು ಸರ್ಕಾರ್ʼ ಚಿತ್ರದಲ್ಲಿ 1975 ರ ತುರ್ತು ಪರಿಸ್ಥಿತಿ ಹೇರಿಕೆ ಮತ್ತು ಕಳೆದ ವರ್ಷ ತೆರೆಕಂಡ ಮೇಘನಾ ಗುಲ್ಜಾರ್ ಅವರ ʼಸ್ಯಾಮ್ ಬಹದ್ದೂರ್ʼ ಸಿನಿಮಾದಲ್ಲಿ 1971ರ ಭಾರತ-ಪಾಕಿಸ್ತಾನ ಯುದ್ಧದ ಚಿತ್ರಣ ನೀಡಲಾಗಿದೆ. ಅವರಿಗೆ ಎದುರಾಗದ ಸಮಸ್ಯೆ ನನ್ನ ಚಿತ್ರಕ್ಕೆ ಎದುರಾಗಿದೆ. ಸೆನ್ಸಾರ್ ಮಂಡಳಿಯವರು ʼಎಮೆರ್ಜೆನ್ಸಿʼ ಸಿನಿಮಾವನ್ನು ವೀಕ್ಷಿಸಿ ಬಿಡುಗಡೆ ಒಪ್ಪಿಗೆ ಸೂಚಿಸಿದ್ದರೂ ಬಳಿಕ ಅನೇಕ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಮಾಣಪತ್ರವನ್ನು ಹಿಂತೆಗೆದುಕೊಳ್ಳಲಾಗಿದೆʼʼ ಎಂದು ಅವರು ಹೇಳಿದ್ದಾರೆ.
ಈ ರೀತಿಯ ಅಡೆತಡೆಗಳಿಂದ ತಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದೂ ಅವರು ಗುಡುಗಿದ್ದಾರೆ. ʼʼಜನರು ನಮ್ಮನ್ನು ಹೆದರಿಸುತ್ತಲೇ ಇರುತ್ತಾರೆ. ನಾವು ಎಷ್ಟು ಸಮಯ ಹೆದರುತ್ತಲೇ ಇರುತ್ತೇವೆ? ನಾನು ಈ ಚಿತ್ರವನ್ನು ಸ್ವಾಭಿಮಾನದಿಂದ ಮಾಡಿದ್ದೇನೆ. ಅವರು ನನ್ನ ಪ್ರಮಾಣ ಪತ್ರವನ್ನು ತಡೆಹಿಡಿದಿದ್ದಾರೆ. ಆದರೆ ನಾನು ಚಿತ್ರವನ್ನು ಎಡಿಟ್ ಮಾಡದೆ ಬಿಡುಗಡೆ ಮಾಡಲು ನಿರ್ಧರಿಸಿದ್ದೇನೆ. ಇದಕ್ಕಾಗಿ ನಾನು ಬೇಕಾದರೆ ನ್ಯಾಯಾಲಯದಲ್ಲಿ ಹೋರಾಡಲೂ ಸಿದ್ಧ. ಇಂದಿರಾ ಗಾಂಧಿ ಅವರು ತಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ನಿಧನರಾದರು ಎಂದು ತೋರಿಸಲು ಸಾಧ್ಯವಿಲ್ಲ” ಎಂದು ಕಂಗನಾ ನುಡಿದಿದ್ದಾರೆ.