Saturday, 23rd November 2024

Landslide: ವೈಷ್ಣೋದೇವಿ ಯಾತ್ರೆ ರಸ್ತೆಯಲ್ಲಿ ಭೂಕುಸಿತ: ಓರ್ವ ಸಾವು, ಇಬ್ಬರಿಗೆ ಗಾಯ

Landslide

ರಿಯಾಸಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಿಯಾಸಿ ಜಿಲ್ಲೆಯಲ್ಲಿ ಮಾತಾ ವೈಷ್ಣೋ ದೇವಿ ದೇವಸ್ಥಾನಕ್ಕೆ (Mata Vaishno Devi temple) ಸಾಗುವ ಪಂಚಿ ಬಳಿಯ ಮಾರ್ಗದಲ್ಲಿ ಸೋಮವಾರ ಭೂಕುಸಿತ (Landslide) ಸಂಭಿವಿಸಿ ಕಲ್ಲುಗಳು ಬಿದ್ದಿದೆ. ಘಟನೆಯಲ್ಲಿ ಒಬ್ಬ ಯಾತ್ರಿ (Vaishno Devi yatra) ಮೃತಪಟ್ಟಿದ್ದು, ಇಬ್ಬರು  ಗಾಯಗೊಂಡಿದ್ದಾರೆ. ಘಟನೆಯಲ್ಲಿ ರಸ್ತೆ ಮೇಲಿನ ಕಬ್ಬಿಣದ ರಚನೆಗೆ ಹಾನಿಯಾಗಿದೆ.

ಭೂಕುಸಿತದ ಮಾಹಿತಿ ತಿಳಿದು ಶ್ರೀ ವೈಷ್ಣೋದೇವಿ ದೇಗುಲ ಮಂಡಳಿಯ ವಿಪತ್ತು ನಿರ್ವಹಣಾ ತಂಡವು ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಯಾತ್ರಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಭೂಕುಸಿತದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶೀಘ್ರದಲ್ಲೇ ಮಾರ್ಗವನ್ನು ಯಾತ್ರಾರ್ಥಿಗಳಿಗೆ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಯಾತ್ರಾರ್ಥಿಗಳು ಯಾತ್ರೆಯ ಸಮಯದಲ್ಲಿ ಎಚ್ಚರಿಕೆ ವಹಿಸುವಂತೆ ಮತ್ತು ರಸ್ತೆಯ ಸ್ಥಿತಿಯನ್ನು ಪರಿಗಣಿಸಿ ಮುಂದುವರಿಯುವಂತೆ ಆಡಳಿತವು ಎಚ್ಚರಿಕೆ ನೀಡಿದೆ.

ಪ್ರತಿ ವರ್ಷ ಲಕ್ಷಾಂತರ ಭಕ್ತರು ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. 2023ರಲ್ಲಿ, ದೇವಾಲಯವು ದಾಖಲೆ ಸಂಖ್ಯೆಯ ಪ್ರವಾಸಿಗರನ್ನು ಕಂಡಿತು. ಕಳೆದ ದಶಕದಲ್ಲಿ 2023ರಲ್ಲೇ ಅತಿ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.

ಅಧಿಕೃತ ಮಾಹಿತಿಯ ಪ್ರಕಾರ, ಜಮ್ಮುವಿನ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ವೈಷ್ಣೋದೇವಿ ದೇವಾಲಯಕ್ಕೆ ಕಳೆದ ವರ್ಷ 9.35 ಮಿಲಿಯನ್ ಜನರು ಭೇಟಿ ನೀಡಿದ್ದಾರೆ. ಹಿಂದಿನ ದಾಖಲೆ 2013 ರಲ್ಲಿ ನಡೆದಿದ್ದು, ಈ ವೇಳೆ 9.324 ಮಿಲಿಯನ್ ಭಕ್ತರು ಭೇಟಿ ನೀಡಿದ್ದರು.

ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಶುಲ್ ಗರ್ಗ್, ಕಳೆದ ಹತ್ತು ವರ್ಷಗಳಲ್ಲಿ ಇದು ಅತಿ ಹೆಚ್ಚು ಯಾತ್ರಾರ್ಥಿಗಳಾಗಿದ್ದು, 9.35 ಮಿಲಿಯನ್ ಜನರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.