Friday, 22nd November 2024

Teachers Day: ಕಲಿಯುಗದಲ್ಲಿ ಶಿಷ್ಯರಿಗೆ ಗುರುಗಳು ವಂದಿಸಿ ವಿದ್ಯೆ ಕಲಿಸುವಂತಾಗಿದೆ: ಡಿಕೆಶಿ

Teachers Day

ಬೆಂಗಳೂರು: ತ್ರೇತಾಯುಗದಲ್ಲಿ ಶಿಕ್ಷಕರು ಶಿಷ್ಯರಿಗೆ ಜಂಗಿಸಿ ವಿದ್ಯೆ ಕಲಿಸುತ್ತಿದ್ದರು, ದ್ವಾಪರ ಯುಗದಲ್ಲಿ ಗುರುಗಳು ಶಿಷ್ಯರಿಗೆ ದಂಡಿಸಿ ವಿದ್ಯೆ ಕಲಿಸುತ್ತಿದ್ದರು. ಆದರೆ ಕಲಿಯುಗದಲ್ಲಿ ಶಿಷ್ಯರಿಗೆ ಗುರು ವಂದಿಸಿ ವಿದ್ಯೆ ಕಲಿಸುವಂತಾಗಿದೆ. ಹೀಗಾಗಿ ಈ ಕಾಲಘಟ್ಟದಲ್ಲಿ ಶಿಕ್ಷಕರ (Teachers Day) ಜವಾಬ್ದಾರಿ ಹೆಚ್ಚಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಿಕ್ಷಕರ ದಿನ, ರಾಜೀವ್ ಗಾಂಧಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳನ್ನು ಜನ ಬೇಗ ಮರೆಯುತ್ತಾರೆ, ಆದರೆ ಗುರುಗಳನ್ನು ಬೇಗ ಮರೆಯುವುದಿಲ್ಲ. ಅವರಿಗೆ ನೀಡಬೇಕಾದ ಗೌರವ ನೀಡುತ್ತಾರೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಕರನ್ನು ಮರೆಯುವುದಿಲ್ಲ. ಶಿಕ್ಷಕರ ಮೇಲೆ ವಿಶೇಷ ನಂಬಿಕೆ ವಿಶ್ವಾಸ ಇರುತ್ತದೆ. ಮಕ್ಕಳು ಮನೆಯಲ್ಲಿ ತಂದೆ-ತಾಯಿ ಮಾತು ಕೇಳದಿದ್ದರೂ ಶಿಕ್ಷಕರು ಹೇಳಿದ್ದನ್ನು ಕೇಳುತ್ತಾರೆ ಎಂದು ಹೇಳಿದರು.

ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ರಾಜಕಾರಣಿ ಎಂದು ಅನೇಕ ಬಾರಿ ಹೇಳಿದ್ದೇನೆ. ನಾನು ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲ. 47ನೇ ವಯಸ್ಸಿಗೆ ಪದವಿ ಪಡೆದೆ. ಶಿಕ್ಷಣದ ಬೆಲೆ ನನಗೆ ಅರಿವಿದೆ. ನಾನು ಸದನಕ್ಕೆ ಮೊದಲ ಬಾರಿಗೆ ಹೋದಾಗ ಬಂಗಾರಪ್ಪ, ರಾಮಕೃಷ್ಣ ಹೆಗಡೆ, ನಂಜೇಗೌಡರು ಸೇರಿದಂತೆ ಅನೇಕ ಮಹಾನುಭಾವರು ಇದ್ದರು. ಅವರ ಮಾತು, ವಿಚಾರ ನೋಡಿದಾಗ ಸರಿಯಾದ ಶಿಕ್ಷಣ ಇಲ್ಲದೆ ನಾವು ಸದನಕ್ಕೆ ಬರಬಾರದು ಎಂದು ನನಗೆ ಅನಿಸಿತ ಎಂದು ತಿಳಿಸಿದರು.

ಐಟಿ ಬಿಟಿ ಕ್ಷೇತ್ರದಲ್ಲಿ ರಾಜೀವ್ ಗಾಂಧಿ ಅವರ ಕೊಡುಗೆಯಿಂದ ಇಂದು ನಮಗೆ ದೊಡ್ಡ ಶಕ್ತಿ ಬಂದಿದ್ದು, ಫೋನ್ ನಲ್ಲಿ ನಮಗೆ ಎಲ್ಲಾ ಮಾಹಿತಿ ಸಿಗಲಿದೆ. ಈಗ ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಶಿಕ್ಷಣ ನೀಡಬೇಕು. ಬೆಂಗಳೂರು, ಕರ್ನಾಟಕ ದೇಶದಲ್ಲೇ ಉನ್ನತ ಶಿಕ್ಷಣ ವ್ಯವಸ್ಥೆ ಇದೆ. ಇಲ್ಲಿ ಓದಿದ ಎಂಜಿನಿಯರ್, ಡಾಕ್ಟರ್ ಗಳು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಇಂತಹ ಶಿಕ್ಷಣ ವ್ಯವಸ್ಥೆ ಇದೆ ಎಂದು ಹೇಳಿದರು.

ಶಿಕ್ಷಣದಲ್ಲಿ ಏನಾದರೂ ಬದಲಾವಣೆ ತರಬೇಕು ಎಂದು ತೀರ್ಮಾನಿಸಿದ್ದೇನೆ. ಪಂಚಾಯ್ತಿ ಮಟ್ಟದಲ್ಲಿ ಸರ್ಕಾರದ ಹಣ ವಿನಿಯೋಗಿಸದೆ ಖಾಸಗಿ ಕಂಪನಿಗಳ ಸಿಎಸ್ಆರ್ ನಿಧಿಯಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುವುದು. ಈ ಶಾಲೆಗಳನ್ನು ಖಾಸಗಿ ಶಾಲೆಯವರು ಜವಾಬ್ದಾರಿ ವಹಿಸಿಕೊಂಡು ಶಿಕ್ಷಕರ ಕೊರತೆ ಇದ್ದರೆ ಶಿಕ್ಷಕರನ್ನು ನೀಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ವಿಶೇಷ ಯೋಜನೆ ಮಾಡಲಾಗಿದೆ.

ಇದಕ್ಕಾಗಿ ರಾಜ್ಯದಲ್ಲಿ ಬರುವ ₹8800 ಕೋಟಿ ಸಿಎಸ್ ಆರ್ ನಿಧಿಯನ್ನು ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ಶಾಲೆಗಳ ನಿರ್ಮಾಣ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುವಂತೆ ಮನವಿ ಮಾಡಲಾಗಿದೆ. ಇದಕ್ಕಾಗಿ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Social Value: ಮಕ್ಕಳಿಗೆ ವಿದ್ಯೆಯೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸಿ

ನಮ್ಮ ಜಿಲ್ಲೆಯಲ್ಲಿ 20 ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ನಮ್ಮ ಹಳ್ಳಿಯ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಶಕ್ತಿ ತುಂಬಲಾಗುವುದು. 10ನೇ ತರಗತಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಾಲಕಿ ಮೊದಲ ಸ್ಥಾನ ಪಡೆದಿದ್ದಾಳೆ. ಗ್ರಾಮೀಣ ಭಾಗದ ಮಕ್ಕಳು ಕೂಡ ಉನ್ನತ ವಿದ್ಯಾಭ್ಯಾಸ ಮಾಡುವ ಸಾಮರ್ಥ್ಯವಿದ್ದು ಅವರಿಗೆ ನಾವು ಪ್ರೋತ್ಸಾಹ, ಉತ್ತೇಜನ ನೀಡಬೇಕು. ನಮ್ಮ ಪಕ್ಷದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಿಕ್ಷಣ ಕ್ಷೇತ್ರದಿಂದ ನಮ್ಮ ಪಕ್ಷದಲ್ಲಿ ಪ್ರತಿನಿಧಿಗಳು ಇದ್ದಾರೆ. ಈಗ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಶಿಕ್ಷಕರ ಜತೆ ನಿಲ್ಲಲಿದೆ. ನೀವು ಪಕ್ಷದ ಆಧಾರಸ್ತಂಭ ಎಂದು ಹೇಳಿದರು.