Thursday, 19th September 2024

Honey Trap: ಲೈಂಗಿಕ ಕ್ರಿಯೆಯ ಆಸೆ ತೋರಿಸಿ ಹನಿಟ್ರ್ಯಾಪ್‌; ಮರ್ಯಾದೆಗೆ ಅಂಜಿ ಕೋಟಿ ರೂ. ಕೊಟ್ಟ ನಿವೃತ್ತ ಅಧಿಕಾರಿ!

Honey Trap

ಇತ್ತೀಚಿನ ದಿನಗಳಲ್ಲಿ ಜನರು ಜೀವಕ್ಕಿಂತ ಹಣಕ್ಕೆ ಹೆಚ್ಚು ಬೆಲೆ ನೀಡುತ್ತಿದ್ದಾರೆ. ಹಾಗಾಗಿ ಜನ ಹಣ ಸಂಪಾದಿಸಲು ಉತ್ತಮ ಮಾರ್ಗಗಳನ್ನು ಬಿಟ್ಟು ಕೆಟ್ಟ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ದರೋಡೆ, ಕಳ್ಳತನ, ಕೊಲೆ, ಸುಲಿಗೆಯಂತಹ ದುಷ್ಕೃತ್ಯಗಳನ್ನು ಮಾಡುವ ಮೂಲಕ ಹಣವನ್ನು ಗಳಿಸಲು ಮುಂದಾಗಿದ್ದಾರೆ. ಇದರಿಂದ ಅನೇಕ ಜನಸಾಮಾನ್ಯರ ಜೀವನ ಬಲಿಯಾಗುತ್ತಿದೆ. ಇತ್ತೀಚೆಗೆ ಜನರು ಹಣ ಸಂಪಾದಿಸಲು ಮತ್ತೊಂದು ಕೆಟ್ಟ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅದೇನೆಂದರೆ ಹನಿ ಟ್ರ್ಯಾಪ್ (Honey Trap). ಇದಕ್ಕೆ ಹಣವಿರುವಂತಹ ಶ್ರೀಮಂತ ವ್ಯಕ್ತಿಗಳು ಹೆಚ್ಚು ಬಲಿಯಾಗುತ್ತಿದ್ದಾರೆ. ಹಣವನ್ನು ವಸೂಲಿ ಮಾಡಲು ಈ ಗ್ಯಾಂಗ್ ಹಣವಿರುವ ವ್ಯಕ್ತಿಯೊಂದಿಗೆ ಮಹಿಳೆಯೊಬ್ಬಳನ್ನು ಕಳುಹಿಸಿ ಅವರ ಜೊತೆ ಸ್ನೇಹ ಬೆಳೆಸಿ ಕೊನೆಗೆ ಆ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿ ಅದಕ್ಕೆ ಸಂಬಂಧಪಟ್ಟ ವಿಡಿಯೊ, ಪೋಟೊಗಳನ್ನು ತೆಗೆದು ಅದನ್ನು ಆ ವ್ಯಕ್ತಿಗೆ ತೋರಿಸಿ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಾರೆ. ಇಂತಹ ಘಟನೆ ಇತ್ತೀಚಿನ ದಿನಗಳಲ್ಲಿ ಹಲವು ಕಡೆ ನಡೆಯುತ್ತಿದೆ. ಇದೀಗ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಕೂಡ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ನಿವೃತ್ತ ಬಿಎಚ್ಇಎಲ್ ಅಧಿಕಾರಿಯನ್ನು ಹನಿಟ್ರ್ಯಾಪ್ ಗ್ಯಾಂಗ್ ಮೋಸಗೊಳಿಸಿ ಅವರಿಂದ ಸಾಕಷ್ಟು ಹಣವನ್ನು ಸುಲಿಗೆ ಮಾಡಿದೆ.

ನಿವೃತ್ತ ಬಿಎಚ್ಇಎಲ್ ಅಧಿಕಾರಿಯನ್ನು ಸೆಳೆಯಲು ಮಹಿಳೆಯನ್ನು ಛೂ ಬಿಟ್ಟ ಗ್ಯಾಂಗ್‌ ಮಹಿಳೆ ಹಾಗೂ ಅಧಿಕಾರಿ ಹೋಟೆಲ್‌ನಲ್ಲಿದ್ದಾಗ, ಅವರ ಸರಸ ಸಲ್ಲಾಪದ ವಿಡಿಯೊಗಳನ್ನು ರೆಕಾರ್ಡ್ ಮಾಡಿ ನಂತರ ಈ ವಿಡಿಯೊಗಳನ್ನು ಅಧಿಕಾರಿಗೆ ತೋರಿಸಿ ಬ್ಲ್ಯಾಕ್ಮೇಲ್ ಮಾಡಲು ಶುರು ಮಾಡಿದ್ದಾರೆ. ವಿಡಿಯೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿ ಅಧಿಕಾರಿಯಿಂದ 1 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ವಸೂಲಿ ಮಾಡಿದ್ದಾರೆ.

ಈ ಗ್ಯಾಂಗ್ ಶುರುವಿನಲ್ಲಿ ಮಹಿಳೆಯ ಮೂಲಕ ಅವರನ್ನು ಹೋಟೆಲ್‍ಗೆ ಕರೆಯಿಸಿ, ನಂತರ ಅಲ್ಲಿ ಅವರು ಕ್ಲೋಸ್ ಆಗಿರುವ ವಿಡಿಯೊಗಳನ್ನು ರೆಕಾರ್ಡ್ ಮಾಡಿ ನಂತರ ಅದನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದರು. ಗ್ಯಾಂಗ್‍ನ ಒಬ್ಬ ಸದಸ್ಯ, ಅಪರಾಧ ವಿಭಾಗದ ಅಧಿಕಾರಿಯಂತೆ ನಟಿಸಿ, ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಹಣವನ್ನು ಸುಲಿಗೆ ಮಾಡಿದ್ದಾನೆ. ನಿರಂತರ ಬೆದರಿಕೆಗಳಿಂದ ಹತಾಶರಾದ ಅಧಿಕಾರಿ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಶೀಘ್ರದಲ್ಲೇ ತನಿಖೆಯನ್ನು ಪ್ರಾರಂಭಿಸಿದರು ಮತ್ತು ಈ ಪ್ಲ್ಯಾನ್‌ನಲ್ಲಿ ಭಾಗಿಯಾಗಿರುವ ರಷ್ಯಾದ ಮಹಿಳೆ ಸೇರಿದಂತೆ ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಕಾಮೆಂಟ್ ಮಾಡಿದ ಹುಡುಗನಿಗೆ ಹುಡುಗಿ ಕೊಟ್ಟ ಶಿಕ್ಷೆ ಏನು ನೋಡಿ!

ದೇಶದ ವಿವಿಧ ಪ್ರದೇಶಗಳಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಈ ಯೋಜನೆಯಲ್ಲಿ ವ್ಯಕ್ತಿಗಳನ್ನು ಬಲೆಗೆ ಬೀಳಿಸಿ ನಂತರ ಪೋಟೊಗಳು ಅಥವಾ ವಿಡಿಯೊಗಳೊಂದಿಗೆ ಅವರನ್ನು ಬ್ಲ್ಯಾಕ್ಮೇಲ್ ಮಾಡುವ ಗ್ಯಾಂಗ್ ಅನ್ನು ಒಳಗೊಂಡಿದೆ. ಇದೇ ರೀತಿಯ ಹಲವಾರು ಪ್ರಕರಣಗಳು ಬೆಳಕಿಗೆ ಬಂದರೂ, ಜನರು ಈಗಲೂ ಈ ಹಗರಣಗಳಿಗೆ ಬಲಿಯಾಗುತ್ತಲೇ ಇದ್ದಾರೆ.