Saturday, 23rd November 2024

Randhir Singh : ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಅಧ್ಯಕ್ಷರಾದ ಮೊದಲ ಭಾರತೀಯ ರಣಧೀರ್ ಸಿಂಗ್

Randhir Singh

ನವದೆಹಲಿ: ಹಿರಿಯ ಕ್ರೀಡಾ ಆಡಳಿತಗಾರ ರಣಧೀರ್ ಸಿಂಗ್ (Randhir Singh) ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಭಾನುವಾರ ಪಾತ್ರರಾಗಿದ್ದಾರೆ. ಸಂಸ್ಥೆಯ 44 ನೇ ಸಾಮಾನ್ಯ ಸಭೆಯಲ್ಲಿ ಈ ಚುನಾವಣೆ ನಡೆಯಿತು. ಅಲ್ಲಿ ರಣಧೀರ್ ಸಿಂಗ್ ಆಯ್ಕೆಯಾಗಿದ್ದಾರೆ.

ಐದು ಬಾರಿಯ ಒಲಿಂಪಿಕ್ ಶೂಟರ್ ಆಗಿದ್ದ ಸಿಂಗ್ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾದ ಏಕೈಕ ಅಭ್ಯರ್ಥಿಯಾಗಿದ್ದರು. ಅವರ ಆಯ್ಕೆ ಸರ್ವಾನುಮತದಿಂದ ನಡೆಯಿತು, 2024 ರಿಂದ 2028 ರವರೆಗೆ ಒಸಿಎ ನಾಯಕತ್ವಕ್ಕೆ ಅವರು ಆಯ್ಕೆಯಾದರು. ಅವರು 2021ರಿಂದ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕುವೈತ್‌ನ ಶೇಖ್ ಅಹ್ಮದ್ ಅಲ್-ಫಹಾದ್ ಅಲ್-ಸಬಾಹ್ 15 ವರ್ಷಗಳ ನಿಷೇಧಕ್ಕೆಒಳಗಾದ ಹಿನ್ನೆಲೆಯಲ್ಲಿ ಸಿಂಗ್ 2021 ರಿಂದ ಒಸಿಎಯ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಿಂಗ್ ಅವರನ್ನು ಒಸಿಎ ಅಧ್ಯಕ್ಷರಾಗಿ ಔಪಚಾರಿಕವಾಗಿ ಬಡ್ತಿ ನೀಡುವ ಸಭೆಗೆ ಭಾರತದ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಏಷ್ಯಾದ ಎಲ್ಲಾ 45 ದೇಶಗಳ ಉನ್ನತ ಕ್ರೀಡಾ ಅಧಿಕಾರಿಗಳು ಸೇರಿದಂತೆ ಪ್ರಮುಖ ವ್ಯಕ್ತಿಗಳು ಸಾಕ್ಷಿಯಾದರು.

ಈ ಸುದ್ದಿಯನ್ನೂ ಓದಿ: Dhruv Jurel : ಧೋನಿ ದಾಖಲೆ ಸರಿಗಟ್ಟಿದ ಯುವ ವಿಕೆಟ್‌ಕೀಪರ್‌ ಧ್ರುವ್‌ ಜುರೆಲ್‌

ಪಂಜಾಬ್‌ನ ಪಟಿಯಾಲ ಮೂಲದ ರಣಧೀರ್ ಸಿಂಗ್ ಕ್ರೀಡಾ ಪ್ರೇಮಿಗಳ ಕುಟುಂಬಕ್ಕೆ ಸೇರಿದವರು. ಅವರ ಚಿಕ್ಕಪ್ಪ, ಮಹಾರಾಜ ಯಾದವೀಂದ್ರ ಸಿಂಗ್ ಟೆಸ್ಟ್ ಕ್ರಿಕೆಟಿಗ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯರಾಗಿದ್ದರು. ಅವರ ತಂದೆ ಭಲೀಂದ್ರ ಸಿಂಗ್ ಕೂಡ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದರು, 1947 ರಿಂದ 1992 ರವರೆಗೆ ಐಒಸಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ರಣಧೀರ್ ಸ್ವತಃ 2001 ರಿಂದ 2014 ರವರೆಗೆ ಐಒಸಿ ಸದಸ್ಯರಾಗಿದ್ದರು ಮತ್ತು ಗೌರವ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.