Sunday, 24th November 2024

ಅರಬ್ಬಿ ಸಮುದ್ರದಲ್ಲಿ ಕರಾವಳಿ ಭದ್ರತಾ ಪಡೆಯ ಹೆಲಿಕಾಪ್ಟರ್‌ನ ಎಮರ್ಜೆನ್ಸಿ ಲ್ಯಾಂಡಿಂಗ್‌; ಮೂವರು ನಾಪತ್ತೆ

Emergency Landing

ಗಾಂಧಿನಗರ: ಭಾರತೀಯ ಕರಾವಳಿ ಭದ್ರತಾ ಪಡೆ (Indian Coast Guard-ICG)ಯ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (Advanced Light Helicopter-ALH) ಅನ್ನು ಗುಜರಾತ್‌ನ  ಪೋರ್‌ ಬಂದರ್‌ನ ಸಮೀಪ ಅರಬ್ಬಿ ಸಮುದ್ರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಗ್‌ (Emergency Landing) ಮಾಡಲಾಗಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದ 4 ಮಂದಿ ಸಿಬ್ಬಂದಿಯ ಪೈಕಿ ಒಬ್ಬರನ್ನು ರಕ್ಷಿಸಲಾಗಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಹೆಲಿಕಾಪ್ಟರ್‌ನ ಅವಶೇಷ ಪತ್ತೆಯಾಗಿದೆ.   ಪ್ರಸ್ತುತ ಶೋಧ ಕಾರ್ಯಾಚರಣೆಗಾಗಿ 4 ಹಡಗುಗಳು ಮತ್ತು 2 ವಿಮಾನಗಳನ್ನು ಬಳಸಲಾಗುತ್ತಿದೆ.

ಹಡಗನ್ನು ಸ್ಥಳಾಂತರಿಸುವ ವೇಳೆ ಈ ಅವಘಢ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ʼʼಗುಜರಾತ್‌ನಲ್ಲಿ ಇತ್ತೀಚೆಗೆ ಬೀಸಿದ ಭೀಕರ ಚಂಡಮಾರುತದ ಸಮಯದಲ್ಲಿ 67 ಮಂದಿಯನ್ನು ಭಾರತೀಯ ಕರಾವಳಿ ಭದ್ರತಾ ಪಡೆ ಈ ಹೆಲಿಕಾಪ್ಟರ್ ಮೂಲಕ ರಕ್ಷಿಸಿತ್ತು. ಪೋರ್‌ಬಂದರ್‌ನಿಂದ ಸುಮಾರು 45 ಕಿ.ಮೀ. ದೂರದಲ್ಲಿ ಸಮುದ್ರದಲ್ಲಿ ಸಿಲುಕಿದ್ದ ಸಿಬ್ಬಂದಿಯೊಬ್ಬರನ್ನು ಸೋಮವಾರ ರಾತ್ರಿ ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆʼʼ ಎಂದು  ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

https://x.com/ANI/status/1830821610556924072

ದೋಷಪೂರಿತ ಹೆಲಿಕಾಪ್ಟರ್‌ ಏರ್‌ಲಿಫ್ಟ್‌ ವೇಳೆ ಭಾರೀ ದುರಂತ

ಕೆಲವು ದಿನಗಳ ಹಿಂದೆ ದೋಷಪೂರಿತ ಹೆಲಿಕಾಪ್ಟರ್ ಅನ್ನು ವಾಯುಪಡೆಯ ಎಂಐ-17 (MI-17 chopper) ಹೆಲಿಕಾಪ್ಟರ್‌ ಹೊತ್ತೊಯ್ಯುತ್ತಿದ್ದ ವೇಳೆ ಅಚಾನಕ್ಕಾಗಿ ಟೋಯಿಂಗ್ ಹಗ್ಗ ತುಂಡಾಗಿರುವ ಘಟನೆ ಉತ್ತರಾಖಂಡದ ಕೇದಾರನಾಥದಲ್ಲಿ ನಡೆದಿತ್ತು. ಹಗ್ಗ ತುಂಡಾಗಿ ಹೆಲಿಕಾಪ್ಟರ್‌ ಮಂದಾಕಿನಿ ನದಿ ಬಳಿ ಪತನಗೊಂಡಿತ್ತು.ಈ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌ ಆಗಿತ್ತು.

ಮೇ 24 ರಂದು ತಾಂತ್ರಿಕ ದೋಷದಿಂದಾಗಿ ಖಾಸಗಿ ಕಂಪನಿ ಒಡೆತನದ ಈ ಹೆಲಿಕಾಪ್ಟರ್‌ ಅನ್ನು ಕೇದಾರನಾಥ್‌ ಹೆಲಿಪ್ಯಾಡ್‌ನಲ್ಲಿ ತುರ್ತು ಭೂಸ್ಪರ್ಷ ಮಾಡಲಾಗಿತ್ತು. ಲ್ಯಾಂಡಿಂಗ್ ಸಮಯದಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು  ಎಂದು ರುದ್ರಪ್ರಯಾಗ ಪ್ರವಾಸೋದ್ಯಮ ರಾಹುಲ್ ಚೌಬೆ ಹೇಳಿದ್ದರು. ಹೀಗಾಗಿ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಗೌಚಾರ್ ಏರ್‌ಸ್ಟ್ರಿಪ್‌ಗೆ ದುರಸ್ತಿಗಾಗಿ ಕೊಂಡೊಯ್ಯುವ ಹಗ್ಗ ತುಂಡಾಗಿ ಅವಘಢ ಸಂಭವಿಸಿತ್ತು.ಭಾರೀ ಗಾಳಿಯಿಂದಾಗಿ ವಾಯುಪಡೆಯ ಹೆಲಿಕಾಪ್ಟರ್‌ಗೆ ದೋಷಪೂರಿತ ಹೆಲಿಕಾಪ್ಟರ್‌ನ ಸಮತೋಲನವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಅದು ಹಗ್ಗ ತುಂಡಾಗಿ ಕೆಳಕ್ಕೆ ಬಿದ್ದಿತ್ತು ಎಂದು ಚೌಬೆ ಮಾಹಿತಿ ನೀಡಿದ್ದರು.