Sunday, 15th December 2024

ಡಾಕ್ಟ್ರೇ, ಔಷಧಿಗಳ ಅಡ್ಡ ಪರಿಣಾಮಗಳನ್ನೂ ಬರೆದುಕೊಡಿ

ಅಭಿಮತ

ಉಮಾ ಮಹೇಶ್ ವೈದ್ಯ

ವೈದ್ಯೋ ನಾರಾಯಣೋ ಹರಿ, ರೋಗದಿಂದ ತಮ್ಮನ್ನು ಮುಕ್ತಿಗೊಳಿಸಿ ಮರಣ ಪಾಶದಿಂದ ಬಿಡುಗಡೆ ಮಾಡಿದ ಆಯುರ್ವೇ
ದಾಚಾರ್ಯರನ್ನು ಉದ್ದೇಶಿಸಿ ಕೃತಜ್ಞತಾ ಭಾವದ ನುಡಿ.

ಇದೇನು ಬಹಳ ಕಾಲದ ಮಾತಲ್ಲ, ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನೂ ಸೇವೆ ನಿಡುತ್ತಿರುವ ಪಾರಂಪರಿಕ ವೈದ್ಯರು, ನಾಟಿ ವೈದ್ಯರು, ಬಿಎಎಂಎಸ್ ಡಾಕ್ಟರುಗಳು ತಮ್ಮ ಬಳಿ ಬರುವ ರೋಗಿಗಳಿಗೆ ಊಟದಲ್ಲಿ ಏನೇನು ಸ್ವೀಕರಿಸಬೇಕು, ಯಾವುದನ್ನು ವ್ಯರ್ಥ ಮಾಡಬೇಕು ಎಂದು ಆಹಾರ ಪಥ್ಯವನ್ನು ಹೇಳಿ, ಅದರನುಸಾರ ರೋಗಕ್ಕೆ ಪ್ರಾಕೃತಿಕ ಹಾಗೂ ಆಯುರ್ವೇದ ಔಷಧ ಗಳನ್ನು ನೀಡುತ್ತಾರೆ.

ರೋಗಿ ಪಾಲಿಸುವ ಪಥ್ಯಾಹಾರ ಹಾಗೂ ಆಯುರ್ವೇದ ಔಷಧಗಳು ಆತನನ್ನು ಕ್ರಮೇಣವಾಗಿ ರೋಗದ ಮೂಲದಿಂದಲೇ ವಾಸಿ ಮಾಡಿ ನಿರೋಗಿಯಾಗಿಸುವ ಪದ್ಧತಿ ಎನ್ನುವುದು ಸರ್ವವಿದಿತ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ತನ್ನ ಬಳಿ ಬಂದ ರೋಗಿಯ ರೋಗ ಲಕ್ಷಣಗಳನ್ನು ಮಾತ್ರ ಪರಿಗಣಿಸದೇ, ಆತನ ದೇಹದ ಮೂಲ ಧಾತುಗಳಲ್ಲಿನ ಏರುಪೇರುಗಳು ಹಾಗೂ
ಮಾನಸಿಕ ಅಸಮತೋಲನಗಳನ್ನೂ ಸಹ ಪರಿಗಣಿಸಿ ಆತನಿಗೆ ಸೂಕ್ತವಾದ ಪಥ್ಯಾಹಾರ ಹಾಗೂ ಔಷಧ ನೀಡುವುದು ಆಯು ರ್ವೇದದಲ್ಲಿ ಮಾತ್ರ ಕಂಡು ಬರುವ ರೋಗ ನಿದಾನದ ವ್ಯವಸ್ಥೆ. ಉದಾಹರಣೆಗೆ ಒಬ್ಬ ವ್ಯಕ್ತಿ ವೈದ್ಯರ ಬಳಿ ಬಂದಾಗ, ಆತನ ನಾಡಿ ಮಿಡಿತದಿಂದಲೇ ಆತನ ದೇಹದಲ್ಲಿ ವಾತ, ಪಿತ್ತ ಅಥವಾ ಕಫಗಳ ಅಸಮತೋಲನ, ಯಾವುದು ಪ್ರಖರವಾಗಿದೆ? ರೋಗಕ್ಕೆ
ಕಾರಣೀಭೂತವಾಗಿದೆ? ಎಂದು ಕಂಡುಕೊಂಡು, ಆ ರೋಗಿ ಹಿಂದಿನ ದಿನಗಳಲ್ಲಿ ಸೇವಿಸಿದ ಆಹಾರಗಳ ಮಾಹಿತಿ, ಸಂಚರಿಸಿದ ಪ್ರದೇಶಗಳ ವಿವರಗಳನ್ನು ಪಡೆದು ನಂತರ ಆ ರೋಗಿಗೆ ಅವಶ್ಯಕವಾದ ಚಿಕಿತ್ಸೆಯನ್ನು ನೀಡುತ್ತಿದ್ದರು.

ಈ ಪರೀಕ್ಷಾ ಪದ್ಧತಿ ರೋಗದ ಮೂಲವನ್ನು ಕಂಡುಕೊಳ್ಳಲು ಕೈಗೊಂಡ ಕ್ರಮ, ಈ ಹಿನ್ನೆಲೆಯಲ್ಲಿಯೇ ಪ್ರತಿಯೊಂದು ರೋಗಿಗೆ,
ಪ್ರತ್ಯೇಕವಾದ ಚಿಕಿತ್ಸಾ ವಿಧಾನ ಹಾಗೂ ಔಷಧಗಳ ಪ್ರಮಾಣ ನಿಗದಿಯಾಗುತ್ತಿತ್ತು. ಇದರಿಂದಲೇ ನಮ್ಮ ಪೂರ್ವಜರು ಬಹಳ ವರ್ಷಗಳ ಕಾಲ ಆರೋಗ್ಯಶಾಲಿಗಳಾಗಿ ತಮ್ಮ ಪೂರ್ಣ ಆಯುಷ್ಯದ ಜೀವನವನ್ನು ಅನುಭವಿಸಿ ಬದುಕಿನ ಪ್ರಯಾಣವನ್ನು
ಸಂತೃಪ್ತಭಾವದಲ್ಲಿ ಪೂರ್ಣಗೊಳಿಸುತ್ತಿದ್ದರು.

ಆಧುನಿಕ ಔಷಧಗಳ ಹೆಸರಿನಲ್ಲಿ ಏನು ನಡೆಯುತ್ತಿದೆ? ಕಲ್ಲೇಶಿಗೆ ಸಹಿಸಲಾರದ ಹೊಟ್ಟೆ ನೋವು, ಕೂಡಲೇ ತಮ್ಮ ಬೀದಿಯಲ್ಲಿ ರುವ ಅಲೋಪೆಥಿಕ ವೈದ್ಯ ಪದ್ಧತಿಯಲ್ಲಿ ವೃತ್ತಿಯನ್ನು ನಿರ್ವಹಿಸುವ ಡಾಕ್ಟರ ಬಳಿ ಹೋಗಿ ತನ್ನ ವೇದನೆಯನ್ನು ಹೇಳಿ ಕೊಂಡ. ಮೊದಲು ಆ ಡಾಕ್ಟರ್ ಕಲ್ಲೇಶಿಯ ರಕ್ತದೊತ್ತಡವನ್ನು ಪರೀಕ್ಷಿಸಿದ, ಸರಿಯಾಗಿತ್ತು. ನಂತರ ಹೊಟ್ಟೆಯ ಭಾಗವನ್ನು ಅತ್ತ ಇತ್ತ ಒತ್ತಿ ನೋರುವ ಭಾಗವನ್ನು ಗುರುತಿಸಲು ಪ್ರಯತ್ನಿಸಿದ, ಡಾಕ್ಟರು ಕೇಳಿದ ಪ್ರಶ್ನೆಗೆ ಕಲ್ಲೇಶಿ ಹೊಟ್ಟೆಯ ಭಾಗದಲ್ಲಿ ಸಹಿಸಲಾರದ ನೋವಿದೆ ಎಂದೇ ಹೇಳಿದ. ಇದು ಅಪೆಂಡಿಕ್ಸ್ ಆಗಿರಬಹುದು, ಅಲ್ಸರ್ ಆಗಿರಬಹುದು, ಜೀರ್ಣಾಂಗಕ್ಕೆ ಸೋಂಕು ಉಂಟಾಗಿರ ಬಹುದು.

ಇತ್ಯಾದಿ ಸಂಶಯಗಳು ಆ ಡಾಕ್ಟರನ ಮನದಲ್ಲಿ ಮೂಡಿ ಯಾವುದೆಂದು ಖಚಿತ ಪಡಿಸಿಕೊಳ್ಳಲು ಕಲ್ಲೇಶಿಗೆ ಇಂಥ ಲ್ಯಾಬರೇಟರಿಗೆ ಹೋಗಿ, ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಎಂಡೋಸ್ಕೋಪಿ ಮಾಡಿಸಿಕೊಂಡು ಬನ್ನಿ ನಂತರ ವರದಿಗಳನ್ನು ಆಧರಿಸಿ ಚಿಕಿತ್ಸೆ ನೀಡುವಾ ಎಂದು ಹೇಳಿ ಕಳುಹಿಸುತ್ತಾರೆ. ಡಾಕ್ಟರ ಹೇಳಿದಂತೆ ಕಲ್ಲೇಶಿ ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡಿ, ರಕ್ತ, ಮೂತ್ರ ತಪಾಸಣೆ ಮಾಡಿಸಿಕೊಂಡು, ಎಂಡೋಸ್ಕೋಪಿ ವರದಿಗಳೊಂದಿಗೆ ಪುನಃ ಡಾಕ್ಟರನ್ನು ಭೇಟಿ ಮಾಡಿದಾಗ, ಅವುಗಳನ್ನು ಪರಿಶೀಲಿಸಿದ ಡಾಕ್ಟ್ರು, ಕೆಲವು ಮಾತ್ರೆಗಳನ್ನು ಬರೆದುಕೊಟ್ಟು, ಅವುಗಳನ್ನು ಎರಡು ತಿಂಗಳವರೆಗೆ ತಗೆದುಕೊಳ್ಳಿ ಹೊಟ್ಟೆ
ನೋವು ಕಡಿಮೆಯಾಗುತ್ತೆ ಎಂದು ಹೇಳಿ ತಮ್ಮ ಆಸ್ಪತ್ರೆಯಲ್ಲಿಯೇ ಇರುವ ಮೆಡಿಕಲ್ ಸ್ಟೋರ್‌ನಲ್ಲಿಯೇ ಖರೀದಿಸಲು ಹೇಳಿ ದಂತೆ ಕಲ್ಲೇಶಿ ನೂರಾರು ರುಪಾಯಿಗಳನ್ನು ಖರ್ಚು ಮಾಡಿ ಔಷಧಗಳನ್ನು ಖರೀದಿಸಿದ.

ಡಾಕ್ಟ್ರು ಹೇಳಿದಂತೆ, ಎರಡು ತಿಂಗಳವರೆಗೆ ಔಷಧಗಳನ್ನು ತೆಗೆದುಕೊಂಡ ನಂತರ, ಆ ಕಲ್ಲೇಶಿಗೆ ಹೊಟ್ಟೆ ನೋವು ಸ್ವಲ್ಪ ಕಡಿಮೆ ಎಂದೆನಿಸಿದರೂ ಆಮ್ಲ ಪಿತ್ತದ (ಆಸಿಡಿಟಿ) ಹಾಗೂ ಹಸಿವಾಗದೇ ಇರುವುದು, ಇದರಿಂದ ನಿಶ್ಯಕ್ತಿಯ ಬಳಲಿಕೆ ಕಂಡು ಬಂದಿತು. ಪುನಃ ಆ ಡಾಕ್ಟರನ್ನು ಭೇಟಿ ಮಾಡಿದ ಕಲ್ಲೇಶಿ, ಹೊಟ್ಟೆ ನೋವು ಕಡಿಮೆಯಾದರೂ ಅಸಿಡಿಟಿ, ಹಸಿವಾಗದಿರುವಿಕೆಯಾಗಿದೆ ಏನು
ಮಾಡಬೇಕು? ಎಂದು ಕೇಳಿದಾಗ, ಮತ್ತೇ ಡಾಕ್ಟ್ರು ಕಲ್ಲೇಶಿಯ ರಕ್ತ, ಮೂತ್ರ ಪರೀಕ್ಷೆಗೆ ಲ್ಯಾಬರೇಟರಿಗೆ ಕಳುಹಿಸಿ ಕಲ್ಲೇಶಿಯಿಂದ ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡಿಸಿ, ಮತ್ತೆ ಲ್ಯಾಬ್ ವರದಿಯ ಮೇಲೆ ಮಾತ್ರೆಗಳನ್ನು ನೀಡಿದರು. ಆಗ ಕಲ್ಲೇಶಿ ಡಾಕ್ಟರ ಇವರಿಗೆ ಕೇಳಿದ್ದು, ಡಾಕ್ಟರೇ, ನೀವು ಮೊದಲು ಕೊಟ್ಟ ಮಾತ್ರೆಗಳ ಅಡ್ಡ ಪರಿಣಾಮದಿಂದ ನನಗೆ ಈ ಅಸಿಡಿಟಿ, ಹಸಿವಾಗ ದಿರುವಿಕೆ ಆಗಿರಬಹುದು. ಆದ್ದರಿಂದ ಈಗ ಕೊಡುತ್ತಿರುವ ಮಾತ್ರೆಗಳಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಚೀಟಿಯಲ್ಲಿ ಬರೆದುಕೊಡಿ ಎಂದ.

ಈ ಕೋರಿಕೆಗೆ, ಡಾಕ್ಟರು ಕೆಲವು ಕ್ಷಣ ಗರಬಡಿದವರಂತೆ ನಿಂತು ಸಾವರಿಸಿಕೊಂಡು, ಕಲ್ಲೇಶಿಗೆ ಹೇಳಿದ್ದೇನೆಂದರೆ, ಅಲೋಪೆಥಿಕ ಮಾತ್ರೆಗಳು, ಔಷಧಗಳು ಪ್ರಯೋಗಾಲಯಗಳಲ್ಲಿ ತಯಾರಿಸಿದ ರಾಸಾಯನಿಕ ಔಷಧಗಳಾಗಿರುವುದರಿಂದ ಮನುಷ್ಯನ ದೇಹದ ಮೇಲೆ ಅಡ್ಡ ಪರಿಣಾಮಗಳು ಅನಿವಾರ್ಯ ಹಾಗೂ ಅವುಗಳನ್ನು ಈ ವ್ಯಕ್ತಿಗೆ ಇಂಥದೇ ಅಡ್ಡ ಪರಿಣಾಮ ಇಷ್ಟೇ ಪ್ರಮಾಣದಲ್ಲಿ ಉಂಟುಮಾಡುತ್ತದೆ ಎನ್ನುವುದು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಈಗ ಕೊಟ್ಟಿರುವ ಮಾತ್ರೆಗಳೂ ಸಹ ಅಸಿಡಿಟಿಯನ್ನು ಶಮನ ಗೊಳಿಸಿದರೂ ಬೇರೆ ರೀತಿಯ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು, ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ
ಎಂದು ಹೇಳಿದರು.

ಈ ಡಾಕ್ಟರು ಹೇಳಿದಂತೆ, ಅಲೋಪೆಥಿಕ್ ಔಷಧಿಗಳಿಂದ ಅಡ್ಡ ಪರಿಣಾಮಗಳು ನಿಶ್ಚಿತ, ಆದರೆ ಈವುಗಳ ಬಗ್ಗೆ ಡಾಕ್ಟರು ಯಾಕೆ ತಮ್ಮ ಔಷಧ ಚೀಟಿಗಳಲ್ಲಿ ನಮೂದಿಸುತ್ತಿಲ್ಲ ಅಥವಾ ರೋಗಿಗೆ ಹೇಳುತ್ತಿಲ್ಲ? ಈ ಶ್ನೆಯನ್ನು ಒಬ್ಬ ಹೆಸರಾಂತ ಡಾಕ್ಟರ್‌ಗೆ ಕೇಳಿದರೆ, ಪ್ರಾಮಾಣಿಕವಾಗಿ ಅವರು ಹೇಳಿದ್ದು, ಹೀಗೆ ಔಷಧಗಳ ಅಡ್ಡ ಪರಿಣಾಮಗಳನ್ನು ಹೇಳುತ್ತಾ ಹೋದರೆ, ರೋಗಿಗಳು ಈಗಿರುವ ರೋಗವೇ ವಾಸಿಯೆಂದು ತಿಳಿದು ಆ ಔಷಧಗಳನ್ನು ಖರೀದಿಸುವುದಿಲ್ಲ, ಆ ಔಷಧಗಳು ಮಾರಾಟವಾಗುವುದಿಲ್ಲ, ಇದರಿಂಧ ಔಷಧ ತಯಾರಿಸುವ ಕಂಪನಿಗಳು ಹಾನಿಯುಂಟಾಗುತ್ತವೆ, ಪರೋಕ್ಷವಾಗಿ ಡಾಕ್ಟರ್‌ಗಳೂ ಸಹ ಆದಾಯವನ್ನು ಕಳೆದುಕೊಳ್ಳುತ್ತಾರೆ. ಈ ಕಾರಣಕ್ಕೆ ಔಷಧ ಚೀಟಿಯಲ್ಲಿ, ಔಷಽಯ ಬ್ರಾಂಡ್ ಹೆಸರು, ಎಷ್ಟು ಬಾರಿ, ಯಾವ ಸಮಯದಲ್ಲಿ ತಗೆದುಕೊಳ್ಳಬೇಕು ಎಂಬುದನ್ನು ಮಾತ್ರ ನಮೂದಿಸುತ್ತೇವೆ. ಅಡ್ಡ ಪರಿಣಾಮಗಳನ್ನು ರೋಗಿಯ ಗಮನಕ್ಕೆ ತರದೇ ಹೋದಲ್ಲಿ ಅದು, ವೃತ್ತಿ ನೀತಿಯ ಉಲ್ಲಂಘನೆಯಲ್ಲವೇ ? ಎಂದು ಕೇಳಿದ ಪ್ರಶ್ನೆಗೆ, ವೃತ್ತಿ ನೀತಿ ಎಲ್ಲಿದೆ ಈ ವ್ಯಾಪಾರಿ ಜಗತ್ತಿನಲ್ಲಿ? ಎಂದು ಪುನಃ ಪ್ರಶ್ನಿಸಿದ್ದು ಈಗಿನ ಅಲೋಪೆಥಿಕ್ ಡಾಕ್ಟ್ರುಗಳ ಮನಸ್ಥಿತಿಗೆ ಕನ್ನಡಿ ಹಿಡಿದಂತಿತ್ತು.

ಔಷಽಗಳ ಅಡ್ಡ ಪರಿಣಾಮಗಳನ್ನು ತಿಳಿಯುವ ಹಕ್ಕು ಪ್ರತಿಯೊಬ್ಬ ರೋಗಿಗೆ ಇದೆ. ನಮ್ಮ ಸಂವಿಧಾನದ ಪರಿಚ್ಛೇದ 21ರ ಅನುಸಾರ, ಪ್ರತಿಯೊಬ್ಬನಿಗೂ ಆರೋಗ್ಯದಿಂದ, ನೆಮ್ಮದಿಯಿಂದ ತನ್ನ ಹಕ್ಕುಗಳ ರಕ್ಷಣೆಯೊಂದಿಗೆ ಬದುಕುವ ಹಕ್ಕನ್ನು ನೀಡಿದೆ. ಇದರರ್ಥ, ಯಾವುದೇ ನಾಗರಿಕ, ತನ್ನ ದೇಹವನ್ನು ಇತರರಿಗೆ ಆತನ ಅನುಮತಿಯಿಲ್ಲದೇ ಒಂದು ಪ್ರಯೋಗ ಶಾಲೆಯಂತೆ
ಬಳಸಲ್ಪಡಲು ಅವಕಾಶವಿಲ್ಲ. ಆದರೆ ಇಂದಿನ ಆಧುನಿಕ ವೈದ್ಯ ಪದ್ಧತಿಯನ್ನು ಅಳವಡಿಸಿಕೊಂಡಿರುವ ಡಾಕ್ಟರುಗಳು ಮಾಡು ತ್ತಿರುವುದೇನು? ಔಷಧಗಳನ್ನು ಸೇವಿಸಿದ ನಂತರ ರೋಗಿ ಬಂದು ಹೇಳುವವರೆಗೂ, ಈ ಡಾಕ್ಟರಗಳಿಗೆ ಈ ರೋಗಿಗೆ ಯಾವ
ರೀತಿಯ ಅಡ್ಡ ಪರಿಣಾಮ ತಾವು ನೀಡಿದ ಔಷಧಗಳಿಂದಾಯಿತು ಎಂದು ಗೊತ್ತೇ ಆಗುವುದಿಲ್ಲ.

ಇತ್ತೀಚೆಗೆ ನಡೆದ ಒಂದು ಘಟನೆ, ಈ ಔಷಧಗಳ ಅಡ್ಡ ಪರಿಣಾಮದ ಗಂಭೀರತೆಯನ್ನು ತೊರಿಸುವುದರಲ್ಲಿ ಸಂಶಯವಿಲ್ಲ.
ರಕ್ತದೊತ್ತಡದ ವಿಷಯದ ಬಗ್ಗೆ ತಮ್ಮ ಡಾಕ್ಟರ್ ಬರೆದುಕೊಟ್ಟ ಔಷಧವನ್ನು ಪ್ರತಿ ದಿನ ತಗೆದುಕೊಳ್ಳುವ ಅನಿವಾರ್ಯತೆ ನಮ್ಮ ಪರಿಚಯದವರಿಗಾಯಿತು. ಮಾತ್ರೆ ಯನ್ನು ತಗೆದುಕೊಳ್ಳುತ್ತಿದ್ದರಿಂದ ಅವರ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತಿತ್ತು. ಆದರೆ ಈ ಔಷಧದ ಅಡ್ಡ ಪರಿಣಾಮವಾಗಿ ಅವರಿಗೆ ಲೈಂಗಿಕ ಅಸಮರ್ಥತೆ ಕಾಡತೊಡಗಿತು, ಆದರೆ ಇದು ಔಷಧದ ಅಡ್ಡ ಪರಿಣಾಮ ವೆಂದು ಅರಿಯದ ಅವರು, ಲೈಂಗಿಕ ತಜ್ಞರಿಂದ ಸಲಹೆ ಪಡೆದಾಗ ಅವರು ಹೇಳಿದ್ದು, ರಕ್ತದೊತ್ತಡದ ನಿಯಂತ್ರಣಕ್ಕೆ ತೆಗೆದು ಕೊಳ್ಳುವ ಮಾತ್ರೆಯಿಂದ ಈ ಲೈಂಗಿಕ ಅಸಾಮರ್ಥ್ಯತೆ ಉಂಟಾಗಿದೆ. ಆದ್ದರಿಂದ ಈ ಮಾತ್ರೆಗಳನ್ನು ಬದಲಿಸಿ ಎಂದು. ಈ ವಿಷಯ ವನ್ನು ಡಾಕ್ಟರ್ ಇವರ ಗಮನಕ್ಕೆ ತಂದಾಗ ಅವರು ಸಹಜವಾಗಿ ಹೇಳಿದ್ದು, ಈ ಮಾತ್ರೆಯಿಂದ ಆ ರೀತಿಯ ಅಡ್ಡ ಪರಿಣಾಮ ಉಂಟಾಗುವುದು ಸಹಜ, ಒಂದು ಪಡೆ ಯಲು ಇನ್ನೊಂದು ಕಳೆದುಕೊಳ್ಳಬೇಕು.

ಅನಿವಾರ್ಯವೆನ್ನುವ ರೀತಿಯಲ್ಲಿ. ಔಷಧದ ಈ ಅಡ್ಡ ಪರಿಣಾಮದ ದುಷ್ಪರಿಣಾಮ ಆತನ ಕೌಟುಂಬಿಕ ಆರೋಗ್ಯದ ಮೇಲೆ,
ರೋಗಿಯ ಮಾನಸಿಕ ಆರೋಗ್ಯದ ಮೇಲೆ ಆಗಿದ್ದು ಆತನ ರಕ್ತದೊತ್ತಡದ ತೊಂದರೆಗಿಂತ ಗಂಭೀರವಾಗಿತ್ತು. ಮಾತ್ರೆ ಅಥವಾ ಔಷಧವನ್ನು ಬರೆದುಕೊಡುವ ಮುನ್ನ ಆ ರೋಗಿಗೆ ಮೊದಲೇ ತಿಳಿ ಹೇಳಿದ್ದರೆ, ಅಡ್ಡ ಪರಿಣಾಮದ ಬಗ್ಗೆ ಮಾತಿ ನೀಡಿದ್ದರೆ, ಆ ರೋಗಿಗೆ ಮಾತ್ರೆಯನ್ನು ತಗೆದುಕೊಳ್ಳುವುದು ಅಗತ್ಯವೇ? ಎನ್ನುವದನ್ನು ಆಲೋಚಿಸಿ ನಿರ್ಧರಿಸಲು ಅವಕಾಶವುಂಟಾಗುತ್ತಿತ್ತು. ಆದರೆ ಇದನ್ನಾವುದನ್ನೂ ಹೇಳದೇ ಅಡ್ಡ ಪರಿಣಾಮಗಳನ್ನು ಮರೆಮಾಚಿ ಔಷಧಗಳನ್ನು ಬರೆದುಕೊಡುವುದು ಎಷ್ಟರ ಮಟ್ಟಿಗೆ ನೈತಿಕ ವೃತ್ತಿಪರತೆ ಎನ್ನಬಹುದು? ಇದೇ ವಿಷಯವನ್ನು ಕಾನೂನಿನ ಚೌಕಟ್ಟಿನೊಳಗೆ ನೋಡಿದರೆ, ಡಾಕ್ಟರಗಳು ನೀಡುವ ಚಿಕಿತ್ಸೆ ಗ್ರಾಹಕರ ರಕ್ಷಣಾ ಅಧಿನಿಯಮದ ಸೇವೆ ಎನ್ನುವ ಪರಿಭಾಷೆಯಲ್ಲಿ ಬರುತ್ತದೆ.

ಶುಲ್ಕ ಪಡೆದು, ಸೇವೆ ನೀಡಿದಾಗ, ಸೇವೆಯಲ್ಲಿನ ನ್ಯೂನ್ಯತೆ ಬಾಧಿತ ಗ್ರಾಹಕನಿಗೆ ಉಂಟಾದ ಹಾನಿಯನ್ನು ತುಂಬಿಕೊಡುವ ಹೊಣೆಗಾರಿಕೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಡಾಕ್ಟರಗಳು ಒಂದು ವೇಳೆ ತಾವು ನೀಡುವ ಔಷಧಗಳ ಅಡ್ಡ ಪರಿಣಾಮ ವನ್ನು ರೋಗಿಗೆ ತಿಳಿಸದೇ, ಮಾಹಿತಿ ನೀಡದೇ ಮರೆಮಾಚಿ ನೀಡಿದರೆ, ಈ ಕೃತ್ಯವನ್ನು ಸೇವಾ ನ್ಯೂನ್ಯತೆಯೆಂದೇ ಪರಿಗಣಿಸ ಬೇಕಾಗುತ್ತದೆ. ಇದರ ಜೊತೆ ನ್ಯಾಯೋಚಿತವಲ್ಲದ ವ್ಯಾಪಾರಿ ವ್ಯವಹಾರದ ಅಡಿಯಲ್ಲಿ ಈ ನ್ಯೂನ್ಯತೆಯನ್ನು ಪರಿಗಣಿಸ ಬೇಕಾಗುತ್ತದೆ. ಉದಾಹರಣೆಗೆ, ಒಬ್ಬ ಗ್ರಾಹಕ ತನಗೆ ಒಂದು ವಾಂಷಿಗ್ ಮೆಶಿನ್ ಬೇಕೆಂದು ಹೇಳಿ ವ್ಯಾಪಾರಿಯ ಬಳಿ ಬಂದಾಗ, ಆ
ವ್ಯಾಪಾರಿ ಆ ವಾಷಿಂಗ್ ಮಷಿನ್‌ನಲ್ಲಿರುವ ಎಲ್ಲ ವಿವರಗಳನ್ನು ತಿಳಿ ಹೇಳಿ ಯಾವುದನ್ನೂ ಮರೆಮಾಚದೇ ತಿಳಿಸಬೇಕು, ತಪ್ಪಿದಲ್ಲಿ ಗ್ರಾಹಕನಿಗೆ ನಷ್ಟ ಪರಿಹಾರ ತುಂಬಿಕೊಡಬೇಕಾದ ಬಾಧ್ಯತೆಯನ್ನು ಹೊಂದಿರುತ್ತಾನೆ.

ಇದೇ ರೀತಿಯಲ್ಲಿ ಡಾಕ್ಟರುಗಳ ಸೇವೆಯನ್ನೂ ಸಹ ಈ ಪರಿಭಾಷೆಯಲ್ಲಿಯೇ ಪರಿಗಣಿಸಬೇಕಾಗುತ್ತದೆ. ಒಬ್ಬ ಡಾಕ್ಟರ್‌ಗೆ ತಾನು ರೋಗಿಗೆ ನೀಡುವ ಔಷಧ ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಹಾಗೂ ಇದರ ಅಡ್ಡ ಪರಿಣಾಮಗಳ ಸ್ಪಷ್ಟ ಮಾಹಿತಿ ಇರುತ್ತದೆ. ಇಂತಹದರಲ್ಲಿ ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿ ನಿಡದೇ ಇರುವುದು ಉದ್ದೇಶ ಪೂರ್ವಕವಾಗಿ ಮಾಹಿತಿಯನ್ನು
ಮುಚ್ಚಿಟ್ಟಂತೆ. ರೋಗಿಗೆ ಆ ಔಷಧವನ್ನು ತಡೆದುಕೊಳ್ಳುವಷ್ಟು ದೈಹಿಕ ಶಕ್ತಿ ಇಲ್ಲದಿದ್ದಾಗ ಅಥವಾ ಆ ಔಷಧದಿಂದ ಉಂಟಾದ ಅಡ್ಡ ಪರಿಣಾಮದ ತೀವ್ರತೆಯನ್ನು ತಡೆದುಕೊಳ್ಳುವಷ್ಟು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಇಲ್ಲದೇ ಇದ್ದು ಆತನ ಪ್ರಾಣಕ್ಕೆ ಸಂಚಕಾರ ಉಂಟಾದರೆ ಡಾಕ್ಟರ್ ನೀಡಿದ ಸೇವೆಯನ್ನು ಭಾರತೀಯ ದಂಡ ಸಂಹಿತೆಯ ಕಲಂ 304ರಡಿ ಮಾನವ ಹತ್ಯೆ ಎಂದೇ ಪರಿಗಣಿಸಬೇಕಾಗುತ್ತದೆ.

ತಾವು ನೀಡುವ ಸೇವೆಯನ್ನು ಪ್ರಶ್ನಿಸದೇ ಪಡೆದುಕೊಳ್ಳುವುದು ರೋಗಿಗಳ ಆದ್ಯ ಕರ್ತವ್ಯವೆಂದು ಡಾಕ್ಟರ್‌ಗಳು ತಿಳಿದುಕೊಂಡಿ ದ್ದರೆ, ಅದು ಶುದ್ಧ ತಪ್ಪು. ಶುಲ್ಕ ಪಡೆದು ಸೇವೆ ನೀಡುವ ಡಾಕ್ಟರುಗಳಿಗೆ ರೋಗಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವುದರ ಜತೆ ತಾನು ನೀಡುವ ಸೇವೆಯಲ್ಲಿನ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳನ್ನು ತಿಳಿಸಿ ಹೇಳುವುದು ಅವರ ಆದ್ಯ ಕರ್ತವ್ಯ ಹಾಗೂ ಕಾನೂನಿನಡಿ ಇರುವ ಹಿರಿದಾದ ಹೊಣೆ. ಆದರೆ, ನಮ್ಮ ದೇಶದ ಯಾವುದೇ ಆಧುನಿಕ ಪದ್ಧತಿಯಾದ ಅಲೋಪಥಿಕ ಔಷಧಗಳನ್ನು ನೀಡುವ ಡಾಕ್ಟರುಗಳು ತಾವು ನೀಡುವ ಔಷಧದ ಚೀಟಿಯಲ್ಲಿ ಆ ಔಷಧದ ಅಡ್ಡ ಪರಿಣಾಮಗಳನ್ನು ನಮೂದಿ ಸುವುದಿಲ್ಲ ಹಾಗೂ ರೋಗಿಗೆ ಮಾಹಿತಿ ನೀಡುವುದಿಲ್ಲ.

ರೋಗಿಗಳ ಈ ಅಜ್ಞಾನವನ್ನೇ ಬಂಡವಾಳವಾಗಿಸಿಕೊಂಡು ಅವರನ್ನು ತಮ್ಮ ಪ್ರಯೋಗಗಳಿಗೆ ಒಂದು ಸಾಧನವನ್ನಾಗಿ ಮಾಡಿ ಕೊಂಡು, ಔಷಧ ಕಂಪನಿಗಳ ಏಜೆಂಟರಂತೆ ಕಾರ್ಯನಿರ್ವಹಿಸಿದರೆ, ದೇಶದ ಭವಿಷ್ಯ ಹಾಗೂ ಸಾಮಾಜಿಕ ಆರೋಗ್ಯದ ಗತಿಯೇನು? ಇದೇ ರೀತಿಯಾಗಿ ಆಯುರ್ವೇದ ಔಷಧಗಳ ಅಡ್ಡ ಪರಿಣಾಮದ ಬಗ್ಗೆ ನೀವು ಕೇಳಿದರೆ, ನಿಸ್ಸಂಶಯವಾಗಿ ಕೇಳಿ ಬರುವ ಉತ್ತರ, ಈ ಔಷಧದಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ, ಪಥ್ಯಾಹಾರದ ಜತೆ ವೈದ್ಯರು ಹೇಳಿದಂತೆ ಔಷಧ ಸೇವಿಸಿ ದರೆ, ಕ್ರಮೇಣವಾಗಿ ಯಾವುದೇ ಅಡ್ಡ ಪರಿಣಾಮವಿಲ್ಲದೇ ಗುಣ ಕಾಣುವಿರಿ ಎಂದು. ಈ ರೀತಿಯ ನಿಶ್ಚಿತ ಅಭಿಪ್ರಾಯ ಅಲೋ ಪೆಥಕ್ ಔಷಧಗಳನ್ನು ನೀಡುವ ಡಾಕ್ಟರ್‌ಗಳಿಂದ ಸಾಧ್ಯವೇ? ರೋಗಿಗಳ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿರು ಡಾಕ್ಟರ್‌ಗಳಿಗೆ ಕಡಿವಾಣ ಹಾಕುವುದು ಇಂದಿನ ಅಗತ್ಯತೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇದರ ಮೊದಲ ಪ್ರಯತ್ನವಾಗಿ ಸರಕಾರ ಹಾಗೂ ವೈದ್ಯಕೀಯ ಮಂಡಳಿಗಳು, ಪ್ರತಿಯೊಬ್ಬ ಡಾಕ್ಟರು ತಾವು ರೋಗಿಗೆ ನೀಡುವ ಔಷಧ ಪಡೆದುಕೊಳ್ಳುವ ಚೀಟಿಯಲ್ಲಿ ಕಡ್ಡಾಯವಾಗಿ ಆ ಔಷಧದ ಅಡ್ಡ ಪರಿಣಾಮಗಳನ್ನು ಸ್ಪಷ್ಟವಾಗಿ ನಮೂದಿಸುವ ನಿಯಮವನ್ನು ಜಾರಿಗೆ ತರವುದು ಅವಶ್ಯ. ಅಡ್ಡ ಪರಿಣಾಮಗಳನ್ನು ನಮೂದಿಸದೇ ನೀಡುವ ಔಷಧಗಳ ಪರಿಣಾಮದಿಂದ ರೋಗಿಗೆ ತೊಂದರೆಯುಂಟಾದರೆ, ಆ ಡಾಕ್ಟರ್‌ಗೆ ಕಾನೂನಿನಡಿ ಯಾವುದೇ ಅಪರಾಧಿಕ ವಿನಾಯತಿ ನೀಡದೇ ಶಿಕ್ಷೆಯನ್ನು
ವಿಽಸುವುದರ ಜತೆಗೆ ನೊಂದವರಿಗೆ ಪರಿಹಾರ ಕೊಡುವಂಥ ಜವಾಬ್ದಾರಿಯನ್ನು ನಿಯಮದಡಿ ನಿಶ್ಚಿತಗೊಳಿಸದರೆ ಮಾತ್ರ ನಾಗರಿಕರ ಸಂವಿಧಾನಾತ್ಮಕ ಹಕ್ಕುಗಳ ಜತೆ ಆರೋಗ್ಯವನ್ನು ರಕ್ಷಣೆ ಮಾಡಿದಂತೆ. ಆದ್ದರಿಂದ ಡಾಕ್ಟ್ರೇ ನೀವು ನೀಡುವ ಔಷಧ ಚೀಟಿಗಳಲ್ಲಿ ಔಷಧದ ಅಡ್ಡ ಪರಿಣಾಮಗಳನ್ನು ನಮೂದಿಸಿ…