Friday, 22nd November 2024

Ganesha Chaturthi 2024: ಸಂತೋಷ, ಸಂಭ್ರಮವನ್ನು ಹೊತ್ತುಕೊಂಡು ಮತ್ತೆ ಬಂದ ಗಣೇಶ

Ganesh Chaturthi 2024

ಪ್ರತಿ ವರ್ಷದಂತೆ ಮತ್ತೆ ಈ ಬಾರಿ ಮನೆಮನೆಗೂ, ಬೀದಿ ಬೀದಿಗೂ ಗಣೇಶನನ್ನು (Ganesha Chaturthi 2024) ಕರೆತರಲು ಕ್ಷಣಗಣನೆ ಆರಂಭವಾಗಿದೆ. ಎಲ್ಲರೂ ಆತನನ್ನು ಸ್ವಾಗತಿಸುವ ಸಂಭ್ರಮದಲ್ಲಿದ್ದಾರೆ. ತಿಂಗಳ ಮೊದಲೇ ಆರಂಭಿಸಿರುವ ತಯಾರಿ ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಹುಲಿ, ಯಕ್ಷಗಾನ ಸೇರಿದಂತೆ ವಿವಿಧ ವೇಷಧಾರಿಗಳು ಮನೆಮನೆಗೆ ಭೇಟಿ ನೀಡಿ ತಾಸೆ ಸದ್ದು ಮೊಳಗಿಸಿ ಹಬ್ಬದ ಸಂಭ್ರಮ ವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತಿದ್ದಾರೆ.

ದೇಶಾದ್ಯಂತ ಆಚರಿಸಲ್ಪಡುವ ಗಣೇಶ ಚತುರ್ಥಿಗೆ ಭರದ ಸಿದ್ಧತೆ ನಡೆಯುತ್ತಿದೆ. ಒಂದು, ಮೂರು, ಐದು, ಏಳು, ಹತ್ತು ದಿನಗಳ ಕಾಲ ಗಣೇಶನ ಮೂರ್ತಿಯನ್ನು ಬೀದಿಗಳಲ್ಲಿ ಪ್ರತಿಷ್ಠಾಪಿಸಿ ಸಂಭ್ರಮಿಸಲು ಬೆಂಗಳೂರು (bengaluru), ಮಂಗಳೂರು (mangaluru) ಸೇರಿದಂತೆ ರಾಜ್ಯದ ಜನತೆಯೂ ಕಾತರರಾಗಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ಬಹಳ ಉತ್ಸಾಹದಿಂದ ಆಚರಿಸ ಲಾಗುವ ಗಣೇಶ ಹಬ್ಬದಂದು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ದೇವರಾದ ವಿನಾಯಕನನ್ನು ಪೂಜಿಸಲಾಗುತ್ತದೆ.

ಭಾದ್ರಪದ ತಿಂಗಳಲ್ಲಿ ಆಚರಿಸಲಾಗುವ ಗಣೇಶ ಚತುರ್ಥಿ ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಬರುತ್ತದೆ. ಭವ್ಯವಾದ ಮೆರವಣಿಗೆ, ಗಣೇಶನ ಮೂರ್ತಿ ವಿಸರ್ಜನೆ ಮೂಲಕ ಹಬ್ಬದ ಸಂಭ್ರಮ ಕೊನೆಯಾಗುತ್ತದೆ.
ಈ ಬಾರಿ ಗಣೇಶ ಚತುರ್ಥಿ ಸಂಭ್ರಮ ಸೆ.7ರಂದು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮೂಲಕ ಪ್ರಾರಂಭವಾಗಿ 17 ರಂದು ವಿಸರ್ಜಿಸುವ ಮೂಲಕ ಮುಕ್ತಾಯವಾಗಲಿದೆ.

Ganesh Chaturthi 2024

ಗಣೇಶ ಚತುರ್ಥಿಯ ಮಹತ್ವ

ಶಿವನಿಂದ ದೂರವಾದ ಪಾರ್ವತಿಗೆ ಮಗು ಬೇಕು ಎನ್ನುವ ಬಯಕೆ ಪ್ರಾರಂಭವಾಗುತ್ತದೆ. ಆಕೆ ತನ್ನ ಮೈಗೆ ಹಚ್ಚಿರುವ ಶ್ರೀಗಂಧದ ಲೇಪದಿಂದ ವಿನಾಯಕನ ಮೂರ್ತಿಯನ್ನು ಮಾಡಿ ಅದಕ್ಕೆ ಜೀವ ನೀಡುತ್ತಾಳೆ. ತಾನು ಸ್ನಾನಕ್ಕೆ ಹೋಗುವಾಗ ವಿನಾಯಕನನ್ನು ಯಾರೂ ಬರದಂತೆ ಕಾವಲು ಕಾಯಲು ಹೇಳುತ್ತಾಳೆ. ಅಲ್ಲಿಗೆ ಬಂದ ಶಿವನಿಗೆ ವಿನಾಯಕ ಒಳಗೆ ಹೋಗಲು ಬಿಡುವುದಿಲ್ಲ. ಇದರಿಂದ ಕೋಪಗೊಂಡ ಶಿವ ವಿನಾಯಕನ ತಲೆಯನ್ನು ಕತ್ತರಿಸುತ್ತಾನೆ. ಇದರಿಂದ ಕೋಪಗೊಂಡ ಪಾರ್ವತಿಯನ್ನು ಶಾಂತಗೊಳಿಸಲು ಶಿವ ವಿನಾಯಕನ ದೇಹಕ್ಕೆ ಆನೆಯ ಮುಖವನ್ನು ಇರಿಸುತ್ತಾನೆ. ಇದರಿಂದ ವಿನಾಯಕನಿಗೆ ಗಣೇಶ, ಗಣಪತಿ, ಗಜಾನನ ಎಂಬ ಹೆಸರು ಬರುತ್ತದೆ. ಈ ಘಟನೆಯ ಮಹತ್ವವನ್ನು ತಿಳಿಸಲು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ.

ಪ್ರಮುಖ ಆಚರಣೆಗಳು

ಜೇಡಿಮಣ್ಣು, ಮರ ಅಥವಾ ಲೋಹದಿಂದ ಮಾಡಿದ ಗಣೇಶನ ವಿಗ್ರಹವನ್ನೇ ಪ್ರತಿಷ್ಠಾಪಿಸಲಾಗುತ್ತದೆ. ವಿಗ್ರಹಕ್ಕೆ ಸ್ನಾನ ಮಾಡಿಸಿ ವಿವಿಧ ಬಗೆಯ ಭಕ್ಷ್ಯ, ಹೂವುಗಳನ್ನು ಅರ್ಪಿಸಿ ಪೂಜೆಯನ್ನು ಮಾಡಲಾಗುತ್ತದೆ. ಬಳಿಕ ಕೀರ್ತನೆ, ಮಂತ್ರ ಪಠನೆ ಮೂಲಕ ಗಣೇಶನನ್ನು ಸ್ತುತಿಸಲಾಗುತ್ತದೆ. ಒಂದು, ಮೂರು, ಐದು, ಏಳು, ಹತ್ತು ದಿನಗಳ ಕಾಲ ಪೂಜಿಸಿ ಗಣಪತಿ ವಿಸರ್ಜನೆಯೊಂದಿಗೆ ಹಬ್ಬವನ್ನು ಮುಕ್ತಾಯಗೊಳಿಸಲಾಗುತ್ತದೆ.

ವಿವಿಧೆಡೆ ಆಚರಣೆ

ಗಣೇಶೋತ್ಸವವನ್ನು ಮಹಾರಾಷ್ಟ್ರದ ಮನೆಮನೆಗಳಲ್ಲೂ ಆಚರಿಸಲಾಗುತ್ತದೆ. ಗಣೇಶ ಹಬ್ಬದ ಒಂದು ದಿನ ಮೊದಲು “ಪಾಡ್ಯ ಪೂಜೆ” ಅಥವಾ ಗಣೇಶನ ಪಾದಗಳನ್ನು ಪೂಜಿಸುವುದು ವಾಡಿಕೆ. ಚತುರ್ಥಿಯ ದಿನದಂದು ಗಣೇಶನ ವಿಗ್ರಹವನ್ನು ಮನೆಗೆ ತಂದು ಪೂಜಿಸಲಾಗುತ್ತದೆ. ಹರಿತಾಲಿಕಾ ಮತ್ತು ಗೌರಿ ಪೂಜೆ ಕೂಡ ಹಬ್ಬದ ಒಂದು ಭಾಗವಾಗಿರುತ್ತದೆ.

ಗೋವಾದಲ್ಲಿ ಮಾಟೋಲಿ, ಮರದ ಮಂಟಪವನ್ನು ಕಾಡು ಹೂವುಗಳು, ಔಷಧೀಯ ಗಿಡಮೂಲಿಕೆಗಳು ಮತ್ತು ಹಣ್ಣುಗಳಿಂದ ಅಲಂಕರಿಸಲಾಗಿದೆ. ದೇವಾಲಯದಿಂದ ಹೊಸದಾಗಿ ಕೊಯ್ಲು ಮಾಡಿದ ಅಕ್ಕಿಯ ಕೊಂಬೆಗಳನ್ನು ವೀಸರ್ಜನೆಯ ನಂತರ ಮನೆಗಳ ಮುಂದೆ ನೇತುಹಾಕಲಾಗುತ್ತದೆ.

Ganesh Chaturthi 2024

ಕರ್ನಾಟಕದಲ್ಲಿ ಗೌರಿ ಹಬ್ಬದೊಂದಿಗೆ ಗಣೇಶ ಹಬ್ಬವನ್ನು ಪ್ರಾರಂಭಿಸಲಾಗುತ್ತದೆ. ಗಣೇಶ ಚತುರ್ಥಿಯ ಹಿಂದಿನ ದಿನ ಗಣೇಶನ ಮಾತೆಯಾದ ಗೌರಿಯನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಹೊಸದಾಗಿಯೇ ವಿಗ್ರಹವನ್ನು ತರಲಾಗುತ್ತದೆ. ಪೂಜೆ ಮಂಟಪವನ್ನು ಹೂವಿನ ಮಾಲೆ, ಮಾವಿನ ಎಲೆಗಳಿಂದ ಅಲಂಕರಿಸಲಾಗುತ್ತದೆ. ದೇವರಿಗೆ ಮೋದಕ, ಲಾಡು, ಚಕ್ಕುಲಿ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಲಾಗುತ್ತದೆ.

ಚಂದ್ರನನ್ನು ನೋಡಬಾರದು

ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎನ್ನುವ ನಿಯಮವಿದೆ. ಒಂದು ವೇಳೆ ನೋಡಿದರೆ ಮಿಥ್ಯ ದೋಷ ಅಥವಾ ಮಿಥ್ಯ ಕಳಂಕಕ್ಕೆ ಕಾರಣವಾಗಬಹುದು ಎನ್ನುವ ನಂಬಿಕೆ ಅಡಗಿದೆ. ಇದಕ್ಕೆ ಸಂಬಂಧಿಸಿ ಒಂದು ಕಥೆಯೂ ಇದೆ. ತನ್ನ ವಾಹನವಾದ ಮೂಷಿಕದ ಮೇಲೆ ಗಣೇಶ ಸವಾರಿ ಮಾಡುತ್ತಿದ್ದಾಗ ಬೀಳುತ್ತಾನೆ. ಇದನ್ನು ನೋಡಿ ಚಂದ್ರ ನಗುತ್ತಾನೆ. ಇದರಿಂದ ಸಿಟ್ಟಾದ ಗಣೇಶ ಭಾದ್ರಪದ ಮಾಸದ ಶುಕ್ಲ ಗಣೇಶ ಚತುರ್ಥಿಯ ರಾತ್ರಿ ಚಂದ್ರನನ್ನು ನೋಡುವವರಿಗೆ ಸುಳ್ಳು ಆರೋಪ ತಟ್ಟಲಿ ಎಂದು ಶಾಪ ನೀಡುತ್ತಾನೆ.

ಒಂದು ಬಾರಿ ಶ್ರೀಕೃಷ್ಣ ಕೂಡ ಚೌತಿಯ ದಿನ ಚಂದ್ರನನ್ನು ನೋಡಿದ್ದಕ್ಕೆ ಜಾಂಬವಂತ ತನ್ನ ಬಳಿ ಇದ್ದ ಶಮಂತಕ ಮಣಿಯನ್ನು ಶ್ರೀಕೃಷ್ಣ ಕದ್ದ ಎನ್ನುವ ಸುಳ್ಳು ಆರೋಪಕ್ಕೆ ಗುರಿಯಾಗುತ್ತಾನೆ. ಗಣೇಶನನ್ನು ಪೂಜಿಸಿದ ಬಳಿಕ ಆರೋಪದಿಂದ ಕೃಷ್ಣ ಮುಕ್ತನಾಗುತ್ತಾನೆ. ಹೀಗಾಗಿ ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು ಎನ್ನುವ ನಂಬಿಕೆ ಇದೆ.

Pralhad Joshi: ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ ಭಾರತ; ಸೌರ ವಿದ್ಯುತ್ ಸ್ಥಾವರಗಳಿಗೆ ಶೇ.76ರಷ್ಟು ಸುಂಕ ಇಳಿಕೆ

Ganesh Chaturthi 2024

ಗಣೇಶ ಮೂರ್ತಿ ವಿಸರ್ಜನೆ

ಗಣೇಶ ಚತುರ್ಥಿಯ ಕೊನೆಯ ದಿನ ಗಣೇಶನ ವಿಗ್ರಹವನ್ನು ನದಿ, ಸರೋವರ ಅಥವಾ ಬಕೆಟ್‌ ನ ನೀರಿನಲ್ಲಿ ಮುಳುಗಿಸುವುದು ವಾಡಿಕೆ. ಇದು ಗಣೇಶ ಮತ್ತೆ ತನ್ನ ಹೆತ್ತವರಾದ ಶಿವ ಮತ್ತು ಪಾರ್ವತಿ ದೇವಿ ಇರುವ ಕೈಲಾಸಕ್ಕೆ ತೆರಳುವುದನ್ನು ಸಂಕೇತಿಸುತ್ತದೆ. ಹಬ್ಬದ ಸಮಯದಲ್ಲಿ ಪಡೆದ ಆಶೀರ್ವಾದಗಳಿಗೆ ಕೃತಜ್ಞತೆ ವ್ಯಕ್ತಪಡಿಸಲು ಮತ್ತು ಮುಂದಿನ ವರ್ಷ ಮತ್ತೆ ಅತ್ಯಂತ ಹರ್ಷೋಲ್ಲಾಸದಿಂದ ಗಣೇಶನನ್ನು ಆಹ್ವಾನಿಸಲು ಈ ಬಾರಿ ವಿದಾಯ ಹೇಳುವುದಾಗಿದೆ.