Friday, 20th September 2024

ಪ್ರವಾಹ ಪೀಡಿತ ತೆಲುಗು ರಾಜ್ಯಗಳಿಗೆ ತಲಾ 1 ಕೋಟಿ ರೂ. ದೇಣಿಗೆ ನೀಡಿದ ಅಲ್ಲು ಅರ್ಜುನ್, ಚಿರಂಜೀವಿ

Allu Arjun

ಹೈದರಾಬಾದ್:‌ ಭಾರಿ ಮಳೆಯಿಂದ ನಲುಗಿದ ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರ ನೆರವಿಗೆ ಟಾಲಿವುಡ್‌ ಸ್ಟಾರ್‌ಗಳಾದ ಅಲ್ಲು ಅರ್ಜುನ್ (Allu Arjun) ಮತ್ತು ಚಿರಂಜೀವಿ (Chiranjeevi) ಮುಂದೆ ಬಂದಿದ್ದು, ತಲಾ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಜನ ಸಂಕಷ್ಟದಲ್ಲಿದ್ದಾಗ ಈ ಹಿಂದೆಯೂ ಅಲ್ಲು ಅರ್ಜುನ್ ಸಹಾಯಕ್ಕೆ ನಿಂತಿದ್ದರು. ಈಗ ಮತ್ತೆ ಸಹಾಯ ಹಸ್ತ ಚಾಚಿದ್ದಾರೆ. ಕೆಲವು ದಿನಗಳ ಹಿಂದೆ ನಟ ಜೂನಿಯರ್‌ ಎನ್‌ಟಿಆರ್‌ ಎರಡೂ ರಾಜ್ಯಗಳಿಗೆ ಒಟ್ಟು 1 ಕೋಟಿ ರೂ. ನೀಡಿದ್ದರು. ಮಾತ್ರವಲ್ಲ ಮಹೇಶ್‌ ಬಾಬು 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಮೂಲಕ ಕಲಾವಿದರು ಜನರನ್ನು ರಂಜಿಸುವುದು ಮಾತ್ರವಲ್ಲಅವರ ಸಂಕಷ್ಟಕ್ಕೂ ಮಿಡಿಯುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಅಲ್ಲು ಅರ್ಜುನ್‌ ಹೇಳಿದ್ದೇನು?

ʼʼಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿನ ಕೆಲ ಪ್ರದೇಶದ ಜನ ಜನ ಮಳೆಯಿಂದಾಗಿ ಮನೆ, ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವುದು ನನ್ನ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಅವರ ಕಷ್ಟಕ್ಕೆ ನನ್ನ ಕಡೆಯಿಂದ ತಲಾ 1 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಆದಷ್ಟು ಬೇಗ ಎಲ್ಲರೂ ಸಂಕಷ್ಟದಿಂದ ಪಾರಾಗುವಂತಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆʼʼ ಎಂದು ಅಲ್ಲು ಅರ್ಜುನ್ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಚಿರಂಜೀವಿ ಹೇಳಿದ್ದೇನು?

ʼʼತೆಲುಗು ರಾಜ್ಯಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದಾಗಿ ಬೇಸರವಾಗಿದೆ. ಇಂತಹ ಸವಾಲಿನ ಸಮಯದಲ್ಲಿ ಸಂತ್ರಸ್ತರಿಗೆ ನೆರವು ಒದಗಿಸುವುದು ಅಗತ್ಯವಾಗಿದೆ. ಆಂಧ್ರ ಮತ್ತು ತೆಲಂಗಾಣಗಳಿಗೆ ತಲಾ 1 ಕೋಟಿ ರೂ. ದೇಣಿಗೆ ನೀಡಿದ್ದೇನೆʼʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಮಹೇಶ್‌ಬಾಬು ಹೇಳಿದ್ದೇನು?

ಈ ಬಗ್ಗೆ ಮಹೇಶ್‌ ಬಾಬು ಪೋಸ್ಟ್‌ ಹಂಚಿಕೊಂಡು, ʼʼಪ್ರವಾಹ ಪರೀಡಿತ ಪ್ರದೇಶಗಳಲ್ಲಿನ ಪರಿಹಾರ ಕಾರ್ಯಗಳಿಗಾಗಿ 50 ಲಕ್ಷ ರೂ. ದೇಣಿಗೆ ನೀಡಿದ್ದೇನೆ. ಪ್ರತಿಯೊಬ್ಬರು ಸಹಾಯಹಸ್ತ ಚಾಚುವಂತೆ ಈ ಮೂಲಕ ಮನವಿ ಮಾಡುತ್ತಿದ್ದೇನೆʼʼ ಎಂದು ಹೇಳಿದ್ದಾರೆ. ಈಗಾಗಲೇ ರಾಮ್‌ ಚರಣ್‌, ಪ್ರಭಾಸ್‌, ಪವನ್‌ ಕಲ್ಯಾಣ್‌ ಮತ್ತಿತರರು ದೇಣಿಗೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Junior NTR: ಆಂಧ್ರ, ತೆಲಂಗಾಣ ಪ್ರವಾಹ; 35 ಮಂದಿ ಬಲಿ-1ಕೋಟಿ ದೇಣಿಗೆ ಕೊಟ್ಟ ಜೂ.NTR

ಭಾರೀ ಮಳೆಯಿಂದಾಗಿ ಆಂಧ್ರಪ್ರದೇಶದಲ್ಲಿ 17 ಜನರು ಮತ್ತು ತೆಲಂಗಾಣದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ಸಂಪರ್ಕ ರಸ್ತೆಗಳು ಹಾನಿಗೊಂಡಿವೆ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ನನ್ನ ವೃತ್ತಿ ಜೀವನದಲ್ಲಿ ಇದೊಂದು ದೊಡ್ಡ ವಿಪತ್ತು ಎಂದಿದ್ದಾರೆ. ಇತ್ತ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವರು ಪ್ರಾಥಮಿಕ ಅಂದಾಜಿನ ಪ್ರಕಾರ ಪ್ರವಾಹದಿಂದ 5,000 ಕೋಟಿ ರೂ. ಆರ್ಥಿಕ ನಷ್ಟವಾಗಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ 1ರಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರೊಂದಿಗೆ ಮಾತನಾಡಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯ ನೀಡುವುದಾಗಿ ಘೋಷಿಸಿದ್ದಾರೆ.