Thursday, 12th December 2024

ಒಂದೂ ಮಿಸೈಲ್ ಬಳಸದೆ ಮೂರನೆಯ ಮಹಾಯುದ್ಧ ಗೆದ್ದ ಚೀನಾ

ಪ್ರಸ್ತುತ

ವಿಕ್ರಮ ಜೋಶಿ

ಒಂದು ವರ್ಷದ ಹಿಂದಕ್ಕೆ ಹೋಗೋಣ. ಜಗತ್ತು ಶಾಂತವಾಗಿಲ್ಲವೆಂದರೂ ಆಶಾಂತಿಯೇನೂ ಇರಲಿಲ್ಲ. ಅಲೆಗಳು ಸಾಗರವನ್ನು ಶಾಂತವಾಗಿಡುತ್ತವೆಯೇ? ಇಲ್ಲ. ಹಾಗೆಯೇ ಅಲ್ಲೊಂದು ಇಲ್ಲೊಂದು ಯುದ್ಧ, ಗಲಭೆ, ಗೊಂದಲಗಳು ಅಶಾಂತಿಯ ಅಲೆಯಾಗಿ ಬಂದು ಮನಕ್ಕೆ ತಟ್ಟುತ್ತಲೇ ಇದ್ದವು. ಇದರ ನಡುವೆ ಇದ್ದಕ್ಕಿದ್ದಂತೆ ಜಗತ್ತು ತುಂಬಾ ಶಾಂತವಾಗುತ್ತಿದೆಯಾ ಎನ್ನುವ ಭ್ರಮೆ!

ಉತ್ತರ ಕೋರಿಯಾ ಹಾಗೂ ಅಮೆರಿಕಾ ನಡುವೆ ಶಾಂತಿಯ ಮಾತುಕತೆ, ಐಸಿಸ್ ಮುಖಂಡ ಬಾಗ್ದಾದಿ ಸಾವು, ಇರಾನ್ ಮುಂದಿನ
ಸರ್ವಾಧಿಕಾರಿ ಆಗಬೇಕಿದ್ದ ಸುಲೇಮಾನಿಯನ್ನು ಅಮೆರಿಕಾಕೊಂದಿದ್ದು, ಚೀನಾದ ಮೇಲೆ ಸುಂಕದ ಯುದ್ಧ, ಹೀಗೆ ಇನ್ನೇನು
ಅಮೆರಿಕಾ ಇಡೀ ಜಗತ್ತನ್ನು ಯುದ್ಧವಿಲ್ಲದೇ ಗೆದ್ದು ಶಾಂತ ಮಾಡಿದಂತಿತ್ತು. ಬಿರುಗಾಳಿಯ ಮುನ್ನ ಸುತ್ತುಗಟ್ಟುವ ನಿಶ್ಯಬ್ಧ
ವಾತಾವರಣದಂತೆ 2019ರ ಕೆಲವಷ್ಟು ದಿನಗಳಿದ್ದವು.

ಜಗತ್ತಿನಲ್ಲಿ ಯಾರನ್ನು ನಾವು ವಿನಾಶಕಾರಿ ಎಂದು ಗುರುತಿಸಿದ್ದೇವೋ ಅವರೆಲ್ಲರೂ ಮಣ್ಣಾಗಿದ್ದರು. ಅಮೆರಿಕಾವನ್ನೇ  ಹಿಂದಕ್ಕೆ ಹಾಕಿ ಮುಂದೆ ಬರಬೇಕಿದ್ದ ಚೀನಾ ಕೆಲ ಸಮಯ ಕುಸಿದಂತೆ ಕಂಡಿತು. ಷಿ ಜಿನಪಿಂಗ್ ಅವರ ಕೈಯನ್ನು ಕಟ್ಟಿ ಹಾಕಲಾಗಿ ದೆಯೋ? ಪುಟಿನ್ ಕಣ್ಮರೆ ಯಾದರೋ? ಎಂತಹ ಭ್ರಮಾಲೋಕ ನಮ್ಮ ಮುಂದೆ ಸೃಷ್ಟಿಯಾಗಿತ್ತು ನೋಡಿ! ಸುಳ್ಳಾದರೇನು, ಕೆಲವು ಸುದ್ದಿಗಳು ಸವಿಯಾಗಿದ್ದವು.

ಆದರೆ ಒಂದು ದಿನ ರಾತ್ರೋ ರಾತ್ರಿ ಚೀನಾದಿಂದ ಜಗತ್ತೇ ತಲ್ಲಣಗೊಳ್ಳುವಂಥ ವಾರ್ತೆ – ಮಾರಣಾಂತಿಕ ರೋಗವೊಂದು ಎಲ್ಲೆಡೆ ಹರಡುತ್ತಿದೆ ಎನ್ನುವುದು. ನಿಶ್ಚಿಂತೆಯ ನಿದ್ದೆಯಲ್ಲಿದ್ದ ನಮಗೆಲ್ಲ ಆ ಅಲಾರಾಂ ಆಗಿದ್ದು ಗೊತ್ತೇ ಆಗಲಿಲ್ಲ, ಗೊತ್ತಾದರೂ ಅದನ್ನು ನಿರ್ಲಕ್ಷ್ಯ ಮಾಡಿದೆವು. ಚೀನಾದಲ್ಲಿ ಏನೇ ಕೆಟ್ಟದ್ದು ಆದರೆ ಆ ವಿಷಯ ಸೋರಿಕೆ ಆಗುವುದು ಅಷ್ಟು ಸುಲಭದ ವಿಷಯ ವಲ್ಲ. ಅದೇನು ಆಶ್ಚರ್ಯ, ಸಾಂಕ್ರಾಮಿಕ ರೋಗ ಹರಡಿದ್ದು ಒಂದು ತಿಂಗಳೊಳಗೆ ಜಗತ್ತಿಗೇ ಗೊತ್ತಾಗಿ ಹೋಗಿತ್ತು. ಆದರೆ ಎಷ್ಟು ಗೊತ್ತಾಗಬೇಕೋ ಅಷ್ಟಲ್ಲ!

ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ, ಇವೆಲ್ಲದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಕಣ್ಣಿಗೆ ಪಟ್ಟಿ ಕಟ್ಟಿ ಕುಳಿತುಕೊಂಡಿತ್ತು. ಮೊದಲು ರೋಗ ಕಾಣಿಸಿಕೊಂಡಿದ್ದನ್ನು ತಡವಾಗಿ ಹೇಳಿದರು, ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ ಎಂದರು, ನಿಯಂತ್ರಣ ತಪ್ಪಿಲ್ಲ ಎನ್ನುವುದೂ ಕೆಲ ಕಾಲದ ವಾದವಾಗಿತ್ತು. ನೋಡು ನೋಡುತ್ತಿದ್ದಂತೆ ಕರೋನಾವೈರಸ್ ಶಾಂತವಾಗಿ ಮಲಗಿದ್ದ ಜಗತ್ತನ್ನು ಒದ್ದು ಎಬ್ಬಿಸಿತ್ತು, ಎದ್ದಾಗ ಕೊಂಚ ತಡವೇ ಆಗಿತ್ತು!

ಈ ಇಡೀ ಪ್ರಸಂಗವನ್ನು ಎರಡು ದೃಷ್ಟಿಯಿಂದ ನೋಡಬೇಕು. ಮೊದಲು ಚೀನಾ ನಮಗೆ ಏನು ತೋರಿಸಿತು, ನಂತರ ನಾವು ಏನನ್ನು ಕಂಡೆವು ಎನ್ನುವುದು. ಇದರಲ್ಲಿಯೇ ಆಟವಿದೆ. ಹೊಸಯುಗದ ಹೊಸ ಸಮರ ಶೈಲಿಯಿದು. ಮೊದಲು – ಚೀನಾ ನಮಗೆ ತೋರಿಸಿದ್ದೇನು? ಚೀನಾದ ಕೇಂದ್ರಭಾಗದಲ್ಲಿರುವ ವುಹಾನ್ ಶಹರದಲ್ಲಿ ಹೊಸದೊಂದು ವೈರಸ್ ರೋಗ ಹರಡಿದೆ, ಎಲ್ಲಿಂದ ಬಂತೋ, ಯಾವಾಗ ಬಂತೋ ಗೊತ್ತಿಲ್ಲ. ಮಾಂಸದ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದವರು ಉಸಿರಾಟದ ತೊಂದರೆ ಯಿಂದ ಒಂದೇ ಸಮನೆ ಆಸ್ಪತ್ರೆೆಗೆ ಬರತೊಡಗಿದರು.

ಇರುವೆಗಳು ಸಾಯುವಂತೆ ಜನರು ಸಾಯತೊಡಗಿದರು. ನೂರು, ಐನೂರು, ಒಂದು ಸಾವಿರ, ಎರಡು, ಐದು, ಕೊನೆಗೆ ಎಂಬತ್ತು ಸಾವಿರಕ್ಕೂ ಹೆಚ್ಚು ಕೇಸುಗಳು ಪತ್ತೆಯಾದವು. ಇಡೀ ಚೀನಾ ಲಾಕ್ ಡೌನ್. ಇಂಥ ಲಾಕ್ ಡೌನ್ ದಿನಗಳನ್ನು ಆಧುನಿಕ ಜಗತ್ತು ಈ ಮೊದಲು ಕಂಡಿರಲಿಲ್ಲ. ನೋಡು ನೋಡುತ್ತಿದ್ದಂತೆ ಮೂರು ಸಾವಿರ ಜನರು ಹೊಸ ಕರೋನಾ ವೈರಸ್‌ಗೆ ಬಲಿಯಾದರು. ಇಡೀ ಚೀನಾ ಸ್ತಬ್ಧ ಚಿತ್ರವಾಗಿತ್ತು, ಎಲ್ಲಿಯೂ ಓಡಾಟವಿಲ್ಲ, ಮನೆ ಮನೆಯೂ ಬಾಗಿಲು ಜಡಿದು ಕೂತಿದ್ದರು. ಮೂರು ವಾರಕ್ಕೆ ಲಾಕ್ ಡೌನ್ ಹಗುರವಾಯಿತು, ಮೂರು ತಿಂಗಳಲ್ಲಿ ಚೀನಾ ಮತ್ತೆ ಮರಳಿ ತನ್ನ ಪಯಣವನ್ನು ಶುರುಮಾಡಿತ್ತು. ಇಷ್ಟೇ ನಾವು
ನೋಡಿದ್ದು. ಆಗಲೇ ನಾವು ಭಯದ ಸುಳಿಯಲ್ಲಿ ಸಿಕ್ಕಿ ಬಿದ್ದಾಗಿತ್ತು. ಅದರ ನಂತರ ನಾವು ಕಂಡಿದ್ದು ಇನ್ನೂ ಭಯಾನಕ. ಇದೂ ಚೀನಾದ್ದೆ ರಣನೀತಿ. ಇರಾನ್ ಆರೋಗ್ಯ ಮಂತ್ರಿಗೆ ಕರೋನಾ ಬಂದಿದ್ದು, ಇಟಲಿಯ ಬೀದಿ ಬೀದಿಯಲ್ಲಿ ಜನ ಕರೋನಾದಿಂದ ನರಳ ತೊಡಗಿದ್ದು.

ಸ್ಪೇನ್, ಜರ್ಮನಿ, ಸಂಪೂರ್ಣ ಯುರೋಪಿನ ದೇಶಗಳಲ್ಲಿ ಕರೋನಾ. ಅದು ಬಿಡಿ ಇಂಗ್ಲೆಂಡ್ ಪ್ರಧಾನಿಗೆ ಕರೋನಾ ಸೋಂಕು. ಜರ್ಮನಿಯಲ್ಲಿ ಕೋಟಿಗಟ್ಟಲೆ ಜನರಿಗೆ ಕರೋನಾ ಹರಡಿರಬಹುದು ಎನ್ನುವ ಸುದ್ದಿ. ಅರ್ಧ ಇಟಲಿಗೆ ಕರೋನಾ ಸೋಂಕಿದೆ, ಮುದುಕರೆಲ್ಲರೂ ಸಾಯುತ್ತಿದ್ದಾರೆ ಎನ್ನುವ ನ್ಯೂಸ್. ಅಮೆರಿಕಾದಲ್ಲಂತೂ ಇನ್ನೂ ಗಂಭೀರ. ಒಂದು ದಿನಕ್ಕೆ ಲಕ್ಷಗಟ್ಟಲೆ ಜನರು
ಕರೋನಾ ಪಾಸಿಟಿವ್. ನ್ಯೂಯಾರ್ಕ್, ವಾಷಿಂಗ್ಟನ್‌ನಂಥ ನಗರಗಳಲ್ಲಿ ಲಾಕ್ ಡೌನ್!

ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳಿಲ್ಲ, ಹಾಸಿಗೆಯಿಲ್ಲ, ಮಾರುಕಟ್ಟೆಯಲ್ಲಿ ಮಾಸ್ಕ್’‌‌ಗಳಿಲ್ಲ, ಸ್ಯಾನಿಟೈಸರ್‌ಗಳೂ ಲಭ್ಯವಿಲ್ಲ. ಜಗತ್ತಿನ ಅತ್ಯಾಧುನಿಕ ದೇಶಗಳು, ಶ್ರೀಮಂತರಲ್ಲಿ ಶ್ರೀಮಂತ ದೇಶಗಳೂ ಕಂಗಾಲಾಗಿದ್ದನ್ನು ನಾವು ಕಂಡೆವು. ಸೋಶಿಯಲ್
ಮೀಡಿಯಾ, ವಾಟ್ಸಾಪ್, ನ್ಯೂಸ್ ಪೇಪರ್, ಟಿವಿ, ಕೊನೆಯಲ್ಲಿ ಮನೆಯ ಗೋಡೆ, ಮಾಳಿಗೆಯನ್ನು ಕಂಡರೂ ಕರೋನಾದ ರಣತಾಂಡವವೇ ಕಾಣುತ್ತಿತ್ತು. ಜಗತ್ತಿನಲ್ಲಿಯ ಏಳು ನೂರು ಕೋಟಿ ಜನರು ಮಾನಸಿಕವಾಗಿ ಕುಸಿದಿದ್ದರು. ಪ್ಲೇಗ್, ಸ್ಪಾನಿಷ್ ಜ್ವರದ ನೆನಪುಗಳು ಹರಿದು ಮನಸ್ಸು ಆಗಲೇ ಈ ಯುದ್ಧದಲ್ಲಿ ಅರ್ಧ ಸೋತಿತ್ತು.

ಭಾರತದಲ್ಲಿ ಮೊದಲ ಕೇಸು ಪತ್ತೆಯಾದಾಗ ಅಣು ಬಾಂಬೇ ಬಿತ್ತು ಎಂಬಷ್ಟು ಹೆದರಿಕೆ. ಟಿವಿ ಪರದೆ, ದಿನಪತ್ರಿಕೆಯ ಹೆಡ್
ಲೈನ್, ಸೋಶಿಯಲ್ ಮೀಡಿಯಾ ಟ್ರೆಂಡ್ ಎಲ್ಲೆಲ್ಲೂ ಕರೋನಾ ಭಾರತಕ್ಕೆ ಬಂದಿದೆ ಮುಂದೇನು? ಗಡಿಯಲ್ಲಿಯ ಸೈನಿಕರನ್ನು ಬಿಟ್ಟರೆ ಇಡೀ ದೇಶ ಆ ಗಳಿಗೆಯಲ್ಲಿ ಯುದ್ಧಕ್ಕೆ ಸಿದ್ಧವಾಗಿ ನಿಂತಿತ್ತು! ಸಾವು ಎನ್ನುವುದು ಮನೆ ಬಾಗಿಲಿಗೇ ಬಂದಿದೆ ಎನ್ನುವ ಭಯ. ಆ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಇವೆಲ್ಲವೂ ಇನ್ನು ಬದುಕಿನ ಭಾಗವೇ ಅನಿಸತೊಡಗಿತ್ತು. ಅಂಬ್ಯುಲೆನ್ಸ್ ಬಂದು ಯಾರನ್ನಾದರೂ ಆಸ್ಪತ್ರೆಗೆ ಕರೆದುಕೊಂಡು ಹೋದರೆ, ಯಮಧೂತರೇ ಬಂದು ಅವರನ್ನು ಕರೆದುಕೊಂಡು ಹೋದ ಚಿತ್ರ
ಕಣ್ಣೆದುರು.

ಚೀನಾ ತನ್ನ ಜಾಗತಿಕ ಮಾಧ್ಯಮದ ಪ್ರಭಾವ ಬೀರಿ ನಮಗೆ ಏನು ತೋರಿಸಬೇಕು ಎಂದುಕೊಂಡಿದ್ದರೋ ಅದನ್ನೇ ನಾವು ನೋಡಿ ದೆವು. ಎಲೆಕ್ಟ್ರಾನಿಕ್ ಮಾಧ್ಯಮ, ಬಿಗ್ ಡಾಟಾ ಮೈನಿಂಗ್, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್ ಇವೆಲ್ಲವನ್ನು ಇಷ್ಟು ದೊಡ್ಡ ಮಟ್ಟಿಗೆ ಬಳಸಿದ ಮೊದಲ ಪ್ರಯೋಗ ಇದಾಗಿತ್ತು!

ಜಗತ್ತಿನಾದ್ಯಂತ ಕರೋನಾದಿಂದ ಹತ್ತು ಲಕ್ಷಕ್ಕೂ ಹೆಚ್ಚು ಜನರು ಸತ್ತಿದ್ದಾರಂತೆ, ಐದು ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಲುಗಿದೆ. ಇನ್ನೂ ಜನರು ಸಾಯುತ್ತಿದ್ದಾರೆ, ಕರೋನಾ ಇನ್ನೂ ತನ್ನ ರುದ್ರಾವತಾರವನ್ನು ನಿಲ್ಲಿಸಿಲ್ಲ. ಇದು ಕೇವಲ ನಮಗೆ ಕಾಣುತ್ತಿರುವುದು ಅಷ್ಟೇ. ಇದರ ಹಿಂದೆ ಏನಿದೆಯೋ? ನೀವೆಲ್ಲ ತಪ್ಪು ತಿಳಿಯುವುದಿಲ್ಲವೆಂದರೆ ಒಂದು ಮಾತನ್ನು ಹೇಳಲೇ? ಕರೋನಾದ ಹೆಸರಲ್ಲಿ ಕಡಿಮೆ ಕಡಿಮೆ ಅಂದರೂ ಜಗತ್ತಿನಲ್ಲಿ ಈಗಾಗಲೇ ಒಂದರಿಂದ ಎರಡು ಕೋಟಿ ಜನರು ಸತ್ತಿದ್ದಾರೆ.

ಮುದುಕರಿಗೆ ಆಸ್ಪತ್ರೆಗೆ ಹೋಗಲು ಆಗುವುದಿಲ್ಲ, ಅನಾರೋಗ್ಯ ಕಂಡರೂ ಶೇ.90ರಷ್ಟು ಜನರು ಕೊನೆಯ ತನಕ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗುವುದಿಲ್ಲ, ಆಸ್ಪತ್ರೆಯಲ್ಲಿ ಹಾಸಿಗೆ ಇದ್ದರೆ ವೈದ್ಯರಿಲ್ಲ, ವೈದ್ಯರಿದ್ದರೆ ಹಾಸಿಗೆಯಿಲ್ಲ – ವೈದ್ಯ ಕೀಯ ಕ್ಷೇತ್ರ ಸಂಪೂರ್ಣವಾಗಿ ಹದಗೆಟ್ಟಿದೆ. ಕರೋನಾದಿಂದ ಒಬ್ಬರು ಸತ್ತರೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದೆ ಸಾಯುತ್ತಿರುವ ವೃದ್ಧರು ನೂರು. ಇನ್ನೂ ಹತ್ತು ವರ್ಷಗಳ ಕಾಲ ಬದುಕಬೇಕಿದ್ದ ಲಕ್ಷಾಂತರ ಜನ ಇಂದು ಮರಣ ಹೊಂದು ತ್ತಿದ್ದಾರೆ. ಇನ್ನು ಕೆಲಸ ಕಳೆದುಕೊಂಡ ಯುವಕರು ಕುಡಿದು, ಆತ್ಮಹತ್ಯೆ ಮಾಡಿಕೊಂಡು, ಒತ್ತಡ ಸಹಿಸಲಾಗದೆ ಹೃದಯಾ ಘಾತದಿಂದ ಸಾಯುತ್ತಿದ್ದಾರೆ. ನಮಗೆ ಕಾಣುವುದಕ್ಕಿಂತ ಲೆಕ್ಕಾಚಾರಕ್ಕಿಂತ ಸಾವಿರ ಪಟ್ಟು ಹೆಚ್ಚು ಸಾವು ನೋವು ನಡೆಯುತ್ತಿದೆ.

ಅಮೆರಿಕಾದಲ್ಲಿ ಪ್ರತಿ ಎರಡು ಸೆಕೆಂಡಿಗೆ ಒಬ್ಬ ಹೃದಯಾಘಾತದಿಂದ ಸಾಯುತ್ತಾನಂತೆ, ಒಂದು ವರ್ಷದಲ್ಲಿ ಏಳು ಲಕ್ಷ ಜನರು ಬಲಿಯಾಗುತ್ತಾರೆ. ಅದು ಬಿಡಿ ನಮ್ಮ ದೇಶದಲ್ಲಿ ಹಾವು ಕಚ್ಚುವುದರಿಂದ ಪ್ರತಿವರ್ಷ ಒಂದೂವರೆ ಲಕ್ಷ ಜನ ಸಾಯುತ್ತಾರೆ, ನಿಮಗಿದು ಗೊತ್ತೇ? ಇದರ ಮುಂದೆ ಕರೋನಾ ಅದೇನು ಮಹಾ? ಕರೋನಾ ಎನ್ನುವುದು ಮಹಾ ಅಲ್ಲ, ನಾವು ಕಾಣದ, ಅರಿಯದ, ತಿಳಿಯದ, ವಿಶ್ವದ ಮೂರನೇ ಮಹಾಯುದ್ಧ!

ಎರಡನೇಯ ಮಹಾಯುದ್ಧವನ್ನು ಮುಗಿಸಿದ ಈ ಅಮೆರಿಕಾವೇ ಶುರು ಮಾಡಿತ್ತು ಮೂರನೆಯ ಮಹಾಯುದ್ಧವನ್ನು. ಇರಾನ್, ಉತ್ತರ ಕೋರಿಯಾ, ಪಾಕಿಸ್ತಾನ, ಸಿರಿಯಾ ಇವೆಲ್ಲ ಅಮೆರಿಕಾದ ವಿರುದ್ಧವಾಗಿದ್ದು ಚೀನಾ ಬಲದಿಂದ. ಅಷ್ಟೇ ಅಲ್ಲ ಚೀನಾ ಆಫ್ರಿಕಾ, ಯುರೋಪ್ ದೇಶಗಳನ್ನೂ ತನ್ನ ಸಾಲದ ಬಲೆಯಲ್ಲಿ ಹಾಕಿಕೊಂಡಿದೆ. ಅಮೆರಿಕಾ ಕೂಡ ಚೀನಾದ ಸಾಲದ ಬಲೆ ಯಲ್ಲಿದೆ ಅಂದರೆ ನಿಮಗೆ ಆಶ್ಚರ್ಯ ಎನಿಸಬಹುದು.

ಹೇಗೆ ಬ್ರಿಟಿಷರು ಭಾರತದ ಕಚ್ಚಾವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ತೆಗೆದುಕೊಂಡು ಹೋಗಿ ನಂತರ ದುಬಾರಿ ಬೆಲೆಗೆ ಇಲ್ಲಿ ಮಾರಿ ಲಕ್ಷಾಂತರ ಕೋಟಿ ಸಂಪತ್ತನ್ನು ದೋಚಿದರೋ ಹಾಗೆಯೇ ಚೀನಾವೂ ಕೂಡ ಅಮೆರಿಕಾದ ತಂತ್ರಜ್ಞಾನವನ್ನು ಬಳಸಿ ಕಡಿಮೆ ಬೆಲೆಯ ಉತ್ಪನ್ನಗಳನ್ನು ಮಾಡಿ, ಅವರಿಗೇ ಮಾರಿ ಇಡೀ ದೇಶವನ್ನು ದೋಚಿದ್ದಾರೆ.

ಈಗ ಅಮೆರಿಕಾ ಎದ್ದು ಮತ್ತೆ ನನ್ನ ಗುಲಾಮನಾಗು ಅಂದರೆ ಹೇಗೆ ಕೇಳುವರು ಅವರು? ಅದಕ್ಕೆ ಕರೋನಾ ಎಂಬ ಹೆದರಿಕೆಯ ಅಸ್ತ್ರ ಬಳಸಿದರು. ಜಿಂಕೆಯು ಹುಲಿಯನ್ನು ಕಂಡು ಹೆದರಿ, ಓಡೋಡಿ ಅದರ ಎದುರಿಗೇ ಬಂದು ಬೀಳುತ್ತದೆಯೋ ಹಾಗೆಯೇ, ಇಡೀ ಜಗತ್ತು ಕರೋನಾದ ಸುದ್ದಿ, ಅದರ ಭೀಕರತೆ, ಲಾಕ್ ಡೌನ್ ನೋಡಿ ಹೆದರಿ ಹೋಯಿತು. ಮೊದಲು ಇರಾನ್, ನಂತರ ಇಟಲಿ, ಅದರನಂತರ ಸ್ಪೇನ್. ನೋಡಿ ಇದು ಚೀನಾದ ಗೇಮ್ ಪ್ಲಾನ್. ಇಂದು ಗೆಲ್ಲಬೇಕು ಅಂದರೆ ಗಡಿ ದಾಟಿ ಬರಬೇಕಿಲ್ಲ,
ಇದನ್ನು ‘ವಾರ್ ಫ್ರಾಮ್ ಹೋಮ್’ ಎನ್ನುತ್ತಾರೆ. ಚೀನಾವು ವಾರ್ ಫ್ರಾಮ್ ಹೋಮ್ ನಡೆಸಿತು. ಒಂದೆರಡು ತಿಂಗಳು ಅರ್ಥ ಚಟುವಟಿಕೆಗಳೇ ನಿಂತವು, ತೈಲದ ಬೆಲೆ ನೆಲಕ್ಕಚ್ಚಿತು, ವಿಮಾನಯಾನ ನಿಂತಿತು, ಜಗತ್ತಿನ ಎಲ್ಲ ದೇಶಗಳ ಎಕಾನಾಮಿ ಢಮಾರ್!

ಆದರೆ ಚೀನಾದ ಆರ್ಥಿಕತೆ ಕುಸಿಯಿತೇ? ಇಲ್ಲ. ಅವರು ಅಂತಾರಾಷ್ಟ್ರೀಯ ಮಾರುಕಟ್ಟೆೆಯ ಮೇಲೆ ನಿರ್ಭರವಾಗುವುದನ್ನು ಬಿಟ್ಟು ಹತ್ತು ವರ್ಷಗಳೇ ಕಳೆದಿರಬಹುದು. ಅವರ ದೇಶಿಯ ಮಾರುಕಟ್ಟೆ ಇನ್ನೂ ಆಕ್ಟಿವ್ ಇದೆ. ಕರೋನಾ ಹರಡಿದ ಸಮಯ ಗಮನಿಸಿ. ಕ್ರಿಸ್ಮಸ್ ಸಮಯ, ಜೊತೆಗೆ ಚೀನಾ ಹೊಸ ವರ್ಷದ ಆಚರಣೆ. ಆ ಸಮಯದಲ್ಲಿ ಕೋಟ್ಯಂತರ ಜನ ಚೀನಾದ ಮೂಲೆ ಮೂಲೆಗೂ ಹೋಗಿರುವಾಗ, ಎಷ್ಟೇ ನಿಯಂತ್ರಣ ಮಾಡಿ, ಕೇವಲ ಎಂಬತ್ತು ಸಾವಿರ ಜನಕ್ಕೆ ಕರೋನಾ ಸೋಂಕು ತಗುಲಿದ ವಿಷಯ ನಂಬಲು ಸಾಧ್ಯವೇ? ಜಗತ್ತನ್ನು ಒಂದು ಹುಂಡು ರಕ್ತ ಹರಿಸದೆ ಹೆದರಿಸಿತು ಚೀನಾ. ಯುದ್ಧದ ಫಲಿತಾಂಶ ಏನಾಗುತ್ತದೆ ಹೇಳಿ – ಸೋತವರ ಮೇಲೆ ಸಿಕ್ಕಾಪಟ್ಟೆ ಸಾಲ. ಇಂದು ಜಗತ್ತಿನ ಬಹಳಷ್ಟು ದೇಶಗಳು ಎಕನಾಮಿಕ್ ಪ್ಯಾಕೆಜ್ ನೀಡುವ ಅನಿವಾ ರ್ಯತೆಯಲ್ಲಿ ಸಾಲ ಮಾಡಿದ್ದಾರೆ.

ಅಮೆರಿಕಾ ಒಂದು ಟ್ರಿಲಿಯನ್ ಡಾಲರ್ ಪ್ಯಾಕೆಜ್ ಕೊಟ್ಟಿದೆ, ಯುರೋಪ್ ದೇಶಗಳೆಲ್ಲದರ ಪ್ಯಾಕೆಜ್ ಸೇರಿಸಿದರೆ ಇದರ
ದುಪ್ಪಟ್ಟು ಆಗಬಹುದು, ಸಂಪೂರ್ಣ ಅರ್ಥ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಆದರೆ ಚೀನಾ ಮಾತ್ರ ಸಬಲವಾಗಿದೆ. ಇಂದು ಇಡೀ ಜಗತ್ತು ವರ್ಕ್ ಫ್ರಾಮ್ ಹೋಮ್ ಮಾಡುತ್ತಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟ ಮುಂದಿನ ಐದು ವರ್ಷಗಳಲ್ಲಿ ಎಷ್ಟು ಆಗಬೇಕಿತ್ತೋ ಅಷ್ಟು ಕಳೆದ ಆರು ತಿಂಗಳಲ್ಲಿ ಆಗಿದೆ. ಯಾರಿಗೆ ಲಾಭ? ಎಲ್ಲದಕ್ಕೂ ಮಿಗಿಲಾಗಿ ಇಂದು ಅಮೆರಿಕಾ ಒಂದು ಒಡೆದ, ನಿರ್ಬಲ, ನಾಯಕರಿಲ್ಲದ ದೇಶವಾಗಿದೆ.

ತಾವು ಎಷ್ಟೇ ಪವರ್ ಫುಲ್ ಎಂದುಕೊಂಡು ಕೊಚ್ಚಿಕೊಂಡರೂ ಅವರಲ್ಲಿನ ವರ್ಣೀಯ ಸೂಕ್ಷ್ಮತೆ, ಬಡತನ, ಅಶಿಸ್ತು, ಕಂಗಾಲು ತನ ಇವೆಲ್ಲ ಜಗತ್ತಿನ ಎದುರು ಬಂದಿದೆ. ಜಗತ್ತಿನ ಪ್ರಬಲ ರಾಷ್ಟ್ರ ಯಾವುದು ಎಂದು ಇವತ್ತು ಯಾರನ್ನೇ ಕೇಳಿ – ಚೀನಾ ಎಂದೇ ಉತ್ತರಿಸುತ್ತಾರೆ. ಇಷ್ಟು ಸಾಧಿಸಲು ಚೀನಾ ಖರ್ಚು ಮಾಡಿದ್ದು ಬಹಳ ಕಡಿಮೆ. ಚೀನಾ ಇಂದು ಡಿಫೆನ್ಸ್ ಇಂಡಸ್ಟ್ರಿಯನ್ನು ಎಷ್ಟು ವೇಗದಲ್ಲಿ ಕಟ್ಟುತ್ತಿದೆ ಗೊತ್ತೇ? ಅದು ನಾಲ್ಕನೆಯ ಮಹಾಯುದ್ಧಕ್ಕೆ ತಯಾರಿ ನಡೆಸಿದೆ. ಈಗಾಗಲೇ ಅವರು ಅಮೆರಿಕಾ ವನ್ನು ಗೆದ್ದಿದ್ದಾರೆ. ಏನಾದರೂ ಬೈಡನ್ ಬಂದರೆ ಅಮೆರಿಕಾದ ಕಥೆ ಮುಗಿಯಿತು, ಟ್ರಂಪ್ ಬಂದರೆ ಇನ್ನಷ್ಟು ವೇಗದಲ್ಲಿ ಪತನ. ಏನೇ ಇರಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ನಡೆದ ಮಹಾಯುದ್ಧ ಇದೇ ಆಗಿರಬೇಕು.

ಕರೋನಾ ಎನ್ನುವ ಕಣ್ಣಿಗೆ ಕಾಣದ ಜೀವಿ ಮೂಲಕ ಚೀನಾ ಒಂದೂ ಮಿಸೈಲ್ ಬಳಸದೆ ಮೂರನೆಯ ಮಹಾಯುದ್ಧ ಗೆದ್ದಿದೆ!