Friday, 22nd November 2024

BESCOM Cash Counter: ವಿದ್ಯುತ್‌ ಗ್ರಾಹಕರಿಗೆ ಗುಡ್‌ ನ್ಯೂಸ್‌, ಸೆ. 8, 15ರ ಭಾನುವಾರವೂ ತೆರೆದಿರಲಿವೆ ಬೆಸ್ಕಾಂ ಕ್ಯಾಶ್‌ ಕೌಂಟರ್‌

BESCOM

ಬೆಂಗಳೂರು: ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ವಿದ್ಯುತ್‌ ಸಂಪರ್ಕದ ಕಡಿತದಿಂದ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸೆ. 8 ಮತ್ತು 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್‌ ಕೌಂಟರ್‌ಗಳು (BESCOM Cash Counter) ತೆರೆದಿರಲಿವೆ. ಆನ್‌ಲೈನ್‌ ಪೇಮೆಂಟ್‌ ಬಳಸದವರ ಅನುಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆಯನ್ನು ಬೆಸ್ಕಾಂ ಮಾಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಸ್ಕಾಂ, ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್‌ ಸಂಪರ್ಕ ಕಡಿತದಿಂದ ತೊಂದರೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಬೆಸ್ಕಾಂ ವಲಯದ ಎಲ್ಲ ಉಪ ವಿಭಾಗಗಳ ಕ್ಯಾಶ್‌ ಕೌಂಟರ್‌ ಗಳನ್ನು ಸೆ. 8 ಮತ್ತು 15ರ ಭಾನುವಾರವೂ ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಬಿಲ್‌ ಬಂದ 30 ದಿನದೊಳಗೆ ವಿದ್ಯುತ್‌ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿದ್ದು, ಸೆ. 1ರಿಂದಲೇ ಈ ನಿಯಮ ಜಾರಿಯಾಗಿದೆ. ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್‌ ಪಾವತಿಸದಿದ್ದಲ್ಲಿ, ಮೀಟರ್‌ ರೀಡಿಂಗ್‌ಗೆ ಬರುವ ದಿನವೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸುವಂತೆ ಎಂದು ಬೆಸ್ಕಾಂ ಕೋರಿದೆ.

ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂ.ಗಳಿಗಿಂತ ಅಧಿಕವಾಗಿದ್ದಲ್ಲಿ, ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಗೃಹ ಜ್ಯೋತಿಯೋಜನೆ ಅಡಿಯಲ್ಲಿ ಶೂನ್ಯ ಬಿಲ್‌ ಪಡೆಯುತ್ತಿರುವ ಗ್ರಾಹಕರ ಹಿಂಬಾಕಿ ಶೂನ್ಯ ಇದ್ದಲ್ಲಿ ಚಿಂತಿಸಬೇಕಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Ganesha Chaturthi 2024: ಸಂತೋಷ, ಸಂಭ್ರಮವನ್ನು ಹೊತ್ತುಕೊಂಡು ಮತ್ತೆ ಬಂದ ಗಣೇಶ

ಗಣೇಶೋತ್ಸವಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಮಾರ್ಗಸೂಚಿ

ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ವೇಳೆ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಪಡೆಯಲು ಕೆಲ ನಿಯಮಾವಳಿಗಳನ್ನು ತಪ್ಪದೇ ಪಾಲಿಸಲು ಬೆಸ್ಕಾಂ ಸೂಚಿಸಿದೆ.

  • ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವಾಗ, ಎಲ್ಲಾ ಸಂಬಂಧಿತ (ಬಿಬಿಎಂಪಿ/ಬಿಡಿಎ/ ಗ್ರಾಮ ಪಂಚಾಯಿತಿ/ಆರಕ್ಷಕ ಠಾಣೆ ಹಾಗೂ ಇನ್ನಿತರ) ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಕಡ್ಡಾಯವಾಗಿ ಪಡೆದಿರಬೇಕು.
  • ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದ ನಂತರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಥವಾ ಸಹಾಯಕ ಇಂಜಿನಿಯರ್‌ಗಳು ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಮಾಣ ಮಾಡಿರುವ ಪೆಂಡಾಲ್ ಅಥವಾ ಸಮಾರಂಭ ಸ್ಥಳದ ಸುರಕ್ಷತೆಯನ್ನು ಖಾತ್ರಿ ಪಡಿಸುತ್ತಾರೆ
  • ವೈರಿಂಗ್ ಸುರಕ್ಷತೆ, ಎಂ.ಸಿ.ಬಿ ಮತ್ತು ಇಐಎ ಅಳವಡಿಕೆಯ ಬಗ್ಗೆ ನೋಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವೈರಿಂಗ್ ಸಮಾಪನ ವರದಿಯನ್ನು ಪಡೆದು ಸ್ಥಳ ಪರಿಶೀಲಿಸಿದ ನಂತರ ಸಂಪರ್ಕ ಕಲ್ಪಿಸಲಾಗುವುದು
    ತಾತ್ಕಾಲಿಕ ವಿದ್ಯುತ್ ಸಂಪರ್ಕದ ನಿರೀಕ್ಷಿತ ಸಮಯ ಮುಗಿದ ಬಳಿಕ ಅಂತಿಮ ರೀಡಿಂಗ್ ನಮೂದಿಸಿ ಮಾಪಕ ವಾಪಸ್ ನೀಡಬೇಕು
  • ಸಾರ್ವಜನಿಕ ಗಣೇಶೋತ್ಸವಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ನಿಮ್ಮ ಉಪವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ