ಭ್ರಷ್ಟಾಚಾರ ದೇಶದ ಎಲ್ಲೆಡೆ ವ್ಯಾಪಕವಾಗಿ ನಡೆಯುತ್ತಿದೆ. ಅಧಿಕಾರಿಗಳು ಹಣದಾಸೆಗೆ ಭ್ರಷ್ಟಾಚಾರದಲ್ಲಿ ತೊಡಗುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ಪರದಾಡುವಂತಾಗುತ್ತದೆ. ಹಾಗಾಗಿ ಅಧಿಕಾರಿಗಳು ನಡೆಸುವಂತಹ ಭ್ರಷ್ಟಾಚಾರವನ್ನು ಬೆಂಬಲ ನೀಡದೆ ಜನಸಾಮಾನ್ಯರೇ ಅವರನ್ನು ಮೆಟ್ಟಿ ನಿಲ್ಲಬೇಕು. ಹೀಗೆ ಮಾಡಿದಾಗ ಮಾತ್ರ ಅವರು ಸರಿಯಾಗಿ ಬುದ್ಧಿ ಕಲಿಯಬಹುದು. ಇಂತಹದೊಂದು ಘಟನೆ ಇತ್ತೀಚೆಗೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಗ್ರಾಮದ ಅಧ್ಯಕ್ಷನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವ್ಯಕ್ತಿಯೊಬ್ಬರು ಪ್ರತಿಭಟಿಸಿದ ರೀತಿ ಸೋಶಿಯಲ್ ವೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದೆ. ಈ ವಿಡಿಯೊ ನೋಡಿದರೆ ಹೀಗೂ ಪ್ರತಿಭಟನೆ ನಡೆಸಬಹುದೇ ಎಂದು ನೋಡುಗರು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದಂತು ಖಂಡಿತ.
ಇದು ಜುಲೈನಿಂದ ರಾಜ್ಯದಲ್ಲಿ ನಡೆದ ಎರಡನೇ ಘಟನೆಯಾಗಿದೆ. ನೀಮುಚ್ ಜಿಲ್ಲಾಧಿಕಾರಿ ಹಿಮಾಂಶು ಚಂದ್ರ ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ದೂರನ್ನು ಹೊಸದಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈ ಪ್ರತಿಭಟನೆಯಲ್ಲಿ ಕೊರಳಿಗೆ ದಾಖಲೆಗಳ ಸರಮಾಲೆ ಧರಿಸಿದ ವ್ಯಕ್ತಿಯನ್ನು ಮುಖೇಶ್ ಪ್ರಜಾಪತ್ ಎಂದು ಗುರುತಿಸಲಾಗಿದೆ. ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‍ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದೆ. ವಿಡಿಯೊದಲ್ಲಿ, ಪ್ರಜಾಪತ್ ಅವರು ಜಿಲ್ಲಾಧಿಕಾರಿ ಕಚೇರಿಯ ಆವರಣದೊಳಗೆ ಕುತ್ತಿಗೆಗೆ ಕಾಗದಗಳ ಸರಮಾಲೆ ಹಾಕಿಕೊಂಡು ರಸ್ತೆಯಲ್ಲಿ ಉರುಳುತ್ತಾ ಬರುತ್ತಿದ್ದಾರೆ. ಅವರು ಧರಿಸಿದ ದಾಖಲೆಗಳು ಅವರ ಗ್ರಾಮ ಕಂಕರಿಯಾದ ಅಧ್ಯಕ್ಷನ ವಿರುದ್ಧ ಭ್ರಷ್ಟಾಚಾರದ ದೂರುಗಳಾಗಿವೆ ಎಂದು ತಿಳಿದು ಬಂದಿದೆ.
ಕಳೆದ 6-7 ವರ್ಷಗಳಿಂದ ತಮ್ಮ ಕುಂದುಕೊರತೆಗಳನ್ನು ಎತ್ತಿ ತೋರಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಜಾಪತ್ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮಮತಾ ಖೇಡೆ ಮಾತನಾಡಿ, ಪ್ರಜಾಪತ್ ಅವರು ಗ್ರಾಮದ ಅಧ್ಯಕ್ಷರ ವಿರುದ್ಧ ದೂರು ನೀಡಿದ್ದಾರೆ. ಅವರು ಮಾಡಿದ ಆರೋಪಗಳ ಬಗ್ಗೆ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಈಗಾಗಲೇ ತನಿಖೆ ನಡೆಸಿದೆ ಎಂದು ಹೇಳಿದರು. ಪ್ರತಿಭಟನೆಯ ನಂತರ, ಜಿಲ್ಲಾಧಿಕಾರಿಯ ನಿರ್ದೇಶನದ ಮೇರೆಗೆ ಹೊಸ ತನಿಖೆ ನಡೆಸಲಾಗುವುದು ಎಂದು ಖೇಡೆ ಹೇಳಿದ್ದಾರೆ.
ಪ್ರತಿ ಮಂಗಳವಾರ, ಎಲ್ಲಾ ಜಿಲ್ಲೆಗಳ ಕಲೆಕ್ಟರ್ ಕಚೇರಿಯ ಆವರಣದಲ್ಲಿ ಸಾರ್ವಜನಿಕ ವಿಚಾರಣೆಯನ್ನು ನಡೆಸಲಾಗುತ್ತದೆ, ಅಲ್ಲಿ ಹಿರಿಯ ಅಧಿಕಾರಿಗಳು ನಾಗರಿಕರು ತಿಳಿಸುವ ಕುಂದುಕೊರತೆಗಳು ಮತ್ತು ದೂರುಗಳನ್ನು ಪರಿಶೀಲಿಸುತ್ತಾರೆ. ಈ ಹಿಂದೆ ಜುಲೈನಲ್ಲಿ, ಮಂದ್ಸೌರ್ ಜಿಲ್ಲೆಯ ಹಿರಿಯ ರೈತರೊಬ್ಬರು ಭೂ ಕಬಳಿಕೆಯ ಬಗ್ಗೆ ಆಡಳಿತವು ತನ್ನ ಕುಂದುಕೊರತೆಗಳನ್ನು ಪರಿಹರಿಸಲಿಲ್ಲ ಎಂದು ಆರೋಪಿಸಿ ಕಲೆಕ್ಟರ್ ಕಚೇರಿಯ ನೆಲದ ಮೇಲೆ ಉರುಳಾಡಿದ್ದರು ಎನ್ನಲಾಗಿದೆ.
ವಿಡಿಯೊಗಾಗಿ ಈ ಲಿಂಕ್ ಕ್ಲಿಕ್ ಮಾಡಿ
https://x.com/PTI_News/status/1830989453260922902