Friday, 13th December 2024

Fraud Case: ಪೋಲೀಸ್ ಅಧಿಕಾರಿ ಎಂದು ನಂಬಿಸಿ 10 ಲೇಡಿ ಕಾನ್ಸ್‌ಸ್ಟೇಬಲ್‍ಗಳ ಜತೆ ಸರಸ!

Fraud Case


ಬರೇಲಿ: ಪೊಲೀಸ್ ಅಧಿಕಾರಿಯಂತೆ ನಟಿಸಿ 10 ಮಹಿಳಾ ಕಾನ್ಸ್‌ಸ್ಟೇಬಲ್‍ಗಳನ್ನು ತನ್ನ ಬಲೆಯಲ್ಲಿ ಬೀಳಿಸಿಕೊಂಡು ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ವಂಚಕನನ್ನು ಬರೇಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಾಜಿ ಪೊಲೀಸ್ ಮಾಹಿತಿದಾರನಾಗಿದ್ದ ರಾಜನ್ ವರ್ಮಾ ಎಂಬಾತ ಕಾನೂನು ಬಗ್ಗೆ ತನಗಿರುವ ಜ್ಞಾನವನ್ನು ಬಳಸಿಕೊಂಡು ಮಹಿಳಾ ಕಾನ್ಸ್‌ಸ್ಟೇಬಲ್‍ಗಳನ್ನು ಮೋಸ(Fraud Case) ಮಾಡಿದ್ದಾನೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಆತ ಮಹಿಳಾ ಕಾನ್ಸ್‌ಸ್ಟೇಬಲ್‍ಗಳನ್ನು ಅವರ ಪೋಸ್ಟಿಂಗ್‍ಗಳ ಆಧಾರದ ಮೇಲೆ ತನ್ನ ಕಾರ್ಯ ಸಾಧನೆಗಾಗಿ ಬಳಸಿಕೊಂಡಿದ್ದಾನೆ. ಮದುವೆಯಾಗುವುದಾಗಿ ಭರವಸೆ ನೀಡಿ ಮಹಿಳಾ ಕಾನ್ಸ್‌ಸ್ಟೇಬಲ್‍ಗಳನ್ನು ತನ್ನ ಕಡೆಗೆ ಸೆಳೆದಿದ್ದಾನೆ. ಜುಲೈನಲ್ಲಿ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಆರೋಪಿ ವರ್ಮಾ ಪೊಲೀಸ್ ವೆಬ್‍ಸೈಟ್‍ನಿಂದ ಮಹಿಳಾ ಕಾನ್ಸ್‌ಸ್ಟೇಬಲ್‍ಗಳ ವೈಯಕ್ತಿಕ ಡೇಟಾವನ್ನು ಹೊರತೆಗೆದಿದ್ದಾನೆ ಎಂದು ಎಸ್ಪಿ ರಾಹುಲ್ ಭಾಟಿ ತಿಳಿಸಿದ್ದಾರೆ. ಮಂಗಳವಾರ ಸಂಜೆ ಬಂಧನಕ್ಕೊಳಗಾದ ಬಳಿಕ ಸುಮಾರು 2 ಕೋಟಿ ರೂ.ಗಳನ್ನು ವಂಚಿಸಿದ್ದಾಗಿ ವರ್ಮಾ ಒಪ್ಪಿಕೊಂಡಿದ್ದು, ಮೊರಾದಾಬಾದ್ ಮತ್ತು ಲಖಿಂಪುರ್ ಖೇರಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಇದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂಬುದಾಗಿ ತಿಳಿಸಿದ್ದಾನೆ.

ಈ ಬಗ್ಗೆ ಸುದ್ಧಿಗಾರರೊಂದಿಗೆ ಮಾತನಾಡಿದ ಕೊಟ್ವಾಲಿ ಎಸ್ಎಚ್ಒ ದಿನೇಶ್ ಕುಮಾರ್ ಶರ್ಮಾ, “ವರ್ಮಾ ಪೊಲೀಸ್ ಅಧಿಕಾರಿಯಂತೆ ನಟಿಸುವ ಮೂಲಕ ಸಂತ್ರಸ್ತರ ವಿಶ್ವಾಸವನ್ನು ಗಳಿಸಿದ್ದಾನೆ. ಅವನು ಅವರನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಅವರಿಂದ ಹಣವನ್ನು ತೆಗೆದುಕೊಂಡಿದ್ದಾನೆ. ಸುಳ್ಳು ಮದುವೆಯ ಭರವಸೆ ನೀಡಿದ ಆತನನ್ನು ನಂಬಿದ ಒಬ್ಬ ಕಾನ್ಸ್ಟೇಬಲ್ ಅವನಿಗೆ 26ಲಕ್ಷ ರೂ. ನೀಡಿದರು. ಅವನು ಆ ಹಣವನ್ನು ಜೂಜಾಟ ಮತ್ತು ಮದ್ಯಕ್ಕಾಗಿ ಖರ್ಚು ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಹಿಂದೆ ಪೊಲೀಸ್ ಅಧಿಕಾರಿಯಂತೆ ನಟಿಸಿದ್ದಕ್ಕಾಗಿ ಅವನನ್ನು ಬಂಧಿಸಲಾಗಿತ್ತು, ಆದರೆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಶಿಕ್ಷಕರ ದಿನಾಚರಣೆ ದಿನ ಶಿಕ್ಷಕನನ್ನು ಗೌರವಿಸಲು ಹೋದ ವಿದ್ಯಾರ್ಥಿಗೆ ಆದ ಗತಿಯೇನು ನೋಡಿ!

ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 420 (ವಂಚನೆ) ಅಡಿಯಲ್ಲಿ ವರ್ಮಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತನಿಂದ ಮೋಸಕ್ಕೊಳಗಾದ ಇತರ ಬಲಿಪಶುಗಳನ್ನು ಪತ್ತೆಹಚ್ಚಲು ಮತ್ತು ತಮ್ಮ ತನಿಖೆಯನ್ನು ಮುಂದುವರಿಸಲು ಪೊಲೀಸರು ಅವನನ್ನು ರಿಮಾಂಡ್ ಮಾಡಲು ಕೋರುತ್ತಿದ್ದಾರೆ ಎನ್ನಲಾಗಿದೆ.