Thursday, 19th September 2024

Murder Case: ಪಾರ್ಕ್‌ನಲ್ಲಿ ಭಾರತೀಯ ಮೂಲದ ವೃದ್ಧನನ್ನು ಕೊಂದು ಪರಾರಿಯಾದ ಐವರು ವಿದ್ಯಾರ್ಥಿಗಳು

Murder Case

ಲೀಸೆಸ್ಟರ್ : ಇಂಗ್ಲೆಂಡ್‌ನ ಲೀಸೆಸ್ಟರ್ ಬಳಿಯ ಬ್ರೌನ್ ಸ್ಟೋನ್ ಟೌನ್‍ನ ಫ್ರಾಂಕ್ಲಿನ್ ಪಾರ್ಕ್‌ನಲ್ಲಿ ಸೆಪ್ಟೆಂಬರ್ 1ರ ಭಾನುವಾರ ಸಂಜೆ 80 ವರ್ಷದ ಭಾರತೀಯ ಮೂಲದ ವ್ಯಕ್ತಿ ನಾಯಿಯನ್ನು ಕರೆದುಕೊಂಡು ನಡೆದು ಹೋಗುತ್ತಿದ್ದಾಗ 12ರಿಂದ 14 ವರ್ಷದ ಐವರು ಶಾಲಾ ವಿದ್ಯಾರ್ಥಿಗಳ ಗುಂಪೊಂದು ಅವರ ಕುತ್ತಿಗೆ ಮತ್ತು ಬೆನ್ನಿಗೆ ಒದ್ದು ಕೊಂದ (Murder Case) ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಹಾಗಾಗಿ ಆ ಐವರು ಶಾಲಾ ವಿದ್ಯಾರ್ಥಿಗಳನ್ನು ಲೀಸೆಸ್ಟರ್ಶೈರ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಕೊಲೆಯಾದ ವ್ಯಕ್ತಿ ಭೀಮ್ ಸೇನ್ ಕೊಹ್ಲಿ ಎಂಬುದಾಗಿ ಗುರುತಿಸಲಾಗಿದ್ದು, ಲೀಸೆಸ್ಟರ್ಶೈರ್ ಪೊಲೀಸರು ಮಂಗಳವಾರ ರಾತ್ರಿ ಭೀಮ್ ಸೇನ್ ಕೊಹ್ಲಿ ಕೊಲೆಯ ಶಂಕೆಯ ಮೇಲೆ ಐವರು ಮಕ್ಕಳನ್ನು ಬಂಧಿಸಿದ್ದಾರೆ. ಇವರಲ್ಲಿ 14 ವರ್ಷದ ಹುಡುಗ ಮತ್ತು ಹುಡುಗಿ, ಇಬ್ಬರು ಹುಡುಗಿಯರು ಮತ್ತು 12 ವರ್ಷದ ಹುಡುಗನನ್ನು ಎಂಬುದಾಗಿ ದೃಢಪಡಿಸಿದ್ದಾರೆ.

ಕೊಹ್ಲಿ ತಮ್ಮ ಮನೆಯಿಂದ ಕೇವಲ 30 ಸೆಕೆಂಡುಗಳ ದೂರದಲ್ಲಿದ್ದ ಫ್ರಾಂಕ್ಲಿನ್ ಪಾರ್ಕ್ ನಲ್ಲಿ ಸಂಜೆ 6.30ರ ಸುಮಾರಿಗೆ ಎಂದಿನಂತೆ ತಮ್ಮ ನಾಯಿಯನ್ನು ಕರೆದುಕೊಂಡು ನಡೆದುಕೊಂಡು ಹೋಗುತ್ತಿದ್ದಾಗ ಈ ಐವರು ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಮಾತನಾಡಿದ ಮೃತ ಕೊಹ್ಲಿ ಅವರ ಮಗಳು, ಅವರು ಪ್ರತಿದಿನ ನಾಯಿಯನ್ನು ವಾಕಿಂಗ್‍ಗೆ ಕರೆದೊಯ್ಯುತ್ತಿದ್ದರು. ಆ ವೇಳೆ ಆರೋಪಿಗಳು ಅವರನ್ನು ತಳ್ಳಿ, ಕುತ್ತಿಗೆಗೆ ಮತ್ತು ಬೆನ್ನುಮೂಳೆಗೆ ಒದ್ದಿದ್ದಾರೆ ಎಂದು ಹೇಳಿದ್ದಾಳೆ. ಮತ್ತು ಅವರು 40 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾಳೆ. ದಾಳಿಯ ನಂತರ ಮರದ ಕೆಳಗೆ ಮಲಗಿರುವ ತನ್ನ ತಂದೆಯ ಬಳಿಗೆ ಆಕೆ ಓಡಿ ಬಂದಿದ್ದಾಳೆ. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆದರೆ ಅಲ್ಲಿ ಅವರು ನಿಧನರಾದರು ಎಂದು ಅವಳು ತಿಳಿಸಿದ್ದಾಳೆ.

ಭಾರತೀಯ ಮೂಲದ ಭೀಮ್ ಸೇನ್ ಕೊಹ್ಲಿಯ ನೆರೆಹೊರೆಯವರು ಒಬ್ಬ ಒಳ್ಳೆಯ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಮತ್ತು ಎಲ್ಲರಿಗೂ ಸಹಾಯ ಮಾಡುತ್ತಿದ್ದರು ಎಂದು ಅವರ ಸ್ನೇಹಿತರು ಹಾಗೂ ನೆರೆಹೊರೆಯವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಹ್ಲಿಯ ಕೊಲೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹಾಗೇ ಈ ಘೋರ ಕೊಲೆ ನಡೆದ ಪಾರ್ಕ್ ನಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಹಾಗೂ ನಡೆಯುತ್ತಿರುವ ತನಿಖೆಗೆ ಸಹಾಯ ಮಾಡುವ ಯಾವುದೇ ಮಾಹಿತಿ ದೊರೆತರೂ ಅದನ್ನು ಪೊಲೀಸರಿಗೆ ನೀಡುವಂತೆ ಈ ಪ್ರದೇಶದ ಜನರಿಗೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.