Thursday, 19th September 2024

Yogi Adityanath: ನರಭಕ್ಷಕ ತೋಳಗಳನ್ನು ಗುಂಡಿಟ್ಟು ಕೊಲ್ಲಲು ಯೋಗಿ ಆದಿತ್ಯನಾಥ್‌ ಆದೇಶ

Yogi Adityanath

ಲಕ್ನೋ: ಉತ್ತರ ಪ್ರದೇಶ (Uttar Pradesh)ದ ಬಹ್ರೈಚ್ (Bahraich) ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಸಾವರ್ಜನಿಕರ ನಿದ್ದೆ ಕೆಡಿಸಿದ ನರಭಕ್ಷಕ ತೋಳಗಳನ್ನು (Wolves) ಗುಂಡಿಟ್ಟು ಕೊಲ್ಲಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಆದೇಶ ಹೊರಡಿಸಿದ್ದಾರೆ.  ಕನಿಷ್ಠ 9 ಮಂದಿಯನ್ನು ಕೊಂದು, 15 ಮಂದಿಯನ್ನು ಗಾಯಗೊಳಿಸಿದ್ದ ತೋಳ (Wolves)ಗಳ ಹಾವಳಿಂದ ಬೇಸೆತ್ತ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ʼಆಪರೇಷನ್‌ ಭೇಡಿಯಾʼ (Operation Bhediya) ಮೂಲಕ ಆಗಸ್ಟ್‌ 29ರಂದು ಸುಮಾರು 4 ತೋಳಗಳನ್ನು ಸೆರೆ ಹಿಡಿಯಲಾಗಿತ್ತು. ಅದಾಗ್ಯೂ ಈ ಹಿಂಡಿನಲ್ಲಿದ್ದ ಇನ್ನೂ ಎರಡು ತೋಳಗಳು ಸೆರೆ ಸಿಕ್ಕಿರಲಿಲ್ಲ. ತಪ್ಪಿಸಿಕೊಂಡಿದ್ದ ಈ ತೋಳಗಳು ತಮ್ಮ ದಾಳಿಯನ್ನು ಮುಂದುವರಿಸಿದ್ದವು. ಸೋಮವಾರ ಮುಂಜಾನೆ ತೆರ್ಪಾ ಗ್ರಾಮದಲ್ಲಿ ನಡೆದ ದಾಳಿಯಲ್ಲಿ 3 ವರ್ಷದ ಹೆಣ್ಣು ಮಗುವೊಂದು ಬಲಿಯಾಗಿ, ಇಬ್ಬರು ಮಹಿಳೆಯರು ಗಾಯಗೊಂಡಿದ್ದರು. ಈ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಆಡಳಿತದ ವಿರುದ್ಧ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಭಯಾನಕ ಘಟನೆ ಬಗ್ಗೆ ಮಗುವಿನ ತಾಯಿ ಮಾತನಾಡಿ, ʼʼಈ ಘಟನೆ ಮುಂಜಾನೆ 3.35ರ ವೇಳೆಗೆ ಸಂಭವಿಸಿದೆ. ಆ ವೇಳೆಗೆ 6 ತಿಂಗಳ ನನ್ನ ಮತ್ತೊಂದು ಮಗು ಎದ್ದು ಅಳಲಾರಂಭಿಸಿತ್ತು. ಎಚ್ಚರಗೊಂಡು ನೋಡಿದಾಗ ದೊಡ್ಡ ಮಗಳು ನನ್ನ ಪಕ್ಕದಲ್ಲಿ ಇರಲಿಲ್ಲ. ಮಗಳ ಎರಡೂ ಕೈಗಳನ್ನು ತೋಳ ಕಚ್ಚಿಕೊಂಡಿತ್ತು. ನಾವು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಮನೆಗೆ ಬಾಗಿಲು ಅಳವಡಿಸುವಷ್ಟು ಹಣ ನಮ್ಮಲ್ಲಿಲ್ಲ. ತೋಳವನ್ನು ಬೆನ್ನಟ್ಟಿದರೂ ಅದು ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋಯಿತುʼʼ ಎಂದು ಮಹಿಳೆ ವಿವರಿಸಿದ್ದಾರೆ. ಹಲವು ದಿನಗಳಿಂದ ಇಲ್ಲಿ ತೋಳ ಓಡಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ಅವರು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ತೋಳಗಳ ನಿಯಂತ್ರಣಕ್ಕೆ ಯೋಗಿ ಆದಿತ್ಯನಾಥ್‌ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ.

https://x.com/PrabhatKum64567/status/1830439862471647594

‘ಆಪರೇಷನ್‌ ಭೇಡಿಯಾ’

ತೋಳಗಳನ್ನು ಸೆರೆ ಹಿಡಿಯಲು ಉತ್ತರ ಪ್ರದೇಶ ಸರ್ಕಾರ ‘ಆಪರೇಷನ್‌ ಭೇಡಿಯಾ’ ಕಾರ್ಯಾಚರಣೆ ಕೈಗೊಂಡಿದೆ. ಇದಕ್ಕಾಗಿ  ಅಧಿಕಾರಿಗಳು ಒಟ್ಟು 16 ತಂಡಗಳನ್ನು ನಿಯೋಜಿಸಲಾಗಿದೆ. ಅರಣ್ಯ ಹಾಗೂ ಹಳ್ಳಿಗಳ ಹೊಲಗಳ ನಡುವೆ ಓಡಾಡುವ ತೋಳಗಳ ಜಾಡು ಹಿಡಿಯಲು ಡ್ರೋನ್ ಕ್ಯಾಮೆರಾಗಳು ಮತ್ತು ಥರ್ಮಲ್ ಡ್ರೋನ್ ಮ್ಯಾಪಿಂಗ್ ತಂತ್ರಜ್ಞಾನಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಳಸುತ್ತಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸ್ವತಃ ಈ ಆಪರೇಷನ್‌ನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಮನೆಯಿಂದ ಹೊರಗಡೆ ಮಲಗದಂತೆ, ಮಕ್ಕಳನ್ನು ಹೊರಗೆ ಅಡ್ಡಾಡಲು ಬಿಡದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜತೆಗೆ ಸದಾ ಮನೆಗೆ ಬಾಗಿಲು ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ. ಏಕಾಂಗಿಯಾಗಿ ಓಡಾಡದಂತೆಯೂ ಸಲಹೆ ನೀಡಲಾಗಿದೆ. ಸದ್ಯ ಹಳ್ಳಿಗಳಲ್ಲಿ ಎಲ್ಲ ಮನೆಗಳಿಗೆ ಬಾಗಿಲು ಅಳವಡಿಸಲಾಗುತ್ತಿದೆ. ರಾತ್ರಿ ಗಸ್ತು ತಿರುಗುವಿಕೆಯನ್ನು ನಡೆಸಲಾಗುತ್ತಿದೆ. ಜತೆಗೆ ತೋಳಗಳ ದಾಳಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ತೋಳಗಳ ದಾಳಿಯಿಂದ ಕಂಗೆಟ್ಟ ಜನರೂ ಮಕ್ಕಳ ಜೀವ ಉಳಿಸಲು ಸೂಕ್ತ ಕ್ರಮ ಕೈಗೊಂಡಿದ್ದಾರೆ. ರಾತ್ರಿಯಿಡೀ ಗ್ರಾಮಗಳಲ್ಲಿ ಪಹರೆ ಕಾಯುತ್ತಿದ್ದಾರೆ. ಆನೆಗಳ ಸಗಣಿ ಮತ್ತು ಮೂತ್ರವನ್ನು ಬಳಸಿ ತೋಳಗಳನ್ನು ಓಡಿಸುವ ಪ್ರಯತ್ನ ನಡೆಯುತ್ತಿದೆ. ಅದಾಗ್ಯೂ ತೋಳಗಳ ದಾಳಿ ತಡೆಯಲು ಸಾಧ್ಯವಾಗುತ್ತಿಲ್ಲ.