Friday, 20th September 2024

Abu Dhabi Crown Prince : ಮೋದಿ ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿಳಿದ ಅಬುಧಾಬಿ ಯುವರಾಜ

Abu Dhabi Crown Prince

ನವದೆಹಲಿ: ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Abu Dhabi Crown Prince) ಅವರು ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿಳಿದಿದ್ದಾರೆ. ಅವರು ತಮ್ಮ ಮೊದಲ ಅಧಿಕೃತ ಭಾರತ ಭೇಟಿ ನೀಡಿದ್ದು ಭಾನುವಾರ ದೆಹಲಿಯಲ್ಲಿ ಬಂದಿಳಿದಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ವಿಮಾನ ನಿಲ್ದಾಣದಲ್ಲಿ ಅಬುಧಾಬಿ ದೊರೆಯನ್ನು ಸ್ವಾಗತಿಸಿದರು.

ಅಬುಧಾಬಿಯ ಯುವರಾಜರಾಗಿ ಜಾಯೆದ್ ಅಲ್ ನಹ್ಯಾನ್ ಅವರ ಮೊದಲ ಭಾರತ ಭೇಟಿ ಇದಾಗಿದೆ ಮತ್ತು ಅವರೊಂದಿಗೆ ಯುಎಇ ಸರ್ಕಾರದ ಹಲವಾರು ಸಚಿವರು ಮತ್ತು ವ್ಯಾಪಾರ ನಿಯೋಗವೂ ಆಗಮಿಸಿದೆ. ಅಬುಧಾಬಿಯ ಯುವರಾಜ ಸೆಪ್ಟೆಂಬರ್ 9 ರಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದು, ದ್ವಿಪಕ್ಷೀಯ ಸಹಕಾರದ ವ್ಯಾಪಕ ಶ್ರೇಣಿಯ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಯುವರಾಜ ಜಾಯೆದ್‌ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಲಿದ್ದಾರೆ. ಸೆಪ್ಟೆಂಬರ್ 10 ರಂದು ಯುವರಾಜ ಮುಂಬೈಗೆ ಭೇಟಿ ನೀಡಲಿದ್ದು, ವ್ಯಾಪಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಎರಡೂ ದೇಶಗಳ ಉದ್ಯಮಿಗಳು ಭಾಗವಹಿಸಲಿದ್ದಾರೆ.

ಭಾರತ- ಯುಎಇ ನಿಕಟ ಸಂಬಂಧ

ಭಾರತ ಮತ್ತು ಯುಎಇ ಐತಿಹಾಸಿಕವಾಗಿ ನಿಕಟ ಮತ್ತು ಸ್ನೇಹಪರ ಸಂಬಂಧಗಳನ್ನು ಹಂಚಿಕೊಂಡಿವೆ. ಇತ್ತೀಚಿನ ವರ್ಷಗಳಲ್ಲಿ, ಭಾರತ ಮತ್ತು ಯುಎಇ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ರಾಜಕೀಯ, ವ್ಯಾಪಾರ, ಹೂಡಿಕೆ, ಸಂಪರ್ಕ, ಇಂಧನ, ತಂತ್ರಜ್ಞಾನ, ಶಿಕ್ಷಣ ಮತ್ತು ಸಂಸ್ಕೃತಿ ಸೇರಿದಂತೆ ವ್ಯಾಪಕವಾಗಿ ಹರಡಿದೆ. ಯುವರಾಜನ ಭೇಟಿಯು ಭಾರತ-ಯುಎಇ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಪಾಲುದಾರಿಕೆಗೆ ಮಾರ್ಗವನ್ನು ಆರಂಭಿಸಿವೆ. ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಈ ವಾರದ ಆರಂಭದಲ್ಲಿ ಹೇಳಿದೆ.

ಇದನ್ನೂ ಓದಿ: Vinesh Phogat : ವಿನೇಶ್‌ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಬ್ರಿಜ್‌ಭೂಷಣ್‌ಗೆ ಬಿಜೆಪಿಯಿಂದ ಸೂಚನೆ

ಜನವರಿಯಲ್ಲಿ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಅವರೊಂದಿಗಿನ ಚರ್ಚೆಯ ಸಮಯದಲ್ಲಿ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ನಿರ್ಮಿಸುವ ಮಾರ್ಗಗಳನ್ನು ಹೇಳಿದ್ದರು. ಅವರು ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯ 10 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು.

ಜುಲೈ 2023 ರಲ್ಲಿ, ಪಿಎಂ ಮೋದಿ ಯುಎಇಗೆ ಭೇಟಿ ನೀಡಿದ್ದರು. 2015 ರಿಂದ ದೇಶಕ್ಕೆ ಅವರ ಐದನೇ ಭೇಟಿಯಾಗಿತ್ತು. 34 ವರ್ಷಗಳಲ್ಲಿ ಯುಎಇಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಪ್ರಕಾರ, ಭಾರತ-ಯುಎಇ ವ್ಯಾಪಾರವು 2022 ರಲ್ಲಿ 85 ಬಿಲಿಯನ್ ಡಾಲರ್‌ಗೆ ಏರಿದೆ. ಇದು ಯುಎಇಯನ್ನು 2022-23ನೇ ಸಾಲಿನಲ್ಲಿ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಭಾರತದ ಎರಡನೇ ಅತಿದೊಡ್ಡ ರಫ್ತು ತಾಣವನ್ನಾಗಿ ಮಾಡಿದೆ. ಭಾರತವು ಯುಎಇಯ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ.