Friday, 22nd November 2024

DCM D K Shivakumar Column: ಎತ್ತಿನಹೊಳೆ: ಬತ್ತಿದ ಕನಸಿಗೆ ಜೀವಜಲದ ಧಾರೆ

ಡಿ.ಕೆ.ಶಿವಕುಮಾರ್‌

ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು

‘ಬಯಲುಸೀಮೆ’ ಎಂಬ ಹೆಸರು ಕೇಳಿದಾಕ್ಷಣ ನಮ್ಮ ಮನಸ್ಸಿಗೆ ಬರಡು ಭೂಮಿಯ ಚಿತ್ರಣ ಬರುತ್ತದೆ. ಕೆಲವು ದಶಕಗಳಿಂದಲೇ ಬಯಲು ಸೀಮೆಯಲ್ಲಿ ನೀರಿನ ಕೊರತೆ ಕಂಡುಬಂದಿತ್ತು. ಯಾವುದೇ ಸರಕಾರಗಳು ಬಂದಾಗಲೂ
ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚೆಯಾಗುತ್ತಿತ್ತು. ಆದರೆ ಪರಿಹಾರ ಮಾತ್ರ ಶೂನ್ಯ.

ಬಯಲುಸೀಮೆಯ ಬಹುತೇಕ ಭಾಗ ಹಿಂದುಳಿಯುವಲ್ಲಿ ನೀರಾವರಿಯ ಕೊರತೆ ದೊಡ್ಡ ಪರಿಣಾಮ ಬೀರಿದೆ. ತರಕಾರಿ, ಹೂವು, ಹಣ್ಣು ಹಾಗೂ ರೇಷ್ಮೆ ಕೃಷಿ ಪ್ರಧಾನ ವಾಗಿರುವ ಬಯಲು ಸೀಮೆಗೆ ಜೀವಜಲವನ್ನು ಒದಗಿಸು ವುದು ಅನೇಕ ದಶಕಗಳ ಕನಸು. ಈ ಕನಸನ್ನು ನನಸಾಗಿಸಲು ಹಿಂದಿನ ಸರಕಾರ ಪ್ರಯತ್ನಪಟ್ಟಿದ್ದರೂ, ಬದ್ಧತೆ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದು ನೆರವೇರಲಿಲ್ಲ.

ಕಾಂಗ್ರೆಸ್ ಸರಕಾರದ ಈ ಆಡಳಿತವಾಧಿಯಲ್ಲಿ ಬಯಲುಸೀಮೆಗೆ ನೀರಿನ ಸಿಂಚನವಾಗಿದೆ. ಇದೇ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರು ಪೂರೈಕೆ ಕಾರ್ಯ. ಸ್ವರ್ಣ ಗೌರಿ ಮನೆಗೆ ಬರುತ್ತಾಳೆ ಎಂದರೆ ಎಲ್ಲ ಬಗೆಯ ಸಮೃದ್ಧಿ ಮನೆಯಲ್ಲಿ ನೆಲೆಯಾಗಲಿದೆ ಎಂದೇ ಅರ್ಥ. ಈ ಬಾರಿಯ ಗೌರಿ ಹಬ್ಬ ಅಂತಹ ಜಲ ಸಮೃದ್ಧಿಯನ್ನು ತರುತ್ತಿದೆ. ಈ ಭಗೀರಥ ಕಾರ್ಯವನ್ನು ಮಾಡುವ ಅವಕಾಶ ಕಾಂಗ್ರೆಸ್ ಸರಕಾರಕ್ಕೆ, ಅದು ಕೂಡ ನನಗೆ ದೊರಕಿರು ವುದು ಪುಣ್ಯವೆಂದೇ ಭಾವಿಸಿದ್ದೇನೆ. ನನ್ನ ಕ್ಷೇತ್ರ ಕನಕಪುರವಾದರೂ ಸುತ್ತಮುತ್ತಲಿನ ಜಿಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ಒಂದು ಕಡೆ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಜಧಾನಿ ಬೆಂಗಳೂರು. ಇದರ ಸುತ್ತಮುತ್ತ ನೀರಾವರಿಗೂ ಕಷ್ಟ ಪಡುವ ಜಿಲ್ಲೆಗಳು. ಈ ಸಮಸ್ಯೆಯನ್ನು ನಿವಾರಿಸಲು ನಾನು ನೀರಾವರಿ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದೆ.

ನೀರಾವರಿ ಎಂದರೆ ಕೇವಲ ಒಂದು ಇಲಾಖೆ, ಅನುದಾನ ಅಥವಾ ಯೋಜನೆಗಳಲ್ಲ. ಇದು ಜನರ ಜೀವನಾಡಿ. ಒಂದೇ ಒಂದು ನೀರಾವರಿ ಯೋಜನೆ ಇಡೀ ಪ್ರದೇಶದ ಜೀವನ ಗುಣಮಟ್ಟವನ್ನೇ ಬದಲಿಸಿ ಬಿಡುತ್ತದೆ. ಕೃಷ್ಣರಾಜ ಸಾಗರ ಜಲಾಶಯ ಹಳೆ ಮೈಸೂರು ಭಾಗದ ಸಮಗ್ರ ಪ್ರಗತಿಗೆ ಹೇಗೆ ಕಾರಣವಾಗಿದೆ ಎಂಬುದನ್ನು ನಾನು
ಚಿಕ್ಕಂದಿನಿಂದಲೂ ನೋಡಿದ್ದೇನೆ. ಇಂತಹ ಯೋಜನೆಯೊಂದನ್ನು ನಮ್ಮ ಬಯಲುಸೀಮೆಗೆ ನೀಡಬೇಕು ಎನ್ನುವುದು ನನ್ನ ಬಹುವರ್ಷಗಳ ಕನಸಾಗಿತ್ತು. ಅದನ್ನು ಎತ್ತಿನ ಹೊಳೆಯ ಮೂಲಕ ನೆರವೇರಿಸಿದ್ದೇನೆ ಎನ್ನು
ವುದು ನನ್ನ ಬದುಕಿನ ಸಾರ್ಥಕತೆಯ ಕ್ಷಣ.

ಇದೇನೂ ದಿಢೀರನೆ ಬಂದ ಆಲೋಚನೆ ಯಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದೇ ಬಲವಾಗಿ ನಂಬಿದ್ದ ನಾನು, ಆ ಸಮಯದಲ್ಲಿ ಎತ್ತಿನಹೊಳೆಯ ಯೋಜನೆಗೆ ಕಾಯಕಲ್ಪ ನೀಡಿಯೇ ತೀರುತ್ತೇನೆ ಎಂದು ಸಂಕಲ್ಪ ಮಾಡಿದ್ದೆ. ಅಂದುಕೊಂಡ ಹಾಗೆಯೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಎತ್ತಿನಹೊಳೆ ಯೋಜನೆಗೆ ಸಂಪೂರ್ಣ ಒತ್ತು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ದೃಢ ನಾಯಕತ್ವದಲ್ಲಿ, ಕಾಮಗಾರಿಗಳಿಗೆ ವೇಗ
ನೀಡಿ, ಕಾಲಮಿತಿಯಲ್ಲಿ ಪೂರ್ಣ ಗೊಳಿಸಲು ಕ್ರಮ ವಹಿಸಿದೆ. ಅದರ ಫಲಿತಾಂಶ ಇಂದು ನಮ್ಮೆಲ್ಲರ ಮುಂದಿದೆ.

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರು ಪೂರೈಕೆಗೆ ಸೆಪ್ಟೆಂಬರ್ ೬ ರ ಶುಭ ಶುಕ್ರವಾರದಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಹೆಬ್ಬನ ಹಳ್ಳಿ ವಿತರಣಾ ತೊಟ್ಟಿಯ ೪ ರಿಂದ ೩೨ ಕಿ.ಮೀ. ದೂರದಲ್ಲಿ ಎಸ್ಕೇಪ್ ಚಾನೆಲ್ ರೂಪಿಸಿದ್ದು, ಅಲ್ಲಿಂದ ನಾಲೆಯ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಪೂರೈಸಲಾಗುತ್ತದೆ. ನವೆಂಬರ್ ೧ರ ವೇಳೆಗೆ ಸುಮಾರು ೫ ಟಿಎಂಸಿ ನೀರನ್ನು ಮೇಲಕ್ಕೆ ಎತ್ತಲಾಗುತ್ತದೆ. ಇದು ಕೇವಲ ಪೂರ್ಣಗೊಂಡ ಕಾಮಗಾರಿಗೆ ಚಾಲನೆ ನೀಡುವ ದಿನವಲ್ಲ. ಇದು ಬಯಲುಸೀಮೆಯ ‘ಬರಡು’ ಎಂಬ ಟೀಕೆಯನ್ನು ತೊಡೆದು
ಹಾಕುವ ಗಳಿಗೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಗ್ಯಾರಂಟಿಗಳ ಭರವಸೆ ನೀಡಿತ್ತು. ಕೇವಲ ಗ್ಯಾರಂಟಿಗಳ ಆಧಾರದ ಈ ಸರಕಾರ ಅಧಿಕಾರಕ್ಕೆ ಬಂದಿದೆ ಎಂಬುದು ಊಹಾಪೋಹದ ಮಾತು. ಗ್ಯಾರಂಟಿಗಳು ಪ್ರಮುಖವಾಗಿದ್ದರೂ, ಅವುಗಳ ಜೊತೆಗೆ ನೀರಾವರಿ, ಕೃಷಿ ಸುಧಾರಣೆ, ಕೈಗಾರಿಕಾಭಿವೃದ್ಧಿ, ನಿರುದ್ಯೋಗ ನಿವಾರಣೆ ಮೊದಲಾದ ಭರವಸೆ ಗಳು ಜನರ ಗಮನ ಸೆಳೆದಿತ್ತು. ಈ ಪೈಕಿ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸುವ ಬದ್ಧತೆಯನ್ನು ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಅದರಂತೆ ಒಂದೂವರೆ ವರ್ಷದೊಳಗೆ ಯೋಜನೆಯ ಮೊದಲ ಹಂತದ ನೀರು ಸರಬರಾಜು ಕಾರ್ಯ ಸಾಕಾರಗೊಂಡಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮಾತ್ರವಲ್ಲದೆ,
ರಾಮನಗರದ ಕೆಲವು ಭಾಗ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೂ ಜೀವಜಲ ದೊರೆಯಲಿದೆ.

ನೀರಾವರಿ ಪ್ರಗತಿ: ೨೦೨೭ಕ್ಕೆ ಯೋಜನೆಯ ಕಾಮಗಾರಿ ಯನ್ನು ಪೂರ್ಣಗೊಳಿಸುವುದು ಕಾಂಗ್ರೆಸ್ ಸರಕಾರದ
ಆದ್ಯತೆಯ ಮಹತ್ವಕಾಂಕ್ಷೆ. ಪ್ರಣಾಳಿಕೆಯಲ್ಲಿದ್ದ ‘ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ’ ಎಂಬ ಘೋಷಣೆಯಂತೆಯೇ ಈಗ ಎತ್ತಿನಹೊಳೆಯ ನೀರಿನ ಮೂಲಕ ನೀರಾವರಿಗೆ ಪ್ರಗತಿ ತರಲಾಗುತ್ತಿದೆ. ಯೋಜನೆಯಡಿ ಒಟ್ಟು ೨೪.೦೧ ಟಿಎಂಸಿ ನೀರನ್ನು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುತ್ತದೆ. ಇದರಿಂದ ಬರ ಪೀಡಿತವಾದ ೨೯ ತಾಲೂಕುಗಳ ೬,೬೫೭ ಗ್ರಾಮಗಳ ೭೫.೫೯ ಲಕ್ಷ ಜನರ ದಾಹ ತೀರಲಿದೆ. ಜೊತೆಗೆ ೫ ಜಿಗಳ ೫೨೭
ಕೆರೆಗಳ ಅಂತರ್ಜಲ ಮರುಪೂರಣ ಕಾರ್ಯವೂ ನಡೆಯಲಿದೆ. ಇದಕ್ಕಾಗಿ ರಾಜ್ಯ ಸರಕಾರ ಖರ್ಚು ಮಾಡುತ್ತಿ ರುವುದು ಬರೋಬ್ಬರಿ ೨೩,೨೫೧ ಕೋಟಿ ರುಪಾಯಿ!

೨೦೧೧-೧೨ರಲ್ಲಿ ಅಂದಿನ ಬಿಜೆಪಿ ಸರಕಾರ ರಾಜಕೀಯ ಲಾಭದ ದೃಷ್ಟಿಯಿಂದ ದೂರದೃಷ್ಟಿ ಇಲ್ಲದೆ ಯೋಜನೆ ರೂಪಿಸಿದ್ದರಿಂದ ಅದು ಬದ್ಧತೆಯಿಂದ ಮುಂದುವರಿಯಲಿಲ್ಲ. ಬಳಿಕ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ, ಯೋಜನೆಯ ಮೊತ್ತವನ್ನು ಹೆಚ್ಚಿಸಿ, ೨೦೧೪ ರ ಫೆಬ್ರವರಿಯಲ್ಲಿ ಅನುಮೋದನೆ ನೀಡಿತು. ನಂತರ ಚಿಕ್ಕಬಳ್ಳಾಪುರದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅಂದು ಆರಂಭವಾದ ಯೋಜನೆ, ನಡುವೆ ಬಿಜೆಪಿ ಸರ್ಕಾರ ಇದ್ದ ಅವಽಯಲ್ಲೂ ಪೂರ್ಣಗೊಳ್ಳಲಿಲ್ಲ. ಮತ್ತೆ ಈ ಯೋಜನೆಗೆ ಚುರುಕು ನೀಡಲು ಕಾಂಗ್ರೆಸ್
ಪಕ್ಷವೇ ಅಽಕಾರಕ್ಕೆ ಬರಬೇಕಾಯಿತು. ಅದರಂತೆ ಈಗ ಕಾಮಗಾರಿಗೆ ವೇಗ ನೀಡಿ ನೀರೆತ್ತುವ ಕಾರ್ಯವನ್ನು ನನಸು ಮಾಡಲಾಗಿದೆ. ಇದು ಬಯಲುಸೀಮೆಯ ನೀರಾವರಿ ಕ್ರಾಂತಿ ಯಲ್ಲಿ ಆರಂಭದ ಹೆಜ್ಜೆ. ಈ ಹೆಜ್ಜೆಯನ್ನು ಇನ್ನಷ್ಟು ಮುಂದಕ್ಕೆ ಒಯ್ದು, ಎತ್ತಿನಹೊಳೆ ಯೋಜನೆಯನ್ನು ಈ ಸರಕಾರದ ಅವಧಿಯ ಪೂರ್ಣಗೊಳಿಸುವುದು ನಮ್ಮ ಮುಂದಿನ ಗುರಿ ಮತ್ತು ಸವಾಲು. ಅದಕ್ಕಾಗಿ ಜನಬಲವೊಂದಿದ್ದರೆ ಸಾಕು.

ಗೌರಿ ಹಬ್ಬದಂದು ಗಂಗೆಯ ಪೂಜೆ

ಎತ್ತಿನಹೊಳೆ ಯೋಜನೆ ಮೊದಲ ಹಂತದ ಕಾಮಗಾರಿ ಶುಕ್ರವಾರ ಉದ್ಘಾಟನೆ ಯಾಗುತ್ತಿದೆ. ಇಲ್ಲಿಂದ ೨೪ ಟಿಎಂಸಿ ನೀರನ್ನು ಎತ್ತಿ ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ಉದ್ದೇಶಕ್ಕೆ ಪೂರೈಸ ಲಾಗುತ್ತಿದೆ. ಈ ಬಾರಿಯ ಗೌರಿ ಹಬ್ಬದಂದು ಗಂಗೆ ಮಾತೆಗ ಪೂಜೆ ಮಾಡುತ್ತಿರುವುದು ವಿಶೇಷವಾಗಿದೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವ ಕುಮಾರ್ ಹೇಳಿದ್ದಾರೆ. ಡಿಪಿಆರ್ ಮಾಡಿದ ಎಂಜಿನಿಯರ್‌ಗಳಿಂದ ತಂತ್ರಜ್ಞರು, ಜಮೀನು ನೀಡಿದ ರೈತರು ಎಲ್ಲರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.