Sunday, 24th November 2024

Nikhil Kumaraswamy: ಚನ್ನಪಟ್ಟಣ ಟಿಕೆಟ್ ಯಾರಿಗೆ? ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

Nikhil Kumaraswamy

ರಾಮನಗರ: ಚನ್ನಪಟ್ಟಣದ ದೊಡ್ಡಮಳೂರು ಸಾಯಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಉಚಿತ ಗಣೇಶ ಮೂರ್ತಿ ವಿತರಣಾ ಸಮಾರಂಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ಭಾಗಿಯಾಗಿ ಯುವಕರಿಗೆ ಗೌರಿ ಗಣೇಶ ಮೂರ್ತಿಯನ್ನು ವಿತರಣೆ ಮಾಡಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. ನಮ್ಮ ರಾಜ್ಯದ ರೈತಾಪಿ ವರ್ಗಕ್ಕೆ ಮಳೆ, ಬೆಳೆ ಆಗಲಿ, ಬೆಳೆದಿರುವ ಎಲ್ಲಾ ಬೆಳೆಗಳಿಗೆ ನಿಗದಿತ ಬೆಲೆ ಸಿಗಲಿ ಜತೆಗೆ ಇಡೀ ರಾಜ್ಯದ ಜನತೆಗೆ ಅರೋಗ್ಯ, ಆಯಸ್ಸು, ನೆಮ್ಮದಿ ಕಲ್ಪಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ ಭಾರತ; ಸೌರ ವಿದ್ಯುತ್ ಸ್ಥಾವರಗಳಿಗೆ ಶೇ.76ರಷ್ಟು ಸುಂಕ ಇಳಿಕೆ

ಚನ್ನಪಟ್ಟಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಜೆಡಿಎಸ್ ತಾಲೂಕು ಅಧ್ಯಕ್ಷರು ಜಯಮುತ್ತು ಅವರು ಉಚಿತ ಗಣೇಶ ಮೂರ್ತಿಗಳನ್ನು ವಿತರಣೆ ಮಾಡಿಕೊಂಡು ಬಂದಿದ್ದಾರೆ. ಈ ಬಾರಿ ನಾನೂ ಭಾಗವಹಿಸಿ ಯುವಕರಿಗೆ ಗಣೇಶ ಮೂರ್ತಿಯನ್ನು ವಿತರಿಸುತ್ತಿದ್ದೇನೆ ಎಂದು ತಿಳಿಸಿದರು.

ಗೆಲ್ಲಲು ಕಾರ್ಯಕರ್ತರು ಸಜ್ಜಾಗಬೇಕು

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಖಂಡರು, ಕಾರ್ಯಕರ್ತರು ಸಜ್ಜಾಗಬೇಕು. ಈಗಾಗಲೇ ಕ್ಷೇತ್ರದ ಹಲವೆಡೆ ಸಭೆಗಳನ್ನು ಮಾಡಿ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಎಲ್ಲರ ಅಭಿಪ್ರಾಯಗಳನ್ನು ವರಿಷ್ಠರಿಗೆ ತಲುಪಿಸುವ ಕೆಲಸ ಆಗ್ತಿದೆ. ಅಂತಿಮವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು. ಆ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಆರೋಗ್ಯಕರ ಚುನಾವಣೆ ನಡೆಯಬೇಕು

ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ಮಾತನಾಡಿದ ಅವರು, ಈಗಾಗಲೇ ದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಬಿಜೆಪಿಯ ಹಿರಿಯ ವರಿಷ್ಠರ ಜತೆಗೂ ಕೂಡ ಚರ್ಚೆ ಮಾಡಲಾಗಿದೆ. ಕ್ಷೇತ್ರದಲ್ಲಿ ಆರೋಗ್ಯಕರ ಚುನಾವಣೆ ನಡೆಯಬೇಕು. ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಅಂತಿಮವಾಗಿ ಎನ್‌ಡಿಎ ಅಭ್ಯರ್ಥಿ ಪರವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತೇವೆ ಎಂದರು.

ಈ ಸುದ್ದಿಯನ್ನೂ ಓದಿ | Anant Ambani: ನಮೀಬಿಯಾದ 700ಕ್ಕೂ ಅಧಿಕ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾದ ಅನಂತ್ ಅಂಬಾನಿ!

ಕಾಂಗ್ರೆಸ್ ಸೋಲಿಸಲು ಸೂಕ್ತ ಅಭ್ಯರ್ಥಿ

ಒಟ್ಟಿನಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಸೂಕ್ತ ಅಭ್ಯರ್ಥಿ ಹಾಕುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.