Friday, 22nd November 2024

Supreme Court: ಬುಲ್ಡೋಜರ್‌ ನೀತಿಗೆ ಸುಪ್ರೀಂ ಕೋಕ್‌; ಅಪರಾಧಿಯ ಮನೆ ಕೆಡವುದು ಸರಿಯಲ್ಲ ಎಂದು ತರಾಟೆ

Supreme Court

ನವದೆಹಲಿ: ಕೆಲವು ರಾಜ್ಯ ಸರ್ಕಾರಗಳು ಅದರಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕ್ರಿಮಿನಲ್‌ಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಬುಲ್ಡೋಜರ್‌ ನೀತಿ ಅನುಸರಿಸುತ್ತಿರುವ ಬಗ್ಗೆ ಆಗಾಗ ವರದಿ ಆಗುತ್ತಲೇ ಇರುತ್ತವೆ. ಅಪರಾಧಿಗಳಿಗೆ ಸಂಬಂಧಿಸಿದ ಮನೆ, ಆಸ್ತಿಗಳಿಗೆ ಬುಲ್ಡೋಜರ್‌(bulldozer) ನುಗ್ಗಿಸಿ ಅದನ್ನು ಧ್ವಂಸಗೊಳಿಸಲು ಸರ್ಕಾರ ಮುಂದಾಗುತ್ತದೆ. ಈ ನೀತಿಗೆ ಹಲವರಿಂದ ಮೆಚ್ಚುಗೆ ಬಂದಿದ್ದೂ ಇದೆ. ಅದರೆ ಇದೀಗ ಈ ನೀತಿ ವಿರುದ್ಧ ಸುಪ್ರೀಂಕೋರ್ಟ್‌(Supreme Court) ಅಕ್ಷೇಪ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರಗಳ ಬುಲ್ಡೋಜರ್‌ ನೀತಿ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌,  ಯಾವುದೇ ಪ್ರಕರಣದಲ್ಲಿ ಅಪರಾಧ ಸಾಬೀತಾದ ಬಳಿಕ ಆತನಿಗೆ ಸಂಬಂಧಿಸಿದ ಆಸ್ತಿಯನ್ನು ಬುಲ್ಡೋಜರ್‌ ಮೂಲಕ ಧ್ವಂಸಗೊಳಿಸುವ ನೀತಿ ಸರಿಯಲ್ಲ. ವ್ಯಕ್ತಿಯನ್ನು ಅಪರಾಧಿಯೆಂದು ನಿರ್ಣಯಿಸಿದರೂ ಆಸ್ತಿಯನ್ನು ಕೆಡವಲು ಸಾಧ್ಯವಿಲ್ಲ ಎಂದು ಹೇಳಿದೆ. ಆದಾಗ್ಯೂ, ಸಾರ್ವಜನಿಕ ರಸ್ತೆಗಳಿಗೆ ಅಡ್ಡಿಪಡಿಸುವ ಯಾವುದೇ ಅಕ್ರಮವಾಗಿ ನಿರ್ಮಾಣಗೊಂಡಿರುವ ಕಟ್ಟಡವನ್ನು ಕೆಡವುವ ಬಗ್ಗೆ ಯಾವುದೇ ತಕರಾರಿಲ್ಲ  ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಕ್ರಿಮಿನಲ್ ಮೊಕದ್ದಮೆಯ ಆರೋಪಿಗೆ ಸೇರಿದ ಮನೆಯನ್ನು ಹೇಗೆ ಕೆಡವಲಾಗುತ್ತದೆ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ಇಂದು ಬುಲ್ಡೋಜರ್ ನ್ಯಾಯದ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ದೇಶದಾದ್ಯಂತ ‘ಬುಲ್ಡೋಜರ್ ನೀತಿ ಜಾರಿಯಾಗದಂತೆ ಎಲ್ಲಾ ರಾಜ್ಯಗಳಿಗೆ ಖಡಕ್‌ ಸೂಚನೆ ನೀಡಬೇಕೆಂದು ಮನವಿ ಮಾಡಿದರು.

ದೆಹಲಿಯ ಜಹಾಂಗೀರಪುರಿಯಲ್ಲಿ ನಡೆದ ಧ್ವಂಸ ಪ್ರಕ್ರಿಯೆಯತ್ತ  ನ್ಯಾಯಾಲಯದ ಗಮನ ಸೆಳೆದ ದುಶ್ಯಂತ್‌ ದವೆ,  ಕೆಲವು ಪ್ರಕರಣಗಳಲ್ಲಿ ಬಾಡಿಗೆಗೆ ನೀಡಿದ ಆಸ್ತಿಯನ್ನು ಕೆಡವಲಾಗಿದೆ. ಮಾಲೀಕರ ಮಗ ಅಥವಾ ಬಾಡಿಗೆದಾರರು ಭಾಗಿಯಾಗಿರುವ ಕಾರಣ ಅವರು 50-60 ವರ್ಷ ಹಳೆಯ ಮನೆಗಳನ್ನು ಕೆಡವಿದ್ದಾರೆ ಎಂದು ಹೇಳಿದರು.

ಆರೋಪಿ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂಬ ಕಾರಣಕ್ಕೆ ಯಾವುದೇ ಸ್ಥಿರ ಆಸ್ತಿಯನ್ನು ನೆಲಸಮ ಮಾಡಲಾಗುವುದಿಲ್ಲ. ಕಟ್ಟಡ ನಿರ್ಮಾಣವು ಕಾನೂನುಬಾಹಿರವಾಗಿದ್ದರೆ ಮಾತ್ರ ಅದನ್ನು ತೆರವುಗೊಳಿಸಲು ಸಾಧ್ಯ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರ ಪೀಠಕ್ಕೆ ತಿಳಿಸಿದರು.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಬುಲ್ಡೋಜರ್‌ ನೀತಿ ಜಾರಿಗೆ ತಂದಿದ್ದರು. ಅವರ ನೀತಿ ಅನೇಕರ ಗಮನ ಸೆಳೆದಿತ್ತು. ಅಲ್ಲದೇ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವ ಕೆಲವು ರಾಜ್ಯಗಳಲ್ಲಿ ಇಂತಹದ್ದೇ ನೀತಿ ಅನುಸರಿಸುವುದು ಕಂಡು ಬಂದಿದೆ.