ಬೆಂಗಳೂರು: ತಮ್ಮ ಅನಾರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ನಂಬುವುದು ಬೇಡ. ನಾನು ಆರೋಗ್ಯವಾಗಿದ್ದೇನೆ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ (Suresh Kumar) ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಚಿಕೂನ್ ಗುನ್ಯಾ ತಮ್ಮನ್ನು ಕೆಲ ದಿನಗಳಿಂದ ಬಾಧಿಸಿದ್ದು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ. ಜ್ವರದಿಂದ ಈಗ ಸಂಪೂರ್ಣ ಚೇತರಿಕೆ ಕಂಡಿದ್ದು, ಗುಣಮುಖನಾಗಿ ಸದ್ಯ ವಿಶ್ರಾಂತಿಯಲ್ಲಿದ್ದೇನೆ. ನನ್ನ ಬಗ್ಗೆ ಕಾಳಜಿ ಹೊಂದಿರುವ ಹಿತೈಶಿಗಳು ಅನಗತ್ಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಏಕಾಏಕಿ ಆಯಾಸಗೊಂಡ ಮಾಜಿ ಸಚಿವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುರೇಶ್ ಕುಮಾರ್ ಅವರು ಮುಡಾ ಹಗರಣ ವಿರೋಧಿಸಿ ಬಿಜೆಪಿ ನಡೆಸಿದ ಬೆಂಗಳೂರು-ಮೈಸೂರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಆ ಬಳಿಕ ಸೈಕಲ್‌ನಲ್ಲಿಯೇ ತಿರುಪತಿ ಪ್ರವಾಸ ಮಾಡಿದ್ದರು.ಅಲ್ಲಿಂದ ವಾಪಸ್ ಆದ ಬಳಿಕ ಬೆನ್ನುನೋವಿನಿಂದ ಬಳಲುತ್ತಿದ್ದರು. ಳೆದ ವಾರಾಂತ್ಯದಿಂದ ಅವರಿಗೆ ಜ್ವರ ಕಾಣಿಸಿಕೊಂಡಿತ್ತು.ಚಿಕನ್ ಗುನ್ಯಾ ಎಂದು ಹೇಳಲಾಗಿತ್ತು. ಸಾಕಷ್ಟು ಸುಸ್ತು ಇದ್ದಿದ್ದರಿಂದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಅಲ್ಲದೆ ಅವರಿಗೆ ಅಪರೂಪದ ಜ್ವರ ಬಂದಿದೆ. ಚಿಕಿತ್ಸೆಗೆ ಲಕ್ಷಾಂತರ ರೂ. ವೆಚ್ಚವಾಗುತ್ತದೆ ಎಂಬ ಸುದ್ದಿಗಳು ಹರಿದಾಡಿದ್ದವು. ಹೀಗಾಗಿ ಸ್ವತಃ ಸುರೇಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.