Friday, 22nd November 2024

Anganwadi Recruitment: ಅಂಗನವಾಡಿ ಶಿಕ್ಷಕಿಯರ ನೇಮಕಾತಿಯಲ್ಲಿ ಮೆರಿಟ್‌ಗೆ ಆದ್ಯತೆ ನೀಡಿ: ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ

Anganwadi Recruitment

ತುಮಕೂರು: ಜಿಲ್ಲೆಯಲ್ಲಿ 234 ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸಲಾಗುವುದು. ತುಮಕೂರು ನಗರದಲ್ಲಿ ಸಿಎ ಸೈಟ್ ಸಿಕ್ಕರೆ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಬೇಕು. ಅಂಗನವಾಡಿ ಶಿಕ್ಷಕಿಯರ ನೇಮಕಾತಿಯಲ್ಲಿ (Anganwadi Recruitment) ಮೆರಿಟ್‌ಗೆ ಆದ್ಯತೆ ಇರಲಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಸೂಚನೆ ನೀಡಿದರು.

ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರಗತಿ ಕಾರ್ಯಕ್ರಮಗಳ ಮಾಹಿತಿ ಪಡೆದರು. ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆಯ ಪ್ರಗತಿ, ಜಿಲ್ಲಾ ಹಾಗೂ ತಾಲೂಕು ಶಿಶುಪಾಲನಾ ಕೇಂದ್ರಗಳು, ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಲಭ್ಯಗಳು ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಇನ್ನು ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ವರ್ಕಿಂಗ್ ವುಮೆನ್ಸ್ ಹಾಸ್ಟೆಲ್

ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸೂಕ್ತ ಜಾಗ ನೀಡಿದರೆ ನಗರದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ ಸ್ಥಾಪಿಸಲಾಗುವುದು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಗೃಹಲಕ್ಷ್ಮಿಯರ ರೀಲ್ಸ್‌ಗೆ ಪ್ರೋತ್ಸಾಹಿಸಿ

ಗೃಹಲಕ್ಷ್ಮಿ ಯೋಜನೆ ಕುರಿತಂತೆ ರೀಲ್ಸ್ ಮಾಡುವ ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕು. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಆಗಿರುವ ಪ್ರಯೋಜನ ಪ್ರತಿಯೊಬ್ಬರಿಗೂ ತಿಳಿಯಬೇಕು. ರೀಲ್ಸ್ ಮಾಡುವ ಮಹಿಳೆಯರಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಸಿಡಿಪಿಒ) ಪ್ರೋತ್ಸಾಹ ನೀಡಬೇಕು ಎಂದು ಸಚಿವೆ ತಿಳಿಸಿದರು.

ಸಹಾಯವಾಣಿ ಕೇಂದ್ರಕ್ಕೆ ಸಚಿವರ ಕರೆ

ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಸಹಾಯವಾಣಿ ಕೇಂದ್ರಕ್ಕೆ ಖುದ್ದು ಸಚಿವರೇ ಫೋನ್ ಮಾಡಿ ಮಾತನಾಡಿದರು. ಸಹಾಯವಾಣಿ ಸಿಬ್ಬಂದಿಯೊಂದಿಗೆ ಅಪರಿಚಿತರಂತೆ ಮಾತನಾಡಿದ ಸಚಿವರು, ಕಾರ್ಯ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | Laxmi hebbalkar: ಗಣೇಶ ಹಬ್ಬದೊಳಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಬಾಕಿ ವೇತನ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಸಭೆ ಬಳಿಕ ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತುಮಕೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಶಿರಾ ಕ್ಷೇತ್ರದ ಶಾಸಕರೂ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳೂ ಆಗಿರುವ ಟಿ.ಬಿ.ಜಯಚಂದ್ರ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್, ಇಲಾಖೆಯ ನಿರ್ದೇಶಕರಾದ ಸಿದ್ದೇಶ್ವರ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಮರಿಯಪ್ಪ, ವಿಕಲ ಚೇತನ ಇಲಾಖೆಯ ನಿರ್ದೇಶಕರಾದ ರಾಘವೇಂದ್ರ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಜಂಟಿ ನಿರ್ದೇಶಕರಾದ ಪುಷ್ಪಾ ರಾಯ್ಕರ್ ಸೇರಿದಂತೆ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.