Saturday, 23rd November 2024

Narendra S Gangolly: ಕಲಾವಿದನ ಕೈಯಲ್ಲಿ ಗಣಪತಿ

ನರೇಂದ್ರ ಎಸ್ ಗಂಗೊಳ್ಳಿ

ಕಲಾವಿದರೂ, ಬ್ಯಾಂಕ್ ಉದ್ಯೋಗಿಯೂ ಆಗಿರುವ ಇವರು ಮಣ್ಣಿನ ಗಣಪತಿ ಮೂರ್ತಿ ರಚಿಸಿ, ಆಸಕ್ತರಿಗೆ ನೀಡುವುದು ವಿಶೇಷ ಎನಿಸುತ್ತದೆ.

ಚೌತಿ ಹಬ್ಬದ ಸಮಯದಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮಕ್ಕೆ ಬಂದು ರಥ ಬೀದಿಯ ಪಕ್ಕದ ರಸ್ತೆಯಲ್ಲಿ ಇಣುಕಿದರೆ, ಸಂಗೀತ ನಿರ್ದೇಶಕ ಗುರುಕಿರಣ್ ಗಣಪತಿಯ ಮೂರ್ತಿಯನ್ನು ತಯಾರು ಮಾಡು ತ್ತಿದ್ದಾರಾ ಎನ್ನುವ ಭ್ರಮೆಗೆ ಒಳಗಾಗುತ್ತೀರಿ. ಥೇಟ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಅಲ್ಲಿ ನಿಮಗೆ ಕಾಣ ಸಿಗುತ್ತಾರೆ. ಅವರು ಗಣಪತಿಯ ಮೂರ್ತಿ ತಯಾರಿಸುತ್ತಾರೆ!

ಗಂಗೊಳ್ಳಿಯ ನಾಗರಾಜ್ ಖಾರ್ವಿ ಅವರು ಕಳೆದ ೨೨ ವರ್ಷಗಳಿಂದ ಈ ಭಾಗದಲ್ಲಿ ಗಣಪತಿ ಮೂರ್ತಿಯ ರಚನೆ ಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ; ಬಿಡುವಿನ ವೇಳೆಯಲ್ಲಿ ಕಲಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಇವರು, ಜೇಡಿ ಮಣ್ಣಿನಿಂದ ಗಣಪತಿ ಮೂರ್ತಿ ತಯಾರಿಸುತ್ತಾರೆ!

ಆರಂಭದಲ್ಲಿ ಎರಡು ಮೂರ್ತಿಗಳ ರಚನೆಯಿಂದ ಆರಂಭಗೊಂಡ ಈ ಕಾರ್ಯ ಇದೀಗ ವರ್ಷಕ್ಕೆ ೧೮ ಭಿನ್ನ ಗಾತ್ರದ ವಿವಿಧ ರೀತಿಯ ಮೂರ್ತಿಗಳನ್ನು ನಿರ್ಮಾಣ ಮಾಡುವಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದೆ.

ಎರಡು ತಿಂಗಳ ಹಿಂದಿನಿಂದಲೇ ಮೂರ್ತಿಗಳ ತಯಾರಿಯಲ್ಲಿ ಪಡೆದುಕೊಳ್ಳುವ ಇವರು ನೈಸರ್ಗಿಕ ಬಣ್ಣವನ್ನೇ ಬಳಸುತ್ತಾರೆ. ಈ ಮೂರ್ತಿಗಳ ರಚನೆಯಿಂದ ಮನಸ್ಸಿಗೆ ವಿಶೇಷ ಆನಂದ ನೆಮ್ಮದಿ ಸಿಗುತ್ತದೆ. ಅದಕ್ಕಿಂತ ದೊಡ್ಡದು ಯಾವುದು ಇಲ್ಲ ಎಂದು ಅಭಿಪ್ರಾಯ ಪಡುವ ನಾಗರಾಜ್ ಅವರು ಕುಂದಾಪುರದ ಖ್ಯಾತ ನಾಟಕ ತಂಡವಾದ
ರೂಪಕಲಾ ದಲ್ಲಿ ಕಲಾವಿದರಾಗಿ ನಟಿಸಿ ಜನ ಮೆಚ್ಚುಗೆ ಪಡೆದುಕೊಂಡಿದ್ದಾರೆ. ವೇದಿಕೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ರನ್ನು ಹಾವಭಾವಗಳಲ್ಲಿ ಅನುಸರಿಸುವ ಇವರು ಅವರ ಶೈಲಿಯಲ್ಲೇ ಹಾಡುವುದನ್ನು ರೂಢಿಸಿಕೊಂಡಿದ್ದಾರೆ. ಪ್ರತಿ ವರ್ಷ ಹತ್ತಾರು ಗಣಪತಿ ಮೂರ್ತಿ ತಯಾರಿಸಿ, ಆಸಕ್ತರಿಗೆ ನೀಡುವುದು ಇವರ ಹವ್ಯಾಸ.