Friday, 22nd November 2024

Paralympics 2024 : ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದ ಮನೀಷಾ ರಾಮ್‌ದಾಸ್‌

Paralympics 2024

ಬೆಂಗಳೂರು:  ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2024 (Paralympics 2024) ಬ್ಯಾಡ್ಮಿಂಟನ್‌ನ ಮಹಿಳಾ ಸಿಂಗಲ್ಸ್ ಎಸ್‌ಯು  5 ವಿಭಾಗದಲ್ಲಿ ಭಾರತದ ಮನೀಷಾ ರಾಮದಾಸ್ ಕಂಚಿನ ಪದಕ ಗೆದ್ದಿದ್ದಾರೆ.  ಸೋಮವಾರ ನಡೆದ ಎಲ್ಎ ಚಾಪೆಲ್ ಅರೆನಾ ಕೋರ್ಟ್ 3 ರಲ್ಲಿ ಡೆನ್ಮಾ‌ರ್ಕ್‌ನ  ಕ್ಯಾಥ್ರಿನ್ ರೋಸೆನ್ಗ್ರೆನ್ ಅವರನ್ನು 21-12, 21-8 ಅಂತರದಿಂದ ಸೋಲಿಸಿ ಪದಕ ಗೆದ್ದರು. SU5 ಎಂಬುದು ಕಾಲಿಗಿಂತ ಮೇಲ್ಭಾಗದ  ದೇಹದ ಭಾಗದಲ್ಲಿ ದೌರ್ಬಲ್ಯಗಳನ್ನು ಹೊಂದಿರುವ ಕ್ರೀಡಾಪಟುಗಳ ವರ್ಗೀಕರಣವಾಗಿದೆ.  ಆಡುವ ಅಥವಾ ಆಡದ ಕೈಯ ಮೇಲಿನ ಊನವಾಗಿರುತ್ತದೆ.

ರೋಸೆನ್ ಗ್ರೆನ್ ಅವರನ್ನು ಹಿಂದಿಕ್ಕಲು 19 ವರ್ಷದ ಆಟಗಾರ್ತಿ  ಕೇವಲ 25 ನಿಮಿಷಗಳನ್ನು ತೆಗೆದುಕೊಂಡರು. ಮನಿಷಾ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿದರು ಮತ್ತು ತನ್ನ ಡೆನ್ಮಾರ್ಕ್‌ನ ಎದುರಾಳಿಗೆ ಯಾವುದೇ  ಅವಕಾಶ ನೀಡಲಿಲ್ಲ. ಆರಂಭಿಕ ಗೇಮ್ ನಲ್ಲಿ ಮುನ್ನಡೆ ಸಾಧಿಸಿದ ಅವರು 13 ನಿಮಿಷದಲ್ಲಿ ಗೆಲುವು  ಸಾಧಿಸಿದರು.  ನಂತರ ಎರಡನೇ ಗೇಮ್ ಅನ್ನು ಕೇವಲ 12 ನಿಮಿಷಗಳಲ್ಲಿ ಗೆದ್ದರು.

ಗೆಲುವಿನೊಂದಿಗೆ ಪ್ಯಾರಾಲಿಂಪಿಕ್ಸ್‌  ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಮನೀಷಾ ಪಾತ್ರರಾಗಿದ್ದಾರೆ.

ಯಾರು ಮನಿಷಾ?

ಮನಿಷಾ ಎಸ್ ತಮಿಳುನಾಡು ಮೂಲದ ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರ್ತಿ. ತಿರುವಳ್ಳೂರಿನವರಾದ ಮನೀಷಾ 2022ರಲ್ಲಿ ಕ್ರೀಡಾ ಎನ್‌ಜಿಒ ಹಾಗೂ  ಒಲಿಂಪಿಕ್ ಗೋಲ್ಡ್ ಕ್ವೆಸ್ಟ್‌ನ  ಬೆಂಬಲದೊಂದಿಗೆ ಅಂತರರಾಷ್ಟ್ರೀಯ ಸ್ಪರ್ಧೆಗೆ  ಪದಾರ್ಪಣೆ ಮಾಡಿದ್ದರು.  ಅವರು ಆಗಸ್ಟ್ 2022 ರಲ್ಲಿ ಎಸ್ ಯು 5 ವಿಭಾಗದಲ್ಲಿ ವಿಶ್ವದ ನಂಬರ್ ಒನ್ ಆದರು. ಅವರ ಪ್ರಭಾವಶಾಲಿ ವೃತ್ತಿಜೀವನವು 2022 ರಲ್ಲಿ ಸ್ಪ್ಯಾನಿಷ್ ಪ್ಯಾರಾ-ಬ್ಯಾಡ್ಮಿಂಟನ್ ಇಂಟರ್‌ನ್ಯಾಷನಲ್‌ ಮೂಲಕ ಗೆಲುವಿನ ರುಚಿ ಕಂಡರು.  2022 ರಾದ್ಯಂತ, ಅವರು 11 ಚಿನ್ನದ ಪದಕಗಳು ಮತ್ತು ಐದು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಮನಿಷಾ  2022 ರಲ್ಲಿ ಬಿಡಬ್ಲ್ಯೂಎಫ್ ಅತ್ಯುತ್ತಮ ಮಹಿಳಾ ಪ್ಯಾರಾ-ಬ್ಯಾಡ್ಮಿಂಟನ್ ಪಟು  ಎಂಬ ಹೆಗ್ಗಳಿಕೆ ಪಡೆದರು. ಹೆಚ್ಚುವರಿಯಾಗಿ, ಅವರು ಸ್ಪೋಟ್ಸ್‌ಸ್ಟಾರ್‌ ಏಸಸ್  ವರ್ಷದ ಕ್ರೀಡಾಪಟು (ಪ್ಯಾರಾಸ್ಪೋರ್ಟ್ಸ್) ಪ್ರಶಸ್ತಿ  ಪಡೆದಿದ್ದಾರೆ. ಅವರ ಪ್ರಭಾವಶಾಲಿ ಪ್ರದರ್ಶನದ ಹಿನ್ನೆಲೆಯಲ್ಲಿ, ಅವರು ಪ್ಯಾರಿಸ್‌  ಪ್ಯಾರಾಲಿಂಪಿಕ್ಸ್‌ನಲ್ಲಿ  ಸ್ಥಾನ ಪಡೆದಿದ್ದರು.