Thursday, 19th September 2024

Duleep Trophy: ದುಲೀಪ್‌ ಟ್ರೋಫಿಯ ಮೊದಲ ಪಂದ್ಯದಿಂದ ಹೊರಗುಳಿದ ಸೂರ್ಯಕುಮಾರ್‌

Duleep Trophy

ಮುಂಬಯಿ: ಬಾಂಗ್ಲಾದೇಶ ವಿರುದ್ಧದ ತವರಿನ ಟೆಸ್ಟ್‌ ಸರಣಿಯ ಭಾರತ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿ, ದುಲೀಪ್‌ ಟ್ರೋಫಿ(Duleep Trophy) ಆಡಲು ನಿರ್ಧರಿಸಿದ್ದ ಹಾರ್ಡ್‌ ಹಿಟ್ಟರ್‌ ಸೂರ್ಯಕುಮಾರ್‌ ಯಾದವ್‌(suryakumar yadav) ಅವರಿಗೆ ಹಿನ್ನಡೆಯಾಗಿದೆ. ಬುಚ್ಚಿಬಾಬು ಕ್ರಿಕೆಟ್‌ ಕೂಟದ ಪಂದ್ಯದಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದ ಸೂರ್ಯ ಸೆಪ್ಟೆಂಬರ್‌ 5ರಂದು ಆರಂಭವಾಗುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಒಂದೊಮ್ಮೆ ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖವಾಗದಿದ್ದರೆ, ಬಾಂಗ್ಲಾ ಟೆಸ್ಟ್‌ ಸರಣಿಗೆ ಆಯ್ಕೆಯಾಗುವುದು ಅನುಮಾನ.

ದುಲೀಪ್ ಟ್ರೋಫಿಗೆ ಸೂರ್ಯಕುಮಾರ್‌ ಅವರ ಅಲಭ್ಯತೆಯನ್ನು ಬಿಸಿಸಿಐ ಮೂಲಗಳು ಖಚಿತಪಡಿಸಿವೆ. ಭಾರತ ‘ಸಿ’ ಪರ ಸೂರ್ಯ ಅನಂತಪುರದಲ್ಲಿ ಸೆ. 5ರಿಂದ 8ರ ವರೆಗೆ ಮೊದಲ ಸುತ್ತಿನ ಹಣಾಹಣಿಯಲ್ಲಿ ಭಾರತ ‘ಡಿ’ ವಿರುದ್ಧ ಆಡಬೇಕಾಗಿತ್ತು. ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿ ಸೆಪ್ಟೆಂಬರ್‌ 19ರಿಂದ ಆರಂಭಗೊಳ್ಳಲಿದೆ. ಸೂರ್ಯಕುಮಾರ್‌ ಅವರು ಇದುವರೆಗೆ ಭಾರತ ಕೇವಲ ಒಂದು ಟೆಸ್ಟ್‌ ಪಂದ್ಯವನ್ನು ಮಾತ್ರ ಆಡಿದ್ದಾರೆ. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಅವರು 8 ರನ್‌ ಬಾರಿಸಿ ವಿಫಲರಾಗಿದ್ದರು.

ಸೂರ್ಯ ಭಾರತ ಪರ ಹೆಚ್ಚಾಗಿ ಆಡಿಡುವುದು ಟಿ20 ಕ್ರಿಕೆಟ್‌. ಇದುವರೆಗೆ 71 ಟಿ20 ಪಂದ್ಯಗಳಿಂದ 2432 ರನ್‌ ಬಾರಿಸಿದ್ದಾರೆ. ಇದರಲ್ಲಿ 4 ಶತಕ ಮತ್ತು 20 ಅರ್ಧಶತಕ ಒಳಗೊಂಡಿದೆ.  ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್​ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು.

ಮೊಹಮ್ಮದ್ ಸಿರಾಜ್(mohammed siraj) ಕೂಡ ಅನಾರೋಗ್ಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ನವದೀಪ್ ಸೈನಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಹಿರಿಯ ಆಟಗಾರ ರವೀಂದ್ರ ಜಡೇಜಾ(Ravindra Jadeja) ಅವರನ್ನು ಭಾರತ ‘ಬಿ’ ತಂಡದಿಂದ ಬಿಡುಗಡೆ ಮಾಡಲಾಗಿದೆ. ವೃತ್ತಿಪರ ಕ್ರಿಕೆಟ್​ಗೆ ಮರಳುವ ನಿರೀಕ್ಷೆಯಲ್ಲಿ ಜಮ್ಮ ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್(Umran Malik) ಕೂಡ ಅನಾರೋಗ್ಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಉಮ್ರಾನ್ ಬದಲಿಗೆ ಮಧ್ಯಪ್ರದೇಶದ ಮಧ್ಯಮ ವೇಗಿ ಗೌರವ್ ಯಾದವ್ ಭಾರತ ‘ಸಿ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಡೇಜಾ ಸ್ಥಾನಕ್ಕೆ ಬದಲಿ ಆಟಗಾರನನ್ನ ಹೆಸರಿಸಲಾಗಿಲ್ಲ. ಜಡೇಜಾ ದುಲೀಪ್ ಟ್ರೋಫಿಯಲ್ಲಿ ಕೇವಲ ಒಂದು ಪಂದ್ಯವನ್ನು ಆಡಿ ಬಳಿಕ ಬಾಂಗ್ಲಾದೇಶ ಟೆಸ್ಟ್​ ಸರಣಿಗೆ ಮುಂಚಿತವಾಗಿ ಭಾರತ ಶಿಬಿರಕ್ಕೆ ತೆರಳಬೇಕಿತ್ತು. ಆದರೆ ಬಿಸಿಸಿಐ ಅವರಿಗೆ ಕೊನೆಯ ಕ್ಷಣದಲ್ಲಿ ವಿಶ್ರಾಂತಿ ನೀಡಿದೆ. ಭಾರತ ‘ಎ’ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಿದರೆ, ‘ಡಿ’ತಂಡವನ್ನು ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದಾರೆ.