Saturday, 23rd November 2024

Giorgia Meloni: ರಷ್ಯ- ಉಕ್ರೇನ್‌ ಯುದ್ಧ ಬಗೆಹರಿಸಲು ಭಾರತದಿಂದ ಸಾಧ್ಯ: ಇಟಲಿ ಪ್ರಧಾನಿ

Giorgia Meloni

ರೋಮ್: ರಷ್ಯ- ಉಕ್ರೇನ್‌ ಸಂಘರ್ಷವನ್ನು (Russia- Ukraine War) ಪರಿಹರಿಸುವಲ್ಲಿ ಭಾರತ (India) ದೇಶ ಪಾತ್ರ ವಹಿಸಬಹುದು ಎಂದು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Italy prime Minister Giorgia Meloni) ಶನಿವಾರ ಹೇಳಿದ್ದಾರೆ.

ಉತ್ತರ ಇಟಲಿಯ ಸೆರ್ನೊಬಿಯೊ ನಗರದ ಅಂಬ್ರೊಸೆಟ್ಟಿ ಫೋರಮ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರೊಂದಿಗೆ ಸಭೆ ನಡೆಸಿದ ಬಳಿಕ ಮೆಲೊನಿ ಮಾತನಾಡಿದರು. ಮೊನ್ನೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಈ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಭಾರತದ ಪ್ರಯತ್ನಗಳನ್ನು ಎತ್ತಿ ತೋರಿಸಿದ್ದರು.

“ಅಂತಾರಾಷ್ಟ್ರೀಯ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದರೆ ನಾವು ಅವ್ಯವಸ್ಥೆ ಮತ್ತು ಬಿಕ್ಕಟ್ಟನ್ನು ಪಡೆಯುತ್ತೇವೆ ಎಂಬುದು ಸ್ಪಷ್ಟವಾಗಿದೆ. ಜೊತೆಗೆ ನಾವು ದೀರ್ಘಾವಧಿಯ ಭೌಗೋಳಿಕ-ಆರ್ಥಿಕ ಸಮಸ್ಯೆಯನ್ನು ಹೊಂದುತ್ತೇವೆ. ಯುದ್ಧ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ನಿಯಮಗಳು ಒಟ್ಟಿಗೆ ನಡೆಯುವುದಿಲ್ಲ ಎಂದು ಚೀನೀ ಪ್ರಧಾನಿಗೆ ನಾನು ಹೇಳಿದ್ದೇನೆ. ಇವುಗಳಲ್ಲಿ ನಾವು ಒಂದನ್ನು ಆಯ್ಕೆ ಮಾಡಬೇಕು. ಭಾರತ ಮತ್ತು ಚೀನಾದಂತಹ ರಾಷ್ಟ್ರಗಳು ಉಕ್ರೇನ್‌ನಲ್ಲಿನ ಸಂಘರ್ಷವನ್ನು ಪರಿಹರಿಸುವಲ್ಲಿ ಪಾತ್ರವನ್ನು ವಹಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಜಾರ್ಜಿಯಾ ಮೆಲೋನಿ ಹೇಳಿದರು.

ಗುರುವಾರ, ವ್ಲಾಡಿವೋಸ್ಟಾಕ್‌ನಲ್ಲಿ 9ನೇ ಈಸ್ಟರ್ನ್ ಎಕನಾಮಿಕ್ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಾಯ ಹಸ್ತ ನೀಡುವಲ್ಲಿ ಭಾರತದ ಪಾತ್ರವನ್ನು ಪ್ರಸ್ತಾಪಿಸಿದ್ದಾರೆ.

“ಉಕ್ರೇನ್‌ನೊಂದಿಗೆ ಸಂಘರ್ಷಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಆಸಕ್ತಿ ಹೊಂದಿರುವ ನಮ್ಮ ಸ್ನೇಹಿತರನ್ನು ನಾವು ಗೌರವಿಸುತ್ತೇವೆ. ನಾನು ಈ ಕುರಿತು ಭಾರತ, ಚೀನಾ, ಬ್ರೆಜಿಲ್‌ನವರೊಂದಿಗೆ ಸಂಪರ್ಕದಲ್ಲಿದ್ದೇನೆ. ಈ ದೇಶಗಳ ನಾಯಕರು ಮತ್ತು ನಾವು ಪರಸ್ಪರ ನಂಬಿಕೆ ಮತ್ತು ವಿಶ್ವಾಸದ ಸಂಬಂಧವನ್ನು ಹೊಂದಿದ್ದೇವೆ. ಸಹಾಯ ಹಸ್ತವನ್ನು ಪಡೆಯಲು ನಿಜವಾಗಿಯೂ ಆಸಕ್ತಿಯನ್ನು ಹೊಂದಿದ್ದೇವೆ” ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದರು.

ಶನಿವಾರದಂದು ಅಂಬ್ರೊಸೆಟ್ಟಿ ಫೋರಮ್‌ನ ಸಂದರ್ಭದಲ್ಲಿ ಝೆಲೆನ್ಸ್ಕಿ ಅವರೊಂದಿಗಿನ ಭೇಟಿಯ ನಂತರ ಜಾರ್ಜಿಯಾ ಮೆಲೋನಿ ಅವರ ಪ್ರತಿಕ್ರಿಯೆ ಬಂದಿದೆ. ಅಲ್ಲಿ ಉಭಯ ನಾಯಕರು ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚಿಸಿದರು.

ಈ ಸುದ್ದಿ ಓದಿ: Russia-Ukraine War: ಉಕ್ರೇನ್‌ ಜತೆ ಮಾತುಕತೆಗೆ ಸಿದ್ಧ ಎಂದ ಪುಟಿನ್‌- ಮಧ್ಯಸ್ಥಿಕೆ ವಹಿಸುತ್ತಾ ಭಾರತ?