Saturday, 23rd November 2024

ಕಾಶ್ಮೀರ ಸಮಸ್ಯೆಗೆ ಮೌಂಟ್’ಬ್ಯಾಟನ್ ಕಾಣಿಕೆ

ಶಶಾಂಕಣ

ಶಶಿಧರ ಹಾಲಾಡಿ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ವರ್ಷ, ಅಂದರೆ 1947ರಲ್ಲಿ, ಅಕ್ಟೋಬರ್ ತಿಂಗಳಿನ ಇದೇ ವಾರ ಪಾಕಿಸ್ತಾನವು ನಮ್ಮ ಮೇಲೆ ದಾಳಿ ಮಾಡಿತು.

22.10.1947ರಂದು ಆರಂಭಗೊಂಡ ಆ ಮೊದಲ ಯುದ್ಧವು 1.1.1949ರ ಕದನ ವಿರಾಮದ ತನಕ ಮುಂದುವರಿಯಿತು. ಒಂದು ವರ್ಷ, ಎರಡು ತಿಂಗಳು ನಡೆದ ಈ ಯುದ್ಧವು ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಪಾಕಿಸ್ತಾನದ ದುಸ್ಸಾಹಸಕ್ಕೆ ವಿಫಲ ಸಾಕ್ಷಿ ಯಾಯಿತು. ಜತೆಗೇ ಸಾಕಷ್ಟು ಆಸ್ತಿ, ಜೀವ ನಷ್ಟಕ್ಕೂ ಕಾರಣ ಎನಿಸಿತು. ಅಂದು ಕಾಶ್ಮೀರದ ವಿಶಾಲ ಭೂಭಾಗವನ್ನು ಪಾಕಿಸ್ತಾ ನವು ಅನಧಿಕೃತವಾಗಿ ಆಕ್ರಮಿಸಿಕೊಂಡು, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಎಂಬ ವಿವಾದಿದ ಭೂಭಾಗದ ಸೃಷ್ಟಿಗೆ ಕಾರಣ ವೆನಿಸಿತು. ಇಂದಿಗೂ ಆ ಪಾಕ್ ಆಕ್ರಮಿತ ಕಾಶ್ಮೀರವು, ಭಾರತ ಭೂಭಾಗ.

ಆದರೇನು ಮಾಡುವುದು, ಅದೀಗ ಪಾಕಿಸ್ತಾನದ ವಶದಲ್ಲಿದೆ ಮಾತ್ರವಲ್ಲ, ಆ ದೇಶವು ಭಯೋತ್ಪಾದಕರನ್ನು ಉತ್ಪಾದಿಸುವ ಕಾರ್ಖಾನೆಯಾಗಿ ಪರಿವರ್ತನೆಗೊಂಡಿದೆ! ನಮ್ಮ ದೇಶದ ಈಚಿನ ದಶಕಗಳ ಅತಿ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಜಮ್ಮು – ಕಾಶ್ಮೀರದ ಈ ಶೋಚನೀಯ ಸ್ಥಿತಿಗೆ ಕಾರಣವೇನು? ಮಹಾರಾಜ ಹರಿಸಿಂಗ್‌ನು ಅಧಿಕೃತವಾಗಿ ತನ್ನ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಿದರೂ, ಪಾಕ್ ಆಕ್ರಮಿತ ಪ್ರದೇಶದಿಂದ ಪಾಕಿಸ್ತಾನವನ್ನು ಹೊರದೂಡಲು ಏಕೆ ಸಾಧ್ಯವಾಗುತ್ತಿಲ್ಲ? ದೇಶಕ್ಕೆ ಸ್ವಾತಂತ್ರ್ಯ ದೊರೆತ ಎರಡೇ ತಿಂಗಳುಗಳಲ್ಲಿ ಪಾಕಿಸ್ತಾನವು ಕಾಶ್ಮೀರದ ಮೇಲೆ ಆಕ್ರಮಿಸುವ ಸನ್ನಿವೇಶ ಸೃಷ್ಟಿಯಾದುದು ಹೇಗೆ? ಭಾರತಕ್ಕೆ ಇಂದಿಗೂ ತಲೆನೋವಾಗಿರುವ ಕಾಶ್ಮೀರ ಸಮಸ್ಯೆ ರೂಪುಗೊಳ್ಳಲು ಯಾವ ಯಾವ ವ್ಯಕ್ತಿಗಳು ಕಾರಣ? ಆ ಅವಧಿಯಲ್ಲಿ ನಮ್ಮ ಮೊದಲ ಪ್ರಧಾನಿಯಾಗಿದ್ದ ನೆಹರೂ ಅವರ ತಪ್ಪು ನಡೆಯಿಂದಾಗಿ, ಕಾಶ್ಮೀರ ಸಮಸ್ಯೆಯು ಅಂತಾ ರಾಷ್ಟ್ರೀಯ ಗಮನ ಸೆಳೆಯುವಂತಾಯಿತು ಎಂಬ ಒಂದು ಅಭಿಪ್ರಾಯ ಇಂದು ಸಾರ್ವತ್ರಿಕ ಎನಿಸಿದೆ.

1947ರಲ್ಲಿ ಹೊಸ ದೇಶ ಎದುರಿಸುತ್ತಿದ್ದ ಆ ಬಿಕ್ಕಟ್ಟಿನ ಸನ್ನಿವೇಶದಲ್ಲಿ ದೇಶ ಕಟ್ಟುವ ಸಾಹಸದ ನಡುವೆ, ಘಟಿಸಿದ ಎಲ್ಲಾ ಏರು ಪೇರುಗಳಿಗೂ, ಆ ಕಾಲಘಟ್ಟದ ಪ್ರಧಾನಿಯೇ ಕಾರಣ ಎನಿಸುವುದು ಸಹಜ ಪ್ರತಿಕ್ರಿಯೆ. ಆದರೆ, ಅದೇ ಕಾಲಘಟ್ಟದಲ್ಲಿ ಭಾರತದ ಸೇನೆಯ ಮೇಲೆ ನಿಯಂತ್ರಣ ಹೊಂದಿದ್ದ ಆ ಒಬ್ಬ ಬ್ರಿಟಿಷ್ ವ್ಯಕ್ತಿಯ ಎಡವಟ್ಟುಗಳನ್ನು, ತಪ್ಪು ನಡೆಗಳನ್ನು, ದಾರ್ಷ್ಟ್ಯವನ್ನು, ನಿರ್ಲಕ್ಷ್ಯವನ್ನು ನಾವು ಭಾರತೀಯರು ಬಹುಪಾಲು ಮರೆತೇ ಬಿಟ್ಟಿದ್ದೇವೆ!

ಆತನೇ ಲಾರ್ಡ್ ಮೌಂಟ್‌ಬ್ಯಾಟನ್! ದಶಕಗಳ ಸೇನಾ ಕಾರ್ಯಾಚರಣೆಯ ಅನುಭವ ಪಡೆದು, ಅದೇ ಬಲದಿಂದ ಭಾರತದ ಕೊನೆಯ ವೈಸ್‌ರಾಯ್ ಆಗಿ ನಿಯುಕ್ತಿಗೊಂಡ ಮೌಂಟ್‌ಬ್ಯಾಟನ್‌ನ ಕುಕೃತ್ಯಗಳನ್ನು ನಾವಿಂದು ಬಹುಮಟ್ಟಿಗೆ ಮರೆತಿದ್ದೇವೆ. ಆದರೆ, ಕಾಶ್ಮೀರ ಸಮಸ್ಯೆ ಸೇರಿದಂತೆ, 1947-1949ರ ಅವಧಿಯಲ್ಲಿ ನಮ್ಮ ದೇಶ ಎದುರಿಸಿದ ತಲ್ಲಣ, ಸಂಕಷ್ಟ, ಬೇಗುದಿ, ಕೋಮು ಗಲಭೆ, ಜನರ ವಲಸೆ, ಸಾಲು ಸಾಲು ಸಾವುಗಳಿಗೆ ಈ ಬ್ರಿಟಿಷ್ ಅಧಿಕಾರಿ ಬಹುಮಟ್ಟಿಗೆ ನೇರವಾಗಿ ಕಾರಣಪುರುಷ. ಆದರೆ, ಅದೇಕೋ ಆತ ಮಾಡಿದ ತಪ್ಪುಗಳನ್ನು ನಮ್ಮ ಮೊದಲ ಸರಕಾರ ಕ್ಷಮಿಸಿಬಿಟ್ಟಂತೆ ವರ್ತಿಸಿದ್ದರಿಂದ, ಆತನ ಘನಘೋರ ಎಡವಟ್ಟುಗಳು ಮರೆಗೆ ಸರಿದುಹೋದವು.

ಕಾಶ್ಮೀರ ಸಮಸ್ಯೆ ಉದ್ಭವಗೊಳ್ಳಲು ಮೌಂಟ್‌ಬ್ಯಾಟನ್ ಸಹ ಕಾರಣ ಎನಿಸಿದರೂ, ಅವನ ಹೆಸರು ಹೆಚ್ಚು ಮುಂಚೂಣಿಗೆ
ಬಾರದೇ ಇರುವುದು ವಿಸ್ಮಯ ಎನಿಸುತ್ತದೆ. ಬ್ರಿಟಿಷ್ ಸರಕಾರದ ಈ ಸೇನಾ ಮುಖ್ಯಸ್ಥ, ಚರ್ಚಿಲ್ ಆಪ್ತ ಮತ್ತುಪ್ರಭಾವಶಾಲಿ ವ್ಯಕ್ತಿ, ಭಾರತದ ಕೊನೆಯ ಗವರ್ನರ್ ಜನರಲ್ ಅಥವಾ ವೈಸ್‌ರಾಯ್ (2.2.1947ರಿಂದ 15.8.1947) ಆಗಿದ್ದುದರ ಜತೆಯಲ್ಲೇ, 15.8.1947 ರಿಂದ 21.6.1948ರ ತನಕ ಸ್ವತಂತ್ರ ಭಾರತದ ಗವರ್ನರ್ ಜನರಲ್ ಆಗಿ ಅಧಿಕಾರ ಚಲಾಯಿಸಿದ್ದ. ಆ ಅವಧಿಯಲ್ಲಿ ಕಾಶ್ಮೀರದ ಸಮಸ್ಯೆಗೆ ತನ್ನದೇ ಆದ ಕಾಣಿಕೆ ಸಲ್ಲಿಸಿದ್ದಾನೆ ಈ ಭೂಪ. ಆಗ ನೆಹರೂ ಪ್ರಧಾನಿಯಾಗಿದ್ದರು.

ಪಟೇಲರು ಗೃಹಮಂತ್ರಿಯಾಗಿದ್ದರು. 15.8.1947ರಂದು ಕೆಂಪುಕೋಟೆಯಲ್ಲಿ ಸಂಭ್ರಮದಿಂದ ಲಾರ್ಡ್ ಮೌಂಟ್‌ಬ್ಯಾಟನ್ ಮತ್ತು
ಲೇಡಿ ಮೌಂಟ್‌ಬ್ಯಾಟನ್ ಸಮ್ಮುಖದಲ್ಲಿ ನೆಹರೂ ಮತ್ತು ಇತರರು ಭಾರತದ ಬಾವುಟ ಹಾರಿಸಿ ಸ್ವಾತಂತ್ರ್ಯದ ಸಂತಸವನ್ನು ಆಚರಿಸಿದರು. ಇರಲಿ, ಅದನ್ನು ತಪ್ಪು ಎನ್ನಲಾಗದು. ಆದರೆ, ಅದೇ ವಾರ, ಪಾಕಿಸ್ತಾನದ ಸೇನೆಯ ಬೆಂಬಲ ಪಡೆದ ಪಶ್ತೂನ್ ಮತ್ತು ಇತರ ಬುಡಕಟ್ಟು ಯೋಧರು, ಕಾಶ್ಮೀರದ ಮೇಲೆ ದಾಳಿ ಆರಂಭಿಸಿದ್ದರು. ಅದಾಗಿ ಎರಡೇ ತಿಂಗಳಲ್ಲಿ, 22.10.1947ರಂದು, ಪಾಕಿಸ್ತಾನ ಸೇನೆಯು ಸಹ ಅವರೊಂದಿಗೆ ಸೇರಿಕೊಂಡು, ಭಾರತದ ಮೇಲೆ ಆಕ್ರಮಣ ಮಾಡಿತು.

ಕಾಶ್ಮೀರ ಕಣಿವೆಯ ಮೀರ್‌ಪುರ್ ಮೊದಲಾದ ಪಟ್ಟಣಗಳಲ್ಲಿ ನಾಗರಿಕರನ್ನು ಕೊಲ್ಲುತ್ತಾ ರಕ್ತದ ಹೊಳೆಯನ್ನೇ ಹರಿಸಿದ್ದರು. ಕಾಶ್ಮೀರದ ರಾಜ ಹರಿಸಿಂಗ್‌ನು ಬೆದರಿ, ಸೇನಾ ಸಹಾಯಕ್ಕಾಗಿ ಭಾರತವನ್ನು ವಿನಂತಿ ಮಾಡಿಕೊಂಡ. ಆದರೆ ಸೇನೆಯನ್ನು ಶ್ರೀನಗರದತ್ತ ಕಳಿಸುವ ಅಧಿಕಾರ ನಮ್ಮ ಪ್ರಧಾನಿಗಾಗಲೀ, ಗೃಹಮಂತ್ರಿಗಾಗಲೀ ಇರಲಿಲ್ಲ. ಕಾಶ್ಮೀರವನ್ನು ಉಳಿಸಲು ಸೇನೆ ಕಳಿಸುವಂತೆ ಅವರಿಬ್ಬರೂ ಆ ಬ್ರಿಟಿಷ್ ವ್ಯಕ್ತಿಯ ಮನ ಒಲಿಸಬೇಕಾಗಿತ್ತು. ಅವನೇ ಮೌಂಟ್ ಬ್ಯಾಟನ್!

ಕಾಶ್ಮೀರ ಕಣಿವೆಯಲ್ಲಿ ಸಾವಿರಾರು ಜನ ಸಾಯುತ್ತಿದ್ದರೂ, ಪಾಕಿಸ್ತಾನದ ಸೇನೆ ಶ್ರೀನಗರದ ಹೊರವಲಯದತ್ತ  ಧಾವಿಸುತ್ತಿದ್ದರೂ, ಮೌಂಟ್‌ಬ್ಯಾಟನ್ ತಕ್ಷಣ ಸೇನೆ ಕಳುಹಿಸಲಿಲ್ಲ. ಮಹಾರಾಜ ಹರಿಸಿಂಗ್‌ನು ಭಾರತದಲ್ಲಿ ವಿಲೀನವಾಗುವ ಪತ್ರಕ್ಕೆ ಸಹಿ ಹಾಕಿದ
ನಂತರವಷ್ಟೇ, ಸೇನೆಯನ್ನು ಕಳುಹಿಸಬಹುದು ಎಂದು ಆದೇಶ ನೀಡಿದ. ಹರಿ ಸಿಂಗ್ ಸಹಿ ಹಾಕಿದ ನಂತರ, ಆ ಒಪ್ಪಿಗೆ ಪತ್ರಕ್ಕೆ
ಭಾರತ ಸರಕಾರದ ಪರವಾಗಿ ಸಹಿ ಮಾಡಿದಾತ ಮೌಂಟ್ ಬ್ಯಾಟನ್. ಆತ ಅಂದು ವಿಧಿಸಿದ ಷರತ್ತು ಇಂದಿಗೂ ಭಾರತವನ್ನು ಕಾಡುತ್ತಿದೆ!

ಇಲ್ಲಿ ಎದ್ದು ಕಾಣುವ ಅಂಶವೆಂದರೆ, 15.8.1947ರ ನಂತರವೂ, ಭಾರತದ ಸೇನೆಯು ಮೌಂಟ್‌ಬ್ಯಾಟನ್ವಶದಲ್ಲಿತ್ತು. ನಮ್ಮ ದೇಶದ ಗಡಿಯ ರಕ್ಷಣೆಯು ಅವನ ಮರ್ಜಿಯನ್ನು ಅವಲಂಬಿಸಿತ್ತು. ಅಷ್ಟು ಮಾತ್ರವಲ್ಲ, ಅಂದು ಕಾಶ್ಮಿರದಲ್ಲಿ ಯುದ್ಧ ಮಾಡು ತ್ತಿದ್ದ ಭಾರತ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥರು ಸಹ ಬ್ರಿಟಿಷ್ ಅಧಿಕಾರಿಗಳು! ಹೊಸದಾಗಿ ಉದಯಿಸಿದ ಎರಡು ಡೊಮೆನಿಯನ್ ದೇಶಗಳು ಪರಸ್ಪರ ಯುದ್ಧ ಮಾಡುವ ಆ ಸನ್ನಿವೇಶವನ್ನು ಏನೆಂದು ವರ್ಣಿಸುವುದು? ಬಿಟ್ಟುಹೋಗಲಿರುವ ಬ್ರಿಟಿಷರಿಗೆ, ಅವರ ಪ್ರತಿಷ್ಠೆಗೆ ಸಹಕರಿಸುವಂತೆ ಗುದ್ದಾಡುತ್ತಿದ್ದ ಎರಡು ಬಾಲಿಶ ಶಕ್ತಿಗಳು ಎಂದೇ? ಏಕೆಂದರೆ, ಭಾರತಕ್ಕೆ ಸ್ವಾತಂತ್ರ್ಯ ನೀಡಿದರೆ, ದೇಶವು ಕೆಲವೇ ಸಮಯದಲ್ಲಿ ನಾಶವಾಗುತ್ತದೆಂದು ಬ್ರಿಟಿಷರು ಪದೇ ಪದೇ ಹೇಳುತ್ತಾ ಬಂದಿದ್ದರು! ಇತ್ತ

ಮೌಂಟ್ ಬ್ಯಾಟನ್‌ಗೆ ಭಾರತದ ಹಿತ ಮುಖ್ಯ ಎನಿಸಿರಲಿಲ್ಲ, ಬದಲಿಗೆ ಬ್ರಿಟನ್‌ನ ಹೆಸರನ್ನು ಕಾಯುವುದು ಮುಖ್ಯ ಎನಿಸಿತ್ತು.
ಆದ್ದರಿಂದಲೇ, ದೇಶ ವಿಭಜನೆಯಾದಾಗ ನಡೆದ ಭೀಕರ ಕೋಮುಗಲಭೆ ಗಳಿಂದಾಗಿ ಹತ್ತು ಲಕ್ಷಕ್ಕೂ ಹೆಚ್ಚಿನ ಬಡ ಭಾರತೀಯರು ಸಾಯುವಂತಾಯಿತು!

26.10.1947ರಂದು ಹರಿಸಿಂಗ್‌ನು ಭಾರತದೊಂದಿಗೆ ವಿಲೀನವಾಗುವ ಪತ್ರಕ್ಕೆ ಸಹಿ ಹಾಕಿದ. ಆಗ ಭಾರತದ ಪರವಾಗಿ ಸಹಿ ಹಾಕಿದ ಮೌಂಟ್‌ಬ್ಯಾಟನ್ ಒಂದು ಟಿಪ್ಪಣಿ ಸೇರಿಸಿದ! ..in the case of any State where the issue of accession has been the subject of dispute, the question of accession should be decided in accordance with the wishes of the people of the State, it
is my Government’s wish that as soon as law and order have been restored in Kashmir and her soil cleared of the
invader the question of the State’s accession should be settled by a reference to the people.

ಅಂದರೆ, ‘ಯಾವುದೇ ರಾಜ್ಯವನ್ನು ವಿಲೀನಗೊಳಿಸುವ ವಿಚಾರದಲ್ಲಿ ವಿವಾದ ಇದ್ದರೆ, ರಾಜ್ಯದ ಜನರ ಅಭಿಲಾಷೆಯಂತೆ ವಿಲೀನದ ಪ್ರಶ್ನೆಯನ್ನು ನಿರ್ಧರಿಸಬೇಕು (ಮತ್ತು) ಕಾಶ್ಮೀರದ ನೆಲದಲ್ಲಿ ಆಕ್ರಮಣಕಾರರನ್ನು ಹೊರದಬ್ಬಿ, ಕಾನೂನು ವ್ಯವಸ್ಥೆ ಸಹಜ ಸ್ಥಿತಿಗೆ ಬಂದ ನಂತರ, ರಾಜ್ಯದ ಜನರ ಮಾತಿನಂತೆ ಈ ವಿಲೀನದ ಪ್ರಶ್ನೆಯನ್ನು ಇತ್ಯರ್ಥಗೊಳಿಸಬೇಕೆಂದು ನನ್ನ ಸರಕಾರದ ಆಸೆ.’ ನಮ್ಮ ದೇಶದ ಗವರ್ನರ್ ಜನರಲ್ ಹುದ್ದೆಯ ಅಧಿಕಾರದಿಂದ 27.10.1947ರಂದು ಮೌಂಟ್‌ ಬ್ಯಾಟನ್
ಬರೆದಿ ಈ ಟಿಪ್ಪಣಿಯು, ಕಾಶ್ಮೀರದಲ್ಲಿ ಜನಮತಗಣನೆ ಎಂಬ ಪ್ರಶ್ನೆಗೆ ಎಡೆಮಾಡಿಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದೆ.

ಈ ಮಧ್ಯೆ, ಜನರ ಸಹಮತ ಪಡೆಯಲು ಕಾಶ್ಮೀರವನ್ನು ವಶಪಡಿಸಿಕೊಂಡವರು ವಾಪಸಾಗಬೇಕೆಂಬ ಷರತ್ತನ್ನು ವಿಶ್ವಸಂಸ್ಥೆ ಸಹ ಎತ್ತಿ ಹಿಡಿದು, ಪಾಕಿಸ್ತಾನವು ಸೇನೆಯನ್ನು ವಾಪಸು ಕರೆಸಲು ನಿರಾಕರಿಸಿ, ಆಕ್ರಮಿತ ಭೂಭಾಗವನ್ನು ತನ್ನ ವಶದಲ್ಲೇ ಇಟ್ಟು ಕೊಂಡಿತು. ಆದ್ದರಿಂದ ಪಿಒಕೆ ಎಂಬ ವಿವಾದಿತ ಭೂಭಾಗ ಸೃಷ್ಟಿಯಾಗಿ, ಇಂದಿಗೂ ಭಾರತದ ತಲೆನೋವಿಗೆ ಕಾರಣ ಎನಿಸಿದೆ. ಆದ್ದರಿಂದಲೇ, ಕಾಶ್ಮೀರದ ಇಂದಿನ ಸಮಸ್ಯೆಗೆ ವಿಲೀನಪತ್ರದ ಮೇಲೆ ಲಾರ್ಡ್ ಮೌಂಟ್‌ಬ್ಯಾಟನ್ ಬರೆದ ಟಿಪ್ಪಣಿಯೂ ತನ್ನ ಕಾಣಿಕೆ ನೀಡಿದೆ.

ಇದಕ್ಕೂ ಮುಂಚೆ ನಮ್ಮ ದೇಶದ ಸುಮಾರು ಹತ್ತು ಲಕ್ಷ ಜನರ ಸಾವಿಗೆ ಬುನಾದಿ ಹಾಕಿದ ಒಂದು ಪ್ರಮುಖ ನಿರ್ಧಾರವನ್ನು ಮೌಂಟ್‌ಬ್ಯಾಟನ್ ತೆಗೆದುಕೊಂಡಿದ್ದ. ಅದೆಂದರೆ, ನಿಗದಿತ ದಿನಾಂಕಕ್ಕಿಂತ ಒಂದು ವರ್ಷ ಮುಂಚೆ ಸ್ವಾತಂತ್ರ್ಯ ನೀಡಿದ್ದು! 20.2.1947ರಂದು ಇಂಗ್ಲೆಂಡಿನ ರಾಜನು ಮೌಂಟ್‌ಬ್ಯಾಟನ್‌ನನ್ನು ಭಾರತದ ವೈಸ್‌ರಾಯ್ ಆಗಿ ಆಯ್ಕೆ ಮಾಡಿದ. ಆಗ ಹೇಳಿದ ಸ್ಪಷ್ಟವಾದ ಜವಾಬ್ದಾರಿ  ಎಂದರೆ 30.6.1948ಕ್ಕಿಂತ ಮುಂಚೆ ಭಾರತದಲ್ಲಿ ಅಧಿಕಾರ ಹಸ್ತಾಂತರ ಮತ್ತು ದೇಶವನ್ನು ವಿಭಜಿಸದೇ ಇರುವ ಎಲ್ಲಾ ಉಪಾಯಗಳನ್ನು ಅನುಸರಿಸುವುದು.

ಆದರೆ ಈ ಭೂಪ ಮಾಡಿದ್ದೇನು? ಎರಡನೇ ವಿಶ್ವಯುದ್ಧದಲ್ಲಿ ಸಾಕಷ್ಟು ಪಳಗಿದ್ದ, ಸೇನಾ ಹಿನ್ನೆಲೆಯ ಈ ವ್ಯಕ್ತಿ 22.3.1947ರಂದು ಪತ್ನಿ ಸಮೇತ ಭಾರತಕ್ಕೆ ಬಂದಿಳಿದಾಗ, ದೆಹಲಿ, ರಾವಲ್ಪಿಂಡಿ ಮೊದಲಾದ ಪ್ರದೇಶಗಳಲ್ಲಿ ಕೋಮುಗಲಭೆಗಳು ಆಗುತ್ತಿದ್ದವು. ತಕ್ಷಣ ವಿವಿಧ ಪ್ರಾಂತ್ಯಗಳ ಬ್ರಿಟಿಷ್ ಅಧಿಕಾರಿಗಳ ಜತೆ, ನೆಹರೂ, ಜಿನ್ನಾ ಜತೆ ಸಭೆ ನಡೆಸಿ, ಪರಿಸ್ಥಿತಿಯ ಸಿಂಹಾವಲೋಕನ
ಮಾಡಿದ. 30.6.1948ರ ತನಕ ಕಾದರೆ, ದೇಶದಲ್ಲಿ ಇನ್ನಷ್ಟು ಗಲಭೆ, ದೊಂಬಿ ನಡೆಯುತ್ತದೆ ಮತ್ತು ಆ ಹಿಂಸಾಚಾರದ ಕಳಂಕವು ಬ್ರಿಟನ್ ಸಾಮ್ರಾಜ್ಯಕ್ಕೆ ಮೆತ್ತಿಕೊಳ್ಳುತ್ತದೆ, ಆದ್ದರಿಂದ ನಿಗದಿತ ದಿನಾಂಕಕ್ಕಿಂತ 10 ತಿಂಗಳು ಮುಂಚೆ, 15.8.1947ರಂದು ಅಧಿಕಾರ ಹಸ್ತಾಂತರ ಮಾಡುತ್ತೇನೆ ಎಂಬ ನಿರ್ಧಾರವನ್ನು ತೆಗೆದುಕೊಂಡ.

ಅಂದರೆ, ಈ ವ್ಯಕ್ತಿ ಭಾರತಕ್ಕೆ ಬಂದ ಕೇವಲ ಐದು ತಿಂಗಳುಗಳ ಒಳಗೆ ಅಧಿಕಾರ ಹಸ್ತಾಂತರ ಮಾಡುವುದೆಂದು ಘೋಷಿಸುವ ಮೂಲಕ ಇಡೀ ದೇಶದಲ್ಲಿ ಕಂಡು ಕೇಳರಿಯದ ತಲ್ಲಣ, ತರಾತುರಿ, ಗಡಿಬಿಡಿಗೆ ನೇರ ಕಾರಣ ಎನಿಸಿದ. ದೇಶ ವಿಭಜಿಸುವುದು ಎಂದು ನಿರ್ಧರಿಸಿದರೂ, ಪಂಜಾಬ್, ಬಂಗಾಳ, ಅಸ್ಸಾಂ ಮೊದಲಾದ ಪ್ರದೇಶಗಳ ಯಾವೆಲ್ಲಾ ಊರುಗಳು ಯಾವ ದೇಶಕ್ಕೆ ಸೇರಬೇಕು ಎಂದೇ ನಿರ್ಧಾರವಾಗಿರಲಿಲ್ಲ. ಅದನ್ನು ಮಾಡಲು ರ್ಯಾಡ್‌ಕ್ಲಿಫ್ ಎಂಬಾತನಿಗೆ ಹೇಳಲಾಯಿತು!

ಆತ ಭಾರತವನ್ನೇ ನೋಡಿರಲಿಲ್ಲ. ತನ್ನ ಎದುರು ಭೂಪಟವನ್ನಿಟ್ಟುಕೊಂಡು, ಹಳೆಯ ಅಂಕಿಸಂಕಿಗಳ ಆಧಾರದಿಂದ ವಿಭಜನೆಯ ವರದಿಯನ್ನು ಕೊಟ್ಟ. ರ್ಯಾಡ್‌ಕ್ಲಿಫ್ ನೀಡಿದ ವರದಿಯನ್ನು ತನ್ನ ಸೀಟಿನಡಿ ಇಟ್ಟುಕೊಂಡ ಮೌಂಟ್‌ಬ್ಯಾಟನ್, ಅದನ್ನು ಬಿಡುಗಡೆ ಮಾಡಿದ್ದು 17.8.1947ರಂದು, ಅಂದರೆ ಸ್ವಾತಂತ್ರ್ಯ ದೊರೆತು ಎರಡು ದಿನಗಳ ನಂತರ! ಅದೆಷ್ಟೋ
ಊರುಗಳಲ್ಲಿ 15.8.1947ರಂದು ಎರಡು ದೇಶಗಳ ಬಾವುಟವನ್ನು ಜನರು ಹಾರಿಸಿದ್ದರು! ಪಾಪ, ಅವರಿಗೆ ತಮ್ಮ ಊರು ಯಾವ ದೇಶಕ್ಕೆ ಸೇರುತ್ತದೆಂದೇ ಗೊತ್ತಿರಲಿಲ್ಲ.

ಜೂನ್ 1948ರ ತನಕ ಅವಕಾಶವಿದ್ದರೂ, 15.8.1947ರಂದೇ ಅಧಿಕಾರ ಹಸ್ತಾಂತರ ಎಂದು ಮೌಂಟ್ ಬ್ಯಾಟನ್ ತೆಗೆದುಕೊಂಡ ನಿರ್ಧಾರದಿಂದ, ಸಂಕಷ್ಟಕ್ಕೆ ಈಡಾದವರು ಅದೆಷ್ಟೋ ಲಕ್ಷ ಮಂದಿ! ತಮ್ಮ ತಮ್ಮ ಧರ್ಮ ಆಧರಿಸಿ, ಲಕ್ಷಾಂತರ ಜನರು ಭಾರತಕ್ಕೆ ಮತ್ತು ಪಾಕಿಸ್ತಾನಕ್ಕೆ ವಲಸೆ ಹೋಗಬೇಕೆಂಬ ವಿಚಾರವೇ ಅಮಾನವೀಯ. ಆ ಕೆಲಸವನ್ನು ಸೇನೆಯ ಸುಪರ್ದಿನಲ್ಲಿ ಮಾಡಿಸಬೇಕಿತ್ತು, ಅದು ಮೌಂಟ್‌ಬ್ಯಾಟನ್ ಜವಾಬ್ದಾರಿ. ಆದರೆ ಅದಾಗಲಿಲ್ಲ. ವಲಸೆ ಹೊರಟ ಜನರನ್ನು ಲೂಟಿಕೋರರು ಸಾಯಿಸಲು ತೊಡಗಿದಾಗ, ಸೇನೆಯ ರಕ್ಷಣೆ ನೀಡಬೇಕಾಗಿತ್ತು, ಅದು ದೊರೆಯದೇ ಇದ್ದುದು ಮತ್ತಷ್ಟು ಅಮಾನವೀಯ. ಸೇನೆಯ
ಪರಮಾಧಿಕಾರ ಮೌಂಟ್‌ಬ್ಯಾಟನ್ ಕೈಯಲ್ಲಿತ್ತು. ಆದ್ದರಿಂದ, ಸುಮಾರು ಹತ್ತು ಲಕ್ಷ ಜನರ ಸಾವಿಗೆ ಆತ ಪರೋಕ್ಷ ಹೊಣೆಗಾರನೇ ಅಲ್ಲವೆ? ಆ ಭೀಕರ ದುರಂತ ಹೇಗಿತ್ತೆಂದರೆ, ಇಂದಿಗೂ ಎಷ್ಟು ಲಕ್ಷ ಜನರು ಸತ್ತರೆಂಬ ನಿಖರ ಸಂಖ್ಯೆ ಲಭ್ಯವಿಲ್ಲ.

ಇಷ್ಟಾದರೂ, ಈ ಅದೃಷ್ಟಶಾಲಿ ಗವರ್ನರ್ ಜನರಲ್, 27.8.1948ರ ತನಕ ತನ್ನ ಅಧಿಕಾರದಲ್ಲಿ ಮುಂದುವರಿದು, ನೆಹರೂ ಗೆಳೆತನ ಸಂಪಾದಿಸಿ, ಗೌರವಯುತವಾಗಿ ನಿರ್ಗಮಿಸಿದ. ಭಾರತದ ವಿಭಜನೆಯನ್ನು ಮಾಡಿ, ಸುಸೂತ್ರವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಮುಗಿಸಿದ್ದಕ್ಕಾಗಿ, ಇಂಗ್ಲೆಂಡಿನಲ್ಲಿ ಈತನಿಗೆ ಮೆಡಲ್ ಇತ್ತು ಗೌರವಿಸಲಾಯಿತು. ಜತೆಗೆ, ಸೇನೆಯಲ್ಲಿ ಉನ್ನತ ಹುದ್ದೆ ನೀಡಲಾಯಿತು. ಆದರೆ, ಸ್ವಾತಂತ್ರ್ಯದ ದಿನಾಂಕವನ್ನು 10 ತಿಂಗಳು ಹಿಂದೂಡಿದ ಆ ತರಾತುರಿ ನಿರ್ಧಾರ ತಂದ ಲಕ್ಷ ಲಕ್ಷ ಸಾವುಗಳ ಪಾಪ ಆತನನ್ನು ಕೊನೆಗೂ ಕಾಡಿತು ಎಂದೇ ಹೇಳಬಹುದು. 27.8.1979ರಂದು ತನ್ನ ತವರೂರಿನಲ್ಲೇ ಬಾಂಬ್ ದಾಳಿಗೆ ಸಿಲುಕಿ ಮೌಂಟ್ ಬ್ಯಾಟನ್‌ನ ಕಾಲುಗಳು ಚಿಂದಿಯಾದಾಗ, ಭಾರತದಲ್ಲಿ ದಾರುಣವಾಗಿ ಕೊಲೆಯಾದ ಲಕ್ಷಲಕ್ಷ ಜೀವಗಳ ನೆನಪು
ಆತನಿಗೆ ಆಗಿರಬಹುದೆ? ಗೊತ್ತಿಲ್ಲ. ಆದರೆ, ಪ್ರೊವಿಷನಲ್ ಐರಿಷ್ ರಿಪಬ್ಲಿಕನ್ ಆರ್ಮಿಯ ಸದಸ್ಯ ಸಿಡಿಸಿದ ಆ ಬಾಂಬ್ ದಾಳಿ ಯಲ್ಲಿ ಮೌಂಟ್‌ಬ್ಯಾಟನ್ ಮೃತಪಟ್ಟಾಗ, ಬ್ರಿಟಿಷರು ಮಾತ್ರ ಬಹುವಾಗಿ ದುಃಖಿಸಿ, ತಮ್ಮ ದೇಶಕ್ಕೆ ಆತನ ಕೊಡುಗೆಯನ್ನು ಕೊಂಡಾಡಿದರು.