Friday, 20th September 2024

Solid Waste Management: ಘನ ತ್ಯಾಜ್ಯ ನಿರ್ವಹಣೆಯಲ್ಲಿ ಚೆನ್ನೈ ಮಾದರಿ ಅಧ್ಯಯನಕ್ಕೆ ಡಿಕೆಶಿ ಭೇಟಿ

Solid Waste Management

ಚೆನ್ನೈ: ಘನ ತ್ಯಾಜ್ಯ ನಿರ್ವಹಣೆ ( Solid Waste Management) ಸೇರಿ ಕಸದಿಂದ ಗ್ಯಾಸ್ ಉತ್ಪಾದನೆಯ ಬಗ್ಗೆ ತಿಳಿದುಕೊಳ್ಳಲು ತಮಿಳುನಾಡಿನ ಚೆನ್ನೈನಲ್ಲಿರುವ ಶ್ರೀನಿವಾಸ ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಘಟಕಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ಭೇಟಿ ನೀಡಿದ್ದರು.

ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು,“ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಕಸದಿಂದ ಗ್ಯಾಸ್ ಉತ್ಪಾದನೆಯ ಬಗ್ಗೆ ತಿಳಿದುಕೊಳ್ಳಲು 15 ಮಂದಿ ಅಧಿಕಾರಿಗಳ ಜೊತೆ ಕಸ ನಿರ್ವಹಣೆಯಲ್ಲಿ ಚೆನ್ನೈ ಮಾದರಿಯ ಅಧ್ಯಯನಕ್ಕೆ ಬಂದಿದ್ದೇನೆ. ಇಲ್ಲಿನ ತ್ಯಾಜ್ಯ ನಿರ್ವಹಣೆಯಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಂತಾಯಿತು. ಕಳೆದ ಒಂದು ವರ್ಷದಿಂದ ಭೇಟಿ ನೀಡಬೇಕು ಎಂದುಕೊಂಡಿದ್ದೆ. ಈಗ ಸಮಯ ಸಿಕ್ಕ ಕಾರಣಕ್ಕೆ ಭೇಟಿ ನೀಡಿದ್ದೇನೆ. ನಮ್ಮ ರಾಜ್ಯದಲ್ಲೂ ಒಂದಷ್ಟು ಇಲ್ಲಿನ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲಾಗುವುದು” ಎಂದರು.

“ಅನೇಕ ಕಡೆ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಯಶಸ್ಸು ಕಂಡಿಲ್ಲ. ನಮ್ಮಲ್ಲಿಯೂ 10 ಕಡೆ ಕಸದಿಂದ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗಿತ್ತು. ಈ ಹಿಂದೆ ಹೈದರಾಬಾದ್‌ಗೆ ಭೇಟಿ ನೀಡಿದ್ದೆ. ಇಲ್ಲಿ ನಗರದ ನಡುವೆಯೇ ಸಿಎನ್‌ಜಿ ಉತ್ಪಾದನಾ ಘಟಕವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನಮ್ಮಲ್ಲೂ ಒಂದಷ್ಟು ಒಳ್ಳೆ ಕೆಲಸ ಮಾಡಿದ್ದೇವೆ. ಇಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ” ಎಂದರು.

“ಈ ವರ್ಷ ವರುಣದೇವ ನಮ್ಮನ್ನು ಕಾಪಾಡಿದ್ದಾನೆ. ಮೇಕೆದಾಟು ಯೋಜನೆ (Mekedatu Project) ಸಾಕಾರಗೊಂಡರೆ ಕರ್ನಾಟಕಕ್ಕಿಂತ ತಮಿಳುನಾಡಿನ ಜನತೆಗೆ ಹೆಚ್ಚು ಉಪಯೋಗ. ಈಗ ಇದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಮಳೆಯಿಂದ ಕರ್ನಾಟಕಕ್ಕೆ ಉಪಯೋಗವಾಗಿದೆಯೇ ಎಂದು ಕೇಳಿದಾಗ “ಮಳೆಯಿಂದ ತಮಿಳುನಾಡಿಗೆ ಒಳ್ಳೆಯದಾಗಿದೆ” ಎಂದು ಚುಟುಕಾಗಿ ಉತ್ತರಿಸಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಕ್ಷಮೆ ಕೋರಿದ ಬೆಲ್ಲದ್‌ ನಡೆ ʼಮಾದರಿಯಾಗಲಿʼ ಎಂದು ಮೆಚ್ಚಿದ ಸಿಎಂ ಸಿದ್ದರಾಮಯ್ಯ

ಕಾನೂನಾತ್ಮಕವಾಗಿ ನಿವೇಶನ ಹಂಚಿಕೆ

ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಕೆಐಡಿಬಿ ಸಿಎ ನಿವೇಶನ ಹಂಚಿಕೆಯಲ್ಲಾಗಿರುವ ಅಕ್ರಮದ ಬಗ್ಗೆ ಪ್ರಶ್ನಿಸಿದ್ದಾರೆ ಎಂದಾಗ, “ಸಿಎ ನಿವೇಶನ ಹಂಚಿಕೆ ಕಾನೂನಾತ್ಮಕವಾಗಿ ನಡೆದಿದೆ. ಇದರಲ್ಲಿ ಯಾವುದೇ ಅಕ್ರಮವಾಗಿಲ್ಲ. ವ್ಯಕ್ತಿಗೆ ಸೈಟು ಹಂಚಿಲ್ಲ, ಚಾರಿಟಬಲ್ ಟ್ರಸ್ಟಿಗೆ ಹಂಚಿದ್ದೇವೆ” ಎಂದರು.

ತಮಿಳುನಾಡು ಸಿಎಂ ವಿದೇಶಪ್ರಯಾಣದಲ್ಲಿದ್ದಾರೆ. ತಮಿಳುನಾಡು ಡಿಸಿಎಂ ಅವರನ್ನು ಭೇಟಿ ಮಾಡುವಿರಾ ಎಂದಾಗ, “ತಮಿಳುನಾಡು ಡಿಸಿಎಂ ಅವರು ಉತ್ತಮ ಸ್ನೇಹಿತರು ಹಾಗೂ ನಮ್ಮ ನಾಯಕರು. ಸಮಯ ಮಾಡಿಕೊಂಡು ಸ್ನೇಹಪೂರ್ವಕವಾಗಿ ಅವರನ್ನು ಭೇಟಿ ಮಾಡಲಾಗುವುದು” ಎಂದು ಹೇಳಿದರು.