ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ಜೀವನ ಮತ್ತು ಬದುಕು ಎಂಬ ಮೂರಕ್ಷರದ ಮಧ್ಯೆ ನೂರಾರು ನೋವಿನ ಕಥೆಗಳು ಅಡಕವಾಗಿರುವುದು ಸುಳ್ಳಲ್ಲ. ಬದುಕು ಅಂದರೇನೆ ಹಾಗೆ ನೋವು, ನಲಿವುಗಳಿದ್ದರೆ ಮಾತ್ರವೇ ಅದಕ್ಕೊಂದು ಪರಿಪೂರ್ಣ ಅರ್ಥವಿರುತ್ತದೆ. ಜೀವನದಲ್ಲಿ ಹುಟ್ಟಿನಿಂದ ಸಾಯುವವರೆಗೆ ಸುಖದ ಸುಪ್ಪತ್ತಿಗೆಯಲ್ಲಿಯೇ ಜೀವಿಸಿದರೆ ಅದು ಬದುಕು ಎನಿಸಿಕೊಳ್ಳುವುದಿಲ್ಲ. ಹಾಗೆ ಬದುಕುವುದು ಕಷ್ಟವು ಕೂಡ. ಜತೆಗೆ ಜೀವನಾನುಭವವೂ ಮುಖ್ಯ. ಮತ್ತು ಅಂತಹ ಬದುಕನ್ನು ಅನುಭವಿಸಿದವರು ಇದ್ದರೂ ಅದು ವಿರಳ.
ಜೀವನದಲ್ಲಿ ಉಂಟಾಗುವ ಒಂದಷ್ಟು ಸಮಸ್ಯೆಗಳ ಪೈಕಿ ದಾಂಪತ್ಯ ಕಲಹಗಳು, ಆಸ್ತಿ ಕಲಹಗಳು, ಮನೆಮನಗಳಲ್ಲಿ ಮಾನಸಿಕ ನೆಮ್ಮದಿ ಕುಂಠಿತ, ಮಕ್ಕಳಿಂದ ಪೋಷಕರ ನಿರ್ಲಕ್ಷ್ಯ, ಮಕ್ಕಳು ಅಡ್ಡ ದಾರಿ ಹಿಡಿಯುವುದು, ಹುಟ್ಟಿನಿಂದಲೇ ಅಂಗಹೀನತೆ, ಗಂಭೀರ ಕಾಯಿಲೆಗಳಿಗೆ ಕುಟುಂಬದ ಸದಸ್ಯ ತುತ್ತಾದಾಗ ಆಸ್ಪತ್ರೆ, ಔಷಧ ವೆಚ್ಚಕ್ಕಾಗಿಯೇ ಜೀವನ ಸವೆಸುವುದು, ಸಾಲಬಾಧೆ, ಇತ್ಯಾದಿಗಳು ಪ್ರಾಥಮಿಕವಾಗಿ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಸಮಸ್ಯೆಗಳು ಜೀವನವನ್ನು ಕತ್ತಲೆಯ ಬದುಕಿನತ್ತ ದೂಡುತ್ತಿರು ವುದು ನಮ್ಮ ದೈನಂದಿನ ಜೀವನದಲ್ಲಿ ಕಾಣುತ್ತಿದ್ದೇವೆ.
ಮತ್ತೊಂದೆಡೆ ಹುಟ್ಟಿನಿಂದಲೇ ಕಡುಬಡತನ, ವಿದ್ಯಾಭ್ಯಾಸ, ಜೀವನದ ಬಂಡಿ ಎಳೆಯಲು ಕೂಲಿ ನಾಲಿಯ ಬದುಕಿನ ಅವಲಂಬನೆ, ವಾಸಿಸಲು ಸೂಕ್ತ ಸೂರಿನ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ, ಧರಿಸಲು ಬಟ್ಟೆ ಬರೆಗಳ ಕೊರತೆ, ಹೀಗೆ ಹತ್ತಾರು ನೋವು, ಅವಮಾನಗಳ ಮಧ್ಯೆ ಶಿಕ್ಷಣ ಪಡೆದು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದವರು, ಉನ್ನತ ಉದ್ಯೋಗ ವನ್ನು ಪಡೆದವರು ಸಮಾಜದ ಮಧ್ಯೆೆ ಲಕ್ಷಾಂತರ ಮಂದಿ ಕಾಣ ಸಿಗುತ್ತಾರೆ.
ಇದು ಒಂದು ರೀತಿಯಲ್ಲಿ ನೋವು, ಅವಮಾನ, ದುಃಖವನ್ನು ಎದುರಿಸಿ ಬದುಕು ಕಟ್ಟಿಕೊಂಡವರ ಕಥೆ. ಸಮಾಜದಲ್ಲಿ ಏನಾದ ರೊಂದು ಸಾಧಿಸಿದವರಿದ್ದರೆ ಅದು ಇಂತಹ ವರ್ಗದವರೇ ಎನ್ನುವುದು ಗಮನಾರ್ಹ. ಮತ್ತೊಂದಷ್ಟು ಮಂದಿ ವ್ಯವಹಾರ ಗಳಲ್ಲಿ ಹಣಕಾಸು ಸಂಬಂಧಿಸಿದ ವಿಚಾರ ಅಥವಾ ಗೆಳತನಕ್ಕೆ ಗೌರವ ನೀಡಿ ಮಾಡಿದಂಥ ಸಹಾಯ, ಉಪಕಾರ, ತ್ಯಾಗಗಳನ್ನು ದುರುಪ ಯೋಗಪಡಿಸಿಕೊಂಡು ತಮ್ಮ ಸ್ವಾರ್ಥಕ್ಕೆೆ ಬಳಸಿಕೊಂಡು ತಾನು, ತನ್ನ ಸಂಸಾರವಷ್ಟೇ ನೆಮ್ಮದಿಯಿಂದಿರಬೇಕು, ಎಲ್ಲಾ ಪದವಿ, ಹುದ್ದೆಗಳು ತಮಗೆ ಬೇಕು ಎಂಬ ಮಾನಸಿಕತೆಯಿಂದ ಸಂಬಂಧ, ಮಿತ್ರತ್ವಗಳು ಹಳಸುವುದು ಕೂಡ ನಡೆಯುತ್ತಿದೆ.
ಮತ್ತೊಂದೆಡೆ ಸಮಾಜದ ಕಣ್ಣಿಗೆ ಮಣ್ಣೆರಚಿ ತಾನೊಬ್ಬ ಶ್ರೇಷ್ಠ, ಪ್ರಚಾರ ಅಥವಾ ಅಬ್ಬರದ ಗೀಳಿಗೆ ಮಾರು ಹೋಗಿ ಸಮಾಜ ಸುಧಾರಕನೆಂಬ ಮುಖವಾಡ ತೊಟ್ಟು ಆಂತರಿಕವಾಗಿ ಸ್ವಾರ್ಥ ಮನಸ್ಥಿತಿಯನ್ನು ಹೊತ್ತುಕೊಂಡು ಕುತಂತ್ರ ಬುದ್ಧಿ ತೋರುವ ಮಂದಿಯೂ ಕಾಣಸಿಗುತ್ತಾರೆ. ಇವೆಲ್ಲವೂ ಆಧುನಿಕ ಜೀವನದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಸಮಾಜದಲ್ಲಿ ಇಂತಹ ಪ್ರವೃತ್ತಿಗಳಿಗೆ
ಮಣೆ ಹಾಕುವ, ಪ್ರಾತಿನಿಧ್ಯ ಒದಗಿಸುವ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿರುವುದು ಕೂಡ ನೋವಿನ ಸಂಗತಿ.
ಪ್ರಾಮಾಣಿಕತೆ, ನಿಷ್ಠೆ, ತ್ಯಾಗ ಎಂಬುವುದಕ್ಕೆ ಗೌರವ, ಪ್ರಾತಿನಿಧ್ಯ ಎಂಬ ಮಾತು ಕೇವಲ ವೇದಿಕೆಯಲ್ಲಿನ ಭಾಷಣಕ್ಕಷ್ಟೇ ಸೀಮಿತ ವಾಗಿರುವುದು ದುರ್ಧೈವ. ಇವು ಕಾರ್ಯರೂಪಕ್ಕೆ ಬರಬೇಕಾದರೆ ಸ್ವಾರ್ಥ ಎಂಬ ಅಡ್ಡಗೋಡೆ ಬದಿಗೆ ಸರಿದು, ಮಾನವೀಯತೆ, ಮನುಷ್ಯತ್ವ ಎನ್ನುವುದು ಮುನ್ನೆಲೆಗೆ ಬರಬೇಕಾಗಿದೆ. ಕಾಲಚಕ್ರ ಎಂಬುದು ನಿತ್ಯನಿರಂತರವಾಗಿ ತಿರುಗುತ್ತಿದ್ದು, ಹಿಂದಿನ ಚರಿತ್ರೆಗಳ ಪುಟ ತಿರುವಿದರೆ ಬದುಕಿನಲ್ಲಿ ಮುಖವಾಡ ಹೊತ್ತವರು ಮಣ್ಣು ಪಾಲಾಗಿರುವುದೇ ಹೊರತು ಸತ್ಯ, ಪ್ರಾಮಾಣಿಕತೆ, ತ್ಯಾಗ, ನಿಷ್ಠೆಯಲ್ಲ ಎಂಬುವುದನ್ನು ಮನುಷ್ಯ ಅರಿತು ಬಾಳಬೇಕಾಗಿದೆ.