Friday, 22nd November 2024

Jawhar Sircar: ವೈದ್ಯೆ ಕೊಲೆ ಕೇಸ್‌; ಮಮತಾ ವಿರುದ್ಧ ಸ್ವಪಕ್ಷದಲ್ಲೇ ಅಪಸ್ವರ- ರಾಜ್ಯಸಭೆಗೆ ಟಿಎಂಸಿ ಸಂಸದ ರಾಜೀನಾಮೆ; ರಾಜಕೀಯಕ್ಕೂ ಗುಡ್‌ಬೈ

sirkar

ಕೋಲ್ಕತ್ತಾ: ಕೋಲ್ಕತ್ತಾದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Kolkata Doctor Murder Case)ಕ್ಕೆ ಸಂಬಂಧಿಸಿದಂತೆ ದೇಶವ್ಯಾಪಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ(West Bengal CM) ಮಮತಾ ಬ್ಯಾನರ್ಜಿ(Mamata Banerjee) ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇದೀಗ ಅವರದ್ದೇ ಪಕ್ಷದ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಜವ್ಹಾರ್‌ ಸಿರ್ಕಾರ್‌(Jawhar Sircar) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಅವರು ರಾಜ್ಯವನ್ನು ಹೇಗಾದರೂ ಕಾಪಾಡಿ ಎಂದು ಮಮತಾ ಬ್ಯಾನರ್ಜಿಗೆ ಮನವಿ ಮಾಡಿದ್ದಾರೆ.

ಅವರು ಇಂದು ಅಥವಾ ನಾಳೆ ದಿಲ್ಲಿಗೆ ತೆರಳಿ ರಾಜ್ಯಸಭಾ ಅಧ್ಯಕ್ಷ ಜಗದೀಪ್‌ ಧನ್ಖರ್‌(Jagdeep Dhankhar) ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಸಿರ್ಕಾರ್‌ ಹೇಳಿದ್ದಾರೆ. ಅಲ್ಲದೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ನು ಟಿಎಂಸಿ(TMC) ಅಧಿನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರವೊಂದನ್ನು ಬರೆದಿದ್ದು, ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ವಿರುದ್ಧ ಹಳೆಯ ಮಮತಾ ಬ್ಯಾನರ್ಜಿ ಶೈಲಿಯಲ್ಲಿ ಕ್ರಮ ಕೈಗೊಳ್ಳುತ್ತೀರಿ ಎಂದು ಭಾವಿಸಿದ್ದೆ. ಆದರೆ ನನಗೀಗ ಅದು ಕಾಣುತಿಲ್ಲ. ಬದಲಾಗಿ ಕೆಲವು ಪ್ರಭಾವಿಗಳು ಮತ್ತು ಭ್ರಷ್ಟರಿಗೆ ಸಾಥ್‌ ಕೊಡುತ್ತಿರುವುದು ಆಘಾತ ತಂದಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಸರ್ಕಾರದ ವಿರುದ್ಧ ಜನರಲ್ಲಿ ವಿಶ್ವಾಸದ ಕೊರತೆ ಮತ್ತು ಆತಂಕ ಎದ್ದು ಕಾಣುತ್ತಿದೆ. ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಭೀಕರ ಘಟನೆಯಿಂದ ನಾನು ಒಂದು ತಿಂಗಳ ಕಾಲ ತಾಳ್ಮೆಯಿಂದ ಕಾಯುತ್ತಿದ್ದೆ. ಮಮತಾ ಬ್ಯಾನರ್ಜಿಯವರ ಹಳೆಯ ಶೈಲಿಯಲ್ಲಿ ಧರಣಿ ನಿರತ ಕಿರಿಯ ವೈದ್ಯರೊಂದಿಗೆ ನಿಮ್ಮ ನೇರ ಮಧ್ಯಸ್ಥಿಕೆಯನ್ನು ನಿರೀಕ್ಷಿಸುತ್ತಿದ್ದೆ. ಇದು ಸಂಭವಿಸಿಲ್ಲ ಮತ್ತು ಸರ್ಕಾರವು ಈಗ ತೆಗೆದುಕೊಳ್ಳುತ್ತಿರುವ ಯಾವುದೇ ದಂಡನಾತ್ಮಕ ಕ್ರಮಗಳು ತೀರಾ ಕಡಿಮೆ ಮತ್ತು ಸಾಕಷ್ಟು ತಡವಾಗಿವೆ. ಅಸಮರ್ಪಕ ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡ ತಪ್ಪಿತಸ್ಥರನ್ನು ಸರ್ಕಾರ ಶಿಕ್ಷಿಸಿದ್ದರೆ ರಾಜ್ಯದಲ್ಲಿ ಈ ಹಿಂದೆ ಸಹಜ ಸ್ಥಿತಿ ಮರಳುತ್ತಿತ್ತು. ರಾಜೀನಾಮೆ ನಂತರ “ರಾಜಕೀಯದಿಂದ ಸಂಪೂರ್ಣವಾಗಿ ದೂರವಿರುತ್ತೇನೆ” ಎಂದು ಅವರು ಹೇಳಿದರು.

ಏನಿದು ಘಟನೆ?

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇನ್ನು ವೈದ್ಯೆ ಕೊಲೆ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್‌ ರಾಷ್ಟ್ರೀಯ ಕಾರ್ಯಪಡೆಯನ್ನು ನೇಮಕ ಮಾಡಿದೆ. ಈ ಕಾರ್ಯಪಡೆಯಲ್ಲಿ ಸರ್ಜನ್‌ ವೈಸ್‌ ಅಡ್ಮಿರಲ್‌ ಆರ್‌.ಕೆ. ಸರಿನ್‌, ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ನ್ಯಾಷನಲ್ ಗ್ಯಾಸ್ಟ್ರೋಲಜಿ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗೇಶ್ವರ ರೆಡ್ಡಿ ಇದ್ದಾರೆ.

ಈ ಸುದ್ದಿಯನ್ನೂ ಓದಿ: ಮಮತಾ ಬ್ಯಾನರ್ಜಿ ರಾಜೀನಾಮೆಗೆ ತಾಯಿ ಆಶಾ ದೇವಿ ಆಗ್ರಹ