ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ 3,991 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು, 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಸಲ್ಲಿಸಿದ್ದಾರೆ. ಪವಿತ್ರಾ ಗೌಡ, ದರ್ಶನ್ (Actor Darshan) ಸೇರಿ ಒಟ್ಟು 17 ಆರೋಪಿಗಳ ವಿರುದ್ಧ ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್, ರೇಣುಕಾಸ್ವಾಮಿ ಕೊಲೆ ಕೇಸ್ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ದೋಷಾರೋಪ ಪಟ್ಟಿಯಲ್ಲಿ ಪವಿತ್ರಾ ಗೌಡ 1ನೇ ಆರೋಪಿಯಾಗಿ, ದರ್ಶನ್ ಅವರನ್ನು 2ನೇ ಆರೋಪಿ ಎಂದೇ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು 3 ಪ್ರತ್ಯಕ್ಷ ಸಾಕ್ಷಿಗಳು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳಿರುವುದು, ಈ ಪ್ರಕರಣದಲ್ಲಿ ಒಟ್ಟು 231 ಸಾಕ್ಷಿಗಳಿರುವುದಾಗಿ ತಿಳಿಸಲಾಗಿದೆ. ಪ್ರಕರಣ ತನಿಖೆ ಪೂರ್ಣಗೊಂಡಿಲ್ಲದಿರುವುದರಿಂದ ಸಿಆರ್‌ಪಿಸಿ 173(8) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ತನಿಖೆ ಇನ್ನೂ ಬಾಕಿ ಇದೆ. ಇದು ಪ್ರಾಥಮಿಕ ದೋಷಾರೋಪ ಪಟ್ಟಿಯಾಗಿದ್ದು, ತನಿಖೆ ಪೂರ್ಣವಾದ ಬಳಿಕ ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇನ್ನು ಎಫ್‌ಐಆರ್‌ನಲ್ಲಿ ಇರುವಂತೆಯೇ ದರ್ಶನ್ ಅವರನ್ನು 2ನೇ ಆರೋಪಿ, ಪವಿತ್ರಾ ಗೌಡ 1ನೇ ಆರೋಪಿ ಎಂದು ಉಲ್ಲೇಖಿಸಲಾಗಿದ್ದು, ಉಳಿದ 15 ಆರೋಪಿಗಳ ಪಾತ್ರ ಹಾಗೂ ಎಫ್‌ಎಸ್‌ಎಲ್, ಡಿಎನ್‌ಎ, ಮರಣೋತ್ತರ ಪರೀಕ್ಷಾ ವರದಿ, ಸ್ಥಳ ಮಹಜರು ವೇಳೆ ದೊರೆತ ಮಾಹಿತಿಯನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಒಟ್ಟು 231 ಸಾಕ್ಷಿಗಳನ್ನು ಕಲೆಹಾಕಲಾಗಿದೆ. ಈ ಪೈಕಿ ಪ್ರತ್ಯಕ್ಷ ಸಾಕ್ಷಿದಾರರು 3, ಎಫ್ಎಸ್ಎಲ್ ಹಾಗೂ ಸಿಎಫ್‌ಎಸ್‌ಎಲ್ ಸಾಕ್ಷಿಗಳು 8, ಸಿಆರ್‌ಪಿಸಿ ಸೆಕ್ಷನ್ 161 ಮತ್ತು 164 ಅಡಿ 97 ಸಾಕ್ಷಿಗಳು (ಸಿಆರ್‌ಪಿಸಿ 164 ಅಡಿಯಲ್ಲಿ 27 ಜನ ಸಾಕ್ಷಿದಾರರು ಸೇರಿ), ಪಂಚನಾಮೆ 59, ಇತರೇ ಸರ್ಕಾರಿ ಅಧಿಕಾರಿಗಳು 8 ಹಾಗೂ ಪೊಲೀಸರಿಂದ 56 ಸಾಕ್ಷ್ಯಗಳನ್ನು ಸಂಗ್ರಹಿಸಿರುವುದಾಗಿ ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.
ಲಭ್ಯ ಮಾಹಿತಿ ಆಧರಿಸಿ ಚಾರ್ಜ್‌ಶೀಟ್
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಪ್ರತಿಕ್ರಿಯಿಸಿ, ಪ್ರಕರಣದ ತನಿಖೆ ಸಂಪೂರ್ಣ ಮುಗಿದಿದ್ದು, ಇಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದಿದ್ದು, ಸಾಕಷ್ಟು ತಾಂತ್ರಿಕ ಸಾಕ್ಷ್ಯಗಳು ದೊರೆತಿವೆ. ಒಟ್ಟು 231 ಒಟ್ಟು ಸಾಕ್ಷಿದಾರರನ್ನು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದ್ದು, ಬೆಂಗಳೂರಿನ ಎಫ್ಎಸ್ಎಲ್‌ನಿಂದ ಎಲ್ಲಾ ವರದಿಗಳು ಬಂದಿವೆ. ತಾಂತ್ರಿಕ ವಿಶ್ಲೇಷಣೆಗಾಗಿ ಕೆಲವು ಎಲೆಕ್ಟ್ರಾನಿಕ್ ಸಲಕರಣೆಗಳನ್ನು ಹೈದರಾಬಾದ್‌ನ ಸಿಎಫ್ಎಸ್ಎಲ್ ಕಳುಹಿಸಲಾಗಿತ್ತು. ಅಲ್ಲಿನ ವರದಿ ಭಾಗಶಃ ಬಂದಿದ್ದು, ಸಂಪೂರ್ಣ ಬಂದಿರಲಿಲ್ಲ, ಲಭ್ಯ ಇರುವ ಮಾಹಿತಿ ಆಧರಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ಸರ್ಕಾರದ ಪರವಾಗಿ ವಾದಿಸಲು ವಿಶೇಷ ಅಭಿಯೋಜಕರನ್ನು ನೇಮಿಸಲಾಗಿದೆ. ಅವರ ಸೂಚನೆಯಂತೆ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಸಾಮಾಜಿಕ ಜಾಲತಾಣದಿಂದಲೂ ಸಾಕಷ್ಟು ತಾಂತ್ರಿಕ ಸಾಕ್ಷ್ಯಗಳು ಲಭ್ಯವಾಗಿದ್ದು, ಅವನ್ನು ತನಿಖೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು.