Saturday, 23rd November 2024

Vasima Bhavimani: ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ !

ವಸೀಮ ಭಾವಿಮನಿ ಹುಬ್ಬಳ್ಳಿ

ಕಸ ಮುಕ್ತ ಸ್ವಚ್ಚ ಸುಂದರ ನಗರವನ್ನು ನಿರ್ಮಿಸಲು ಮುಂದಾಗಿದೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ

ವೈಜ್ಞಾನಿಕ ತಾಜ್ಯ ವಿಲೇವಾರಿ ಮೂಲಕ ಹಾಗೂ ಸಿಮೆಂಟ್ ಕಾರ್ಖಾನೆಗೆ ಕಚ್ಚಾವಸ್ತು ಪೂರೈಕೆ ಹಾಗೂ ರೈತರು ಬೆಳೆಯುತ್ತಿರುವ ದ್ರಾಕ್ಷಿಗೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ಗೊಬ್ಬರವನ್ನು ಒದಗಿಸುವ ಕೆಲಸ ಮಾಡುವ ಮೂಲಕ ರಾಜ್ಯದ 2ನೇ ಬಹುದೊಡ್ಡ ಮಹಾನಗರ ಪಾಲಿಕೆ ಎಂದು ಕರೆಯಿಸಿಕೊಳ್ಳುವ ಹುಬ್ಬಳ್ಳಿ-ಧಾರವಾಡ ಮಹಾನಾಗರ ಪಾಲಿಕೆ ಘನ ತಾಜ್ಯ ನಿರ್ವಹಣೆಯಲ್ಲಿ ವಿಭಿನ್ನ ಹಾಗೂ ಹೊಸದೊಂದು ಹೆಜ್ಜೆ ಹಾಗೂ ಆವಿಷ್ಕಾರ ಮಾಡುತ್ತಿದೆ.

ರಾಜ್ಯದಲ್ಲಿಯೇ 2 ನೇ ರಾಜಧಾನಿ ಎಂದು ಹೆಸರು ಪಡೆದಿರುವ ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಅವಳಿನಗರದ ಸ್ವಚ್ಚತೆಗೆ ಮಹಾನಗರ ಪಾಲಿಕೆ ಆಯುಕ್ತರು ಒಳಗೊಂಡ ಅಧಿಕಾರಿಗಳ ತಂಡ ಮುಂದಾಗಿ, ಕಾಯಕವೇ ಕೈಲಾಸ ಎನ್ನುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದ್ದಾರೆ.

ಕೇಂದ್ರ ಸರಕಾರದ ಪುರಸ್ಕೃತ ಸ್ವಚ್ಚ ಭಾರತ ಮಿಷನ್ 1.0 ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಪಾಲಿಕೆ ಸ್ವಚ್ಚ ಸರ್ವೇಕ್ಷಣದಲ್ಲಿ ರಾಜ್ಯಕ್ಕೆ ೨ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಎಸ್‌ಬಿಎಂ 2.0 ಯೋಜನೆಯನ್ನು ಸದ್ಯ ಕೈಗೆತ್ತಿಕೊಂಡಿರುತ್ತದೆ. ಹೊಸ ಪ್ರಯೋಗದ ಜೊತೆಗೆ ನಗರದ ಸ್ವಚ್ಚತೆಗೆ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ
ಮಹಾನಗರ ಪಾಲಿಕೆ ಅಧಿಕಾರಿಗಳು ವಿಶೇಷವಾದ ಪ್ರಯತ್ನ ಮಾಡುತ್ತಿದ್ದು, ಮಲ್ಲಿಕಾರ್ಜುನ ಬಿ.ಎಂ, ಕಾರ್ಯ ನಿರ್ವಾಹಕ ಅಭಿಯಂತರರು ಹಾಗೂ ಶ್ರೀಧರ ಟಿ.ಎನ್, ನಯನಾ ಕೆ.ಎಸ್, ಯುವರಾಜ ಕೆ.ಆರ್, ಅವಿನಾಶ, ಪರಿಸರ ಅಭಿಯಂತರರು ಹಾಗೂ ಇವರ ತಂಡದ ಆರೋಗ್ಯ ನೀರೀಕ್ಷಕರು ಮತ್ತು 2100 ಪೌರ ಕಾರ್ಮಿಕರ ಸಿಬ್ಬಂದಿಗಳು, ಚಾಲಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಎಸ್‌ಬಿಐ, ಎಲ್‌ಐಸಿ ವಿಮಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾರ್ಮಿಕರ ಸುರಕ್ಷತೆಗಾಗಿ ಸುರಕ್ಷತಾ ಶೂಗಳು, ಸಮವಸಗಳು, ಕೈಗವಸುಗಳು, ಸ್ವಚ್ಚತಾ ಸಲಕರಣೆಗಳು ಹಾಗೂ ಆರೋಗ್ಯ ತಪಾಸಣೆಗಳಂತಹ ಸೌಲಭ್ಯಗಳನ್ನು ನೀಡಲಾಗಿರುತ್ತದೆ. ಕಾರ್ಮಿಕರಿಗೆ ಬೆಳಗಿನ ಉಪಹಾರ ಹಾಗೂ
ದಣಿವಾರಿಸಿಕೊಳ್ಳಲು ವಾರ್ಡವಾರು ಭೀಮಾಶ್ರಯಗಳನ್ನು ನಿರ್ಮಿಸಿ ಪೌರಕಾರ್ಮಿಕರನ್ನು ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ.

೪೫೦ ಟನ್ ಕಸ ಸಂಗ್ರಹದ ಗುರಿ
ಹುಬ್ಬಳ್ಳಿ ನಗರದಲ್ಲಿಯೇ ೩೦೦ ಟನ್ ಹಾಗೂ ಧಾರವಾಡದಲ್ಲಿ ಪ್ರತಿನಿತ್ಯ ೧೫೦ ಟನ್ ತಾಜ್ಯವನ್ನು ಸುಮಾರು ೩.೫ ಲಕ್ಷ ಮನೆ- ಮನೆಗಳಿಂದ ೨೫೫ ಸಂಖ್ಯೆಯ ಆಟೋ ಟಿಪ್ಪರ ವಾಹನಗಳ ಮುಖಾಂತರ ಸಂಗ್ರಹಿಸಿ, ದ್ವೀತಿಯ ಹಂತದ ತಾಜ್ಯ ಸಂಗ್ರಹಣಾಗಾರದಲ್ಲಿ ಸಂಗ್ರಹಿಸಿ, ವೈಜ್ಞಾನಿಕ ವಿಲೇವಾರಿಗೆ ಹುಬ್ಬಳ್ಳಿ- ಧಾರವಾಡದಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಿರುವ ತಾಜ್ಯ ಸಂಸ್ಕರಣ ಕಂಪೋಸ್ಟ್ ಘಟಕಗಳಿಗೆ ಪ್ರತಿನಿತ್ಯ ವಿಲೇವಾರಿ ಮಾಡಿ, ಹಸಿ ತಾಜ್ಯದಿಂದ ಉತ್ಕೃಷ್ಟ ದರ್ಜೆಯ ಆರ್ಗಾನಿಕ್ ಗೊಬ್ಬರವನ್ನು ತಯಾರಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಬೆಂಗೇರಿ, ಉಣಕಲ್ನಲ್ಲಿರುವ ವಿದ್ಯಾ ನಗರ, ಅಕ್ಷಯ ಪಾರ್ಕ್‌ನಲ್ಲಿರುವ ನಂದಿನಿ ಲೇಔಟ್, ಇಂದಿರಾನಗರದಲ್ಲಿ ಕಸ ಸಂಗ್ರಹದ ವ್ಯವಸ್ಥೆ ಮಾಡಲಾಗಿದೆ. ೧ ವಾರ್ಡ್‌ಗೆ ೩ ವಾಹನಗಳನ್ನು ಕಳುಹಿಸಿ, ೧ ಟ್ರ್ಯಾಕ್ಟರ್ ಕೊಟ್ಟು ಕಸ ಸಂಗ್ರಹದ ವ್ಯವಸ್ಥೆ ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿಗೆ ೪೫೦ ಗ್ರಾಂನಂತೆ, ೫ ರಿಂದ ೬ ಜನ ಸದಸ್ಯರು ಇದ್ದರೆ, ಒಟ್ಟು ೩ ಕೆಜಿ ಕಸ ಸಂಗ್ರಹದ
ವ್ಯವಸ್ಥೆಯನ್ನು ಮಾಲಾಗುತ್ತದೆ.

ತೋಟಗಾರಿಕೆಗೆ ಗೊಬ್ಬರ ತಯಾರಿ
ಕಸದಿಂದ ರಸ ಎನ್ನುವ ಗಾದೆ ಮಾತನ್ನು ಅಕ್ಷರಶ: ಇಲ್ಲಿ ಅಧಿಕಾರಿಗಳು ಪಾಲಿಸಿದ್ದಾರೆ. ಇಲ್ಲಿ ತಯಾರಾಗುವ
ಗೊಬ್ಬರಿಂದ ತೋಟಗಾರಿಕೆ ಬೆಳೆಗಳಾದ ಬಾಳೆ, ತೆಂಗು, ಅಡಕೆ ಹಾಗೂ ದ್ರಾಕ್ಷಿಗೆ ೧ ಕೆಜಿ ೨ ರು.ನಂತೆ ದರವನ್ನು ಫಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದೆ.‌ ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ.

ಮಾದರಿ ವಾರ್ಡ್!
ಹುಬ್ಬಳ್ಳಿ ಧಾರವಾಡದ ವಾರ್ಡ ನಂಬರ್ ೪೭ ರಲ್ಲಿ ೧೭೮ ಅರ್ಪಾಟಮೆಂಟಗಳು ಇದ್ದು, ಜನರು ಬಹಳ ಕಾಳಜಿ ಪೂರ್ವಕವಾಗಿ ಸ್ವಯಂ ಪ್ರೇರಣೆಯಿಂದ ಕಸ ವಿಲೇವಾರಿ ಮಾಡಲು ಅನುಕೂಲ ಮಾಡಿಕೊಡುತ್ತಾರೆ. ಇದು ನಮಗೆ ಬಹಳ ಖುಷಿ ಕೊಟ್ಟಿದೆ ಅಂತಾರೆ ಪಾಲಿಕೆ ವೈಜ್ಞಾನಿಕ ಘನ ತಾಜ್ಯ ನಿರ್ವಹಣೆ ತಂಡದ ಅಽಕಾರಿಗಳು.

ಅಧಿಕಾರಿಗಳಿಂದ ಅಧ್ಯಯನ
ಹುಬ್ಬಳ್ಳಿ ಧಾರವಾಡದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವೈಜ್ಞಾನಿಕ ಘನ ತಾಜ್ಯ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳು, ಉತ್ತರಪ್ರದೇಶದ, ಗಾಜಿಯಾಬಾದ, ಲಖನೌ, ಇಂದೋರ್, ಕಲ್ಕತಾ ಮತ್ತು ದೆಹಲಿಯಲ್ಲಿ ಮಾದರಿ ತಾಜ್ಯ ನಿರ್ವಹಣೆ ಅಧ್ಯಯನ ಮಾಡಿ ಬಂದಿದ್ದಾರೆ. ಘನತಾಜ್ಯ ನಿರ್ವಹಣಾ ನಿಯಮ ೨೦೧೬ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶವನ್ನು ಯಥಾವತ್ತಾಗಿ ಪಾಲಿಕೆಯ ವ್ಯಾಪ್ತಿಯಲ್ಲಿ ಪಾಲಿಸಲು ಅಧಿಕಾರಿಗಳ ತಂಡವು ಉತ್ತಮ ಕೆಲಸವನ್ನ ಮಾಡುತ್ತಿದೆ.

ಅವಳಿ ನಗರದಲ್ಲಿ ತಾಜ್ಯ ನಿರ್ವಹಣೆಗೆ ಸಿಸಿಟಿವಿ ಕಣ್ಗಾವಲು
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ಇಂಟಿಗ್ರೇಟೆಡ್ ಕಮಾಂಡೆಟ್ ಕಂಟ್ರೋಲ್ ಸೆಂಟರ್ ಮೂಲಕ ಸುಮಾರು ೯೫ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಎಲ್ಲೆಂದರಲ್ಲಿ ತಾಜ್ಯ ಎಸೆಯುವವರ ಮೇಲೆ ಸಿಸಿಟಿವಿ ಕಣ್ಗಾವಲನ್ನು ಇರಿಸಲಾಗಿದೆ. ಈಗಾಗಲೇ ರು. ೧೦ ಲಕ್ಷಕ್ಕಿಂತ ಹೆಚ್ಚು ದಂಡವನ್ನು ವಸೂಲಿ ಮಾಡಲಾಗಿದೆ. ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ, ಕಳೆದ 2 ವರ್ಷಗಳಿಂದ ೩೫ ಟನ್‌ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು, ಸುಮಾರು 40 ಲಕ್ಷ ದಂಡ ವನ್ನು ವಿಧಿಸಿ, ಪ್ಲಾಸ್ಟಿಕ್ ಭೂತವನ್ನು ನಗರದಿಂದ ಓಡಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಪಾರಂಪರಿಕ ತಾಜ್ಯ ನಿರ್ವಹಣೆ
ಸುಮಾರು 50 ರಿಂದ ೬೦ ವರ್ಷಗಳ ಪಾರಂಪರಿಕ ತಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಧ್ಯ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ತಾಜ್ಯ ಸಂಗ್ರಹಣಾಕಾರರ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಿ ಲು ಈಗಾಗಲೇ ಟೆಂಡರ್ ಕರೆದು ಕಾರ್ಯಾದೇಶವನ್ನು ನೀಡಿದ್ದು, ಈ ಮಾನ್ಸೂನ್ ನಂತರದಲ್ಲಿ ಒಂದು
ವರ್ಷದಲ್ಲಿ, ಇಷ್ಟು ದಿನಗಳ ಕಾಲ ಕಸವಿರುವ ಜಾಗವನ್ನು ಶುಭ್ರಗೊಳಿಸಿ, ಅಲ್ಲಿ ವಿವಿಧ ಉದ್ಯಾನವನ್ನು ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿದೆ.

ಸಿಮೆಂಟ್ ಫ್ಯಾಕ್ಟರಿಗೆ ಕಚ್ಚಾವಸ್ತು
ಹುಬ್ಬಳ್ಳಿ-ಧಾರವಾಡದ ಸಾಲಿಡ್ ವೇಸ್ಟ್ ಮ್ಯಾನೇಜಮೆಂಟ್‌ನಿಂದ ಸಿಮೆಂಟ್ ಫ್ಯಾಕ್ಟರಿಗಳಿಗೂ ಕಚ್ಚಾವಸ್ತು ಹೋಗುತ್ತೆ. ಇಪಿಆರ್ ಪಾಲಿಸಿ ಅನ್ವಯ 200 ಕಿ.ಮೀ ಒಳಗಿನ ಸಿಮೆಂಟ್ ಫ್ಯಾಕ್ಟರಿಗಳಿಗೆ ಆರ್‌ಡಿಎಫ್ ಕಚ್ಚಾವಸ್ತು ಪೂರೈಸಲಾಗುತ್ತಿದೆ. ಲೋಕಾಪೂರದ ಜೆಕೆ ಸಿಮೆಂಟ್ ಫ್ಯಾಕ್ಟರಿ ಹಾಗೂ‌ ದಾಲ್ಮಿಯಾ ಫ್ಯಾಕ್ಟರಿಗೆ ಕಚ್ಚಾವಸ್ತು ಸರಬರಾಜು ಮಾಡಲಾಗುತ್ತಿದೆ.

ಆರೋಗ್ಯದ ಮೇಲೆ ಕೆಟ್ಟ ಪರಿಣಾಮ
ಎಲ್ಲೆಂದರಲ್ಲಿ ಕಸ ಎಸೆಯುವುದು ಹಾಗೂ ಪ್ಲಾಸ್ಟಿಕ್ ಪೇಪರ್, ರಬ್ಬರ ಟೈರಗಳಂತಹ ವಸ್ತುಗಳನ್ನು ಸುಡುವು ದರಿಂದ ಡಯಾಕ್ಸಿನ್ಸ್‌ಗಳು ಹಾಗೂ ಕಾರ್ಬನ್ ಮೋನಾಕ್ಸೈಡ್ ಶುದ್ಧ ಗಾಳಿಗೆ ಸೇರಿ ಕ್ಯಾನ್ಸರ್‌ನಂತಹ ಕೆಟ್ಟ ಕಾಯಿಲೆಗಳನ್ನು ಸಮಾಜದಲ್ಲಿ ಹರಡುವ ಸಾಧ್ಯತೆ ಹೆಚ್ಚಿದೆ.

ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ವೈಜ್ಞಾನಿಕ ಘನ ತಾಜ್ಯ ನಿರ್ವಹಣೆ ಮೂಲಕ ಮಹಾನಗರ ಪಾಲಿಕೆ ಅಧಿಕಾರಿಗಳು ಒಂದೊಳ್ಳೆ ಕೆಲಸವನ್ನು ಮಾಡುತ್ತಿದ್ದು, ಜನರ ಆರೋಗ್ಯ ಕಾಪಾಡಲು ಬಹುದೊಡ್ಡ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಕೆಲಸಗಳನ್ನು ಇನ್ನಷ್ಟು ಯಶಸ್ವಿಯಾಗಲಿ ಎನ್ನುವುದು, ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನತೆಯ ಆಶಯ.

ನಾವು ಈಗಾಗಲೇ ಹುಬ್ಬಳ್ಳಿ ಧಾರವಾಡದಲ್ಲಿ ವಿನಡ್ರೋವ್ ಮೆಥೆಡ್ ಮೂಲಕ ಕಸ ವಿಲೇವಾರಿ ಕೆಲಸ ಮಾಡು ತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಿಎನ್‌ಜಿ ಪ್ಲ್ಯಾಂಟ್ ಎಂಆರ್‌ಎಫ್ಗಳನ್ನು ಅನುಷ್ಠಾನ ಮಾಡುವುದ
ರೊಂದಿಗೆ, ಮನೆ ಮನೆ ವಿಂಗಡಿತ ತಾಜ್ಯವನ್ನು ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಖರೀದಿಸಿ, ತಾಜ್ಯ ವಿಲೇವಾರಿ ಹಾಗೂ‌ ಸಂಗ್ರಹವನ್ನು ಸುಗಮಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮಲ್ಲಿಕಾರ್ಜುನ ಬಿ.ಎಂ (ಕಾರ್ಯನಿರ್ವಾಹಕ ಅಭಿಯಂತರರು),

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಮೂಲದಲ್ಲಿ ಕಸ ವಿಂಗಡಣೆ ಮಾಡಿ, ಸಾರ್ವಜನಿಕರು ಪಾಲಿಕೆಗೆ ನೀಡಲು ಸಂಪೂರ್ಣ ಸಹಕಾರ ನಿಡದಿದ್ದಲ್ಲಿ, ವೈಜ್ಞಾನಿಕ ಕಸ ವಿಲೇವಾರಿ ಜಟಿಲವಾಗುತ್ತದೆ. ಕರದಾತರು ಪಾಲಿಕೆ ನೀಡುವ ತೆರಿಗೆಯು ನಗರದ ಅಭಿವೃದ್ಧಿಯ ಬದಲು ಹೆಚ್ಚಿನದಾಗಿ ಕಸ ನಿರ್ವಹಣೆಗೆ ವ್ಯರ್ಥವಾಗುವುದನ್ನು ಅರಿತು ಸಾರ್ವಜನಿಕರು ತಾಜ್ಯವನ್ನು ವಿಂಗಡಿಸಿ,
ದಿನ ನಿತ್ಯದ ಕಸ ವಿಲೇವಾರಿಗೆ ಸಹಕರಿಸುವಂತೆ, ಮನವಿ ಮಾಡುತ್ತೇವೆ.
ಶ್ರೀಧರ್ ಟಿಎನ್. (ಪರಿಸರ ಅಭಿಯಂತರರು), ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ