Monday, 25th November 2024

Actor Darshan: ಕೆರಳಿಸುವ ಸ್ಟಿಕ್ಕರ್‌ ಅಂಟಿಸಿದರೆ ದಂಡ: ದರ್ಶನ್‌ ಅಭಿಮಾನಿ ವಾಹನ ಚಾಲಕರಿಗೆ ಆರ್‌ಟಿಒ ಖಡಕ್‌ ಸೂಚನೆ

actor darshan sticker

ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್ (Actor darshan) ಅವರನ್ನು ಸಮರ್ಥಿಸಿಕೊಳ್ಳುವವ, ಇತರರಿಗೆ ಟಾಂಗ್‌ ಕೊಡುವ, ಪ್ರಚೋದನಕಾರಿ (provocative) ಸ್ಟಿಕ್ಕರ್‌ ಅಥವಾ ಬರಹಗಳನ್ನು ವಾಹನಗಳಲ್ಲಿ ಅಳವಡಿಸಿದರೆ ಮುಲಾಜಿಲ್ಲದೆ ದಂಡ (Fine) ವಿಧಿಸಲಾಗುತ್ತದೆ ಎಂದು ಆರ್‌ಟಿಒ (RTO) ಅಧಿಕಾರಿಗಳು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ದರ್ಶನ್‌ ಬಳ್ಳಾರಿ ಜೈಲಿಗೆ ಸ್ಥಳಾಂತರ ಆದಬಳಿಕ ವಾಹನಗಳ (vehicles) ಮೇಲೆ ಆಕ್ಷೇಪಾರ್ಹ, ಪ್ರಚೋದನಾಕಾರಿ, ಬೇರೆ ನಟರ ಅಭಿಮಾನಿಗಳ ವಿರುದ್ಧ ಟಾಂಗ್ ಕೊಡುವಂತಹ ಸ್ಟಿಕ್ಕರ್, ಬರಹಗಳ ಅಳವಡಿಕೆ ಮಾಡುವುದು ಹೆಚ್ಚಾಗಿದೆ. ಈ ಹಿಂದೆ ಈ‌ ಮಟ್ಟಿಗೆ ಬರಹಗಳನ್ನು ವಾಹನಗಳ ಮೇಲೆ ಹಾಕಿರಲಿಲ್ಲ. ಇದು ಆರ್​ಟಿಒ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಇದು ಆರ್‌ಟಿಒ ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ, ಕಾನೂನು ಸುವ್ಯವಸ್ಥೆಗೂ ಸವಾಲು ಹಾಕಿದಂತೆ. ಇಂಥ ಅನವಶ್ಯಕ, ಪ್ರಚೋದನಾಕಾರಿ ಬರಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ನೆಚ್ಚಿನ‌ ನಟರ ಪೋಟೋಗಳನ್ನು ವಾಹನಗಳ ಮೇಲೆ ಹಾಕುವುದರ ಜತೆಗೆ ಪ್ರಚೋದನಾಕಾರಿ ಬರಹ‌, ಸ್ಟಿಕ್ಕರ್ ಅಂಟಿಸಲು ಅವಕಾಶವಿಲ್ಲ ಎಂದು ಆರ್​ಟಿಒ ಅಧಿಕಾರಿಗಳು ಹೇಳಿದ್ದಾರೆ.

ಈವರೆಗೆ ನಂಬರ್ ಪ್ಲೇಟ್ ಮೇಲೆ ಮಾತ್ರ ಬರಹ, ಸ್ಟಿಕ್ಕರ್ ಇದ್ದರೆ ಗಮನಿಸುತ್ತಿದ್ದೆವು. ಇನ್ನುಮುಂದೆ ವಾಹನಗಳ ಇತರ ಭಾಗಗಳಲ್ಲಿ ಕೂಡ ಅನಧಿಕೃತ ಬರಹ ಹಾಕಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಎಚ್ಚರಿಕೆ ಉಲ್ಲಂಘಿಸಿ ಸ್ಟಿಕ್ಕರ್, ಬರಹ ಅಂಟಿಸಿದಲ್ಲಿ ಮೊದಲ ಬಾರಿಗೆ 500 ರೂಪಾಯಿ, ಎರಡನೇ ಬಾರಿ 1000 ರೂಪಾಯಿ, ಮೂರನೇ ಬಾರಿ ಅದೇ ತಪ್ಪು ಮಾಡಿದರೆ ಪರವಾನಗಿಯನ್ನೇ ರದ್ದು ಮಾಡುತ್ತೇವೆ ಎಂದು ಆರ್​ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಆರ್​ಟಿಒ ಅಡಿಷನಲ್ ಕಮಿಷನರ್ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.

ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ಆರ್​​ಟಿಒ ಇಲಾಖೆಗಳಿಗೆ ನಿರ್ದೇಶನ ಕೊಡುತ್ತಾ ಬಂದಿದೆ. ಅದರ ಅನ್ವಯ ಆರ್​​ಟಿಒ ಅಧಿಕಾರಿಗಳು ಕೇಸುಗಳನ್ನ ದಾಖಲು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್​​ಟಿಒ ಮಾಡುತ್ತಿದೆ. ಜೊತೆಗೆ ಹಲವು ಪ್ರಕರಣ ದಾಖಲು ಮಾಡಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ಈ ಸುದ್ದಿ ಓದಿ: Actor Darshan: ಗಂಡ ಮಕ್ಕಳನ್ನು ಬಿಟ್ಟು, ದರ್ಶನ್‌ ಮದುವೆಯಾಗ್ತೀನಿ ಎಂದು ಬಳ್ಳಾರಿ ಜೈಲ್‌ ಮುಂದೆ ಆಂಟಿ ಡ್ರಾಮಾ!