Thursday, 19th September 2024

ನಾವು ನಾಟಿ ಕೋಳಿಗಳಂತಾಗೋಣ, ಫಾರಂ ಕೋಳಿಗಳಲ್ಲ!

ಅಭಿವ್ಯಕ್ತಿ

ಡಾ.ದಯಾನಂದ ಲಿಂಗೇಗೌಡ

ಯಾವುದೇ ಒಂದು ಸಂಸ್ಕೃತಿ ದೀರ್ಘಕಾಲ ಉಳಿದುಕೊಳ್ಳಬೇಕಾದರೆ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಜನರ ಸಂಖ್ಯೆ
ಶೇಕಡಾ 2.1 ದರದಲ್ಲಿ ಬೆಳೆಯಬೇಕು. ಸುಲಭದ ಉದಾಹರಣೆ ಕೊಟ್ಟು ಹೇಳಬೇಕಾದರೆ, ಭಾರತದಲ್ಲಿ ಹಿಂದೂಗಳ ಸಂಖ್ಯೆ ಉಳಿದುಕೊಳ್ಳಬೇಕಾದರೆ ಹಿಂದೂ ಸಂಸ್ಕೃತಿಯನ್ನು ಆಚರಿಸುವ ಜನರ ಬೆಳವಣಿಗೆ 2.1ಕ್ಕಿಂತ ಮೇಲ್ಪಟ್ಟು ದರದಲ್ಲಿ ಬೆಳೆಯ ಬೇಕು.

ಅಂದರೆ ಒಂದು ಹಿಂದೂ ದಂಪತಿಗಳಿಗೆ ಸರಾಸರಿ 2.1 ಮಕ್ಕಳು ಇರಬೇಕಾಗುತ್ತದೆ. ಇದನ್ನು ಜನಸಂಖ್ಯೆ ಶಾಸ್ತ್ರದಲ್ಲಿ ಫಲವತ್ತತೆಯ ಪ್ರಮಾಣ ಎನ್ನುತ್ತಾರೆ. ಇಲ್ಲಿ ನೀವು ಗಮನಿಸಬೇಕಾದ ಅಂಶ ಏನೆಂದರೆ, ಒಂದು ಸಂಸ್ಕೃತಿ ಆಚರಿಸುವ ದಂಪತಿಗಳಿಗೆ ಸರಾಸರಿ
ಎರಡು ಮಕ್ಕಳಿದ್ದರೂ ಕೂಡ, ಸಂಸ್ಕೃತಿ ಸ್ಥಿರವಾಗಿರದೆ, ದೀರ್ಘಕಾಲದಲ್ಲಿ ಸಂಸ್ಕೃತಿ ಅಳಿವಿನಂಚಿಗೆ ಬರುವ ಆತಂಕ ಇರುತ್ತದೆ. ಇದಕ್ಕೆ ಕಾರಣ , ಅಸಹಜ ಸಾವುಗಳು, ಅನಿರೀಕ್ಷಿತವಾಗಿ ಆ ಸಂಸ್ಕೃತಿಯನ್ನು ಬಿಟ್ಟು ಹೋಗುವ ಸಂಖ್ಯೆಗಳು. ಈ ಅಂಶ ವನ್ನು
ಗಮನದಲ್ಲಿರಿಸಿಕೊಂಡು 2.1 ಕ್ಕಿಂತ ಹೆಚ್ಚಿನ ಸಂಖ್ಯೆಯ ಬೆಳವಣಿಗೆ ಅವಶ್ಯಕತೆ ಇರುತ್ತದೆ.

ವಿಷಯ ಮಂಡನೆಗೆ ಅನುಕೂಲವಾಗುವ ದೃಷ್ಟಿಯಿಂದ, ಕೆಲ ಕಾಲ ನಾವು ಕನ್ನಡವನ್ನು ಒಂದು ಸಂಸ್ಕೃತಿ ಅಥವಾ ಒಂದು ಧರ್ಮ ಎಂದುಕೊಳ್ಳೋಣ. ನಂತರ ಈ ಅಂಕಿ – ಅಂಶಗಳನ್ನು ಕನ್ನಡ ಧರ್ಮಕ್ಕೆ ಅನ್ವಯಿಸೋಣ. ಕನ್ನಡ ಭಾಷೆ ದೀರ್ಘಕಾಲ
ಉಳಿದುಕೊಳ್ಳಬೇಕಾದರೆ, ಕನ್ನಡಿಗ ದಂಪತಿಗಳಿಗೆ ಎರಡು ಮಕ್ಕಳು ಇದ್ದರೆ ಸಾಲದು. ಸರಾಸರಿ 2.1 ಮಕ್ಕಳು ಇರಬೇಕು ಮತ್ತು ಮಕ್ಕಳು ಕನ್ನಡವನ್ನು ಓದಲು ಬರೆಯಲು, ಮಾತನಾಡಲು ಶಕ್ತವಾಗಿರಬೇಕು.

ಪ್ರಸ್ತುತ ಪರಿಸ್ಥಿತಿಯಲ್ಲಿ ಕನ್ನಡದ ಬೆಳವಣಿಗೆ 2.1 ದರದಲ್ಲಿ ಬೆಳೆಯುತ್ತಿದೆಯೇ?. ಉತ್ತರ ಹುಡುಕಿದರೆ, ಕನ್ನಡದ ಸ್ಥಿತಿ ಗಾಬರಿ ಯಾಗುವ ಮಟ್ಟದಲ್ಲಿದೆ ಅನಿಸುತ್ತದೆ. ಕನ್ನಡಿಗ ದಂಪತಿಗಳಿಗೆ 2 ಮಕ್ಕಳಿರಬಹುದು (ನೆನಪಿಡಿ. ನಾವಿಬ್ಬರು ನಮಗೊಬ್ಬರು
ಎನ್ನುವವರ ಸಂಖ್ಯೆಯು ದೊಡ್ಡದಿದೆ). ಆದರೆ ಅವರೆಲ್ಲರೂ ಕನ್ನಡದಲ್ಲಿ ಕಲಿಯುತ್ತಿದ್ದಾರೆಯೇ? ಇಲ್ಲ. ಕರ್ನಾಟಕದಲ್ಲಿ ಇರುವ
ಅನೇಕ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಅಂದರೆ ಕನ್ನಡ ಅಭಿವೃದ್ಧಿಯ ದರ 2.1 ದೊರವೇ ಉಳಿಯಿತು,
ಒಂದು ಕೂಡ ಇರುವುದರ ಬಗ್ಗೆೆ ಅನುಮಾನ ಮೂಡುತ್ತದೆ.

ಅಭಿವೃದ್ಧಿ ದರ ಎರಡಕ್ಕಿಂತ ಕಡಿಮೆಯಾಗಿದ್ದರೆ ಕ್ಷೀಣಿಸುತ್ತಿರುವ ಭಾಷೆ ಎನ್ನುವ ನಾವು , ಒಂದಂಕ್ಕಿಂತ ಕಡಿಮೆ ದರದಲ್ಲಿ
ಬೆಳೆಯುತ್ತಿರುವ ಕನ್ನಡ ಭಾಷೆ ಬರೀ ಅವಸಾನದ ಅಂಚಿಗೆ ತೀವ್ರಗತಿಯಲ್ಲಿ ಸಾಗುತ್ತಿದೆ ಎನ್ನಿಸುತ್ತಿಲ್ಲವೇ ? ಕೆಲವೊಂದು ಧರ್ಮ ಗಳು ಬೆಳೆಯುತ್ತಿವೆ ಮತ್ತು ಕೆಲವೊಂದು ಧರ್ಮಗಳು ಕ್ಷೀಣಿಸುತ್ತಿವೆ. ಕ್ರಿಸ್ತಪೂರ್ವದಲ್ಲಿ, ಭಾರತದಲ್ಲಿ ಸನಾತನ ಧರ್ಮವನ್ನು ಬಿಟ್ಟು ಬೇರೆ ಯಾವುದೇ ಧರ್ಮಗಳು ಇರಲಿಲ್ಲ. ಸನಾತನ ಧರ್ಮ ಅರ್ಧ ಪ್ರಪಂಚವನ್ನು ಆವರಿಸಿಕೊಂಡಿತ್ತು. ನಂತರ ಉದಯಿ ಸಿದ ಧರ್ಮಗಳು, ಸನಾತನ ಧರ್ಮ ಸಂಖ್ಯೆೆಯನ್ನು ಕಡಿಮೆಗೊಳಿಸಿದವು. ಹಿಂದುಗಳನ್ನು ಭಾರತಕ್ಕೆ ಸೀಮಿತ ಗೊಳಿಸಿದವು ಮತ್ತು ತಮ್ಮ ಸಂಖ್ಯೆ ವೃದ್ಧಿಸಿಕೊಂಡವು.

ಇತರ ಧರ್ಮಗಳು ಬೆಳೆದು ಕೊಂಡ ಹಾದಿಯನ್ನು ನಾವು ಗಮನಿಸಿದರೆ, ಕನ್ನಡ ಉಳಿಸಿಕೊಳ್ಳುವ ದಾರಿಯು ಕಾಣುತ್ತದೆ.
ಅದರಲ್ಲಿ ಮೊದಲನೆಯದು ಸ್ವಧರ್ಮದ ಬೇರುಗಳನ್ನು ಬಲಪಡಿಸುವುದು. ಪೋಷಕರು ಕನ್ನಡ ಶಾಲೆಗೆ ಮಕ್ಕಳನ್ನು ಕಳಿಸದೇ
ಇರುವುದಕ್ಕೆ ಕಾರಣ, ತಮ್ಮ ಮಕ್ಕಳು ಇಂಗಿಷ್ ಅಥವಾ ಹಿಂದಿ ಕಲಿಯದಿದ್ದರೆ ಮುಂದೆ ಅವರ ಭವಿಷ್ಯಕ್ಕೆ ತೊಡಕಾಗಬಹುದು
ಎಂಬುದು ಪ್ರಮುಖವಾಗಿರುತ್ತದೆ. ಅದು ಅಲ್ಲದೆ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಇಂಗ್ಲಿಷ್ ಅಥವಾ ಹಿಂದಿ ಭಾಷೆಯನ್ನು
ಸರಿಯಾಗಿ ಮಾತನಾಡುವುದಕ್ಕೆ ಬರೆಯುವುದಕ್ಕೆ ಬರುವುದಿಲ್ಲ ಎಂಬ ಕೀಳರಿಮೆ ಹೋಗಲಾಡಿಸಬೇಕು. ಇದನ್ನು ಹೋಗ ಲಾಡಿಸಲು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ಪ್ರಾರಂಭದಿಂದಲೇ ಕಲಿಸುವುದು ಬಹುಮುಖ್ಯ.

ಇದನ್ನು ನಾವು ಇಂಗ್ಲಿಷ್ ಅಥವಾ ಹಿಂದಿ ಹೇರಿಕೆ ಎಂದುಕೊಳ್ಳ ಬೇಕಾಗಿಲ್ಲ. ಕನ್ನಡವಿಲ್ಲದೆ ಹೊರಗಿಟ್ಟು , ಇತರ ಭಾಷೆ ಉಪ ಯೋಗಿಸಿದರೆ ಅದು ಹೇರಿಕೆಯಾಗುತ್ತದೆ. ಆದರೆ ಕನ್ನಡದ ಜತೆಗೆ ಇತರ ಭಾಷೆಗಳನ್ನು ಕಲಿತರೆ ಅದು ಹೇರಿಕೆ ಯಾಗುವುದಿಲ್ಲ. ಉದಾಹರಣೆ ಕೊಟ್ಟು ಹೇಳಬೇಕಾದರೆ ಬ್ಯಾಂಕಿನಲ್ಲಿ ಸಿಗುವ ಅರ್ಜಿಯಲ್ಲಿ ಕನ್ನಡದ ಜತೆ ಇಂಗ್ಲಿಷ್ ಮತ್ತು ಹಿಂದಿ ಇದ್ದರೆ ಅದು ಹೇರಿಕೆ ಎಂದುಕೊಳ್ಳಬೇಕಾಗಿಲ್ಲ. ಕನ್ನಡವನ್ನು ಬಿಟ್ಟು, ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಇದ್ದರೆ ಅದನ್ನು ಹೇರಿಕೆ ಎನ್ನಬಹುದು. ಇತರ ಭಾಷೆಯ ಸಿನಿಮಾಗಳು ಕನ್ನಡದಲ್ಲಿ ಇಲ್ಲದೆ, ಬೇರೆ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದರೆ, ಅದು ಹೇರಿಕೆ. ಈ ನಿಟ್ಟಿನಲ್ಲಿ
ಇಂಗ್ಲಿಷನ್ನು ಪ್ರಾರಂಭದಿಂದಲೇ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಸುವ ಕುಮಾರಸ್ವಾಮಿಯವರ ಕ್ರಮ ಅತ್ಯಂತ ಸಮಂಜಸ
ವೆನಿಸುತ್ತದೆ. ಇಡೀ ಪ್ರಪಂಚವೇ ಒಂದು ಗ್ರಾಮವಾಗಿರುವ ಈ ಕಾಲಘಟ್ಟದಲ್ಲಿ, ಇಂಗ್ಲಿಷ್ ಅಥವಾ ಹಿಂದಿಯನ್ನು ಕನ್ನಡಿಗ
ಕಲಿಯದಿದ್ದರೆ ಅವನ ಆತ್ಮ ವಿಶ್ವಾಸ ಕಮ್ಮಿಯಾಗುತ್ತದೆ.

ಕಲಿಯುವುದಕ್ಕೆ ಎಷ್ಟೇ ಭಾಷೆಗಳು ಇರಲಿ , ಆದರೆ ಮಾತನಾಡುವುದಕ್ಕೆ ಕನ್ನಡವೇ ಇರಲಿ ಎಂಬ ಸಾಲುಗಳನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು. ಅಂದರೆ ಕನ್ನಡಿಗರಲ್ಲಿ ಕನ್ನಡದ ಜೊತೆ ಇತರ ಭಾಷೆಗಳನ್ನು ಕಲಿಯುವುದರ ಮೂಲಕ ಕನ್ನಡದ ಬಗ್ಗೆ ಅಭಿ ಮಾನವನ್ನು ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲದೆ ಜಗತ್ತನ್ನು ಎದುರಿಸಲು ಆತ್ಮವಿಶ್ವಾಸವನ್ನು ಬೆಳೆಸಬೇಕಾದ ಅವಶ್ಯಕತೆ ಇದೆ.
ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಮುಂದೆ ಕಾಲೇಜಿನ ಸಮಯದಲ್ಲಿ, ಸಂಪೂರ್ಣ ಇಂಗ್ಲಿಷ್ ಮಾಧ್ಯಮಕ್ಕೆ ಸುಲಭವಾಗಿ
ಹೊಂದಿಕೊಳ್ಳಲು, ಮೊದಲಿನಿಂದಲೂ ಕಲಿಯಬೇಕಾದ ಅವಶ್ಯಕತೆ ಇರುತ್ತದೆ. ಇದರಿಂದ ಕನ್ನಡ ಮಾಧ್ಯಮ ಹೆಚ್ಚು ಆಕರ್ಷಕ
ವನ್ನಾಗಿಸುತ್ತದೆ.

ಬರಿ ಕನ್ನಡದ ಬಗ್ಗೆ ಅಭಿಮಾನವಿಟ್ಟುಕೊಂಡು ಕನ್ನಡ ಕಲಿಯಿರಿ ಎಂದರೆ, ಈ ಲೌಕಿಕ ಜಗತ್ತಿನಲ್ಲಿ ನಡೆಯುವ ಮಾತಲ್ಲ. ಕನ್ನಡ ವನ್ನು ಬರೀ ಹೃದಯದ ಭಾಷೆಯಾಗಿ ಮಾತ್ರ ಇಟ್ಟುಕೊಳ್ಳದೆ ಅದನ್ನು ಅನ್ನದ ಭಾಷೆಯಾಗಿ ಬದಲಾವಣೆ ಮಾಡಬೇಕು. ಕನ್ನಡಕ್ಕೆ ಮಾರುಕಟ್ಟೆ ಸೃಷ್ಟಿಸಬೇಕು. ಕನ್ನಡ ಭಾಷೆ ಬಲ್ಲವರಿಗೆ (ಕನ್ನಡಿಗರಿಗೆ ಅಲ್ಲ) ಸರಕಾರಿ ಮತ್ತು ಸರಕಾರೇತರ ಕೆಲಸಗಳಲ್ಲಿ
ಮೀಸಲಾತಿಯನ್ನು ಹೆಚ್ಚಿಸಬೇಕು. ಅಂತರ್ಜಾಲಗಳಲ್ಲಿ, ಮಾಧ್ಯಮಗಳಲ್ಲಿ, ರೇಡಿಯೋಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಾರ್ವ ಜನಿಕ ಸ್ಥಳಗಳಲ್ಲಿ ಕನ್ನಡ ಉಪಯೋಗವಾಗುವಂತೆ ಸರಕಾರ ನೋಡಿಕೊಳ್ಳಬೇಕಾಗುತ್ತದೆ. ಆಗ ಕನ್ನಡ ಅನ್ನದ ಭಾಷೆಯಾಗಿ ತನಗೆ ತಾನೇ ಉಳಿದುಕೊಳ್ಳುತ್ತದೆ.

ಕನ್ನಡದ ಬಳಕೆ ಆಡಳಿತಗಳಲ್ಲಿ ಹೆಚ್ಚಾಗುತ್ತದೆ. ಅಂತರ್ಜಾಲದಲ್ಲಿ ಕನ್ನಡ ಆಡಳಿತವಹಿಸುವುದರ ಬಗ್ಗೆ ಸರಕಾರ ಗಮನಹರಿಸ ಬೇಕು. ಇತ್ತೀಚಿನ ಧರ್ಮಗಳು ಬೆಳೆಯಲು ಇನ್ನೊಂದು ಕಾರಣ ಮತಾಂತರ. ಮತಾಂತರದ ರೀತಿಯೇ ಬೇರೆ ಭಾಷಿಗರನ್ನು ಕನ್ನಡ
ಮಾತನಾಡುವಂತೆ ಪ್ರೇರೇಪಿಸುವುದು ಕೂಡ ಬಹು ಮುಖ್ಯವಾದ ಸಂಗತಿ. ಕರ್ನಾಟಕಕ್ಕೆ ಬರುವ ವಲಸಿಗರ ಕಾರಣದಿಂದ ಕನ್ನಡ
ನಶಿಸುತ್ತಿದೆ ಎಂಬ ಆರೋಪವಿದೆ . ಕನ್ನಡಕ್ಕೆ ಕರ್ನಾಟಕಕ್ಕೆ ಬರುವ ವಲಸಿಗರನ್ನು ಋಣಾತ್ಮಕವಾಗಿ ನೋಡದೆ, ಧನಾತ್ಮಕವಾಗಿ
ನೋಡಬೇಕಾಗಿದೆ. ಕರ್ನಾಟಕದಲ್ಲಿ ಕೆಲಸ ಮಾಡುವ ವಲಸಿಗರು, ದೇಶದ ನಾನಾ ಕಡೆಯಿಂದ ಬಂದವರಾಗಿರುತ್ತಾರೆ.

ಅವರಿಗೆ ಕನ್ನಡವನ್ನು ಕಲಿಸಿದರೆ ಕನ್ನಡ ಇಡೀ ದೇಶಾದ್ಯಂತ ಕನ್ನಡ ಪಸರಿಸುವ ಅವಕಾಶವಿದೆ. ಅದಕ್ಕಾಗಿ ಕರ್ನಾಟಕದಲ್ಲಿ ವರ್ಷಕ್ಕಿಂತ ಮೇಲ್ಪಟ್ಟು ಕೆಲಸ ಮಾಡುವವರಿಗೆ, ಸ್ಥಿರಾಸ್ತಿ ಅಥವಾ ವಾಹನವನ್ನು ಕೊಂಡುಕೊಳ್ಳುವವರಿಗೆ, ಕನಿಷ್ಟ ಮಟ್ಟದ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಕನ್ನಡೇತರರು ಕನ್ನಡವನ್ನು ಕಲಿಯಲು ಅನುಕೂಲವಾಗುವ ಹಾಗೆ ಕನ್ನಡ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಬೇಕು. ಈ ಕಲಿಕಾ ಕೇಂದ್ರಗಳಲ್ಲಿ ಕನ್ನಡದಲ್ಲಿ ಪದವಿಗಳಿಸಿದವರಿಗೆ ಅವಕಾಶಕೊಟ್ಟರೆ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೂ ಅನುಕೂಲ ಮತ್ತು ಕನ್ನಡ ಕನ್ನಡವನ್ನು ಪ್ರಸಾರ ಮಾಡಲು ಕೂಡ ಅನುಕೂಲವಾಗುತ್ತದೆ.

ಕರ್ನಾಟಕದಲ್ಲಿರುವ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ ಕನ್ನಡವನ್ನು ಕಲಿಸುವ ಕಾರ್ಯಕ್ರಮವನ್ನು ಜವಾಬ್ದಾರಿ ಯನ್ನು ವಹಿಸಬೇಕು. ಕನ್ನಡ ನಾಡಿನಲ್ಲಿ ಹುಟ್ಟಿರುವ ಕಂಪನಿಗಳು, ಕನ್ನಡದ ನೆಲ – ಜಲ ಉಪಯೋಗಿಸುವ ಕಂಪನಿಗಳಿಗೆ, ಕನ್ನಡವನ್ನು ಬೆಳೆಸುವ ಜವಾಬ್ದಾರಿಯನ್ನು ನುಣಿಚಿಕೊಳ್ಳುವುದು ಸರಿಯಲ್ಲ. ಬಹುಭಾಷಿಕರು ಇರುವ ಗಡಿಜಿಲ್ಲೆಗಳಲ್ಲಿ ಮತ್ತು ಗಡಿನಾಡ ಜಿಲ್ಲೆಗಳಲ್ಲಿ ಕನ್ನಡ ವಿಸ್ತರಿಸಬೇಕು. ಗಡಿ ಜಿಲ್ಲೆಗಳಲ್ಲಿ ಕನ್ನಡ ಕಷ್ಟದ ಪರಿಸ್ಥಿತಿಯಲ್ಲಿ ಇದೆ. ಗಡಿ ಜಿಲ್ಲೆಗಳಲ್ಲಿನ ಕನ್ನಡ ಶಾಲೆಗಳನ್ನು ವಿಶೇಷ ಅನುದಾನಗಳನ್ನು ನೀಡಿ, ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಸುಸ್ಥಿತಿಯಲ್ಲಿಡುವ ಹಾಗೂ ನಡೆಸುವ ಜವಾಬ್ದಾರಿಯನ್ನು ಅತ್ಯವಶ್ಯಕ. ಶಾಲೆಗಳು ಬರಿ ಸುಂದರವಾಗಿದ್ದರೆ ಸಾಲದು ಅಲ್ಲಿರುವ ಪ್ರಾಧ್ಯಾಪಕರ ಗುಣಮಟ್ಟ ವನ್ನು ಖಂಡಿತ ಹೆಚ್ಚಿಸಬೇಕು.

ತಾನು ಓದುವಾಗ ಶೇಕಡ 50ರಷ್ಟು ಅಂಕಗಳನ್ನು ಗಳಿಸದ ಪ್ರಾಧ್ಯಾಪಕ, ಹೇಗೆ ಮಕ್ಕಳನ್ನು ಹೆಚ್ಚಿನ ಅಂಕ ಗಳಿಸಲು ಪ್ರೇರೆಪಿ ಸಲು ಸಾಧ್ಯ? . ಬರೀ ಮಕ್ಕಳ ಭವಿಷ್ಯ ದೃಷ್ಟಿಯಿಂದ ಮಾತ್ರವಲ್ಲ , ಕನ್ನಡದ ಭವಿಷ್ಯವನ್ನು ಕೂಡ ಗಮನದಲ್ಲಿಟ್ಟುಕೊಂಡು
ಅತ್ಯಂತ ಗುಣಮಟ್ಟದ ಪ್ರಾಧ್ಯಾಪಕರನ್ನು ಕನ್ನಡ ಶಾಲೆಗಳಲ್ಲಿ ನೇಮಿಸುವ ಅಗತ್ಯಗಳಿವೆ. ಕೇವಲ ಗುಣಮಟ್ಟಕ್ಕೆ ಆದ್ಯತೆ ಕೊಟ್ಟು, ಯಾವುದೇ ಮುಲಾಜಿಲ್ಲದೆ ಶಿಕ್ಷಕರನ್ನು ನೇಮಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕಿದೆ. ಇದರ ಫಲ, ಗುಣ ಮಟ್ಟದ ಶಿಕ್ಷಣ ವರ್ಗದ ಮಕ್ಕಳಿಗೂ ಸಿಗುತ್ತದೆ. ಕನ್ನಡಕ್ಕೂ ಸಿಗುತ್ತದೆ.

ಗಡಿನಾಡ ಜಿಲ್ಲೆಯಾದ ಕಾಸರಗೋಡಿನಲ್ಲಿ ಕನ್ನಡವನ್ನು ಹೃದಯದ ಭಾಷೆಯಾಗಿ ಇಟ್ಟುಕೊಂಡು, ಭಾಷಾಭಿಮಾನದಿಂದ
ಕನ್ನಡವನ್ನು ಉಳಿಸಲು ಯತ್ನಿಸುತ್ತಿದ್ದಾರೆ. ಆದರೆ ಅಲ್ಲಿಯ ಸರಕಾರಗಳು, ಕನ್ನಡ ಶಾಲೆಗಳಲ್ಲಿ ಕನ್ನಡ ಬಾರದ  ಪ್ರಾಧ್ಯಾಪಕ ರನ್ನು ನೇಮಿಸುವುದರ ಮೂಲಕ, ಕನ್ನಡ ಶಾಲೆಗಳನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದೆ. ಇಂತಹ ಪ್ರಯತ್ನಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರೂ ಕೂಡ ಕೇಳಿಸಿಕೊಳ್ಳುವ ಮಟ್ಟದಲ್ಲಿ ಅಲ್ಲಿನ ಸರಕಾರಗಳು ಇಲ್ಲ. ಇಂತಹ ಅಕ್ಷಮ್ಯ ಅಪರಾಧ ಗಳನ್ನು ಕರ್ನಾಟಕ ಸರಕಾರಗಳು, ಪಕ್ಷಗಳು ಮತ್ತು ಸಂಘಟನೆಗಳು ಗಂಭೀರವಾಗಿ ತೆಗೆದುಕೊಂಡು, ಇದನ್ನು ರಾಷ್ಟ್ರಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಬೇಕು.

ಹಾಗೆ ಮಾಡುವ ಮೂಲಕ ಅಲ್ಲಿನ ಜನರಿಗೆ ನೈತಿಕ ಬಲವನ್ನು, ನೈತಿಕ ಸ್ಥೈರ್ಯವನ್ನು ತುಂಬುವುದು ಅಲ್ಲದೆ ಕನ್ನಡವನ್ನು ಗಡಿಯಾಚೆ ವಿಸ್ತರಿಸಲು ಪ್ರಯೋಜನವಾಗುತ್ತದೆ. ಕಾಸರಗೂಡಿನಂಥ ಗಡಿಯಾಚೆಯ ಕನ್ನಡ ಶಾಲೆಗಳನ್ನು ದತ್ತು ಪಡೆಯಲು ಸಾಧ್ಯವೇ ಎಂಬುದನ್ನು ಕೂಡ ಸರಕಾರ ಗಮನಹರಿಸಬೇಕಾಗಿದೆ. ಕನ್ನಡದ ಹೋರಾಟ ಗಡಿಯಾಚೆಗೆ ನೆಡೆದರೆ ಕನ್ನಡದ ಗಡಿಗಳು ಸುರಕ್ಷಿತವಾಗಿರುತ್ತವೆ. ಇದೇ ತಂತ್ರವನ್ನು ಮರಾಠಿಗರು ಬೆಳಗಾವಿಯಂಥ ಜಿಲ್ಲೆಗಳಲ್ಲಿ ಪ್ರಯೋಗಿಸುತ್ತಿದ್ದಾರೆ. ಧರ್ಮ ಗಳು ಬೆಳೆಯಲು ಒತ್ತಾಯ, ಆಮಿಷ ಮತ್ತು ವಿಶ್ವಾಸ ಅಸ್ತ್ರಗಳನ್ನು ಬಳಸುತ್ತವೆ. ಅದೇ ರೀತಿ ಹಿಂದಿಯನ್ನು ಬೆಳೆಸಲು ಕೇಂದ್ರ ಸರಕಾರ ಇದೆ ಮಂತ್ರವನ್ನು ಕಾನೂನಾತ್ಮಕವಾಗಿ ಪ್ರಯೋಗಿಸುತ್ತಿದೆ.

ಈ ಮೂರೂ ಅಂಶಗಳನ್ನು ಇಟ್ಟುಕೊಂಡು ಕರ್ನಾಟಕದಲ್ಲಿ ಕೂಡ ಆಡಳಿತಾತ್ಮಕ ಬದಲಾವಣೆಗಳನ್ನು ಅವಶ್ಯಕತೆ ಇದೆ. ಇದುವರೆಗೂ ಕನ್ನಡಿಗರು ರಕ್ಷಣಾತ್ಮಕವಾಗಿ ಕನ್ನಡ ಉಳಿವಿಗೆ ಪ್ರಯತ್ನಿಸಿದ್ದು , ಅಷ್ಟು ಪ್ರಯೋಜನಕಾರಿಯಾಗಿ ಫಲಿತಾಂಶ ನೀಡಿಲ್ಲ. ಮುಂದೆ ಆಕ್ರಮಣಾತ್ಮಕವಾಗಿ ಹೆಜ್ಜೆ ಇಡಬೇಕಿದೆ . ಕನ್ನಡ ಅಳಿವಿನಂಚಿಗೆ ಬಂದು ನಿಂತಿದೆ ಎಂಬ ವಿಷಯ ಮೊದಲು ಒಪ್ಪಿಕೊಂಡರೆ ಮಾತ್ರ ಆಕ್ರಮಣತ್ಮಕ ಹೆಜ್ಜೆ ಸಾಧ್ಯ. ಕನ್ನಡ ಇಂದು ಅಳಿವು ಉಳಿವಿನ ಅಂಚಿಗೆ ಬಂದು ನಿಂತಿದೆ ನಿಂತಿರುವ ಸಂದರ್ಭದಲ್ಲಿ, ಮೆರವಣಿಗೆ , ಸನ್ಮಾನ, ಪ್ರಶಸ್ತಿಗಳಿಂದಾಚೆಗೆ ಕನ್ನಡ ಪ್ರಚಾರ ವಿಸ್ತರಿಸಬೇಕು.

ಕೊನೆಮಾತು: ಕೋಳಿಮಾಂಸದ ಅಂಗಡಿಗಳಲ್ಲಿ ಫಾರಂ ಇರುವ ಗೂಡುಗಳ ಬಾಗಿಲನ್ನು ತೆರೆದೇ ಇಟ್ಟಿರುತ್ತಾರೆ . ಅಲ್ಲಿರುವ
ಕೋಳಿಗಳನ್ನು ಒಂದೊಂದಾಗಿ ತೆಗೆದು, ಅದನ್ನು ಕತ್ತರಿಸಲಾಗುತ್ತದೆ. ಇದು ಕಣ್ಮುಂದೆಯೇ ನಡೆಯುತ್ತಿದ್ದರೂ ಕೂಡ, ಗೂಡಿ ನಲ್ಲಿರುವ ಫಾರಂ ಕೋಳಿಗಳು ಅಲ್ಲಿಂದಪಾರಾಗುವ ಯಾವುದೇ ಪ್ರಯತ್ನವನ್ನೂ ಮಾಡುವುದಿಲ್ಲ. ತಮ್ಮ ಸರದಿ ಬಂದಾಗ
ನೋಡಿಕೊಳ್ಳೋಣ ಎಂಬ ಮನೋಭಾವ ಇರಬಹುದು. ಆದರೆ ತಮ್ಮ ಸರದಿ ಬಂದಾಗ ಅವುಗಳು ಅಲ್ಲಿಂದ ಪಾರಾಗುವ ಯಾವುದೇ ಪ್ರಯತ್ನಗಳು ಸಫಲ ವಾಗುವುದಿಲ್ಲ.

ಅದೇ ನಾಟಿ ಕೋಳಿಗಳನ್ನು ಕೂಡಿಟ್ಟಿರುವ ಪಂಜರಗಳನ್ನು ನೋಡಿ. ಅವುಗಳ ದ್ವಾರಗಳು ಯಾವಾಗಲೂ ಮುಚ್ಚಿರುತ್ತವೆ.
ಏಕೆಂದರೆ ಅವುಗಳು ಕಣ್ಣಮುಂದೆಯೇ ತಮ್ಮ ಬಾಂಧವರು ಕೊಲೆಯಾಗುತ್ತಿರುವುದು ನೋಡಿದರೆ ತಮ್ಮ ಸರದಿ ಬರುವವರೆಗೂ
ಕಾಯದೆ ಅಲ್ಲಿಂದ ಪಾರಾಗಲು ಪ್ರಯತ್ನಿಸುತ್ತವೆ.

ನಮ್ಮ ಕಣ್ಣಮುಂದೆಯೇ ಎಲ್ಲಾ ಭಾಷೆಗಳಿಗೂ ಮಾತೃಭಾಷೆಯಾದ ಸಂಸ್ಕೃತಕ್ಕೆ ಆದ ಅವನತಿ ನೋಡಿದ್ದೇವೆ . ಸಂಸ್ಕೃತ ಭಾರತದ ಯಾವುದೇ ರಾಜ್ಯದಲ್ಲಿ ಪ್ರಮುಖ ಭಾಷೆಯಾಗಿ ಉಳಿದುಕೊಂಡಿಲ್ಲ. ನಮಗೆ ಅಂತಹ ಪರಿಸ್ಥಿತಿ ಕನ್ನಡಕ್ಕೆ ಬರುವ
ಮುನ್ನವೇ ನಾವು ನಾಟಿಕೋಳಿಗಳ ಹಾಗೆ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕಾಗಿದೆ.

Leave a Reply

Your email address will not be published. Required fields are marked *