Monday, 25th November 2024

Rangaswamy Mookanahally column: ವಾತಾವರಣ ಬದಲಾವಣೆಯೂ ವ್ಯಾಪಾರ !

climatechange

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಪ್ರತಿ ವರ್ಷ ಜೂನ್ ತಿಂಗಳ ೫ನೇ ದಿನವನ್ನ ವಿಶ್ವ ಪರಿಸರ ದಿನವೆಂದು ಆಚರಿಸಲಾಗುತ್ತದೆ. ಆ ದಿನ ಸಾಮಾಜಿಕ ಜಾಲತಾಣದಲ್ಲಿ ಅಬ್ಬರ! ಹೌದು, ‘ನೀರು ಉಳಿಸಿ, ಗಿಡ ಬೆಳೆಸಿ’ ಎನ್ನುವುದು, ಅರಣ್ಯನಾಶದ ಬಗ್ಗೆ ವಿಷಾದ ವ್ಯಕ್ತಪಡಿಸುವುದು ಹೀಗೆ ಒಂದಲ್ಲ ಹಲವು ರೀತಿಯ ಸಂದೇಶಗಳನ್ನ ತಮ್ಮ ಗೋಡೆಯ ಮೇಲೆ ಹಂಚಿಕೊಂಡು ಪ್ರತಿಯೊಬ್ಬರೂ ಆ ದಿನದ ಮಟ್ಟಿಗೆ ಪುಟ್ಟ ಪರಿಸರವಾದಿಗಳಾಗಿ ಪರಿವರ್ತನೆಗೊಂಡಿರುತ್ತಾರೆ. ಇದೊಂದು ಸಮೂಹ ಸನ್ನಿ! ಇಂಥ ಸಮೂಹ ಸನ್ನಿ ರಸ್ತೆಗಿಳಿದು ಕೆಲಸ ಮಾಡುವ ಮಟ್ಟಕ್ಕೆ ಬೆಳೆದುಬಿಟ್ಟರೆ ಸಾಕು! ಅಲ್ಲಿಗೆ ನಾವು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪ್ಲಾನೆಟ್ ಬಿಟ್ಟು ಹೋಗಬಹದು. ಇಷ್ಟೆ ಪೀಠಿಕೆ ಹಾಕುವ ಉದ್ದೇಶ ಬಹಳ ಸರಳ.

ಗಮನಿಸಿ ನೋಡಿ, ಜಗತ್ತಿನಲ್ಲಿ ಯಾವುದೇ ಅತಿ ಸಣ್ಣ ಅಥವಾ ಅತಿ ದೊಡ್ಡ ಘಟನೆ ಘಟಿಸಲಿ ಆದರೆ ಹಿಂದೆ ‘ಹಣ’ ಎನ್ನುವುದು ಇದ್ದೇ ಇರುತ್ತದೆ. ಬದುಕಿಗೆ ಉಸಿರು ಹೇಗೋ ಹಾಗೆ ಜಗತ್ತಿಗೆ ‘ಹಣ’ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಅವಶ್ಯಕ ಹಣವನ್ನ ಗಳಿಸಲು ಮನುಷ್ಯ ಯಾವ ಹಂತಕ್ಕೂ ಹೋಗಬಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಆನೆಗಳ ಕೊಂದು ಅವುಗಳ ದಂತವನ್ನ, ಕಾಡನ್ನ ಕಡಿದು ಮರವನ್ನ ಮಾರಿ ಕೊಂಡ ಒಬ್ಬ ವೀರಪ್ಪನ್ ಹೆಸರು ನೆನಪಿಗೆ ಬರುತ್ತದೆ. ಇಂಥ ವೀರಪ್ಪನ್ ವ್ಯವಸ್ಥೆಯ ಅತ್ಯಂತ ಚಿಕ್ಕ ಕೊಂಡಿ. ಅಮೆರಿಕ, ಯುರೋಪ್, ಚೀನಾ ದೇಶಗಳು ವಿಶ್ವದ ದೊಡ್ಡಣ್ಣನಾಗುವ ಜಟಾಪಟಿಯಲ್ಲಿ ಯಾವುದನ್ನೂ ಲೆಕ್ಕಿಸದೆ ತಾವು ಕುಳಿತ ಕೊಂಬೆಯನ್ನೇ ಕತ್ತರಿಸುವ ಹುಂಬತನಕ್ಕೆ ಬಿದ್ದಿದ್ದಾರೆ. ಈಗಾಗಲೇ ನಮ್ಮ ಭೂಮಿಗೆ ನಾವು ಹೊಡೆದಿರುವ ಮೊಳೆಗಳಿಗೆ ಲೆಕ್ಕ ಇಡುವರಾರು? ಹಾಗೆಂದು ಪ್ರಕೃತಿ ಸುಮ್ಮನೆ ಬಿಡುವುದಿಲ್ಲ. ನಾವು ಮಾಡಿದ ತಪ್ಪುಗಳಿಗೆ ಅದು ದಂಡ ವಿಧಿಸುತ್ತದೆ, ಖಂಡಿತ.

ಕ್ಲೈಮೇಟ್ ಚೇಂಜ್ ಅಥವಾ ವಾತಾವರಣ ಬದಲಾವಣೆ ಎಂಬುದು ಕಳೆದ ಒಂದು ದಶಕದಿಂದ ಹೆಚ್ಚಾಗಿ ಚಾಲ್ತಿಗೆ ಬಂದಿರುವ ಪದ. ಪ್ರಕೃತಿಯಲ್ಲಿರುವ ನೈಸರ್ಗಿಕ ಸಂಪತ್ತನ್ನ ಹಿತ ಮಿತವಾಗಿ ಬಳಸುತ್ತಾ ಬಂದಿದ್ದರೆ ಎಲ್ಲರಿಗೂ ಒಳ್ಳೆಯದಿತ್ತು. ಅಮೆರಿಕ ಎನ್ನುವ ದೇಶ ಕೈಗಾರಿಕಾ ಕ್ರಾಂತಿಗೆ ಮುಂದಾಗುತ್ತದೆ. ಈ ಕ್ರಾಂತಿಯ ಮೂಲಕ ಅದು ಸೃಷ್ಟಿ ಮಾಡಿದ ಸಂಪತ್ತು, ಅಲ್ಲಿನ ಜನರ ಜೀವನದಲ್ಲಿ ಅದ ಬದಲಾವಣೆ ಜಗತ್ತಿನ ಇತರ ರಾಷ್ಟ್ರಗಳ ಕಣ್ಣನ್ನ ಕೂಡ ಕುಕ್ಕುತ್ತದೆ. ಉಳಿದದ್ದು ಇತಿಹಾಸ. ಒಬ್ಬರ ಹಿಂದೆ ಒಬ್ಬರು ಹಠಕ್ಕೆ ಬಿದ್ದವರಂತೆ ತಮ್ಮ ದೇಶದ ನೈಸರ್ಗಿಕ ಸಂಪನ್ಮೂಲವನ್ನ ಲೂಟಿ ಹೊಡೆದರು. ಅದು ಸಾಲದು ಎನ್ನಿಸಿದಾಗ ಇತರ ಬಡ ದೇಶಗಳಿಂದ ಅದನ್ನ ಆಮದು ಮಾಡಿಕೊಂಡು ಅದನ್ನ ಸಿದ್ಧವಸ್ತುವನ್ನಾಗಿ ಮಾರ್ಪಡಿಸಿ ಮತ್ತೆ ಅದನ್ನ ಹೆಚ್ಚಿನ ಬೆಲೆಗೆ ಅದೇ ಬಡ ದೇಶಗಳಿಗೆ ರಫ್ತು ಮಾಡಲು ಶುರು ಮಾಡಿದವು.

ಇದೊಂದು ವಿಷವರ್ತುಲ. ಒಮ್ಮೆ ಇಂಥ ಚಕ್ರದಲ್ಲಿ ಸಿಕ್ಕರೆ ಅಲ್ಲಿಗೆ ಮುಗಿಯಿತು. ಹೀಗೆ ಪ್ರಕೃತಿಗೆ ಆಗಿರುವ ಹಾನಿಯ ಮೊತ್ತ ಇಷ್ಟು ಎಂದು ಸಂಖ್ಯೆಯಲ್ಲಿ ಹೇಳಿದರೆ ಅದು ಒಂದು ಅಂದಾಜು ಸಂಖ್ಯೆಯೇ ಹೊರತು ನಿಜವಾಗಿ ಆದ ಹಾನಿಯನ್ನ ವರ್ಣಿಸಲು ಕೂಡ ಸಾಧ್ಯವಿಲ್ಲ. ೨೦/೩೦ ವಯಸ್ಸಿನ ಜನರು ಹೃದಯಾಘಾತ, ಕ್ಯಾನ್ಸರ್‌ನಂಥ ಮಾರಕ ರೋಗದಿಂದ ಸಾಯುತ್ತಿದ್ದಾರೆ. ಒತ್ತಡ ಮತ್ತು ಮಾನಸಿಕ ಖಿನ್ನತೆಗಳು ‘ಹಣ’ದ
ಹಿಂದಿನ ಓಟದ ಬಳುವಳಿಗಳು. ವಾತಾವರಣ ಬದಲಾವಣೆಯಿಂದ ಆಗುವ ತೊಂದರೆಗಳನ್ನ ಪಟ್ಟಿ ಮಾಡುತ್ತಾ ಹೋದರೆ ಅದೊಂದು ವಿಜ್ಞಾನ ಬರಹವಾಗುತ್ತದೆ.

ಇಲ್ಲಿನ ಉದ್ದೇಶ ವಾತಾವರಣ ಬದಲಾವಣೆಗೆ ಜಗತ್ತಿನ ದೊಡ್ಡ ಮತ್ತು ಅತಿ ದೊಡ್ಡ ಸಂಸ್ಥೆಗಳು ಏನು ಮಾಡುತ್ತಿವೆ? ಎನ್ನುವುದನ್ನ ತಿಳಿದುಕೊಳ್ಳುವುದು. ೨೦೧೮ರಲ್ಲಿ ಜಗತ್ತಿನ ೭೦೦೦ ಸಂಸ್ಥೆಗಳು ಕಾರ್ಬನ್ ಡಿಸ್
ಕ್ಲೋಶರ್ ಮಾಡುವ ಒಂದು ಸರ್ವೆಯಲ್ಲಿ ಪಾಲ್ಗೊಂಡು ವಿವರಗಳನ್ನ ಹಂಚಿಕೊಂಡಿವೆ. ಇನ್ನೂ ಸಾವಿರಾರು ಸಂಸ್ಥೆಗಳು ಈ ಸಮಸ್ಯೆಯನ್ನ ಇನ್ನೂ ಅಷ್ಟೊಂದು ತೀವ್ರವಾಗಿ ತೆಗೆದುಕೊಂಡಿಲ್ಲ. ಇಂಥ ಒಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ೮೦ ಪ್ರತಿಶತ ಸಂಸ್ಥೆಗಳು ಇದೊಂದು ಜಾಗತಿಕ ಸಮಸ್ಯೆ ಇದಕ್ಕೆ ಪರಿಹಾರ ಅತ್ಯಂತ ಬೇಗ ಕಂಡುಕೊಳ್ಳಬೇಕಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿವೆ. ಹೀಗೆ ಹದಗೆಡುತ್ತಿರುವ ವಾತಾ ವರಣವನ್ನ ಒಂದು ಹಂತಕ್ಕೆ ತರಲು ಆಗುವ ಖರ್ಚು ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಎನ್ನುವ ಅಂದಾಜು ಖರ್ಚಿನ ಲೆಕ್ಕವನ್ನ ಮುಂದಿಟ್ಟಿವೆ. ಇದೆಷ್ಟು ದೊಡ್ಡ ಹಣ ಎನ್ನುವುದಕ್ಕೆ ಒಂದರ ಮುಂದೆ ೧೨ ಸೊನ್ನೆ ಹಾಕಿ ನೀವೇ ಲೆಕ್ಕ ಹಾಕಿ! ಟೆಕ್ನಾಲಜಿ, ಜಗತ್ತು ಎಷ್ಟೆ ಮುಂದುವರಿದಿವೆ ಎಂದು ಉಬ್ಬುವ ನಾವು ಬದುಕಿನ ಸಾಮಾನ್ಯ ತತ್ವವನ್ನ ಮರೆತದ್ದು ಇದಕ್ಕೆ ಕಾರಣ. ಇದು ಹೇಗಾಯಿತೆಂದರೆ ನಿದ್ದೆಗೆಟ್ಟು ವಾರಗಟ್ಟಲೆ ಹಣವನ್ನ ಸಂಪಾದಿಸಿ ಅದರ ೯೦ ಪ್ರತಿಶತ ಹಣವನ್ನ ಸ್ಲೀಪ್ ಡಿಸಾರ್ಡರ್ ಗುಣಪಡಿಸಲು ಖರ್ಚು ಮಾಡಿದಂತೆ!

ಎಂಥ ಸಮಯದಲ್ಲೂ ಲಾಭ-ನಷ್ಟದ ಲೆಕ್ಕಾಚಾರ ಹಾಕುವ ಪಕ್ಕಾ ವ್ಯಾಪಾರಿ ಮನೋಭಾವದ ಸಂಸ್ಥೆಗಳು ಇದರಲ್ಲಿ ಕೂಡ ಒಂದು ಹೊಸ ವ್ಯಾಪಾರ ಕಂಡಿವೆ. ಮುಂಬರುವ ದಿನಗಳಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಇಲೆಕ್ಟ್ರಿಕ್ ಕಾರುಗಳ ಬೇಡಿಕೆ ಗಗನ ಮುಟ್ಟಲಿದೆ. ಇಂಥ ಸಂಸ್ಥೆಗಳ ವ್ಯಾಪಾರ ವಹಿವಾಟಿನ ಅಂದಾಜು ೨.೧ ಟ್ರಿಲಿಯನ್ ಅಮೆರಿಕನ್ ಡಾಲರ್. ಅಂದರೆ ವಾತಾವರಣ ಕೆಡದಂತೆ ತಡೆಯಲು ಮಾಡುವ ಖರ್ಚಿನ ಎರಡು ಪಟ್ಟು ವ್ಯಾಪಾರದ ವಾಸನೆ ಅವುಗಳ ಮೂಗಿಗೆ ಆಗಲೇ ಬಡಿದಿದೆ. ವಿಶ್ವ ಬದುಕುವ ರೀತಿಯನ್ನ ನಿರ್ಧರಿಸುವ ಕೆಲವೇ ಕೆಲವು ಮಂದಿ, ಮುಂದಿನ ದಿನಗಳು ಹೀಗಿರಬೇಕು ಎನ್ನುವ ನೀಲಿನಕ್ಷೆಯನ್ನ ಬರೆಯುವುದರಲ್ಲಿ ಮಗ್ನರಾಗಿದ್ದಾರೆ. ಈ ಮಧ್ಯೆ ಅಮೆರಿಕದ ಅಧ್ಯಕ್ಷರು, ‘ಚೀನಾ ಮತ್ತು ಭಾರತ ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’ ಎನ್ನುವ ಹೇಳಿಕೆ ಕೊಟ್ಟಿದ್ದಾರೆ.

ಅಮೆರಿಕ ಮತ್ತು ಚೀನಾ ದೇಶಗಳು ಭೂಮಿಗೆ ಮಾಡಿರುವ ಹಾನಿಯ ಹತ್ತನೇ ಒಂದು ಭಾಗವನ್ನೂ ಮಾಡಿರದ ಭಾರತವನ್ನ ಕೂಡ ಸೇರಿಸಿ ಅವರು ಹೇಳಿಕೆ ಕೊಟ್ಟಿರುವುದು ಭಾರತದ ಇತ್ತೀಚಿನ ದಿನಗಳ ಓಟಕ್ಕೆ ಸಿಕ್ಕ ಬಳುವಳಿ. ವರ್ಷದಿಂದ ವರ್ಷಕ್ಕೆ ಹೆಚ್ಚು ತಯಾರಾಗುತ್ತಿರುವ ಮೊಬೈಲ್ ಮತ್ತು ಲ್ಯಾಪ್ ಟಾಪ್, ಕಂಪ್ಯೂಟರ್‌ಗಳು ತಲೆನೋವಾಗಿ ಬದಲಾಗಲಿವೆ. ಬಳಸಿ ಕೆಟ್ಟ ಇಂಥ ಡಿವೈಸ್‌ಗಳನ್ನ ಬಿಸಾಕುವುದಾದರೂ ಎಲ್ಲಿ? ಹಾಗೆಯೇ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳು ನೇಪಥ್ಯ ಸೇರಲಿವೆ. ಇವುಗಳ ಹಲವು ಭಾಗವನ್ನು ಮರುಬಳಕೆ ಮಾಡಿಕೊಂಡರೂ ಉಳಿದದ್ದನ್ನು ಎಸೆಯುವುದೆಲ್ಲಿ? ಹೀಗೆ ಒಂದಲ್ಲ ಹತ್ತು ಪ್ರಶ್ನೆಗಳು, ಸವಾಲುಗಳು ನಮ್ಮ ಮುಂದಿವೆ. ಇವತ್ತು ಎಲ್ಲವನ್ನೂ ಹಣದ ಮೂಲಕ ಅಳೆಯುತ್ತೇವೆ.

ಜಗತ್ತಿನ ಶ್ರೀಮಂತರ ಪಟ್ಟಿಯನ್ನ ಬಿಡುಗಡೆ ಮಾಡುವ ‘ಫೋರ್ಬ್ಸ್’ ಸಂಸ್ಥೆ ಇಂಥ ಸಾಹುಕಾರರ ಒಟ್ಟು ಮೌಲ್ಯ ಇಷ್ಟು ಎಂದು ನಮೂದಿಸುತ್ತದೆ. ಸಮಯವಲ್ಲದ ಸಮಯ ದಲ್ಲಿ ಮಳೆ, ಚಳಿ, ಗಾಳಿ ಇವುಗಳು ನಮ್ಮ ಮನೆಯನ್ನ ಮುಳುಗಿಸಿದರೆ? ಸದ್ಯ ಜೀವ ಉಳಿದರೆ ಸಾಕು ಎಂದು ಹಪಹಪಿಸುವ ಸಮಯ ಬಂದರೆ? ಆಗ ನಿಮ್ಮ ಮನೆಯ ಮೌಲ್ಯ ಎಷ್ಟಾದರೂ ಇರಲಿ ಅದನ್ನ ಕೊಳ್ಳುವವರು ಯಾರು? ಬ್ಯಾಂಕಿನಲ್ಲಿ ಇರುವ ನಿಮ್ಮ ಹಣದ ಮೊತ್ತ ಕೇವಲ ಕಂಪ್ಯೂಟರ್ ಪರದೆಯ ಮೇಲಿನ ಒಂದು ಸಂಖ್ಯೆಯಾಗಿ ಉಳಿದುಕೊಳ್ಳುತ್ತದೆ. ಬದುಕಿನ ಸಾಮಾನ್ಯ ಸೂತ್ರವಾದ ‘ಸರಳ ಬದುಕು, ಸುಂದರ ಬದುಕು’ ಎನ್ನುವುದನ್ನ ಮರೆತು ನಮ್ಮ ಗ್ರಹವನ್ನ ನಾವೇ ಕುಲಗೆಡಿಸಿದ್ದೇವೆ. ಅದನ್ನ ಸಾಧ್ಯವಾದಷ್ಟು ಪುನಃ ಕಟ್ಟುವ ಹೊಣೆ ನಮ್ಮ ಮೇಲಿದೆ. ಅದರಲ್ಲೂ ವ್ಯಾಪಾರಿ ಬುದ್ಧಿ, ಹಣ ಮಾಡಬೇಕು ಎನ್ನುವುದನ್ನ ಬಿಟ್ಟು ಒಮ್ಮನಸ್ಸಿನಿಂದ ಈ ಕಾರ್ಯ ಮಾಡಬೇಕಿದೆ.

ನಾಲ್ಕು ಜನ ಸೇರಿದ ಕಡೆ ಎಂಟು ಗುಂಪಾಗುವ ಮನುಷ್ಯ ಈ ಕಾರ್ಯ ದಲ್ಲಿ ಒಗ್ಗಟ್ಟು ತೋರಿಸಿಯಾನೆ? ಎನ್ನುವುದು ಸದ್ಯದ ಪ್ರಶ್ನೆ. ೯೦ರ ದಶಕದಲ್ಲಿ ಗ್ಲೋಬಲೈಸೇಷನ್ ಅರ್ಥಾತ್ ಜಾಗತೀಕರಣ ಹೆಚ್ಚು ಬಳಸಲ್ಪಟ್ಟ ಪದ. ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಭಾರತದ ಬಾಗಿಲನ್ನ ವಿಶ್ವಕ್ಕೆ ತೆರೆದದ್ದು, ನಂತರದ ದಿನಗಳಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ವೇಗ ಪಡೆದುಕೊಂಡು ಸುಧಾರಿಸಿದ್ದು ಈಗ ಇತಿಹಾಸ. ಮೇಲೆ ಹೋದದ್ದು ಕೆಳಗೆ ಬರಲೇಬೇಕು ಎನ್ನುತ್ತೆ ಒಂದು ಗಾದೆ. ಇದೀಗ ಎಲ್ಲೆಡೆ ಮತ್ತೆ ಗ್ಲೋಬಲೈಸೇಷನ್ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಈ ಬಾರಿ ಇದಕ್ಕೆ ವಿರುದ್ಧವಾಗಿ, ಜಗತ್ತಿನ ಬಿಗಡಾಯಿಸಿದ ಆರ್ಥಿಕ ಪರಿಸ್ಥಿತಿಗೆ ಜಾಗತೀಕರಣವೇ ಕಾರಣ ಎನ್ನುವುದು ಈಗ ಹೆಚ್ಚು ಬಲ ಪಡೆದುಕೊಳ್ಳುತ್ತಿರುವ ಕೂಗು. ‘ನಾವಾಯ್ತು ನಮ್ಮ ದೇಶವಾಯ್ತು’, ‘ಮೊದಲು ನಾವು ನಮ್ಮ ದೇಶ, ನಂತರ ಉಳಿದದ್ದು’ ಎನ್ನುವ ರಾಷ್ಟ್ರೀಯವಾದ ಎಡೆ ಮನ್ನಣೆ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ನೋಡಿದರೂ, ಕೆಲಸ ಮಾಡಲು ಶುರು ಮಾಡಿದರು ಕೂಡ ಅಂದರೆ ಎಲ್ಲರೂ ಅವರವರ ದೇಶವನ್ನು ಸರಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿದರೂ
ಸಾಕಷ್ಟು ಬದಲಾವಣೆ ಸಾಧ್ಯ. ಆದರೆ ಸದ್ಯದ ಮಟ್ಟಿಗೆ, ಜಗತ್ತಿನಲ್ಲಿನ ವಾತಾವರಣ ಬದಲಾವಣೆಗೆ ಯಥೇಚ್ಛ ಕೊಡುಗೆ ನೀಡಿರುವ ಅಮೆರಿಕ, ಚೀನಾ ಹಾಗೂ ಇತರ ದೇಶಗಳು ಮಾತ್ರ ನಿರ್ಲಿಪ್ತವಾಗಿವೆ.‌

ಇನ್ನೂ ಹೆಚ್ಚಿನ ‘ಸೆನ್ಸ್ ಆಫ್ ಅರ್ಜೆನ್ಸಿ’ಯನ್ನು ಅವುಗಳು ತೋರಬೇಕಿದೆ. ನಮ್ಮ ಬಳಿ ಹೆಚ್ಚಿನ ಸಮಯವಿಲ್ಲ. ೨೦೫೦ರ ವೇಳೆಗೆ‌ ಹಲವು ಕಡೆ ಬಿಸಿಲು ಹೆಚ್ಚಾಗುತ್ತದೆ, ಹಲವು ಕಡೆ ಚಳಿ, ಇನ್ನು ಕೆಲವು ಕಡೆ ಪ್ರವಾಹ. ಹೀಗೆ ಹಲವು ಹತ್ತು ಬದಲಾವಣೆಗಳಾಗುತ್ತವೆ. ಮುಂದಿನ ಐದು ವರ್ಷದಲ್ಲಿ ನಮ್ಮ ತಪ್ಪನ್ನ ತಿದ್ದಿಕೊಳ್ಳುವ ಕೆಲಸ ಮಾಡದಿದ್ದರೆ ತಪ್ಪಿಗೆ ತಕ್ಕ ಶಾಸ್ತಿ ಖಂಡಿತ ಆಗುತ್ತದೆ. ಆ ದಿನ ಯಾರೂ ‘ನಿಮ್ಮ ನೆಟ್ ವರ್ತ್ ಎಷ್ಟು?’ ಎಂದು ಕೇಳುವುದಿಲ್ಲ. ಎದೆ ಉಬ್ಬಿಸಿ ಹೇಳುವ ಹುಮ್ಮಸ್ಸು ನಿಮ್ಮಲ್ಲೂ ಇರುವುದಿಲ್ಲ!