Sunday, 24th November 2024

Viral News: ಅಳುತ್ತಿದ್ದ 1 ವರ್ಷದ ಹಸುಳೆಯನ್ನು ವಿಮಾನದ ಶೌಚಾಲಯಲ್ಲಿ ಲಾಕ್‌ ಮಾಡಿದ ಮಹಿಳೆಯರು

Viral News

ಬೀಜಿಂಗ್‌: ಚಿಕ್ಕ ಮಕ್ಕಳು ಇರುವುದೇ ಹಾಗೆ. ತಮ್ಮ ಭಾವನೆ ಮಾತಿನಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದೆ ಇದ್ದಾಗ ಅಳುವ ಮೂಲಕ ಪ್ರತಿಕ್ರಿಯಿಸುತ್ತವೆ. ಅದನ್ನು ಅರ್ಥ ಮಾಡಿಕೊಂಡು ಹಿರಿಯರಾದವರು ಸೂಕ್ತವಾಗಿ ಸ್ಪಂದಿಸಿದರೆ ಅವು ಅಳು ನಿಲ್ಲಿಸುತ್ತವೆ. ಆದರೆ ಇಲ್ಲಿ ಆಗಿದ್ದೇ ಬೇರೆ. ವಿಮಾನದಲ್ಲಿ ಪ್ರಯಾಣಿಸುವಾಗ ಅಳುತ್ತಿದ್ದ ಅಪರಿಚಿತ ಹೆಣ್ಣು ಮಗುವನ್ನು ಪ್ರಯಾಣಿಕರಿಬ್ಬರು ಶೌಚಾಲಯದಲ್ಲಿ ಕೂಡಿ ಹಾಕಿ ಅಮಾನುಷವಾಗಿ ವರ್ತೀಸಿದ್ದಾರೆ. ಸದ್ಯ ಈ ಕೃತ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ (Viral News).

ಈ ಅಮಾನವೀಯ ಘಟನೆ ಚೀನಾದಲ್ಲಿ ನಡೆದಿದೆ. ಕೃತ್ಯ ಎಸಗಿರುವವರ ಪೈಕಿ ಓರ್ವ ಮಹಿಳೆ ಸೋಷಿಯಲ್‌ ಮೀಡಿಯಾದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ವೀಡಿಯೊದಲ್ಲಿ ಸುಮಾರು ಒಂದು ವರ್ಷದ ಬಾಲಕಿ ಲಾಕ್ ಮಾಡಿದ ಶೌಚಾಲಯದೊಳಗೆ ಬಂಧಿಯಾಗಿರುವುದು ಕಂಡು ಬಂದಿದ್ದು, ನೆಟ್ಟಿಗರು ಕೃತ್ಯ ಎಸಗಿದವರನ್ನು ಬೆಂಡೆತ್ತಿದ್ದಾರೆ.

https://x.com/VOCPEnglish/status/1828782641585516770

ನೀವು ಅಳುವುದನ್ನು ನಿಲ್ಲಿಸದ ಹೊರತು ನಿನ್ನನ್ನು ಹೊರಗೆ ಬಿಡುವುದಿಲ್ಲ ಎಂದು ಶೌಚಾಲಯದಲ್ಲಿ ಕುಳಿತಿದ್ದ ಮಹಿಳೆ ತನ್ನ ತೊಡೆಯಿಂದ ಇಳಿದು ಬಾಗಿಲಿನತ್ತ ಅಂಬೆಗಾಲಿಟ್ಟು ತೆರಳಿದ ಮಗುವಿನ ಬಳಿ ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.  ಭಯದಿಂದಲೋ ಏನೋ ಸ್ವಲ್ಪ ಹೊತ್ತಿನಲ್ಲಿ ಹಸುಳೆ ಅಳವುದನ್ನು ನಿಲ್ಲಿಸಿದೆ. ಆಗ ಮತ್ತೆ ಬೆದರಿಕೆ ಹಾಕಿದ ಮಹಿಳೆ, ಮತ್ತೊಮ್ಮೆ ಸದ್ದು ಮಾಡಿದರೆ ಮತ್ತೆ ತಾನು ಶೌಚಾಲಯದ ಒಳಗೆ ಬರುವುದಾಗಿ ಎಚ್ಚರಿಸಿದ್ದಾಳೆ. ಆಗಸ್ಟ್‌ 24ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹಾಂಕಾಂಗ್‌ನ ನೈಋತ್ಯ ನಗರ ಗುಯಾಂಗ್‌ನಿಂದ ಶಾಂಘೈಗೆ ತೆರಳುತ್ತಿದ್ದ ಜುನಿಯಾವೊ ಏರ್‌ಲೈನ್ಸ್‌ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಮಗು ತನ್ನ ಅಜ್ಜಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಮಹಿಳೆಯರಿಬ್ಬರು ಈ ಕೃತ್ಯ ಎಸಗಿದ್ದಾರೆ.  ಸುಮಾರು ಮೂರು ಗಂಟೆಗಳ ಹಾರಾಟದ ಸಮಯದಲ್ಲಿ ನಿರಂತರವಾಗಿ ಅಳುತ್ತಿತ್ತು ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಇಬ್ಬರು ಪ್ರಯಾಣಿಕರು ಮಗುವನ್ನು ಅಜ್ಜಿಯ ಒಪ್ಪಿಗೆಯೊಂದಿಗೆ ʼಸೂಕ್ತ ಪಾಠʼ ಕಲಿಸಲು ಶೌಚಾಲಯಕ್ಕೆ  ಕರೆದೊಯ್ದರು ಎಂದು ವಿವರಿಸಿದೆ. ಈ ಬಗ್ಗೆ ತೀವ್ರ ಟೀಕೆ ಕಂಡು ಬಂದ ಹಿನ್ನಲೆಯಲ್ಲಿ ವಿಮಾನಯಾನದ ಗ್ರಾಹಕ ಸೇವಾ ಇಲಾಖೆ ಘಟನೆಗೆ ಕ್ಷಮೆಯಾಚಿಸಿದೆ.  ಜತೆಗೆ ಆ ಇಬ್ಬರು ಪ್ರಯಾಣಿಕರ ನಡವಳಿಕೆಯನ್ನು ಖಂಡಿಸಿದೆ ಎಂದು ಮೂಲಗಳು ತಿಳಿಸಿವೆ.

ನೆಟ್ಟಿಗರು ಏನಂದ್ರು?

ಸದ್ಯ ಈ ವೀಡಿಯೊ ನೋಡಿದವರು ಮಹಿಳೆಯರ ವರ್ತನೆಗೆ ಕಿಡಿಕಾರಿದ್ದಾರೆ. ʼʼವಯಸ್ಸಾದ ಮೇಲೆ ಮನಸ್ಥಿತಿ ಬದಲಾಗುತ್ತದೆ ನಿಜ. ಹಾಗಂತ ಅಂಬೆಗಾಲಿಡುವ ಮಕ್ಕಳ ಮೇಲೆ ಇಂತಹ ಕ್ರೌರ್ಯ ಎಸಗುವುದು ಸಮಂಜಸವಲ್ಲʼʼ ಎಂದು ಒಬ್ಬರು ಹೇಳಿದ್ದಾರೆ. ʼʼನಾವೆಲ್ಲ ಒಂದುಕಾಲದಲ್ಲಿ ಮಕ್ಕಳಾಗಿದ್ದೆವು ಎನ್ನುವುನ್ನು ಮರೆಯಬೇಡಿʼʼ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ಜತೆಗೆ ಹಲವು ಮಂದಿ ಇಂತಹ ಕೃತ್ಯ ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ. ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಮಹಿಳೆ ಈ ವೀಡಿಯೊವನ್ನು ಡಿಲೀಟ್‌ ಮಾಡಿದ್ದಾಳೆ.