ಅವಲೋಕನ
ಕುಮಾರ್ ಶೇಣಿ
ಬ್ರಿಟನ್ನಿನ ಸಂಸತ್ತಿನಲ್ಲಿ ಕೇವಲ ಚರ್ಚೆ ಮಾತ್ರ ನಡೆಯುತ್ತದೆ ಎಂಬ ಕಾರಣಕ್ಕೋ, ಅಥವಾ ಅದರ ಶ್ರೀಮಂತರ ಸಭೆಯಲ್ಲಿ
ನಿರ್ಬಂಧವಿಲ್ಲದೇ ಮಾತನಾಡಬಹುದು ಎಂಬ ಕಾರಣಕ್ಕೋ ಏನೋ, ಬ್ರಿಟನ್ನಿನ ಸಂಸತ್ತನ್ನು ‘ಮಾತಿನ ಮನೆ’ ಎಂದು ಕರೆಯು ತ್ತಾರೆ.
ಅಲ್ಲಿ ಮಾತನಾಡುವುದು ಬಿಟ್ಟರೆ, ಬೇರೆ ಹೊಸತೇನೂ ಹುಟ್ಟಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಗಾಂಧಿ ಬ್ರಿಟಿಷ್ ಸಂಸತ್ತನ್ನು
‘ಬಂಜೆ’ ಎಂದು ತನ್ನ ಹಿಂದ್ ಸ್ವರಾಜ್ ಪುಸ್ತಕದಲ್ಲಿ ಬರೆಯುತ್ತಾರೆ (ಮುಂದೆ ಆ ಪದವನ್ನು ಅವರೇ ತೆಗೆದುಹಾಕುತ್ತಾರೆ ಕೂಡ.) ರಾಜಕಾರಣದಲ್ಲಿ ಮಾತುಗಾರಿಕೆ ಬಹಳ ಮಹತ್ವದ್ದು ಎಂಬುದಕ್ಕೆ ಇವೊಂದಿಷ್ಟು ಉದಾಹರಣೆಗಳಷ್ಟೇ. ಆದರೆ ರಾಜಕೀಯದಲ್ಲಿ ಮಾತು ಎಷ್ಟು ಉಪಕಾರಿ ಎನಿಸಿದೆಯೋ, ಅಷ್ಟೇ ಅಪಾಯಕಾರಿ ಎನಿಸಿದ ಉದಾಹರಣೆಗಳು ಬಹಳಷ್ಟಿವೆ.
ಅದರ ಜೊತೆಗೆ ಇಂದಿನ ರಾಜಕಾರಣಿಗಳ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಅವರ ಮಾತುಗಳು ಮತ್ತೊಂದಿಷ್ಟು ಅಪಾಯವನ್ನು ಸೃಷ್ಟಿಸುತ್ತವೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಮಾತು ಮುತ್ತುಗಳಾಗುವ ಸಾಧ್ಯತೆಗಳಿಗಿಂತ ಮೃತ್ಯು ಆಗುವ ಸಾಧ್ಯತೆಯೇ ಹೆಚ್ಚಾಗುತ್ತಿದೆ. ರಾಜಕೀಯದ ಇತಿಹಾಸಗಳನ್ನು ಅವಲೋಕಿಸುತ್ತಾ ಸಾಗಿದರೆ, ಹಲವು ಮಾತು ಗಾರರು ಕಾಣಸಿಗುತ್ತಾರೆ. ಅವರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು. ಅವರು ಮಾತುಗಳನ್ನು ಕೇಳುವುದೇ ಅದ್ಭುತ ಎನಿಸುತ್ತಿತ್ತು. ಪ್ರಚಾರ ಮಾಧ್ಯಮಗಳು ಅಷ್ಟೇನೂ ಅಭಿವೃದ್ಧಿಯಾಗದ ಕಾಲದಲ್ಲಿಯೇ, ವಾಜಪೇಯಿ ಮಾತುಗಳನ್ನು ಕೇಳಲು ಜನಸಾಗರ ಸೇರುತ್ತಿತ್ತು.
ಭಾರತದ ಸಂಸತ್ತಿನಲ್ಲಿ ಅವರು ಮಾತಿಗೆ ನಿಂತರೆ, ಉಳಿದವರು ಮೂಕಸ್ಮಿತರಾಗುತ್ತಿದ್ದರು. 1971ರಲ್ಲಿ ಲೋಕಸಭೆಯಲ್ಲಿ ಮಾತನಾಡುತ್ತಾ, ‘ಕೈಗಾರಿಕೆ, ಮಿಲಿಟರಿಯಂಥ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಿದರೆ ಮಾತ್ರ ನಾವು ಇತರ ದೇಶಗಳೊಂದಿಗೆ ಉತ್ತಮ
ಬಾಂಧವ್ಯ ಹೊಂದಲು ಸಾಧ್ಯ. ಚೀನಾದ ಕುರಿತು, ಅಮೆರಿಕಾ ಅಧ್ಯಕ್ಷ ನಿಕ್ಸನ್ ಅವರ ಪತ್ರಿಕಾ ಪ್ರತಿನಿಧಿಯ ಮಾತುಗಳನ್ನು ಕೇಳಿದಾಗ ನಮಗೆ ಇದರ ಅರಿವಾಗುತ್ತದೆ. ಚೀನಾದ ಅಣ್ವಸ್ತ್ರ ಪ್ರಾಬಲ್ಯ ಮತ್ತು ಭಾರೀ ಜನಸಂಖ್ಯೆಯೇ ಇದಕ್ಕೆ ಪ್ರೇರಪಣೆ ಎಂದು
ವಾಜಪೇಯಿ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸತ್ನ ಸದಸ್ಯರೊಬ್ಬರು, ವಾಜಪೇಯಿ ಅವರು ಜನಸಂಖ್ಯೆಯನ್ನು ಹೆಚ್ಚಿಸ
ಬೇಕೆಂದು ಹೇಳುತ್ತಿದ್ದಾರೆ ಎಂದು ಲೇವಡಿ ಮಾಡುತ್ತಾರೆ. ಇದಕ್ಕೆ ವಾಜಪೇಯಿ ಅವರು, ಜನಸಂಖ್ಯೆ ವಿಚಾರದಲ್ಲಿ ಸದಸ್ಯರು ತೋರುವ ಉತ್ಸಾಹವನ್ನು, ಬೇರೆ ವಿಚಾರಗಳಲ್ಲಿ ತೋರಿದ್ದರೆ ಒಳ್ಳೆಯದಿತ್ತು. ಈ ಮೂಲಕ ದೇಶವನ್ನು ಬಲಿಷ್ಠಗೊಳಿಸಲು ಆ ಸದಸ್ಯರ ಬೆಂಬಲ ದೊರಕಿತು.
ದುರದೃಷ್ಟ ಎಂದರೆ ಅದಕ್ಕೆ ನನ್ನ ಬೆಂಬಲ ದೊರಕುವುದಿಲ್ಲ ಎಂದುಬಿಟ್ಟರು. ಇಡೀ ಸದನ ನಗೆಯಲ್ಲಿ ತೇಲಾಡಿತು. ಹೀಗೆ ಮಾತಿನಲ್ಲಿಯೇ ಚಾಟಿ ಬೀಸುವುದರಲ್ಲಿ ವಾಜಪೇಯಿ ಅವರು ನುರಿತರಾಗಿದ್ದರು. ಇವರ ಜೊತೆಗೆ ರಾಜಕಾರಣದ ಇತಿಹಾಸ
ಬಗೆದರೆ ಸಿಗುವ ಮತ್ತೊಬ್ಬರು ಜಗನ್ನಾಥರಾಯರು. ಸರೋಜಿನಿ ಮಹಿಷಿ ಮತ್ತು ಜಗನ್ನಾಥರಾಯರ ಮಧ್ಯೆ ಚುನಾವಣೆಗಳು ನಡೆದಾಗಲೆಲ್ಲಾ, ಅವರ ಮಾತುಗಳನ್ನು ಕೇಳಲು ಜನಸಾಗರವೇ ಸೇರುತ್ತಿತ್ತು.
ಆದರೆ ಜಗನ್ನಾಥರಾಯರು ಚುನಾವಣೆಯಲ್ಲಿ ಗೆಲ್ಲುತ್ತಿರಲಿಲ್ಲ. ಇದಕ್ಕಾಗಿ ಪ್ರತಿ ಚುನಾವಣಾ ಭಾಷಣಗಳಲ್ಲೂ, ನನ್ನ ಭಾಷಣ ಕೇಳಲು ಬಂದವರಷ್ಟೇ ನನಗೆ ಮತ ನೀಡಿದರೂ ಸಾಕು, ನಾನು ಗೆಲ್ಲುತ್ತೇನೆ. ಆದರೆ ನೀವು ನನ್ನ ಮಾತನ್ನು ಕೇಳುತ್ತೀರಿ ಮತ್ತು ಸರೋಜಿನ ಮಹಿಷಿಗೆ ಮತವನ್ನು ಹಾಕುತ್ತೀರಿ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದರು. ಫಲಿತಾಂಶ ಬಂದಾಗ ಇದು ನಿಜ ಎನಿಸುತ್ತಿತ್ತು ಕೂಡ. ಆದರೆ ಇಷ್ಟು ಬಹಿರಂಗವಾಗಿ ಮಾತನಾಡುವ ಯಾವ ರಾಜಕಾರಣಿಗಳು ಇಂದು ಕಾಣಸಿಗುವುದಿಲ್ಲ ಬಿಡಿ.
ಮಾತುಗಾರಿಕೆಯ ವಿಚಾರಕ್ಕೆ ಬಂದರೆ ಹೆಚ್ಚು ನೆನಪಾಗುವುದು ಬ್ರಿಟನ್ನ ಮಾಜಿ ಪ್ರಧಾನಿ ಚರ್ಚಿಲ್ ನೆನಪಾಗುತ್ತಾರೆ. ಮಾತಿನ ಮಲ್ಲರಾಗಿದ್ದ ಚರ್ಚಿಲ್, ಸಮಯಕ್ಕೆ ತಕ್ಕಂತೆ ಮಾತನಾಡುವುದರಲ್ಲಿ ಪರಿಣಿತರಾಗಿದ್ದರು. ಒಂದು ಚರ್ಚಿಲ್ ಬ್ರಿಟನ್ನಿನ ಪ್ರಧಾನಿ ಯಾಗಿದ್ದ ಸಮಯದಲ್ಲಿ, ಬ್ರಿಟನ್ನಿನ ಸಂಸತ್ತಿನಲ್ಲಿ ಸಂಸದನೊಬ್ಬ ಒಂದು ಗಂಭೀರ ಚಾರದ ಕುರಿತು ಮಾತನಾಡುತ್ತಿದ್ದ. ಆದರೆ ಚರ್ಚಿಲ್ ಅವನ ಮಾತುಗಳನ್ನು ಕೇಳದೆ, ತೂಕಡಿಸುತ್ತಿದ್ದ. ಆಗ ಸಂಸದ ತನ್ನ ಮಾತನ್ನು ನಿಲ್ಲಿಸಿ, ನಾನು ಸಂಸತ್ತಿನಲ್ಲಿ
ಮಾತನಾಡುವಾಗಲೆಲ್ಲಾ ನೀವು ನಿದ್ದೆ ಮಾಡಬೇಕೇನೂ? ಎಂದು ಚರ್ಚಿಲ್ರನ್ನು ಪ್ರಶ್ನಿಸಿದ. ಅದಕ್ಕೆ ಚರ್ಚಿಲ್, ಅಂಥ ಕಾನೂನು ಏನೂ ಇಲ್ಲ. ಇದು ನನ್ನ ಸ್ವಯಂಪ್ರೇರಿತ ನಿದ್ದೆ ಎಂದು ಬಿಟ್ಟ. ಚರ್ಚಿಲ್ರ ಇಂತಹ ಮಾತುಗಳು ಅವರ ರಾಜಕೀಯ ಜೀವನದ ಉದ್ದಕ್ಕೂ ಕಾಣಸಿಗುತ್ತವೆ.
1904ರಲ್ಲಿ ಚರ್ಚಿಲ್ ಕನ್ಸರ್ವೇಟಿವ್ ಪಕ್ಷವನ್ನು ಬಿಟ್ಟು ಲಿಬರಲ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅದೇ ಸಮಯದಲ್ಲಿ ತನ್ನತ್ತ ಎಲ್ಲರೂ ಆಕರ್ಷಿತರಾಗಬೇಕು ಎಂದು ದಪ್ಪ ಮೀಸೆಯನ್ನು ಕೂಡ ಬಿಟ್ಟಿದ್ದ. ಆಗ ಕನ್ಸರ್ವೇಟಿವ್ ಪಕ್ಷದ ನಾಯಕಿಯೊಬ್ಬಳು,
ಚರ್ಚಿಲ್ಗೆ ನಿಮ್ಮ ಮೀಸೆ ಮತ್ತು ರಾಜಕಾರಣ ನನಗೆ ಇಷ್ಟವಾಗಲಿಲ್ಲ ಎಂದರಂತೆ. ಅದಕ್ಕೆ ಅಷ್ಟೇ ವೇಗವಾಗಿ ಪ್ರತಿಕ್ರಿಯಿಸಿದ ಚರ್ಚಿಲ್ ಚಿಂತಿಸಬೇಡಿ, ಅವರೆಡರ ಹತ್ತಿರ ನಿಮಗೆ ತಲುಪಲು ಸಾಧ್ಯವಿಲ್ಲ ಬಿಡಿ ಎಂದುಬಿಟ್ಟರಂತೆ. ಇಂತಹ ಮಾತುಗಾರ ಚರ್ಚಿಲ್ 1945ರ ಚುನಾವಣೆಯಲ್ಲಿ ಸೋತುಬಿಟ್ಟ. ಇಡೀ ಜಗತ್ತೇ ನಿರೀಕ್ಷಿಸದ ಘಟನೆ ಅದು. ಈ ಸೋಲಿನಿಂದ ಕುಗ್ಗಿ ಹೋಗಿದ್ದ ಚರ್ಚಿಲ್ನನ್ನು ಸಮಾಧಾನಪಡಿಸಲು ಅವರ ಪತ್ನಿ, ಈ ಸೋಲನ್ನು ಮಾರುವೇಷದಲ್ಲಿ ಬಂದ ಆಶೀರ್ವಾದ ಎಂದು ತಿಳಿದು ಕೊಳ್ಳಿ ಎಂದರಂತೆ. ಅದಕ್ಕೆ ಚರ್ಚಿಲ್ ಪ್ರತಿಕ್ರಿಯಿಸಿದ್ದು ಹೀಗೆ, ಹೌದು. ಆದರೆ ಅದರ ಮಾರುವೇಷ ಬಹಳ ಪರಿಣಾಮಕಾರಿ
ಯಾಗಿತ್ತು. ಚುನಾವಣೆಯ ಸಮಯದಲ್ಲಿ ನನಗೆ ಅದರ ಗುರುತು ಸಿಗಲಿಲ್ಲ.
ಮಾನಸಿಕವಾಗಿ ಕುಗ್ಗಿದ್ದರೂ, ಚರ್ಚಿಲ್ನ ಮಾತಿನ ಕರಾಮತ್ತು ಮರೆಯಾಗಿರಲಿಲ್ಲ ಎಂಬುದಕ್ಕೆ ಇದು ಒಂದು ಉದಾಹರಣೆ.
ಮಾತಿನ ಮಲ್ಲರೆಲ್ಲ ಚುನಾವಣೆಯಲ್ಲಿ ಗೆದ್ದುಬಿಡುತ್ತಾರೆ ಎಂಬುದು ಸುಳ್ಳು. ಮಾತಿನಲ್ಲೇ ಮನೆ ಕಟ್ಟುತ್ತಿದ್ದ ಜಗನ್ನಾಥರಾಯರು ಹಲವು ಸಲ ಚುನಾವಣೆಯಲ್ಲಿ ಸೋತುಬಿಟ್ಟಿದ್ದರು. ಅದನ್ನು ಅರಿತ ವಾಜಪೇಯಿ ಅವರು ಕೇವಲ 64 ವಿದ್ಯೆಗಳು ಗೊತ್ತಿದ್ದರೆ
ಸಾಲದು. ಚುನಾವಣೆಯಲ್ಲಿ ಗೆಲ್ಲುವ ಕಲೆ ಗೊತ್ತಿದ್ದರೆ 64 ವಿದ್ಯೆಗಳನ್ನು ಕಲಿಯುವುದು ಕಷ್ಟವಲ್ಲ. 64 ವಿದ್ಯೆ ಗೊತ್ತಿದ್ದವರು ಚುನಾವಣೆಯಲ್ಲಿ ಗೆಲ್ಲುವರೆಂಬ ಗ್ಯಾರಂಟಿಯೇನೂ ಇಲ್ಲ ಎಂದಿದ್ದರು. ಬಿಜೆಪಿಯ ಮತ್ತೊಬ್ಬ ಮಾತಿನ ಮಲ್ಲ ದಿವಂಗತ ಪ್ರಮೋದ್ ಮಹಾಜನ್ ಅವರು, ಚುನಾವಣೆಯಲ್ಲಿ ಸೋತಾಗ ಇಲ್ಲಿಯ ತನಕ ಯಾರೂ ‘ಚುನಾವಣೆಯಲ್ಲಿ ಹೇಗೆ ಗೆಲ್ಲಬಹುದು ಎಂಬ ಪುಸ್ತಕವನ್ನು ಬರೆದಂತಿಲ್ಲ. ಒಂದು ವೇಳೆ ಬರೆದಿದ್ದರೆ ಆ ಪುಸ್ತಕ ಬರೆದವನ ವಿರುದ್ಧ ಸ್ಫರ್ಧಿಸಿ ಗೆಲ್ಲುತ್ತೇನೆ ಎಂದಿದ್ದರು.
ಇಂದಿನ ರಾಜಕಾರಣದಲ್ಲಿ ಮಾತಿನಲ್ಲಿ ಮೋಡಿ ಮಾಡುವವರ ಪಟ್ಟಿಯಲ್ಲಿ ಕಾಣಸಿಗುವ ಮೊದಲ ಹೆಸರೇ, ಪ್ರಧಾನಿ ಮೋದಿ ಯವರದು. ಮೋದಿಯ ಮಾತುಗಳನ್ನು ಕೇಳಲೆಂದೇ ಜನಸಾಗರ ಸೇರುತ್ತದೆ. ಜಗನ್ನಾಥರಾಯರು ಹೇಳುವಂತೆ, ಮತ ಹಾಕು ವವರು ಮಾತ್ರವಲ್ಲದೇ, ಇತರರೂ ಅವರ ಮಾತುಗಳನ್ನು ಕೇಳಲು ಕಾದುಕುಳಿತುಕೊಳ್ಳುತ್ತಾರೆ. ಅವರು ಬಳಸುವ ಪದಗಳು, ಮಾತನಾಡುವ ಹಾವ-ಭಾವ ಎಲ್ಲವೂ ಅದ್ಭುತ ಎನಿಸುತ್ತದೆ. ಚುನಾವಣಾ ಭಾಷಣಗಳಲ್ಲಿ ಅವರು ವಿರೋಧಿಗಳನ್ನು ಅಣ ಕಿಸುವ ರೀತಿಯು ಅದ್ಭುತವಾಗಿರುತ್ತದೆ. 2019ರ ಲೋಕಸಭಾ ಚುನಾವಣಾ ಸಮಯ. ಚಾಮರಾಜನಗರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಯುತ್ತಿತ್ತು.
ಅದಕ್ಕೆ ಕೆಲದಿನಗಳ ಮೊದಲು, ರಾಹುಲ್ ಗಾಂಧಿ, ನಾನು ಸಂಸತ್ತಿನಲ್ಲಿ ರಫೇಲ್ನ ಕುರಿತು 15 ನಿಮಿಷ ಮಾತನಾಡಿದರೆ, ಮೋದಿಗೆ ಎದುರಿಸಲು ಸಾಧ್ಯವಿಲ್ಲ ಎಂದಿದ್ದರು. ಇದಕ್ಕೆ ಚಾಮರಾಜನಗರದ ರ್ಯಾಲಿಯಲ್ಲಿ ಉತ್ತರಿಸಿದ ಮೋದಿ, ರಾಹುಲ್ ಗಾಂಧಿ ಮೊದಲು ಕಾಂಗ್ರೆಸ್ ಸರಕಾರದ ಸಾಧನೆಗಳ ಕುರಿತು ಮಾತನಾಡಲಿ. ಅದರ ನಡುವ ಕನಿಷ್ಠ 5 ಸಲವಾದರೂ ವಿಶ್ವೇಶ್ವ ರಯ್ಯನವರ ಹೆಸರನ್ನು ಉಚ್ಛರಿಸಲಿ ಎಂದಿದ್ದರು. ಕೆಲವೇ ದಿನಗಳ ಮೊದಲು ರಾಹುಲ್ ಗಾಂಧಿ, ವಿಶ್ವೇಶ್ವರಯ್ಯ ಎಂಬ ಹೆಸರನ್ನು ಉಚ್ಛರಿಸಲು ತಡವರಿಸಿದ್ದರು.
ಆದರೆ ಇಂದಿನ ರಾಜಕಾರಣದಲ್ಲಿ ಮಾತಿನಿಂದ ಹಾನಿ ಮಾಡಿಕೊಳ್ಳುವವರ ಸಂಖ್ಯೆಯು ಹೆಚ್ಚಾಗಿದೆ. ಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲ. ಬೇಕಾದರೆ ಸಂಸತ್ತಿನಲ್ಲಿ ಟೀ ಮಾರಲು ಅವಕಾಶ ಮಾಡಿಕೊಡುತ್ತೇವೆ ಎಂಬ ಮಣಿಶಂಕರ್ ಅಯ್ಯರ್ ಅವರ
ಮಾತುಗಳು, ಕಾಂಗ್ರೆಸ್ಗೆ ದೊಡ್ಡ ಹೊಡೆತವನ್ನೇ ನೀಡಿತು. 2014ರ ಲೋಕಸಭಾ ಚುನಾವಣೆಯಲ್ಲಿ ಹಲವು ಕಾಂಗ್ರೆಸ್ಸಿಗರ ಮಾತುಗಳನ್ನೇ, ಮೋದಿ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡರು. ಸುಮಲತಾ ಅಂಬರೀಷ್ ಅವರ ಕುರಿತು ಕಾಂಗ್ರೆಸ್ ಮತ್ತು
ಜೆಡಿಎಸ್ ಆಡಿದ ಮಾತುಗಳು, ಅವರ ಗೆಲುಗೆ ಮೆಟ್ಟಿಲುಗಳಾದವು. ಇತ್ತೀಚೆಗೆ ನಳಿನ್ಕುಮಾರ್ ಕಟೀಲ್ ಕುರಿತು, ಸಿದ್ಧರಾಮಯ್ಯ ನ ಟ್ವಿಟರ್ನಿಂದ ಹೊರಬಂದ ಸಾಲು ಮತ್ತೊಮ್ಮೆ ಕಿಡಿಕಾರುತ್ತಿವೆ.
ಮಾತೇ ಮುತ್ತು. ಮಾತೇ ಮೃತ್ಯು ಎಂಬ ಗಾದೆಯೊಂದಿದೆ. ಆದರೆ ರಾಜಕೀಯದಲ್ಲಿ ಇದು ಸಮಾನಾಗಿ ಪರಿಣಮಿಸುತ್ತದೆ. ಅಮೆರಿಕಾದ ಟ್ರಂಪ್ ರಂಥ ಮಾತುಗಾರ, ತನ್ನ ಮಾತಿನಿಂದ ಹಾನಿಯುಂಟು ಮಾಡಿಕೊಳ್ಳುವುದೇ ಹೆಚ್ಚು. ಒಮ್ಮೆ ಚರ್ಚಿಲ್ನ
ಆತ್ಮೀಯ ಗೆಳೆಯನೊಬ್ಬ, ನಿನ್ನ ಮಾತು ಕೇಳಲು ಈ ದೇಶದಲ್ಲಿ ಹತ್ತು ಸಾದಷ್ಟು ಜನ ಒಂದು ಕಡೆ ಸೇರುತ್ತಾರೆ ಎಂಬುದು ನಿನಗೆ ಖುಷಿ ಎನಿಸುವುದಿಲ್ಲವೇ? ಎಂದು ಚರ್ಚಿಲ್ಗೆ ಕೇಳಿದನಂತೆ. ಅದಕ್ಕೆ ಚರ್ಚಿಲ್ ನನ್ನನ್ನು ಗಲ್ಲಿಗೇರಿಸುವ ಸಂದರ್ಭ ಬಂದರೆ, ಅದನ್ನು ನೋಡಲು ಸೇರುವ ಜನರ ಸಂಖ್ಯೆ, ಇದರ ಹತ್ತುಪಟ್ಟು ಇರುತ್ತದೆ ಎಂದುಬಿಟ್ಟರಂತೆ. ಇದು ಮಾತಿನ ರಾಜಕಾರಣದ ಮಹಿಮೆ.