ಬೀದಿಯಲ್ಲಿದ್ದ ಗೂಳಿಯೊಂದನ್ನು (bull) ಓಡಿಸಲು ವ್ಯಕ್ತಿಯೊಬ್ಬ ಕಲ್ಲುಗಳನ್ನು ಬಿಸಾಡಿದ್ದು, ಇದಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಿದ ಗೂಳಿಗಳು ಆತನನ್ನೇ ಅಟ್ಟಾಡಿಸಿ ಬೀಳಿಸಿದ ಘಟನೆಯ ವಿಡಿಯೋವೊಂದು (video) ಸಾಮಾಜಿಕ ಜಾಲತಾಣದಲ್ಲಿ (social media) ಭಾರಿ ವೈರಲ್ (Viral Video) ಆಗಿದೆ. ಇದಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ಹೆಚ್ಚಿನವರು ಆಘಾತ ವ್ಯಕ್ತಪಡಿಸಿದ್ದಾರೆ. ಒಬ್ಬ ವ್ಯಕ್ತಿಯನ್ನು ಎರಡು ಗೂಳಿಗಳು ಓಡಿಸಿಕೊಂಡು ಬಂದಿರುವ ದೃಶ್ಯ ಕೆಮೆರಾದಲ್ಲಿ ಸೆರೆಯಾಗಿದೆ. ಇನ್ ಸ್ಟಾಗ್ರಾಮ್ ನಲ್ಲಿ @postinganimalattacks ಎಂಬ ಪುಟದಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕೆಲವೇ ಗಂಟೆಗಳಲ್ಲಿ ಇದು ಭಾರಿ ವೈರಲ್ ಆಗಿದೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೀದಿಯಲ್ಲಿ ಸುಮ್ಮನೆ ನಿಂತಿದ್ದ ಗೂಳಿಯೊಂದನ್ನು ಓಡಿಸಲು ಕಲ್ಲುಗಳನ್ನು ಬಿಸಾಡಿದ್ದಾನೆ. ಇದು ಕೂಡಲೇ ಎತ್ತುಗಳನ್ನು ಪ್ರಚೋದಿಸಿದೆ. ಅವುಗಳು ತ್ವರಿತವಾಗಿ ವ್ಯಕ್ತಿಯ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದು, ಆತನನ್ನು ಬಹುದೂರದವರೆಗೆ ಓಡಿಸಿಕೊಂಡು ಹೋಗಿವೆ. ಈ ವೇಳೆ ವ್ಯಕ್ತಿ ಅವುಗಳ ಕಾಲಡಿಗೆ ಬೀಳುವುದು ದೃಶ್ಯದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಅಂತರ್ಜಾಲದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಸಾಕಷ್ಟು ಮಂದಿ ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ. ಅನೇಕರು ಇದಕ್ಕೆ ಆಘಾತ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ.
ಇದು ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ನಡವಳಿಕೆ ಮತ್ತು ಕಾಡು ಪ್ರಾಣಿಗಳೊಂದಿಗೆ ಸಂವಹನ ನಡೆಸುವ ನೈತಿಕತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ವಿಶೇಷವಾಗಿ ನಗರಗಳಲ್ಲಿ ಇದು ಅಪಾಯಕಾರಿ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅನೇಕರು ಹೇಳಿದ್ದಾರೆ.