Friday, 22nd November 2024

Bangladesh Test : ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ರಾಹುಲ್‌ ಸಿಕ್ತು ಚಾನ್ಸ್‌

ನವದೆಹಲಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ (Bangladesh Test) ಭಾರತ ತಂಡ ಪ್ರಕಟಗೊಂಡಿದೆ. ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ತಂಡವನ್ನು ಪ್ರಕಟಿಸಿದ್ದು ವಿಕೆಟ್ ಕೀಪರ್ ಬ್ಯಾಟರ್‌ ರಿಷಭ್ ಪಂತ್ (Rishabh Pant) ಎರಡು ವರ್ಷದ ಬಳಿಕ ತಂಡಕ್ಕೆ ಮರಳಿದ್ದಾರೆ. ಇದೇ ವೇಳೆ ಕನ್ನಡಿಗ ಕೆ. ಎಲ್‌ ರಾಹುಲ್‌ (KL Rahul) ಕೂಡ ಅವಕಾಶ ಪಡೆದುಕೊಂಡಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡ ನಂತರ ಅವರು ಸುಮಾರು 20 ತಿಂಗಳ ನಂತರ ಪಂತ್‌ ಟೆಸ್ಟ್ ಕ್ರಿಕೆಟ್‌ಗೆ ಮರಳಲಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿದ್ದು, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಇಬ್ಬರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಕಾಶ್ ದೀಪ್ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಯುವ ವೇಗಿ ಯಶ್ ದಯಾಳ್ ಚೊಚ್ಚಲ ಕರೆ ಪಡೆದುಕೊಂಡಿದ್ದಾರೆ.

2022 ರ ಡಿಸೆಂಬರ್ 22-25 ರವರೆಗೆ ಮಿರ್‌ಪುರದಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಆಡಿದ ಪಂತ್, ಕೆಲವು ದಿನಗಳ ನಂತರ ಡಿಸೆಂಬರ್ 30 ರಂದು ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ನಂತರದ ಟೆಸ್ಟ್‌ಗಳಲ್ಲಿ ಆಡಲಿರಲ್ಲ. ಇದೀಗ ಮತ್ತೆ ಸ್ಥಾನ ಪಡೆದುಕೊಂಡಿದ್ದಾರೆ.

26 ವರ್ಷದ ಸ್ಫೋಟಕ ಬ್ಯಾಟ್ಸ್ಮನ್ ಟಿ 20 ವಿಶ್ವಕಪ್‌ನ ಪ್ರಶಸ್ತಿ ಗೆಲ್ಲುವ ಅಭಿಯಾನದಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು. ಇದೀಗ ಮತ್ತೆ ಟೆಸ್ಟ್‌ ಕಡೆಗೆ ಬಂದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬಲಗೈ ವೇಗಿ ಮೊಹಮ್ಮದ್ ಶಮಿ ಮರಳುವ ಗುರಿ ಹೊಂದಿದ್ದಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಈ ಹಿಂದೆ ವ್ಯಕ್ತಪಡಿಸಿದ್ದರೂ ಅವರು ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದೊಂದಿಗೆ ಭಾರತದ ಸುದೀರ್ಘ ಟೆಸ್ಟ್ ಋತುವು ಪ್ರಾರಂಭವಾಗಲಿದೆ. ಸರಣಿಯ ಎರಡನೇ ಟೆಸ್ಟ್ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1 ರವರೆಗೆ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ: Vinesh Phogat : ವಿನೇಶ್‌ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಬ್ರಿಜ್‌ಭೂಷಣ್‌ಗೆ ಬಿಜೆಪಿಯಿಂದ ಸೂಚನೆ

ಭಾರತ ಮತ್ತು ಬಾಂಗ್ಲಾದೇಶ ಈವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 11 ಬಾರಿ ಗೆದ್ದಿದ್ದರೆ, ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಈ ವರ್ಷದ ಜನವರಿ-ಮಾರ್ಚ್‌ನಲ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ ಬಾಂಗ್ಲಾದೇಶವು ಪಾಕಿಸ್ತಾನದ ವಿರುದ್ಧ ಐತಿಹಾಸಿಕ 2-0 ಅಂತರದ ಗೆಲುವು ದಾಖಲಿಸಿದೆ.

ಮೊದಲ ಪಂದ್ಯಕ್ಕೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.